Live Stream

[ytplayer id=’22727′]

| Latest Version 8.0.1 |

State News

ರಾಷ್ಟ್ರದ ಯುವಜನತೆ ಮತ್ತು ನಾಯಕರ ಗಮನಸೆಳೆದ ಯು.ಟಿ ಖಾದರ್ ಅವರ ಪ್ರೇರಣಾದಾಯಕ ಭಾಷಣ

ರಾಷ್ಟ್ರದ ಯುವಜನತೆ ಮತ್ತು ನಾಯಕರ ಗಮನಸೆಳೆದ ಯು.ಟಿ ಖಾದರ್ ಅವರ ಪ್ರೇರಣಾದಾಯಕ ಭಾಷಣ

ಬೆಂಗಳೂರು, ಸೆಪ್ಟೆಂಬರ್ 01 (ಕರ್ನಾಟಕ ವಾರ್ತೆ) :
ನವದೆಹಲಿಯಲ್ಲಿ ನಡೆದ ಭಾರತ್ ಸ್ಕೌಟ್ ಅಂಡ್ ಗೈಡ್ಸ್ ನ ಪ್ರತಿಷ್ಠಿತ ರಾಷ್ಟ್ರಪತಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸುಮಾರು 5,000 ಸಭಿಕರ ಸಮ್ಮುಖದಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ ಖಾದರ್ ಅವರು ನೀಡಿದ ಸ್ಫೂರ್ತಿದಾಯಕ ಭಾಷಣವು ರಾಷ್ಟ್ರದ ಯುವಜನತೆ ಮತ್ತು ನಾಯಕರ ಗಮನ ಸೆಳೆಯಿತು.

ನಾಯಕತ್ವ, ಸೇವಾಭಾವನೆ ಮತ್ತು ರಾಷ್ಟ್ರಪ್ರೇಮವನ್ನು ಒಟ್ಟಿಗೆ ಬೆಳೆಸಿಕೊಳ್ಳುವ ಅಗತ್ಯವನ್ನು ಅವರು ಒತ್ತಿ ಹೇಳಿದಾಗ, ಅಲ್ಲಿ ಉಪಸ್ಥಿತರಿದ್ದ ವಿದ್ಯಾರ್ಥಿಗಳಿಗೆ ತಮ್ಮ ಹೊಣೆಗಾರಿಕೆಯನ್ನು ಅರಿತು, ಬದ್ಧತೆಯೊಂದಿಗೆ ಕಾರ್ಯನಿರ್ವಹಿಸಲು ಪ್ರೇರಣೆ ದೊರಕಿತು.

ಸಮಾರಂಭವನ್ನುದ್ದೇಶೀಸಿ ಮಾತನಾಡಿದ ಅವರು, “ಇಲ್ಲಿ ಉಪಸ್ಥಿತರಿರುವ ಉತ್ಸಾಹಿ, ಆತ್ಮವಿಶ್ವಾಸಿ ಮತ್ತು ದೃಢ ಮನಸ್ಸಿನ ಯುವ ಸಮಾವೇಶವನ್ನು ನೋಡಿ ನನಗೆ ಭವಿಷ್ಯದ ಭಾರತದ ಬಗ್ಗೆ ಅಪಾರ ಭರವಸೆ ಮತ್ತು ಹೆಮ್ಮೆ ಅನ್ನಿಸುತ್ತಿದೆ. ಏಕೆಂದರೆ, ನೀವು ಖಂಡಿತವಾಗಿಯೂ ವಿಶ್ವದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಬಲಿಷ್ಠ ಮತ್ತು ಪ್ರಗತಿಶೀಲ ರಾಷ್ಟ್ರವಾಗಿ ಮಾನ್ಯತೆ ಪಡೆಯಲಿರುವ ಶ್ರೇಷ್ಠ ಭಾರತದ ವಾಸ್ತುಶಿಲ್ಪಿಗಳಾಗಿದ್ದೀರಿ”, ಎಂದರು.

“ಸ್ಕೌಟಿಂಗ್ ಮತ್ತು ಗೈಡಿಂಗ್ ಸೇವೆ, ಸಂಸ್ಕಾರ ಮತ್ತು ಸಹಯೋಗ ಎನ್ನುವ ಮೂರು ಸುಂದರ ಸಂಗಮವಾಗಿದೆ. ಈ ಮೂರು ಸ್ತಂಭಗಳು ಸಮಗ್ರ ವ್ಯಕ್ತಿತ್ವ ನಿರ್ಮಾಣಕ್ಕೆ ಪ್ರಬಲ ಚೌಕಟ್ಟಿನಂತೆ ಕಾರ್ಯನಿರ್ವಹಿಸುತ್ತವೆ. ಇದು ‘ಸ್ವಯಂ’ ದಿಂದ ‘ಇತರರ ಸೇವೆ’ಗೆ ಇರುವ ಒಂದು ಪರಿವರ್ತನಾಶೀಲ ಪಯಣವಾಗಿದೆ. ವಿದ್ಯಾರ್ಥಿಗಳನ್ನು ಅಧ್ಯಯನ ಕೊಠಡಿಯಾಚೆಗೆ ಕರೆದೊಯ್ಯುವ, ಅವರನ್ನು ಸಮಾಜದ ಜವಾಬ್ದಾರಿಯುತ ನಾಗರಿಕರನ್ನಾಗಿ ಪರಿವರ್ತಿಸುವ ಪಯಣವಾಗಿದೆ. ಭಾರತದ ನಾರಿ ಶಕ್ತಿಯನ್ನು ಪ್ರತಿನಿಧಿಸುವ ನಮ್ಮ ಹೆಮ್ಮೆಯ ಯುವತಿಯರು ಕೂಡ ನಾಯಕತ್ವದಲ್ಲಿ ಮುನ್ನಡೆಯುವುದು, ಅನ್ವೇಷಣೆಗೆ, ಮತ್ತು ಹೊಸ ಸವಾಲುಗಳನ್ನು ಎದುರಿಸಲು ಸಿದ್ಧರಿರುವುದನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ. ನೀವು ನಿಜವಾಗಿಯೂ ಲಕ್ಷಾಂತರ ಯುವತಿಯರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದೀರಿ”, ಎಂದು ಹೇಳಿ ವಿದ್ಯಾರ್ಥಿಗಳಿಗೆ ಸ್ಫೂರ್ತಿಯನ್ನು ತುಂಬಿದರು.

ಪ್ರಶಸ್ತಿ ವಿಜೇತರಿಗೆ ಶುಭ ಕೋರುತ್ತಾ ಅವರು, “ಸ್ಕೌಟ್ಸ್, ಗೈಡ್ಸ್, ರೋವರ್ಸ್ ಮತ್ತು ರೇಂಜರ್ಸ್‍ಗಳ ಸೇವೆ ಮತ್ತು ನಾಯಕತ್ವದಲ್ಲಿನ ಶ್ರೇಷ್ಠತೆಯನ್ನು ಗುರುತಿಸುವ ಈ ಪ್ರತಿಷ್ಠಿತ ರಾಷ್ಟ್ರಪತಿ ಪ್ರಶಸ್ತಿ ಪ್ರದಾನ ಸಮಾರಂಭವು ಕೇವಲ ಒಂದು ಔಪಚಾರಿಕ ಸಮಾರಂಭವಲ್ಲ, ಇದು ಅವರ ಸಮರ್ಪಣೆ, ಕಠಿಣ ಪರಿಶ್ರಮ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಗುರುತಿಸಿ, ಸಮಾಜಕ್ಕಾಗಿ ಅವರು ಇನ್ನಷ್ಟು ತಮ್ಮ ಸೇವಾ ಶಕ್ತಿ ಮತ್ತು ಕೌಶಲ್ಯವನ್ನು ಧಾರೆಯೆರೆದು, ಆ ಮೂಲಕ ಇನ್ನೂ ಹಲವಾರು ಜನರಿಗೆ ಪ್ರೇರಣೆಯಾಗಲಿ ಎನ್ನುವ ಉತ್ತಮ ಆಶಯದೊಂದಿಗೆ ನಡೆಸಲಾಗುತ್ತದೆ.

ನಿಮ್ಮ ಈ ಯಶಸ್ಸು ಅಂತ್ಯವಲ್ಲ, ಇದು ಹೊಸ ಆರಂಭಕ್ಕೆ ಮುನ್ನುಡಿ. ನಿಮ್ಮ ಯಶಸ್ವಿ ಸಾಧನೆಗಳ ಹಿಂದೆ ಇರುವ ಪೆÇೀಷಕರು ಮತ್ತು ತರಬೇತುದಾರರ ಶ್ರಮ ಮತ್ತು ಬೆಂಬಲಕ್ಕೆ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಮತ್ತು ಅಭಿನಂದನೆಗಳನ್ನು ಅರ್ಪಿಸಲು ಈ ಸಂದರ್ಭದಲ್ಲಿ ಇಚ್ಚಿಸುತ್ತೇನೆ. ಮಾತ್ರವಲ್ಲ, ನಿಮ್ಮ ಮಾರ್ಗದರ್ಶನದಿಂದ ಇವರು ಇನ್ನಷ್ಟು ಶ್ರೇಷ್ಠ ಸಾಧನೆಗಳನ್ನೂ ಮಾಡುವಂತಾಗಲಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪರಂಪರೆಯನ್ನು ಇನ್ನಷ್ಟು ಬಲಪಡಿಸಿ, ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡುವಂತಾಗಲಿ”, ಎಂದು ನುಡಿದರು.

ತಮ್ಮ ಶಾಲಾ ದಿನಗಳನ್ನು ನೆನಪಿಸುತ್ತಾ ಅವರು, “ನಾನು 5ನೇ ತರಗತಿಯಿಂದ 10ನೇ ತರಗತಿಯವರೆಗೆ ಐದು ವರ್ಷಗಳ ಕಾಲ ಸ್ಕೌಟ್ ಗೈಡ್ ಆಗಿರುವುದು ನನ್ನ ವ್ಯಕ್ತಿತ್ವವನ್ನು ಮಾತ್ರವಲ್ಲ, ಮಾನವೀಯತೆ, ಸಹನಶೀಲತೆ ಮತ್ತು ಗುರಿಯೊಂದಿಗೆ ಮುನ್ನಡೆಯುವ ನಾಯಕತ್ವ ಸಾಮಥ್ರ್ಯವನ್ನೂ ನನಗೆ ನೀಡಿತು. ಸ್ಕೌಟಿಂಗ್ ನನಗೆ ಶಿಸ್ತು, ತಂಡದಲ್ಲಿ ಕೆಲಸ ಮಾಡುವುದು, ಸಮಾಜ ಸೇವೆ, ಸವಾಲುಗಳನ್ನು ಹೇಗೆ ಎದುರಿಸುವುದು ಮತ್ತು ಕಠಿಣ ಸಂದರ್ಭಗಳಲ್ಲಿ ಶಾಂತವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಹೇಗೆ ಎಂಬುದನ್ನು ಕಲಿಸಿತು. ಇಂದಿನ ಸಮಾಜವು ತಪ್ಪು ಮಾಹಿತಿ, ಧ್ರುವೀಕರಣ ಮತ್ತು ಅಸಮಾನತೆಯಂತಹ ಸವಾಲುಗಳೊಂದಿಗೆ ಹೋರಾಡುತ್ತಿರುವ ಈ ಕಾಲಘಟ್ಟದಲ್ಲಿ, ಸ್ಕೌಟ್ ಗೈಡ್ಸ್ ಸಾಮಾಜಿಕ ಸಮಾನತೆ, ಸಾಮರಸ್ಯ ಮತ್ತು ಶಾಂತಿಯುತ ಸಹಬಾಳ್ವೆಯನ್ನು ಮುಂತಾದ ಮೌಲ್ಯಗಳೊಂದಿಗೆ ವಿದ್ಯಾರ್ಥಿ ನಾಯಕರನ್ನು ರೂಪಿಸುವುದು ಶ್ಲಾಘನೀಯವಾಗಿದೆ ಎಂದರು.

ಒಳ್ಳೆಯ ವೈದ್ಯರಾಗಲು ವೈದ್ಯಕೀಯ ಕಾಲೇಜುಗಳಿವೆ, ಉತ್ತಮ ಇಂಜಿನಿಯರ್ ಆಗಲು ಇಂಜಿನೀಯರಿಂಗ್ ಕಾಲೇಜುಗಳಿವೆ. ಹಾಗೆಯೆ, ಉತ್ತಮ ಸತ್ಪ್ರಜೆಯಾಗಲು ಸ್ಕೌಟ್ ಅಂಡ್ ಗೈಡ್ಸ್ ಉತ್ತಮ ವೇದಿಕೆಯಾಗಿದೆ. ಮೂವತ್ತು ವರ್ಷಗಳ ಹಿಂದೆ ಸಭಿಕರ ಮಧ್ಯೆ ಕುಳಿತಿದ್ದ ಯು.ಟಿ. ಖಾದರ್ ಇಂದು ನಿಮ್ಮೆದುರು ನಿಂತು ಮಾತನಾಡುತ್ತಿದ್ದಾರೆ ಎಂದರೆ, ಈ ಅವಕಾಶ ಕೇವಲ ನನಗೆ ಮಾತ್ರ ಅಲ್ಲ, ಮುಂದಿನ ಭವಿಷ್ಯದಲ್ಲಿ ನಿಮಗೂ ದೊರಕಬಹುದು. ನೀವು ಇನ್ನೂ ಹೆಚ್ಚಿನದನ್ನು ಸಾಧಿಸಿ, ಭವಿಷ್ಯದಲ್ಲಿ ನನಗಿಂತ ದೊಡ್ಡ ಸ್ಥಾನಕ್ಕೆ ಹೋಗುವಂತಾಗಲಿ ಎಂದು ಅವರು ತಮ್ಮ ಆಶಯವನ್ನು ವ್ಯಕ್ತಪಡಿಸಿದರು.

ವೈವಿಧ್ಯತೆಯಲ್ಲಿನ ಏಕತೆಯ ಬಗ್ಗೆ ಬೆಳಕು ಚೆಲ್ಲುತ್ತ ಅವರು, “ಸ್ಕೌಟ್ಸ್ ಮತ್ತು ಗೈಡ್ಸ್ ವೈವಿಧ್ಯತೆಯಲ್ಲಿನ ಏಕತೆಯ ಸಹ ಪ್ರತಿನಿಧಿಸುತ್ತದೆ. ದೇಶದ ಬೇರೆ ಬೇರೆ ಪ್ರೆದೇಶದಿಂದ ಬಂದರೂ, ಬೇರೆಬೇರೆ ಭಾμÉ ಮಾತನಾಡಿದರೂ, ಬೇರೆ ಬೇರೆ ಧಾರ್ಮಿಕ ನಂಬಿಕೆ, ಆಚರಣೆಯನ್ನು ಹೊಂದಿದರೂ ಕೂಡಾ ಮಾನವೀಯತೆ, ಪ್ರೀತಿ, ವಿಶ್ವಾಸಗಳಿಂದ ಎಲ್ಲರೂ ಜೊತೆಯಾಗಿ ಕೆಲಸ ಮಾಡುತ್ತಾರೆ.

ಸ್ಕೌಟ್, ಗೈಡ್, ರೇಂಜರ್ಸ್ ಮತ್ತು ರೋವರ್ಸ್ ಆಗಿ ಮಾಡುವ ಸಣ್ಣ ಪರಿವರ್ತನೆಯೂ ಸಹ ಸಮಾಜದಲ್ಲಿ ಬದಲಾವಣೆಯ ಅಲೆಯಾಗಿ ಪರಿಣಮಿಸುತ್ತದೆ. ಅದು ಮರವನ್ನು ನೆಡುವುದಾಗಲಿ, ಜನನಿಬಿಡ ರಸ್ತೆ ದಾಟಲು ಯಾರಿಗಾದರೂ ಸಹಾಯ ಮಾಡುವುದಾಗಲಿ ಅಥವಾ ನ್ಯಾಯದ ಪರವಾಗಿ ಹೋರಾಡುವುದಿರಲಿ ಎಲ್ಲವೂ ಸಾಮಾಜಿಕ ಪರಿವರ್ತನೆಯ ಶಕ್ತಿಯನ್ನು ಪ್ರತಿಬಿಂಬಿತವಾಗುತ್ತದೆ. ಸ್ಕೌಟ್ ಮತ್ತು ಗೈಡ್ ಮೂಲ ತತ್ವವು ನಮಗೆ ಇತರರನ್ನು ಗೌರವಿಸಲು, ವೈವಿಧ್ಯತೆಯಲ್ಲಿ ಏಕತೆಯನ್ನು ಕಾಪಾಡಲು ಮತ್ತು ಸಾಮರಸ್ಯಕ್ಕಾಗಿ ಕೆಲಸ ಮಾಡಲು ಕಲಿಸುತ್ತದೆ. ಆ ಮೂಲಕ ನಮ್ಮ ವ್ಯಕ್ತಿಗತವಾದ ಬೆಳವಣಿಗೆಯ ಜೊತೆಗೆ ನಿಸ್ವಾರ್ಥ ಸೇವೆ, ಸಮಗ್ರತೆ ಮತ್ತು ಶಿಸ್ತಿನಿಂದ ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿ ಇತರರಿಗೆ ಪ್ರೇರಣೆಯೂ ಮತ್ತು ಮಾದರಿಯೂ ಆಗುತ್ತೇವೆ ಎಂದರು.

ನಾಯಕತ್ವದ ಬಗ್ಗೆ ಮಾತನಾಡುತ್ತಾ ಅವರು, ನಿಜವಾದ ನಾಯಕತ್ವ ಮುಂದೆ ನಿಂತು ಆಜ್ಞಾಪಿಸುವುದಲ್ಲ, ಬದಲಾಗಿ ಇತರರನ್ನು ಉತ್ತೇಜಿಸುವುದು, ಪ್ರೇರೇಪಿಸುವುದು ಮತ್ತು ಅವರ ಬದುಕಿಗೆ ಬೆಳಕಾಗುವುದು, ಮಾತ್ರವಲ್ಲ ಸಮಾಜದಲ್ಲಿ ಧ್ವನಿಹೀನರಿಗೆ ಧ್ವನಿಯಾಗಿ, ಕತ್ತಲಲ್ಲಿ ಇರುವವರಿಗೆ ಬೆಳಕಾಗಿ, ಬಡವರಿಗೆ ಆಶಾಕಿರಣವಾಗಿ, ನರಳುವವರಿಗೆ ನೆಮ್ಮದಿ, ಪ್ರೀತಿ ನೀಡುವ ಕಲ್ಪವೃಕ್ಷವಾಗಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ, ದೊರಕಿಸಿಕೊಡುವ ನ್ಯಾಯದೇವತೆಯಾಗಿ, ಎಲ್ಲರನ್ನು ಜೊತೆಗೆ ಸೇರಿಸಿಕೊಂಡು ಮುನ್ನಡೆಯುವುದೇ ನಿಜವಾದ ನಾಯಕತ್ವ.

ನಾಯಕರಾದವರು ಹೆಸರಿಗೋಸ್ಕರ ನೇತೃತ್ವ ವಹಿಸುವುದಲ್ಲ, ಬದಲಾಗಿ ಇತರರನ್ನು ಸಬಲಗೊಳಿಸುವ ಮೂಲಕ ಬದಲಾವಣೆಗೆ ನಾಂದಿ ಹಾಡುತ್ತಾರೆ, ಇಂತಹ ನೈತಿಕ ಮೌಲ್ಯಗಳಿಂದ ಕೂಡಿದ ಸಮೃದ್ಧ ನಾಯಕತ್ವವೇ ನಿಜವಾದ ಸಾಮಾಜಿಕ ಪರಿವರ್ತನೆಗೆ ಕಾರಣವಾಗುತ್ತದೆ. ಹೆಸರು ಹಣ ನಮ್ಮನ್ನು ಹುಡುಕಿಕೊಂಡು ಬರಬೇಕೆ ಹೊರತು ನಾವು ಅದನ್ನು ಹುಡುಕಿಕೊಂಡು ಹೋಗುವುದಲ್ಲ. ಹುಟ್ಟಿದಾಗ ನಮಗೆ ಉಸಿರು, ಇರುತ್ತದೆ ಹೆಸರು ಇರುವುದಿಲ್ಲ, ಸಾಯುವಾಗ ನಮಗೆ ಉಸಿರು ಇರುವುದಿಲ್ಲ ಆದರೆ ನಾವು ಮಾಡಿದ ಒಳ್ಳೆಯ ಕೆಲಸಗಳು ಎಲ್ಲರ ಉಸಿರಾಗಿ ನಮ್ಮನ್ನು ಹಸಿರಾಗಿಸುತ್ತದೆ, ಅಮರವಾಗಿಸುತ್ತವೆ, ಸದಾ ನಮ್ಮನ್ನು ಜನರ ಮನಸ್ಸಲ್ಲಿ ಜೀವಂತವಾಗಿರಿಸುತ್ತವೆ. ಇದರಲ್ಲೇ ಇರುವುದು ಜೀವನದ ಸಾರ್ಥಕತೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು

Live Link
https://www.youtube.com/live/gJTc0Ljdi2Y?si=sFCk9Sf5slQhpfqb

ಸಮಾರಂಭದಲ್ಲಿ ಕೇಂದ್ರ ಕಾರ್ಮಿಕ, ಉದ್ಯೋಗ ಮತ್ತು ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾದ ಮನ್ಸುಖ್ ಮಾಂಡವಿಯಾ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್‍ನ ಮಾಜಿ ಮುಖ್ಯ ರಾಷ್ಟ್ರೀಯ ಆಯುಕ್ತರಾದ ಡಾ. ಕೆ. ಕೆ. ಖಂಡೇಲ್ವಾಲ್, ಛತ್ತೀಸಘಡದ ಮಾಜಿ ಮಾಜಿ ಸಚಿವರು ಹಾಗೂ ಸಂಸದರಾಗಿರುವ ಬ್ರಿಜ್ ಮೋಹನ್ ಅಗರ್ವಾಲ್, ದೆಹಲಿಯ ಸಂಸದರಾದ ಮನೋಜ್ ತಿವಾರಿ, ಮಾಜಿ ನ್ಯಾಯಧೀಶರದ ಜಾವೇರಿಯ ಹಾಗೂ ಶ್ರೀಮತಿ ಗೀತಾಂಜಲಿ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್‍ನ ಹೆಚ್ಚುವರಿ ಸಹಾಯಕ ಆಯುಕ್ತರಾದ ಎಂ.ಎ. ಖಾಲಿದ್, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್‍ನ ರಾಷ್ಟ್ರೀಯ ಮಹಾಕಾರ್ಯಾಧ್ಯಕ್ಷರಾದ ಪಿ.ಜಿ.ಆರ್. ಸಿಂಧ್ಯಾ ಮುಂತಾದ ನಾಯಕರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";