Live Stream

[ytplayer id=’22727′]

| Latest Version 8.0.1 |

Chamarajanagar

ಮೊಸರು ಮಡಿಕೆ ಒಡೆಯುವ ಉತ್ಸವದ ವೈಶಿಷ್ಟ್ಯ. ಭಾವೈಕ್ಯತೆಯ ಸಂಕೇತ.

ಮೊಸರು ಮಡಿಕೆ ಒಡೆಯುವ ಉತ್ಸವದ ವೈಶಿಷ್ಟ್ಯ. ಭಾವೈಕ್ಯತೆಯ ಸಂಕೇತ.

ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಡೆಯುವ ಮೊಸರು ಮಡಿಕೆ ಒಡೆಯುವ ಉತ್ಸವ ವಿಶೇಷ ವೈಶಿಷ್ಟ್ಯ. ಭಾವೈಕ್ಯತೆಯ ಸಂಕೇತ.

ಚಾಮರಾಜನಗರ ಸಾಂಸ್ಕೃತಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ವಿಶೇಷವಾದ ತನ್ನದೇ ಆದ ಇತಿಹಾಸವನ್ನು ಹೊಂದಿರುವ ಜಿಲ್ಲೆ, ಇಡೀ ರಾಷ್ಟ್ರಕ್ಕೆ ಪ್ರಕೃತಿ ಅರಣ್ಯ ಸಂಪತ್ತು, ಪ್ರಾಣಿ ಸಂಕುಲವನ್ನು ಹೊಂದಿರುವ,ಜನಪದ ಗಣಿ, ಜೀವಸಳೆಯ ಗಟ್ಟಿನೆಲ.

ಚಾಮರಾಜನಗರದ ಶ್ರೀ ಕೃಷ್ಣ ಪ್ರತಿಷ್ಠಾನದ ವತಿಯಿಂದ ಕಳೆದ 15 ವರ್ಷಗಳಿಂದ ನಡೆಯುತ್ತಿರುವ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ನಿಮಿತ್ತ ನಡೆಯುವ ಮೊಸರು ಮಡಿಕೆ ಒಡೆಯುವ ಉತ್ಸವ. ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಕೃಷ್ಣಪ್ರಜ್ಞೆಯನ್ನು ವಿಶೇಷವಾಗಿ ಗಡಿ ಜಿಲ್ಲೆಯಲ್ಲಿ ಸ್ಪೂರ್ತಿಯತವಾಗಿ ಶಕ್ತಿಯುತವಾಗಿ ತುಂಬುತ್ತಿರುವ ಉತ್ಸವ. ಯುವಶಕ್ತಿಯಲ್ಲಿ ನವ ಜಾಗೃತಿಯನ್ನು ಉಂಟು ಮಾಡಿ ನಾವೆಲ್ಲರೂ ಒಂದೇ ಎನ್ನುವ ಆಧ್ಯಾತ್ಮಿಕ ಭಾರತೀಯ ತತ್ವವನ್ನು ಸಾರುವ ಉತ್ಸವವಾಗಿ ಪರಿವರ್ತನೆ ಆಗಿರುವುದು ಬಹಳ ವಿಶೇಷವಾದ ಉತ್ಸವ.

ವಸುದೇವ ಸುತಂ ದೇವಂ ! ಕಂಸ ಚಾಣೂರ ಮರ್ಧನಂ! ದೇವಕಿ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ !

ಶ್ರೀ ಕೃಷ್ಣ ಜನ್ಮಾಷ್ಟಮಿ ಇಡೀ ದೇಶದ ವಿಶೇಷವಾದ ಹಬ್ಬ. ಶ್ರೀ ಕೃಷ್ಣನು ನಾರಾಯಣನ ಅವತಾರ ಎಂಬುದು ನಮ್ಮೆಲ್ಲರ ನಂಬಿಕೆ, ದ್ವಾಪರಯುಗದ ಕೊನೆಯಲ್ಲಿ ಶ್ರೀಕೃಷ್ಣನ ಅವತಾರವಾಗಿ ಮಹಾಭಾರತ ,ಹರಿವಂಶ ,ಭಾಗವತ, ಕೃಷ್ಣ ಪುರಾಣಗಳು ನಮಗೆ ಸಮಗ್ರವಾದ ಮಾಹಿತಿಯನ್ನು ತಿಳಿಸುತ್ತದೆ.

ಶ್ರೀ ಕೃಷ್ಣ ಹುಟ್ಟಿದ್ದು ಮಧುರ ನಗರದಲ್ಲಿ . ವಾಸುದೇವ ದೇವಕಿಯರ ಪುತ್ರ. ದೇವಕಿ ಉಗ್ರ ಸೇನೆನ ಮಗಳು. ರಾಕ್ಷಸ ಸ್ವಭಾವದ ಕಂಸ ಈಕೆಯ ಅಣ್ಣ. ದೇವಕಿಯ ಎಂಟನೇ ಮಗುವಿನಿಂದ ತನಗೆ ಮರಣ ಎಂದು ತಿಳಿದ ಕಂಸ ದೇವಕಿ ಹಾಗು ವಸುದೇವನನ್ನು ಬಂಧಿಸಿ ಕಾರಾಗೃಹದಲ್ಲಿ ಇಡುತ್ತಾರೆ. ಕಾರಾಗೃಹದಲ್ಲಿ ಕೃಷ್ಣನ ಜನನವಾಗಿ, ವಸುದೇವ ಕೃಷ್ಣನನ್ನು ಗುಟ್ಟಾಗಿ ಗೋಕುಲದ ನಂದ ಮತ್ತು ಯಶೋದ ದಂಪತಿಯ ಬಳಿ ಸಾಗಿಸುತ್ತಾರೆ.

ಶ್ರೀಕೃಷ್ಣನು ಧರ್ಮ ರಕ್ಷಕ. ಆನಂದದ ಸಾಗರ. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಜೀವನ ಮೌಲ್ಯಗಳು ತುಂಬಿದ ಮಹಾನ್ ವ್ಯಕ್ತಿ . ಕೃಷ್ಣಪ್ರಜ್ಞೆಯು ಮಾನವನ ಅಂತಃಶಕ್ತಿಯ ಶುದ್ಧಿಯ ಜೊತೆಗೆ ಮುಕ್ತಿಯ ಸಾಧನವಾಗಿದೆ.
ಕೃಷ್ಣ ಜನ್ಮಾಷ್ಟಮಿ ಇಡೀ ವಿಶ್ವದ ಎಲ್ಲ ಕಡೆ ಸಂಭ್ರಮದಿಂದ ಆಚರಣೆಯಾಗಿ ಒಂದುವ್ರತವಾಗಿ, ಹಬ್ಬವಾಗಿ ,ಉತ್ಸವವಾಗಿ ರೂಪುಗೊಂಡಿದೆ. ಗೋಕುಲ, ಮಥುರ, ಬೃಂದಾವನ, ಪುರಿ ಮುಂತಾದ ಸ್ಥಳಗಳು ಶ್ರೀಕೃಷ್ಣನ ಪವಿತ್ರ ಸ್ಥಳವಾಗಿದೆ.
ಪ್ರಾಚೀನ ಪುರಾಣಗಳ ಪ್ರಕಾರ ಶ್ರಾವಣ ಮಾಸ ಕೃಷ್ಣ ಪಕ್ಷದ ಅಷ್ಟಮಿಯ ಮಧ್ಯರಾತ್ರಿ ಶ್ರೀ ಕೃಷ್ಣನ ಜನನವಾಯಿತು. ರೋಹಿಣಿ ಜನ್ಮ ನಕ್ಷತ್ರ. ಪ್ರತಿ ವರ್ಷ ಶ್ರಾವಣ ಕೃಷ್ಣದ ಎಂಟನೇ ದಿನ ಕೃಷ್ಣ ಜನ್ಮಾಷ್ಟಮಿ ಯನ್ನಾಗಿ ಆಚರಿಸಲಾಗುತ್ತದೆ. ವಿವಿಧ ಪ್ರದೇಶಗಳಲ್ಲಿ ಹಲವು ಹೆಸರುಗಳಿಂದ ಆಚರಿಸುತ್ತಾರೆ.
ಕೃಷ್ಣ ಎಂದರೆ ಕಪ್ಪು ಎಂದರ್ಥ. ಕೃಷ್ಣನಿಗೆ ಶಾಮ ಸುಂದರ, ಘನಶಾಮ ಎಂದು ಕೂಡ ಕರೆಯುತ್ತಾರೆ. ಕೃಷ್ಣ ಅವತಾರದ ಉದ್ದೇಶವೇ ದುಷ್ಟರ ದಮನ. ಧರ್ಮ ರಕ್ಷಣೆ ಎನ್ನುವುದು ಲೋಕ ವಿಧಿತ. ತನ್ನ ವಿಶ್ವರೂಪ ದರ್ಶನದ ಮೂಲಕ ಭಗವದ್ಗೀತೆಯ ಮಹಾ ಗ್ರಂಥವನ್ನು ಜಗತ್ತಿಗೆ ತಿಳಿಸಿದವರು. ಕೃಷ್ಣನ ಜೀವನ ಸಾರ, ಜೀವನ ಮೌಲ್ಯಗಳು ಸದಾ ಹಸಿರಾಗಿರುತ್ತವೆ.
ಭಗವದ್ಗೀತೆಯ ಸಂದೇಶ, ಉಪನಿಷತ್ತು ,ವೇದಗಳ ಒಳಅರ್ಥಗಳನ್ನು ಸಕಲ ವೇದಾಂತ ಸಾರಗಳನ್ನು ತಿಳಿಸಿದ್ದು ಭಗವದ್ಗೀತೆ.
ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಡೆಯುವ ವ್ರತ,ಪೂಜಾ ವಿಧಿ, ಉಪವಾಸ, ಡೋಲೋತ್ಸವ, ಗೋಕುಲ, ಬೃಂದಾವನ ಪೂಜೆ, ಗೋಪೂಜೆ ,ದೀಪಾರಾಧನೆ, ಶೋಭಾ ಯಾತ್ರೆ, ಕೃಷ್ಣ ಲೀಲೆ, ಭಾಗವತ ಪಾರಾಯಣ ,ಕೀರ್ತನೆ, ಭಜನೋತ್ಸವ,ನೃತ್ಯೋತ್ಸವ, ಗಾಯನ, ನೃತ್ಯ ,ಶ್ರೀ ಕೃಷ್ಣ ರಾಧಾ ದೇಶಧಾರಿಗಳಾಗಿ ಮಕ್ಕಳಿಗೆ ಪೂಜೆ, ಮೊಸರು ಮಡಿಕೆ ಒಡೆಯುವ ಉತ್ಸವಗಳ ಮೂಲಕ ಆತ್ಮ ಸಂತೋಷವನ್ನು ಪಡೆದು ದೈವ ಸನ್ನಿಧಿಯ ಪರಮಾನಂದವನ್ನು ಪಡೆದು ಭಾರತೀಯರು ಸಂತೃಪ್ತ ಜೀವನವನ್ನು ಪಡೆಯುತ್ತಾರೆ.

ಯುವಕರಲ್ಲಿ ಆಧ್ಯಾತ್ಮ, ಭಾರತೀಯ ಮೌಲ್ಯ, ಸಂಸ್ಕೃತಿ, ಪರಂಪರೆ ,ಏಕತೆ ,ಸಂಘಟನೆ ಸಮಾನತೆ, ಪ್ರೀತಿ, ವಿಶ್ವಾಸ, ಸಹಕಾರ, ಭಾವೈಕ್ಯತೆ ಮೂಡಿಸುವ ಜೊತೆಗೆ ಆಧ್ಯಾತ್ಮಿಕ ರಹಸ್ಯಗಳನ್ನು ತಿಳಿಸುವ ಗುರಿ ಉದ್ದೇಶ ಸಾಧನೆಗಾಗಿ ಸಾಮೂಹಿಕ ದೃಢತೆಯಿಂದ ಸ್ವಾಭಿಮಾನ, ಏಕಾಗ್ರತೆ ಮತ್ತು ಸಂತೋಷದ ಗುಣಗಳನ್ನು ಸ್ಪೂರ್ತಿಯುತವಾಗಿ ತುಂಬುವ ಹಾಗೂ ನಾವೆಲ್ಲರೂ ಸದಾಕಾಲ ಒಂದಾಗಿ ಕೃಷ್ಣ ಪ್ರಜ್ಞೆಯನ್ನು ಉಳಿಸಿ ಬೆಳೆಸೋಣ ಎಂಬ ದಿವ್ಯ ಸಂದೇಶದ ಮೂಲಕ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ವಿಶೇಷವಾಗಿ ಮೊಸರು ಮಡಿಕೆ ಒಡೆಯುವ ಉತ್ಸವ ಜರುಗುತ್ತಿದೆ. ಹರೇ ಕೃಷ್ಣ ಮಂತ್ರ ಜಪದೊಂದಿಗೆ ಹಣೆಗೆ ತಿಲಕ ,ಬಲೆ ಕೈಗೆ ರಕ್ಷೆ, ಕುತ್ತಿಗೆಗೆ ಹಾರ ,ತಲೆಗೆ ಪೇಟಾ ತೊಟ್ಟು ,ಭಕ್ತಿ ಭಾವದೊಂದಿಗೆ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಸುತ್ತ ಪ್ರದಕ್ಷಣೆ ಹಾಕಿ ನೂರಾರು ಯುವಕರ ಸಾರ್ವಜನಿಕರ ಬಂಧುಗಳ ಮೂಲಕ ಭವ್ಯವೇದಿಕೆಗೆ ಸಂಕೀರ್ತನೆಯಲ್ಲಿ ಪಾಲ್ಗೊಂಡು ಭಜನೆ, ನೃತ್ಯ ಹರೇಕೃಷ್ಣ ನಾಮ ಸ್ಮರಣೆಯೊಂದಿಗೆ ವಿಶೇಷವಾಗಿ ಕೃಷ್ಣನ ವಿಶೇಷ ಮೃತ್ತಿಕ ಪೂಜೆಯೊಂದಿಗೆ ತಾಲೂಕಿನ ಹೆಗ್ಗೋಟಾರಾ ಗ್ರಾಮದಿಂದ ವಿಶೇಷವಾಗಿ ಶ್ರದ್ಧಾಭಕ್ತಿಯಿಂದ ಆಗಮಿಸುವ ಮಡಿಕೆಗೆ ಜಿಲ್ಲೆಯ ವಿವಿಧ ಕೃಷ್ಣ ದೇವಾಲಯಗಳಿಂದ ಮನೆಗಳಿಂದ ಪ್ರಾರ್ಥನಾ ಮಂದಿರಗಳಿಂದ ಬರುವ ಬೆಣ್ಣೆ ಹಾಗೂ ಮೊಸರು ತುಂಬಿದ ಗಡಿಗೆಯನ್ನು ಇಡೀ ಪ್ರದಕ್ಷಣೆಯ ಮೂಲಕ ತಂದು ವಿಶೇಷವಾದ ಮಡಿಕೆ ಪೂಜೆಯನ್ನು ನೆರವೇರಿಸಿ ಉತ್ಸವವನ್ನು ಆರಂಭಿಸಲಾಗುತ್ತದೆ.
ಸಾವಿರಾರು ಸಂಖ್ಯೆಯಲ್ಲಿ ರಸ್ತೆ ಎರಡು ಬದಿ ಕಟ್ಟಡಗಳ ಮೇಲ್ಭಾಗದಲ್ಲಿ ನಿಂತು ಹಿರಿಯ ಕಿರಿಯರೂ, ಮಹಿಳೆಯರು, ಯುವಕ ಯುವತಿಯರು ಹರೇ ಕೃಷ್ಣ ಮಂತ್ರದ ಘೋಷಣೆಯ ಭಕ್ತಿ ಜೇಂಕಾರದ ಪ್ರತಿಧ್ವನಿ ಸರ್ವರಲ್ಲಿಯೂ ಸಂತೋಷ, ಆನಂದ ,ನೆಮ್ಮದಿ, ಕುತೂಹಲ ಉದ್ವೇಗವನ್ನು ಉಂಟುಮಾಡುತ್ತದೆ.

ವಿಶೇಷವಾಗಿ ಉತ್ತರ ಭಾರತದಲ್ಲಿ ನಡೆಯುತ್ತಿದ್ದ ಮೊಸರು ಮಡಿಕೆ ಒಡೆಯುವ ಉತ್ಸವವನ್ನು ಮೈಸೂರಿನ ಪ್ರಾಂತ್ಯದಲ್ಲಿ ಚಾಮರಾಜನಗರ ಶ್ರೀಕೃಷ್ಣ ಪ್ರತಿಷ್ಠಾನ ಕಳೆದ 15 ವರ್ಷಗಳಿಂದ ಸಂಭ್ರಮದಿಂದ ಆಚರಿಸಿಕೊಂಡು ಬರುತ್ತಿದೆ.

ರಸ್ತೆಯ ಮಧ್ಯ ಭಾಗದಲ್ಲಿ ಎರಡು ಕಡೆ ಕಂಬನೆಟ್ಟು 21ಅಡಿ ಎತ್ತರದ 20ಅಡಿ ಅಗಲದ ಮಧ್ಯಭಾಗದಲ್ಲಿ ಮೊಸರು ಮಡಿಕೆ ಕಟ್ಟಿ, ರಾಟೆಯ ಮೂಲಕ ಎತ್ತರದಲ್ಲಿ ನಿಲ್ಲಿಸಿ ಅದನ್ನು ಒಡೆಯಲು ಯುವಕರ ತಂಡ ಸಜ್ಜಾಗುತ್ತಿದ್ದಂತೆ, ಸುತ್ತಲೂ ನೆರೆದು ನಿಂತ ನೂರಾರು ಯುವಕರ ತಂಡ 4 ದಿಕ್ಕಿನಿಂದಲೂ ನೀರನ್ನು ರಭಸವಾಗಿ ಎರಚಿ ಅಡ್ಡಿಪಡಿಸಿ ಗುರಿ ತಲಪದೆ ಬೀಳುವಂತೆ ಮಾಡುವ ರೋಚಕಕ್ಷಣವನ್ನು ಪ್ರತ್ಯಕ್ಷವಾಗಿ ನೋಡಿ ಕಣ್ತುಂಬಿಕೊಳ್ಳಬೇಕು. ಆದರೂ ಛಲ ಬಿಡದ ಯುವಕರು ನೀರಿನ ರಭಸದಲ್ಲಿಯೂ ಕೂಡ ತಂಡವಾಗಿ ಗಟ್ಟಿಯಿಂದ ಎದೆಗಾರಿಕೆಯಿಂದ ಹತ್ತಿ ಇಪ್ಪತ್ತು ಎತ್ತರದ ಗಡಿ ಮೊಸರನ್ನು ಹೊಡೆದು ಹಾಕುವ ಮೂಲಕ ಸಂಭ್ರಮಿಸುವ ಆ ಕ್ಷಣ ಕೃಷ್ಣನ ಅವತಾರದ ಸಮೃದ್ಧವಾದ ಕ್ಷಣವಾಗಿ ಇಡಿ ವಾತಾವರಣವನ್ನು ರೋಮಾಂಚನಗೊಳಿಸಿ ಭಕ್ತಿ ಸಾಗರದಲ್ಲಿ ಮುಳುಗಿಸುತ್ತದೆ. ಮಂಟಪದ ಸುತ್ತ ಒಂದು ಅಡಿ ಎತ್ತರದ ಹುಲ್ಲಿನ ಮೆದೆ, ಹೊಟ್ಟಿನ ರಾಶಿ ಹಾಕಿ ರಕ್ಷಿಸಲಾಗುವುದು ಯುವಕರ ತಂಡ ಒಬ್ಬರಿಗೊಬ್ಬರು ಗಟ್ಟಿಯಾಗಿ ಹಿಡಿದು ಒಬ್ಬರ ಮೇಲೆ ಒಬ್ಬರು ಹತ್ತಿ ,ಪಿರಮಿಡ್ ಆಕಾರದಲ್ಲಿ ಗುರಿ ಸಾಧಿಸಿ ಮಡಿಕೆ ಒಡೆಯುವ ಆ ಕ್ಷಣ ನೋಡುವುದರಲ್ಲಿ ಹರ್ಷ ತುಂಬಿದ ವಾತಾವರಣ ಮೂಡುತ್ತದೆ. ಹರೇ ಕೃಷ್ಣ ಮಂತ್ರವನ್ನು ಜಪಿಸುವರು. ಮೊಸರು ಮಡಿಕೆ ಒಡೆದು ಚೆಲ್ಲಿದ ಯುವಕರ ಸಂಭ್ರಮಕ್ಕೆ ಸಾಟಿ ಇಲ್ಲ. ಕುಣಿದು ಕುಪ್ಪಳಿಸಿ ಆನಂದದ ಸಾಗರದಲ್ಲಿ ಸಾವಿರಾರು ಜನರನ್ನು ಮುಳುಗಿಸುವ ಆ ಭಕ್ತಿ ಸಾಗರದ ಉತ್ಸವ ನೋಡುವುದು ಪುಣ್ಯದ ಒಂದು ಕಾರ್ಯ. ಕೆಲವೊಮ್ಮೆ ಮಡಕೆ ಚೆಲ್ಲುವ ಸಾಹಸ ,ಧೈರ್ಯ ಮೆಚ್ಚಲೇಬೇಕು.
12 ವರ್ಷದ ಒಳಗಿನ ಮಕ್ಕಳಿಗೆ ಕೈಯಲ್ಲಿ ದೊಣ್ಣೆ ನೀಡಿ ಮೊಸರು ಮಡಿಕೆಯನ್ನು ತೂಗಲಾಗುವುದು ಸರಿಯಾಗಿ ಗುರಿ ಇಟ್ಟು ಮಡಿಕೆ ಹೊಡೆಯುವಾಗ ಮೊಸರು ತುಂಬಿದ ನೀರು ಪ್ರೋಕ್ಷಣೆ ಜೀವನ್ ಮುಕ್ತಿಯ ಸಂದೇಶವನ್ನು ನೀಡುತ್ತದೆ .ಪುಣ್ಯದ ಕ್ಷಣವನ್ನು ಆನಂದಿಸಿ ಕೃಷ್ಣ ಪ್ರೋಕ್ಷಣೆಯೊಂದಿಗೆ ಇಡೀ ಸಮುದಾಯ ಸಂತೋಷದ ಆನಂದದ ಸಾಗರದಲ್ಲಿ ಮುಳುಗಿ ನೆಮ್ಮದಿಯ ಭಾವವನ್ನು ಮೂಡಿಸುವುದು ಉತ್ಸವದ ವಿಶೇಷ. ಕೆಲವರು ನೀರು ಎರಚುವಾಗ ಗುರಿ ಸಾಧಿಸಲಾಗದೆ ಬಿಟ್ಟು ಹೊರ ನಡೆಯುವವರು. ಆದರೂ ಮತ್ತೆ ಹತ್ತಿ ಛಲ ಬಿಡದೆ ಗುರಿ ಸಾಧಿಸಿ ಮೊಸರು ಮಡಿಕೆಯು ಕ್ಷಣ ರೋಚಕ ಸಂಭ್ರಮ ಕ್ಷಣವಾಗಿದೆ.

ಪುಟ್ಟ ಪುಟ್ಟ ಕೃಷ್ಣ ಮತ್ತು ರಾಧಾ ವೇಷದಾರಿ ಮಕ್ಕಳು ಮಡಿಕೆಯಲ್ಲಿ ಬೆಣ್ಣೆ ಇಟ್ಟು ಪದೇ ಪದೇ ತೂಗುವ ಮಡಿಕೆಯನ್ನು ನೆಗೆದು ಖುಷಿಯಿಂದ ಸಂತೋಷದಿಂದ ಬೆಣ್ಣೆಯನ್ನು ತೆಗೆಯುವ ಆ ಕೃಷ್ಣ ವೇಷಧಾರಿಗಳ ಮುಗ್ಧ ನಗು ,ಮುಗ್ಧತೆ ,ಆ ಪ್ರೀತಿ ಕರುಣೆ ,ವಿಶ್ವಾಸ ,ಅಹಂಕಾರವಿಲ್ಲದ ಭಾವ ,ಬೆಣ್ಣೆ ತೆಗೆದು ತಿನ್ನುವ ಸಂದರ್ಭದಲ್ಲಿ ಮುಖ ಕೆನ್ನೆಗೆ ಸವರಿಕೊಂಡಾಗ ಸಾಕ್ಷಾತ್ ಶ್ರೀ ಕೃಷ್ಣನೇ ಕಂಡಂತೆ ಭಾಸವಾಗುತ್ತದೆ.

ಮೊಸರು ಮಡಿಕೇ ಒಡೆಯುವ ಉತ್ಸವ ಇದೆ ಭಾನುವಾರ 31ರ ಮದ್ಯಾಹ್ನ ಎರಡು ಗಂಟೆಗೆ ಆರಂಭವಾಗಿ ಜಾನಪದ ತಂಡಗಳೊಂದಿಗೆ ಮೆರವಣಿಗೆ ನಡೆದು ಗೀತ ಗಾಯನ ನೃತ್ಯ ಕವನ ಸ್ಪರ್ಧೆ ಹಾಗೂ ಕೆಸರುಗದ್ದೆ ಓಟ ಕಬಡ್ಡಿ ಪಂದ್ಯಾವಳಿಯ ವಿಶೇಷ ಪ್ರತಿಭಾವಿಕಾಸದ ಕಾರ್ಯಕ್ರಮದೊಂದಿಗೆ ಸಂಪನ್ನಗೊಳ್ಳುತ್ತದೆ. ಸರ್ವರೂ ಆಗಮಿಸಿ ಯಶಸ್ವಿಗೊಳಿಸಿ ಕೊಡಬೇಕೆಂದು ಶ್ರೀ ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ಪ್ರಾರ್ಥಿಸಿದ್ದಾರೆ.

ಮೊಸರು ಮಡಿಕೆ ಉತ್ಸವ ಋಗ್ವೇದಿ ಕನಸಿನ ಸಾಕಾರ.

2010 ಆಗಸ್ಟ್ 9ನೇ ತಾರೀಕು ಬೆಳಗಿನ ಜಾವ 3 ಗಂಟೆ ಸಮಯದಲ್ಲಿ ಸುರೇಶ್ ಋಗ್ವೇದಿ ಅವರಿಗೆ ಕನಸಿನಲ್ಲಿ ಶ್ರೀಕೃಷ್ಣನ ಆಗಮನವಾಗಿ ,ಮೊಸರು ಬೆಣ್ಣೆ ಚೆಲ್ಲಿದ ಮಡಿಕೆಯನ್ನು ತೆಗೆಯುವ ಒಡೆಯುವ, ಓಡಾಡುವ ದೃಶ್ಯಗಳು ಕಂಡು ಬಂತು. ಆ ಕೃಷ್ಣನ ನಿರಂತರವಾದ ಆಗಮನ ಮನಸ್ಸಿಗೆ ನೆಮ್ಮದಿಯನ್ನು ಹಾಗೆಯೇ ಭಯವನ್ನು ಉಂಟು ಮಾಡಿತು. ನಂತರದ ದಿನ ಮೈಸೂರಿನ ಆಧ್ಯಾತ್ಮಿಕ ಚಿಂತಕರ ಮೂಲಕ ಇಸ್ಕಾನ್ ಸಂಸ್ಥೆಯನ್ನು ಭೇಟಿ ಮಾಡಿ ಗುರುಗಳಾದ ಸರ್ವಾನಂದ ಗೌರಂಗದಾಸರವರನ್ನು ಭೇಟಿ ಮಾಡಿದಾಗ ಅವರು ಶ್ರೀ ಕೃಷ್ಣನ ನಾಮಸ್ಮರಣೆ ಚಾಮರಾಜನಗರದಲ್ಲಿ ಆಗಲಿ. ತಾವು ಕಂಡ ಮೊಸರು ಮಡಿಕೆ ಒಡೆಯುವಉತ್ಸವ ಆರಂಭವಾಗಲಿ. ಕೃಷ್ಣನ ಸಂಪೂರ್ಣ ಆಶೀರ್ವಾದ ತಮಗೆ ಲಭಿಸಿದೆ. ಜಿಲ್ಲೆಯ ಕಲ್ಯಾಣಕ್ಕಾಗಿ ಜಿಲ್ಲೆಯ ಆಧ್ಯಾತ್ಮಿಕ ಜಾಗೃತಿಗಾಗಿ ಈ ಉತ್ಸವ ಯಶಸ್ವಿಯಾಗಲಿ ಎಂದು ಹರಸಿ ಕೃಷ್ಣನ ಚಿತ್ರಪಟವನ್ನು ನೀಡಿ ಸ್ಪೂರ್ತಿ ತುಂಬಿದರು .2010ರಲ್ಲಿ ಆರಂಭವಾದ ಉತ್ಸವ 15 ವರ್ಷಗಳನ್ನು ತುಂಬಿರುವುದು ನಮ್ಮೆಲ್ಲರಿಗೂ ದಿವ್ಯವಾದ ಅನುಭವವನ್ನು, ಆಧ್ಯಾತ್ಮಿಕ ಜಾಗೃತಿಯನ್ನು, ಮನಸ್ಸಿಗೆ ಹಿತವನ್ನು ಸಂತೋಷವನ್ನು ತಂದಿದೆ. ಈ ಕಾರ್ಯ ನಿರಂತರವಾಗಿ ಚಾಮರಾಜನಗರದಲ್ಲಿ ಮುಂದುವರೆದು ಹೋಗುವ ಬಗ್ಗೆ ಸರ್ವರೂ ಕೂಡ ಯೋಚಿಸಿ ಒಂದು ಸ್ಪಷ್ಟ ರೂಪವನ್ನು ತರುವ ಬಗ್ಗೆ ಕಾರ್ಯ ಯೋಚನೆ ರೂಪಿಸಲಾಗುವುದು ಎಂದು ಶ್ರೀಕೃಷ್ಣ ಪ್ರತಿಷ್ಠಾನದ ಅಧ್ಯಕ್ಷರು, ಸಂಸ್ಥಾಪಕರಾದ ಸುರೇಶ್ಎನ್ ಋಗ್ವೇದಿ ಎಂದು ಮನ ಬಿಚ್ಚಿ ತಿಳಿಸಿದ್ದಾರೆ.

ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";