Live Stream

[ytplayer id=’22727′]

| Latest Version 8.0.1 |

Bengaluru UrbanState News

ಮಹಿಳೆಯರ ಪ್ರಾಣಕ್ಕೆ ಗ್ಯಾರಂಟಿ ಕೊಡುವವರು ಯಾರು

ಮಹಿಳೆಯರ ಪ್ರಾಣಕ್ಕೆ ಗ್ಯಾರಂಟಿ ಕೊಡುವವರು ಯಾರು

ಯಾರನ್ನಾದರೂ ಸಿಎಂ ಮಾಡಿ; ಮಹಿಳಾ ರಕ್ಷಣೆಗೆ ಆದ್ಯತೆ ಕೊಡಿ: ಶೋಭಾ ಕರಂದ್ಲಾಜೆ (Shobha Karandlaje) ಆಗ್ರಹ

ಬೆಂಗಳೂರು: ನೀವು ಯಾರನ್ನಾದರೂ ಮುಖ್ಯಮಂತ್ರಿ (Chief Minister) ಮಾಡಿ; ಆದರೆ, ಮಹಿಳಾ ರಕ್ಷಣೆ (Safety) ನಿಮ್ಮ ಆದ್ಯತೆಯಾಗಿರಲಿ ಎಂದು ಕೇಂದ್ರ ಸಚಿವರಾದ ಕು.ಶೋಭಾ ಕರಂದ್ಲಾಜೆ ಅವರು ಒತ್ತಾಯಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹ ಸಚಿವರು ಏನು ಕೆಲಸ ಮಾಡುತ್ತಿದ್ದಾರೆಂದು ಗೊತ್ತಿಲ್ಲ; ರಾಜ್ಯದ ಸಚಿವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಸಭೆ ನಡೆಸುತ್ತಾರೋ ಎಂಬುದೂ ಗೊತ್ತಿಲ್ಲ. ಗೃಹ ಸಚಿವರು ವಿವಿಧ ಜಿಲ್ಲೆಗಳಲ್ಲಿ ಎಸ್ಪಿ ಮತ್ತು ಪೊಲೀಸ್ ಅಧಿಕಾರಿಗಳ ಸಭೆ ನಡೆಸಬೇಕು; ಕಾನೂನು- ಸುವ್ಯವಸ್ಥೆಯ ಪರಿಶೀಲನೆ ಮಾಡಬೇಕು. ಆದರೆ, ಇವರು ಬೆಂಗಳೂರು ಬಿಟ್ಟು ಹೊರಟರೆ ತುಮಕೂರು ಎಂಬಂತಿದೆ ಎಂದು ಆಕ್ಷೇಪಿಸಿದರು.
ಮುಖ್ಯಮಂತ್ರಿಗಳು ಕಾರ್ಯಕ್ರಮದ ಶಿಲಾನ್ಯಾಸಕ್ಕೆ ಹೆಲಿಕಾಪ್ಟರ್‍ನಲ್ಲೇ ಹೋಗುತ್ತಿದ್ದು, ಅವರಿಗೆ ಭೂಮಿಯಲ್ಲಿ ಏನು ನಡೆಯುತ್ತದೆ ಎಂದು ಗೊತ್ತಿಲ್ಲ; ಡಿ.ಕೆ.ಶಿವಕುಮಾರ್ ಅವರ ರಾಜಕಾರಣ ಬೆಂಗಳೂರಿಗೆ ಮತ್ತು ವಿಧಾನಸೌಧದ ಸುತ್ತ ತಿರುಗುತ್ತಿದೆ. ಬೇಗ ಸಿಎಂ ಆಗಬೇಕೆಂಬುದು ಬಿಟ್ಟರೆ ತಲೆಯಲ್ಲಿ ಇನ್ನೇನೂ ಇಲ್ಲ ಎಂದು ಟೀಕಿಸಿದರು. ಇದರ ಪರಿಣಾಮವಾಗಿ ಕರ್ನಾಟಕದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ, ಮಹಿಳೆಯರ ಕೊಲೆ, ಬಾಲಕಿಯರ ಮೇಲಿನ ಅತ್ಯಾಚಾರ ನಿರಂತರವಾಗಿ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ದುಡ್ಡು ಕೈ ಸೇರಿದರಷ್ಟೇ ವರ್ಗಾವಣೆ
ಪೊಲೀಸರ ಟೊಪ್ಪಿ ಬದಲಿಸುವ ಕುರಿತು ಸರಕಾರ ಯೋಚಿಸಿದೆ. ಅವರ ಕೈಗಳನ್ನು ಶಕ್ತಿಯುತವಾಗಿ ಮಾಡುವ ಕಡೆ ಗಮನಿಸಿಲ್ಲ ಎಂದು ಆಕ್ಷೇಪಿಸಿದರು. ದುಡ್ಡು ಕೊಡದೆ ಟ್ರಾನ್ಸ್‍ಫರ್ ಆಗುವುದಿಲ್ಲ; ವರ್ಗಾವಣೆಗೆ ಯಾವ ಪೊಲೀಸ್ ಠಾಣೆ ಎಂಬುದಕ್ಕೆ ನಿಗದಿತ ಮೊತ್ತ ಇದೆ. ದುಡ್ಡು ಕೈ ಸೇರಿದರಷ್ಟೇ ವರ್ಗಾವಣೆ ಆಗುತ್ತದೆ ಎಂದು ಕು.ಶೋಭಾ ಕರಂದ್ಲಾಜೆ ಅವರು ಆರೋಪಿಸಿದರು.
ನನ್ನ ಕ್ಷೇತ್ರದ ಪೊಲೀಸ್ ಠಾಣೆಗಳಲ್ಲಿ ಆರು ತಿಂಗಳಿಗೊಮ್ಮೆ 10 ತಿಂಗಳಿಗೆ ಒಮ್ಮೆ ವರ್ಗಾವಣೆ ಮಾಡುತ್ತಾರೆ. ಪದೇಪದೇ ಪೊಲೀಸ್ ಅಧಿಕಾರಿಗಳನ್ನು ಬದಲಾಯಿಸುತ್ತಾರೆ. ಯಾಕೆ? ಒಂದು ಸಾರಿ ದುಡ್ಡು ಕೊಟ್ಟರೆ ಅದರ ಮೌಲ್ಯ 10 ತಿಂಗಳಿಗೆ ಮಾತ್ರ. ಆಮೇಲೆ ಉಳಿಯಲು ಹೊಸದಾಗಿ ದುಡ್ಡು ಕೊಡಬೇಕು. ಇಲ್ಲವಾದರೆ ಅವರಿಗೆ ವರ್ಗಾವಣೆ ಮಾಡಿ, ಹೆಚ್ಚು ದುಡ್ಡು ಕೊಡುವವರು ಬರುತ್ತಾರೆ ಎಂದು ಟೀಕಿಸಿದರು. ದುಡ್ಡು, ವರ್ಗಾವಣೆ ವ್ಯವಹಾರದಿಂದ ನಮ್ಮ ಅಧಿಕಾರಿಗಳು ಆತ್ಮವಿಶ್ವಾಸ ಕಳಕೊಂಡಿದ್ದಾರೆ ಎಂದರು.

ಕೆಲಸದ ಬದಲಾಗಿ ದುಡ್ಡು ಹೆಚ್ಚು ಮಹತ್ವದ್ದಾಗುತ್ತಿದೆ. ಕರ್ನಾಟಕದಲ್ಲಿ ಕಳೆದ 2 ವರ್ಷಗಳಲ್ಲಿ 1800ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ದೌರ್ಜನ್ಯ ಆಗಿದೆ. ಮುಖ್ಯಮಂತ್ರಿಗಳ ಜಿಲ್ಲೆಯಲ್ಲೇ ಬಲೂನ್ ಮಾರಾಟಕ್ಕೆ ಬಂದ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ ಆಗಿದೆ. ಹುಬ್ಬಳ್ಳಿಯಲ್ಲಿ ನೇಹಾ ಕೊಲೆ ನಡೆಯಿತು. ಸರಕಾರ ಬಂದೊಡನೆ, ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದ್ದಾಗ ಬೆಳಗಾವಿ ನಗರದಲ್ಲೇ ಮಹಿಳೆಯನ್ನು ವಿವಸ್ತ್ರಗೊಳಿಸಿ ದೌರ್ನನ್ಯ ನಡೆದಿತ್ತು ಎಂದು ಗಮನ ಸೆಳೆದರು.

ಈ ಸರಕಾರ ಸತ್ತಿದೆ..
ಬೆಂಗಳೂರಿನಲ್ಲಿ ಉಪನ್ಯಾಸಕರು ಅತಿಥಿ ಉಪನ್ಯಾಸಕರ ಮೇಲೆ ಅತ್ಯಾಚಾರ ಮಾಡುತ್ತಾರೆ. ಮೂಡಬಿದಿರೆಯ ಉಪನ್ಯಾಸಕರು ಬೆಂಗಳೂರಿಗೆ ವಿದ್ಯಾರ್ಥಿನಿಯನ್ನು ಕರೆದುಕೊಂಡು ಬಂದು ಅತ್ಯಾಚಾರ ಮಾಡುತ್ತಾರೆ. ಮಲತಂದೆ ತನ್ನ ಮಗಳ ಮೇಲೆ ಮಾಡುತ್ತಾನೆ. ಕೆಲಸ ಹುಡುಕಿಕೊಂಡು ಬಂದ ಬಿಹಾರದ ಕುಟುಂಬ, ಒಡಿಶಾದ ಕುಟುಂಬದ ಮಕ್ಕಳು ಓಡಾಡುತ್ತಿದ್ದರೆ ಅವರನ್ನು ಎತ್ತಿಕೊಂಡು ಹೋಗಿ ಅತ್ಯಾಚಾರ ಮಾಡುತ್ತಿದ್ದಾರೆ. ಕರ್ನಾಟಕ, ಬೆಂಗಳೂರಿನಲ್ಲಿ ಈ ಧೈರ್ಯ ಹೇಗೆ ಬಂತು? ಈ ಸರಕಾರ ಸತ್ತಿರುವುದೇ ಇದಕ್ಕೆ ಕಾರಣ ಎಂದು ವಿಶ್ಲೇಷಿಸಿದರು.
ಅವರ ಕುರ್ಚಿಯ ಮೇಲಾಟ, ಮುಖ್ಯಮಂತ್ರಿ ಯಾರಾಗಬೇಕು? ಯಾರು ಸಚಿವರಾಗಬೇಕು? ಯಾರು ಉಪ ಮುಖ್ಯಮಂತ್ರಿ ಆಗಬೇಕು? ಯಾರು ಮಂತ್ರಿಗಿರಿ ಉಳಿಸಿಕೊಳ್ಳಬೇಕು? ಯಾರು ಮಂತ್ರಿಗಿರಿ ಗಳಿಸಿಕೊಳ್ಳಬೇಕು?- ಈ ಮೇಲಾಟದಲ್ಲಿ ಜನರು ಪ್ರಾಣ ಕಳಕೊಳ್ಳುತ್ತಿದ್ದಾರೆ ಎಂದು ದೂರಿದರು.
ಕಳೆದೆರಡು, ಎರಡೂವರೆ ವರ್ಷಗಳಲ್ಲಿ 20ಕ್ಕೂ ಹೆಚ್ಚು ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಾತಿ ಸಮೀಕ್ಷೆಗೆ ಒತ್ತಡಪೂರ್ವಕವಾಗಿ ಕಳಿಸಿದ್ದು, ಅಲ್ಲಿ ಆರಕ್ಕಿಂತ ಹೆಚ್ಚು ಜನ ಸತ್ತಿದ್ದಾರೆ. 15ಕ್ಕೂ ಹೆಚ್ಚು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡರು. ಮೊದಲ ಬಾರಿಗೆ ಗುತ್ತಿಗೆದಾರರು ಕರ್ನಾಟಕದಲ್ಲಿ ದಯಾಮರಣ ಕೊಡಿ ಎಂದು ಪತ್ರ ಬರೆದಿದ್ದಾರೆ. ಇವರು ಗ್ಯಾರಂಟಿ ಬಗ್ಗೆ ಮಾತನಾಡುತ್ತಾರೆ. ಮಹಿಳೆಯರ ಪ್ರಾಣಕ್ಕೆ ಗ್ಯಾರಂಟಿ ಕೊಡುವವರು ಯಾರು ಎಂದು ಕೇಳಿದರು.
ಸಿಎಂ ಯಾರಾಗುತ್ತಾರೆ? ಸಚಿವಸಂಪುಟ ಬದಲಿಸುವಿರಾ ಎಂಬುದು ನಮಗೆ ಸಂಬಂಧಿಸಿಲ್ಲ. ನಮ್ಮ ಜನರು, ಮಹಿಳೆಯರು, ಬಾಲಕಿಯರಿಗೆ ರಕ್ಷಣೆ ಕೊಡಿ ಎಂದು ಅವರು ಸರಕಾರವನ್ನು ಆಗ್ರಹಿಸಿದರು. ಸರಕಾರ ಸ್ಪರ್ಶಜ್ಞಾನ ಕಳಕೊಂಡಿದೆಯೇ? ಕಣ್ಣು ಕಾಣುತ್ತದೆಯೇ ಇಲ್ಲವೇ? ಕಿವಿ ಕೇಳಿಸುತ್ತದೆಯೇ ಇಲ್ಲವೇ ಎಂದು ತಿಳಿಯುತ್ತಿಲ್ಲ. ಕನಿಷ್ಠ ಪಕ್ಷ ಈಗಲಾದರೂ ಎಚ್ಚತ್ತುಕೊಳ್ಳಿ. ಈ ಆತ್ಮಹತ್ಯೆ, ಕೊಲೆಗಳನ್ನು ತಪ್ಪಿಸಿ ಎಂದು ಆಗ್ರಹಿಸಿದರು.
ವಿಧಾನಪರಿಷತ್ ಸದಸ್ಯರಾದ ಶ್ರೀಮತಿ ಭಾರತಿ ಶೆಟ್ಟಿ, ಶ್ರೀಮತಿ ಹೇಮಲತಾ ನಾಯಕ್ ಅವರು ಭಾಗವಹಿಸಿದ್ದರು.

ವೀ ಕೇ ನ್ಯೂಸ್
";