ತಂತ್ರಜ್ಘರು ಹೊರತುಪಡಿಸಿ, ಕಲಾವಿದರೆಲ್ಲರೂ ಹೊಸಬರಾಗಿರುವ ಮತ್ತೆ ಮಳೆ ಹೊಯ್ಯುತ್ತಿದೆ ಸಿನಿಮಾದ ಶೂಟಿಂಗ್ ಮುಕ್ತಾಯವಾಗಿದ್ದರಿಂದ ಅನುಭವಗಳನ್ನು ಹಂಚಿಕೊಳ್ಳಲು ತಂಡವು ಮಾಧ್ಯಮದ ಮುಂದೆ ಹಾಜರಾಗಿತ್ತು. ’ಎಲ್ಲ ನೆನಪಾಗುತಿದೆ’ ಎಂಬ ಅಡಿಬರಹವಿದೆ. ಮೂರು ದಶಕಗಳಿಂದ ಸಹಾಯಕ ಕಲಾ ನಿರ್ದೇಶಕರಾಗಿರುವ ಗಂಗಾಧರ್ ಶ್ರೀ ಗವಿರಂಗನಾಥ ಸ್ವಾಮಿ ಪಿಕ್ಚರ‍್ಸ್ ಬ್ಯಾನರ್ ಅಡಿಯಲ್ಲಿ ಪತ್ನಿ ಸುಮ ಹೆಸರಿನಲ್ಲಿ ಬಂಡವಾಳ ಹೂಡುತ್ತಿದ್ದಾರೆ. ಶೃತಿ ಅನಿಲ್‌ಕುಮಾರ್ ಸಹ ನಿರ್ಮಾಪಕರು ಹಾಗೂ ಪ್ರಾಧ್ಯಾಪಕರ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹಲವು ವರ್ಷಗಳಿಂದ ಸಿನಿಮಾರಂಗದಲ್ಲಿ ಸಕ್ರಿಯರಾಗಿರುವ ಪರಮ್‌ಗುಬ್ಬಿ ನಿರ್ದೇಶನ ಮಾಡಿದ್ದಾರೆ. ಚಿತ್ರಕಥೆ-ಸಂಭಾಷಣೆ-ಸಾಹಿತ್ಯ ಕಬ್ಬಡಿ ನರೇಂದ್ರಬಾಬು, ಸಂಗೀತ ಅತಿಶಯಜೈನ್ ಅವರದಾಗಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಮತ್ತು ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್.ಕೆ.ವಿಶ್ವನಾಥ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಿರ್ಮಾಪಕರ ಮಗ ಜಿ.ಲಿಖಿತ್ ಮತ್ತು ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿರುವ ರಂಗಭೂಮಿಯ ಜಯವರ್ಧನ್ ನಾಯಕರುಗಳು. ನಾಯಕಿಯರುಗಳಾಗಿ ಸುಲಕ್ಷಖೈರ, ಭೂಮಿಕಗೌಡ. ಇವರೊಂದಿಗೆ ಚಂದ್ರಶೇಖರ ರೆಡ್ಡಿ.ಎ.ಎಂ, ಪ್ರಕಾಶ್‌ಮೂರ್ತಿ, ಕುಮಾರಿ ಸ್ವರ್ಣ, ಶೃತಿ, ದಿನಮಣಿ, ಕಾವ್ಯ ಕುಮಾರಿ ಮುಂತಾದವರು ಅಭಿನಯಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು ಸಾಹಿತಿ ಕೆ.ಸದಾಶಿವ ವಿರಚಿತ ಸಣ್ಣಕತೆಗಳಲ್ಲಿ ಒಂದಾದ ’ಮತ್ತೆ ಮಳೆ ಹೂಯ್ಯುತಿದೆ’ ಕೃತಿಯನ್ನು ಬಳಸಲಾಗಿದೆ. ಮುಂದೆ ಅನುಮತಿ ಪಡೆಯಲು ಹೋದಾಗ ಎಲ್ಲರೂ ಕಾಲವಾಗಿದ್ದರೆಂದು ತಿಳಿಯಿತು. ಉದ್ಯಮಕ್ಕೆ ಕೊಂಡಿ ಆಗಿರುವ ಕನ್ನಡ ಸಾಹಿತ್ಯ ಪರಿಷತ್‌ನ್ನು ಸಂಪರ್ಕಿಸಿದಾಗ ಮಗಳು ಮಾತ್ರ ಅಮೇರಿಕಾದಲ್ಲಿ ನೆಲೆಸಿದ್ದಾರೆಂದು ತಿಳಿದು ಅವರಿಂದ ಅನುಮತಿ ಪಡೆದುಕೊಳ್ಳಲಾಯಿತು. ಅಲ್ಲದೆ ಅವರಿಗೆ ನೀಡ ಬಹುದಾದ ಸಂಭಾವನೆ ಮೊತ್ತವನ್ನು ಸಾಹಿತ್ಯ ಪರಿಷತ್‌ನಲ್ಲಿ ದತ್ತಿಯಾಗಿ ನೀಡಿ, ಪ್ರತಿ ವರ್ಷ ಸದಾಶಿವ ಹೆಸರಿನಲ್ಲಿ ಯುವ ಬರಹಗಾರರಿಗೆ ಪ್ರಶಸ್ತಿ ನೀಡುವ ಯೋಜನೆ ಬಗ್ಗೆ ನಿರ್ಮಾಪಕರಿಗೆ ತಿಳಿಸಿದಾಗ ಖುಷಿಯಿಂದ ಒಪ್ಪಿಕೊಂಡರು. ಕಬಡ್ಡಿ ನರೇಂದ್ರಬಾಬು ಸಿನಿಮಾ ಆಗಲು ಮುಖ್ಯ ಕಾರಣರಾಗಿರುತ್ತಾರೆ.
ಚಿತ್ರವು 80ರ ದಶಕ ಹಾಗೂ 2000ನೇ ಇಸವಿಯಲ್ಲಿ ನಡೆಯುವ ಎರಡು ಕಾಲಘಟ್ಟದ ಅಂಶಗಳನ್ನು ಹೊಂದಿದೆ. ಮೊದಲನೇ ಜೋಡಿಯ ಪ್ರೇಮ ಕತೆ ವಿಪಲವಾಗುತ್ತದೆ. ಎರಡನೇ ಜೋಡಿಯ ಲವ್ ಸ್ಟೋರಿ ಯಶಸ್ಸು ಕಾಣುತ್ತದೆ. ಇವೆರೆಡರ ನಡುವೆ ಸನ್ನಿವೇಶಗಳು ಮನಸ್ಸನ್ನು ಕದಡುತ್ತದೆ. ಸಿನಿಮಾದಲ್ಲಿ ಮಳೆಯು ಮಹತ್ವದ ಪಾತ್ರವನ್ನು ವಹಿಸಿದೆ. ಜತೆಗೆ ಅರ್ಥಪೂರ್ಣ ಸಂದೇಶಗಳು ಅಲ್ಲಲ್ಲಿ ಬರುತ್ತದೆ. ಶೃಂಗೇರಿ, ಹೊರನಾಡು, ಕೊಪ್ಪ, ಹರಿಹರಪುರ, ಆಗುಂಬೆ ಸುಂದರ ತಾಣಗಳಲ್ಲಿ ಎಲ್ಲರ ಸಹಕಾರದಿಂದ ಇಪ್ಪತ್ತನಾಲ್ಕು ದಿನಗಳಲ್ಲಿ ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿದ್ದೇವೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿದ್ದು, ಅಕ್ಟೋಬರ್‌ದಲ್ಲಿ ತೆರೆಗೆ ತರಲು ಚಿಂತನೆ ನಡೆಸಲಾಗಿದೆ ಎಂಬುದಾಗಿ ಪರಮ್‌ಗುಬ್ಬಿ ಮಾಹಿತಿ ನೀಡಿದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು ತಂಡಕ್ಕೆ ಶುಭ ಹಾರೈಸಿ, ಬರಡಾದ ಕನ್ನಡ ಚಿತ್ರರಂಗಕ್ಕೆ ’ಸು ಫ್ರಂ ಸೋ’ ದಿಂದ ಮತ್ತೆ ಮಳೆ ಬರುತ್ತಿದೆ. ಇದು ಸಂತಸದ ವಿಷಯ ಎಂದರು. ಅತಿಯಾಗಿ ಮಳೆಯನ್ನು ತೋರಿಸಿದ ಚಿತ್ರಗಳು ಯಶಸ್ವಿಯಾಗಿರುವ ಬಗ್ಗೆ ದಾಖಲೆಗಳು ಇದೆ. ಮೂಲತ: ಬರಹಗಾರರಾಗಿರುವ ನಿರ್ದೇಶಕರ ಬಳಿ ಚಿತ್ರರಂಗದ ಬಂಡಾರವಿದೆ. ಇನ್ನೋಬ್ಬರ ಕಥೆಯನ್ನು ತೆಗೆದುಕೊಂಡು ಚಿತ್ರ ಮಾಡಿದ್ದಾರೆ. ಅವರು ಲೇಖಕರಿಗೆ ಏನು ಗೌರವ ಕೊಡಬೇಕೋ ಅದನ್ನು ಸಲ್ಲಿಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಎಂಬುದು ಕರ್ನಾಟಕ ನಿರ್ದೇಶಕ ಸಂಘದ ಅಧ್ಯಕ್ಷ ಎನ್ನಾರ್.ಕೆ.ವಿಶ್ವನಾಥ್ ಅವರ ನುಡಿಯಾಗಿತ್ತು. ಅದೇ ರೀತಿ ಕರ್ನಾಟಕ ಚಲನಚಿತ್ರ ನಿರ್ಮಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ತಂಡದವರನ್ನು ಶ್ಲಾಘಿಸಿದರು. ಛಾಯಾಗ್ರಹಣ ಶಾಂತಾರಾವ್ ಇಪಿಲಿ, ಸಂಕಲನ ಧನುಷ್ ವೀರ್, ಕಲೆ ಬಾಬು ಖಾನ್, ನೃತ್ಯ ನಂದ ಅವರದಾಗಿದೆ.
VK DIGITAL NEWS: