ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರು ಮತ್ತು ಸಂಶೋಧನಾ ನಿರ್ದೇಶಕರು ನೇತೃತ್ವದಲ್ಲಿ 2025 ರ ಆಗಸ್ಟ್ 6 ರಂದು ಬಾದಾಮಿ ತಾಲೂಕಿನ ಚೊಳಚಗುಡ್ಡ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಬೆಳೆಯುವ ವಿಶಿಷ್ಟ ವಿಳ್ಳೇದೆಲೆಗೆÉ ಭೌಗೋಳಿಕ ಮಾನ್ಯತೆ ಒದಗಿಸುವ ನಿಟ್ಟಿನಲ್ಲಿ ಪರಿಶೀಲನೆ ಹಾಗೂ ಮುಂದಿನ ಕ್ರಮಗಳ ಕುರಿತು ಮಹತ್ವಪೂರ್ಣ ಕ್ಷೇತ್ರ ಭೇಟಿ ನೀಡಲಾಯಿತು. ಈ ಸಂದರ್ಭದಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರಾದ ಡಾ. ವೆಂಕಟೇಶಲು, ಸಂಶೋಧನಾ ನಿರ್ದೇಶಕರಾದ ಡಾ. ಫಕ್ರುದ್ದೀನ್‍ಬಿ. ಮತ್ತು ಸಹಾಯಕ ಪ್ರಾದ್ಯಾಪಕರಾದ ಡಾ. ಶಶಿಧರ ದೊಡಮನಿ ರವರು ರೈತರ ತಾಕುಗಳಿಗೆ ಭೇಟಿ ನೀಡಿ, ಬೆಳೆಯ ಮಾಹಿತಿ ಪಡೆದುಕೊಂಡು ಭೌಗೋಳಿಕ ಗುಣಮಟ್ಟಗಳ ಬಗ್ಗೆ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಸ್ಥಳಿಯ ವಿಳ್ಳೇದೆಲೆ ಬೆಳೆಯುವ ರೈತರಾದ ಮೌನೇಶ ಮರಡಿ, ರುದ್ರಗೌಡ ಮತ್ತು ಜಿ.ಎಸ್. ಪಾಟೀಲ ಅವರ ತೋಟಕ್ಕೆ ಭೇಟಿ ನೀಡಿದಾಗ ರೈತರು ಪ್ರಸ್ತುತವಾಗಿ ತಮ್ಮ ತಾಕುಗಳಲ್ಲಿ ಅಂಬಾಡಿ ತಳಿಯ ವಿಳ್ಳೆದೆಲೆ ಬೆಳೆಯುತ್ತಿದ್ದು ಸಾಮಾನ್ಯವಾಗಿ ಜೂನ್-ಜುಲೈ ತಿಂಗಳಿನಲ್ಲಿ ಅದಕ್ಕೆ ಮುಖ್ಯವಾಗಿ ಬೇಕಾಗಿರುವ ಆಧಾರ ಬೆಳೆಯಾಗಿ ನುಗ್ಗೆ, ಚೊಗಚಿ ಮತ್ತು ಬುರುಗ ಇವುಗಳನ್ನು ಉಪಯೋಗಿಸಿ ವಿಳ್ಳೆದೆಲೆ ಬೆಳೆಯುತ್ತಾರೆ. ಮೊದಲನೇ ಕಟಾವನ್ನು ನಾಟಿ ಮಾಡಿದ 4-4.5 ತಿಂಗಳಿಗೆ ಮಾಡುತ್ತಾರೆ. ನಂತರ ಪ್ರತಿ ತಿಂಗಳಿಗೊಮ್ಮೆ ಕಟಾವು ಮಾಡಿ ಎಕರೆಗೆ ಸರಾಸರಿ 10-12 ಅಂಡಿಗಿಗಳನ್ನು ಪಡೆಯಬಹುದಾಗಿದೆ (ಪ್ರತಿ ಅಂಡಿಗಿಯಲ್ಲಿ 12000 ಎಲೆಗಳು ಇರುತ್ತವೆ) ಸಾಮಾನ್ಯವಾಗಿ ಒಂದು ಅಂಡಿಗಿಗೆ ರೂಪಾಯಿ 1500-4500 ಬೆಲೆ ಸಿಗುತ್ತದೆ. ಸ್ಥಳೀಯ ಮಾರುಕಟ್ಟೆ ಬಾದಾಮಿಯಲ್ಲಿ ಮಾರಾಟ ಮಾಡಲಾಗುತ್ತದೆ ಮತ್ತು ಮಹಾರಾಷ್ಟ್ರದ ಲಾಥೂರಗೆ ಕಳಿಸಲಾಗುತ್ತದೆ. ಪ್ರತಿ ವರ್ಷ ಡಿಸೆಂಬರ್-ಜನವರಿ ತಿಂಗಳಲ್ಲಿ ಬಳ್ಳಿ ಇಳಿಸುವ ಪದ್ಧತಿ ಅನುಸರಿಸುತ್ತಾರೆ.
ಚೊಳಚಗುಡ್ಡ ಅಂಬಾಡಿ ವಿಳ್ಳೇದೆಲೆಯ ವಿಶೇಷತೆ ಏನೆಂದರೆ ಕಡಿಮೆ-ಮದ್ಯಮ ಕಾಕ, ಅಧಿಕ ಶೇಖರಣಾ ಅವಧಿ (10-12 ದಿನಗಳು), ತಿಳಿ ಹಸಿರು ಬಣ್ಣದಿಂದ ಕೂಡಿದೆ ಮತ್ತು ಇದಕ್ಕೆ ಮಾರುಕಟ್ಟೆಯಲ್ಲಿ ಉತ್ತಮವಾದ ಬೆಲೆ ಸಿಗುತ್ತದೆ. ಇಲ್ಲಿಯವರೆಗೂ ಯಾವುದೇ ರೀತಿಯ ವಿಳ್ಳೆದೆಲೆ ರೈತ ಉತ್ಪಾದಕರ ಸಂಘಗಳು ಇಲ್ಲದಿರುವ ಕಾರಣ ಮಧ್ಯವರ್ತಿಗಳ ಹಾವಳಿಯಿಂದ ರೈತರು ತಾವು ಬೆಳೆದ ಬೆಳೆಗೆ ಸರಿಯಾಗಿ ಬೆಲೆ ದೊರಕುತ್ತಿಲ್ಲ ಎಂಬುದು ರೈತರ ಅಳುವಾಗಿದ್ದು ಈ ನಿಟ್ಟಿನಲ್ಲಿ ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಮಾರ್ಗದರ್ಶನದಲ್ಲಿ ರೈತ ಉತ್ಪಾದಕರ ಸಂಸ್ಥೆ ಸ್ಥಾಪಿಸಿ, ಮಾರುಕಟ್ಟೆ ಸಂಪರ್ಕ ಮತ್ತು ಭೌಗೊಳಿಕ ಮಾನ್ಯತೆ ನೀಡಿದ್ದೆಯಾದಲ್ಲಿ ಮುಂದಿನ ದಿನಗಳಲ್ಲಿ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಎಂದು ವಿಳ್ಳೆದೆಲೆ ಬೆಳೆಗಾರರು ಅಭಿಪ್ರಾಯ ವ್ಯಕ್ತಪಡಿಸಿದರು.