Live Stream

[ytplayer id=’22727′]

| Latest Version 8.0.1 |

Cultural

ಕುಂಭಕೋಣಂ ನವಗ್ರಹ ದೇವಸ್ಥಾನಗಳಿಗೆ ಎರಡು ದಿನಗಳ ಪ್ರವಾಸ

ಕುಂಭಕೋಣಂ ನವಗ್ರಹ ದೇವಸ್ಥಾನಗಳಿಗೆ ಎರಡು ದಿನಗಳ ಪ್ರವಾಸ

ಚನ್ನಪಟ್ಟಣದ ನಮ್ಮ ಬೀಗರು ಪೋನ್ ಮಾಡಿ ತಮಿಳುನಾಡಿನ ಕುಂಭಕೋಣಂಗೆ ಹೋಗಿ ಬರೋಣ. ನೀವು ಕುಟುಂಬ ಹೊರಡಿ. ಎರಡು ದಿನÀಗಳ ಪ್ರವಾಸ. ಟಿಕೇಟ್ ಬುಕ್ ಮಾಡಿದೆ ಎಂದರು. ತಕ್ಷಣಕ್ಕೆ ನನಗೆ ಏನೂ ಹೇಳಲು ತಿಳಿಯದೆ ಸರಿ ಎಂದೆ. ವಿಷಯ ಮಡದಿಗೆ ತಿಳಿಸಿದೆ ಸಂತೋಷಗೊಂಡಳು.
ಚನ್ನಪಟ್ಟಣದಿಂದ ಶನಿವಾರ 25 ಮಂದಿಯ ತಂಡ ಹೊರಟು ಅವರು ಮದ್ದೂರಿನಲ್ಲಿ ರೈಲು ಹತ್ತಿ ನಾವು ಬೆಂಗಳೂರಿನಲ್ಲಿ ಸೇರಿಕೊಂಡವು. ಅವರು ಪಾರ್ಸಲ್ ಮಾಡಿಸಿ ತಂದಿದ್ದ ಪ್ರೈಡ್ ರೈಸ್‍ನ್ನು ರಾತ್ರಿ ಎಂಟೂವರೆ ಹೊತ್ತಿಗೆ ರೈಲಿನಲ್ಲಿ ಹಂಚಿತಿಂದೆವು. ರೈಲು ಬೆಳಿಗ್ಗೆ 5.30ಕ್ಕೆ ಕುಂಭಕೋಣಂ ತಲುಪುವುದು 5ಕ್ಕೆ ಅಲರಾಂ ಇಟ್ಟು ಎದ್ದೇಳಿ ಎಂದು ಎಚ್ಚರಿಸಲಾಗಿತ್ತು. ನಾವು ಕುಂಭಕೋಣಂನಲ್ಲಿ ರೈಲಿನಿಂದ ಇಳಿದಾಗ ಬೆಳಕು ಹರಿದಿತ್ತು. ಆ ಮೊದಲೇ ಎರಡು ಟಿಟಿ ಬುಕ್ ಮಾಡಿತ್ತಾಗಿ ಮಹಿಳೆಯರು ಒಂದು ಟಿಟಿಯಲ್ಲಿ ಪುರುಷರು ಮತ್ತೊಂದರಲ್ಲಿ ಒಂದು ಕಲ್ಯಾಣಮಂಟಪಕ್ಕೆ ಬಂದೆವು. ರೂಂ ಪಡೆದು ಸ್ನಾನ ಮಾಡಿ ದೇಗುಲಗಳ ದರ್ಶನಕ್ಕೆ ಸಿದ್ಧರಾದೆವು.

ಡ್ರೈವರ್ ತಿಂಡಿ ಊಟದ ಜವಾಬ್ದಾರಿ ವಹಿಸಿಕೊಂಡು ನಾವು ಉಳಿದುಕೊಂಡಿದ್ದ ಕಲ್ಯಾಣಮಂಟಪಕ್ಕೆ ಪೊಂಗಲ್ ಉದ್ದಿನವಡೆ ಟಿಫನ್ ಬಂತು. ತಿಂಡಿ ಮುಗಿಸಿ ದೇವಾಲಯಗಳ ದರ್ಶನಕ್ಕೆ ಹೊರಟಾಗ ಒಂಬತ್ತು ಗಂಟೆಯಾಗಿತ್ತು.
ತಮಿಳುನಾಡಿನ ದೇವಾಲಯ ನಗರ ಎಂದು ಕರೆಯಲ್ಪಡುವ ಕುಂಭಕೋಣಂ ಆಧ್ಯಾತ್ಮಿಕ ಪರಂಪರೆ ಪ್ರಾಚೀನ ದೇಗುಲಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿಯ ಸುತ್ತಮುತ್ತಲಿನ ನವಗ್ರಹ ದೇವಾಲಯಗಳು ಒಂಬತ್ತು ಆಕಾಶಕಾಯಗಳಿಗೆ ಸಮರ್ಪಿತವಾಗಿವೆ. ತಿಂಗಳೂರು-ಶ್ರೀ ಕೈಲಾಸನಾಥರ್ (ಚಂದ್ರನ್À) ದೇವಾಲಯ, ಆಲಂಗುಡಿ-ಶ್ರೀ ಆಪ್ತಸಹಯೇಶ್ವರರ್ ಗುರು ಭಗವಾನ್ ದೇವಾಲಯ, ತಿರುನಾಗೇಶ್ವರಂ-ಶ್ರೀ ನಾಗನಾಥಸ್ವಾಮಿ (ರಾಹು) ದೇವಾಲಯ, ತಿರುಮಂಗಲಕುಡಿ-ಶ್ರೀ ಶಿವ ಸೂರ್ಯನಾರ್ (ಸೂರ್ಯ) ದೇವಾಲಯ, ಕಂಜನೂರು-ಶ್ರೀ ಅಗ್ನಿಸ್ವರರ್ ಶುಕ್ರನ್ ದೇವಾಲಯ, ವೈತೀಶ್ವರಂ-ಶ್ರೀ ವೈತೀಶ್ವರನ್ (ಮಂಗಳ) ದೇವಾಲಯ, ತಿರುವೆಂಗಾಡು ಶ್ರೀ ಶ್ವೇತಾರಣ್ಯೇಶ್ವರರ್ ಬುಧ ದೇವಾಲಯ, ಕೇಜಪೆರಂಪಲ್ಲಂ ಶ್ರೀ ನಾಗನಾಥಸ್ವಾಮಿ (ಕೇತು) ದೇವಾಲಯ ಮತ್ತು ತಿರುನಲ್ಲರ್‍ನಲ್ಲಿರುವ ಶ್ರೀ ಶನಿಶ್ವರ ದೇವಾಲಯ ಒಳಗೊಂಡು ನವಗ್ರಹ ದೇವಸ್ಥಾನಗಳನ್ನು ಹಾಗೂ ಕೆಲವು ಪ್ರಮುಖ ಶೈವ ವೈಷ್ಣವ ದೇವಾಲಯಗಳನ್ನು ದರ್ಶಿಸಿದೆವು.
ಕಾವೇರಿ ಮತ್ತು ಅರಸಲಾರ್ ನದಿಗಳ ನಡುವೆ ಇರುವ ಕುಂಭಕೋಣಂ ಸಂಗಮರ ಕಾಲಕ್ಕಿಂತಲೂ ಹಳೆಯದಾಗಿದೆ. ಆರಂಭಿಕ ಚೋಳರು, ಪಲ್ಲವರು, ಮಧ್ಯಕಾಲಿನ ಚೋಳರು, ತಂಜಾವೂರು ನಾಯಕರು, ಮಧುರೈನ ನಾಯಕರು, ವಿಜಯನಗರ ಸಾಮ್ರಾಜ್ಯದ ಅರಸರ ಆಳ್ವಿಕೆಗೆ ಒಳಪಟ್ಟಿದೆ. ಕುಂಭಕೋಣಂನ ಶಿಕ್ಷಣ ಪದ್ಧತಿಯು 19ನೇ ಶತಮಾನದಲ್ಲಿ ಪ್ರಸಿದ್ಧಿ ಪಡೆದಿತ್ತು ಮತ್ತು ಕೇಂಬ್ರಿಡ್ಜ್ ಆಫ್ ಸೌತ್ ಇಂಡಿಯಾ ಎಂದು ಕರೆಯಲ್ಪಡುತ್ತಿತ್ತು. ಕುಂಭಕೋಣಂನಲ್ಲಿ 12 ವರ್ಷಗಳಿಗೊಮ್ಮೆ ಮಹಾಮಘಸ್ನಾನ ಜಾತ್ರೆ ನಡೆದು ಎಲ್ಲಾ ಭಾಗದಿಂದಲೂ ಜನರು ಪುಣ್ಯಸ್ನಾನಕ್ಕೆ ಬರುತ್ತಾರೆ.

ಇಲ್ಲಿ ಕಾವೇರಿ ತೀರದಲ್ಲಿ ಭಗವತ್ ಪಡಿತುರೈ ಮತ್ತು ಚಕ್ರ ಪಡಿತುರೈ ಎಂಬ ಎರಡು ಸ್ನಾನಘಟ್ಟಗಳಿವೆ. ಇಲ್ಲಿನ ಆದಿ ಕುಂಬೇಶ್ವರ ಶಿವನ ದೇವಸ್ಥಾನ. ಲಿಂಗದ ರೂಪದಲ್ಲಿ ಆದಿ ಕುಂಬೇಶ್ವರ ಎಂದು ಪಾರ್ವತಿಯನ್ನು ಮಂಗಳಾಂಬಿಕೆಯ ರೂಪದಲ್ಲಿ ಪೂಜಿಸಲಾಗುತ್ತದೆ. ಕುಂಭಕೋಣಂ ಎಂದರೆ ಮಡಿಕೆಯ ಮೂಲೆ ಎಂದರ್ಥ. ಪ್ರಳಯದಿಂದಾಗಿ ಜಗತ್ತು ನಾಶವಾದಾಗ ಬ್ರಹ್ಮನು ಶಿವನನ್ನು ಎಲ್ಲಿಂದ ಸೃಷ್ಟಿಯನ್ನು ಪುನರಾರಂಭಿಸಬಹುದು ಎಂದು ಕೇಳಲು ಶಿವನು ಮರಳಿನಿಂದ ಒಂದು ಕುಂಭವನ್ನು ಮಾಡಲು ಹೇಳಿ ಅದರಲ್ಲಿ ಅಮೃತವನ್ನು ತುಂಬಿ ಆಮೇಲೆ ಅದನ್ನು ವಿಧಿಯುಕ್ತವಾಗಿ ಮಹಾಮೇರು ಪರ್ವತದ ಶಿಖರದಲ್ಲಿ ಸ್ಥಾಪಿಸಿ ಅದಕ್ಕೆ ಬಿಲ್ವಾರ್ಚನೆ ಪೂಜೆ ಮಾಡಲು ತಿಳಿಸಿದನು. ಪ್ರಳಯದಿಂದ ಜಲರಾಶಿ ರಭಸವಾಗಿ ಹರಿದು ಸಾಗಿಬಂದು ಕುಂಭಕೋಣಂನಲ್ಲಿ ನಿಂತು ಸಂಗ್ರಹವಾಗಿರುವುದೇ ಮಹಾಮಘಕೊಳ ಎಂದು ದಂತಕಥೆಯಿದೆ. ದೇವಾಲಯದಲ್ಲಿ 27 ನಕ್ಷತ್ರಗಳ ಚಿಹ್ನೆ 12 ರಾಶಿಗಳನ್ನು ಒಂದೇ ಕಲ್ಲಿನಿಂದ ಕೆತ್ತಲಾಗಿರುವುದು ವಿಶಿಷ್ಟವಾಗಿದೆ.
ಸಾರಂಗಪಾಣಿ ವಿಷ್ಣುವಿನ ದೇವಸ್ಥಾನವಾಗಿದೆ. ಇದು ಪಂಚರಂಗ ಕ್ಷೇತ್ರಗಳಲ್ಲಿ ಒಂದಾಗಿದೆ. ಭರತನಾಟ್ಯದಲ್ಲಿ ಬರುವ 108 ಕರಣಗಳಲ್ಲಿ ಕೆಲವು ಕರಣಗಳನ್ನು ಈ ದೇವಾಲಯದ ಗೋಡೆಗಳಲ್ಲಿವೆ. 150 ಅಡಿ ಎತ್ತರದ 12 ಅಂತಸ್ತಿನ ಗೋಪುರ ಹೊಂದಿದೆ. 16ನೇ ಶತಮಾನದಲ್ಲಿ ನಾಯಕ್ ರಾಜರು ನಿರ್ಮಿಸಿದ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ. ಈ ದೇವಾಲಯವು 5 ಪ್ರಕಾರಗಳು ಮತ್ತು ಪೋರ್ಥಮರೈ ಕುಲಂ ಎಂದು ಕರೆಯಲ್ಪಡುವ ಪವಿತ್ರ ಕೊಳವನ್ನು ಹೊಂದಿದೆ.
9ನೇ ಶತಮಾನದಲ್ಲಿ ಆದಿತ್ಯ ಚೋಳನಿಂದ ನಿರ್ಮಿಸಿದ ನಾಗೇಶ್ವರನ ದೇವಾಲಯವು ಅತ್ಯುತ್ತವi ವಾಸ್ತುಶಿಲ್ಪ, ಕಟ್ಟಡ ತಂತ್ರಜ್ಞಾನ ಖಗೋಳ ಶಾಸ್ತ್ರಕ್ಕೆ ಹೆಸರಾಗಿದೆ. ಈ ದೇವಾಲಯವು ಸರ್ಪರಾಜ ಶಿವನಿಗೆ ಅರ್ಪಿತವಾಗಿದ್ದು ಏಪ್ರಿಲ್ ಮೇ ತಿಂಗಳಲ್ಲಿ ನಾಗೇಶ್ವರ ಲಿಂಗದ ಮೇಲೆ ಸೂರ್ಯರಶ್ಮಿ ಬೀಳುವಂತೆ ನಿರ್ಮಿಸಿದ್ದು ಸೂರ್ಯಕೊಟ್ಟಂ ದೇವಾಲಯ ಎಂದು ಜನಪ್ರಿಯವಾಗಿದೆ.
ಕಾಶಿ ವಿಶ್ವನಾಥ ದೇವಸ್ಥಾನವು ಮಹಾಮಹಂ ಕೆರೆಗೆ ಹತ್ತಿರದಲ್ಲಿದೆ. ಶಿವನಿಗೆ ಅರ್ಪಿತ ದೇಗುಲ. 72 ಅಡಿ ಎತ್ತರದ ಈ ದೇವಸ್ಥಾನ 16ನೇ ಶತಮಾನದಲ್ಲಿ ನಿರ್ಮಣಗೊಂಡಿದೆ. ಮಹಾಮಹಂ 12 ವರ್ಷಕ್ಕೊಮ್ಮೆ ನಡೆಯುವ ಪ್ರಸಿದ್ಧ ಹಬ್ಬ. ಭಕ್ತರು ಕೆರೆಯಲ್ಲಿ ಪವಿತ್ರ ಸ್ನಾನ ಮಾಡುವರು.
ಚಕ್ರಪಾಣಿ ದೇವಾಲಯವನ್ನು ಚಕ್ರಪಾಣಿವಿಷ್ಣು ಎಂದು ಹೆಸರಿಸಲಾಗಿದೆ. ಪುರಾಣ ಕಥೆಯಂತೆ ವಿಷ್ಣುವು ಜಲಂದಸುರನೆಂಬ ರಾಕ್ಷಸನನ್ನು ಕೊಲ್ಲಲು ಸುದರ್ಶನ ಚಕ್ರವನ್ನು ಪಾತಾಳ ಲೋಕಕ್ಕೆ ಕಳುಹಿಸಿದನು ಮತ್ತು ಕಾವೇರಿ ನದಿಯ ಮೂಲಕ ಹೊರಬಂದನು. ನದಿಯಲ್ಲಿ ಸ್ನಾನ ಮಾಡುತ್ತಿದ್ದ ಬ್ರಹ್ಮ ದೇವರು ಪ್ರಭಾವಿತನಾಗಿ ಇಲ್ಲಿ ಸುದರ್ಶನ ಚಕ್ರವನ್ನು ಸ್ಥಾಪಿಸಿದನು. 16ನೇ ಶತಮಾನದಲ್ಲಿ ನಿರ್ಮಿತವಾದ ರಾಮಸ್ವಾಮಿ ದೇವಾಲಯದಲ್ಲಿ ರಾಮಾಯಣ ದೃಶ್ಯಗಳು ಬಹುವರ್ಣಗಳಲ್ಲಿ ಚಿತ್ರಿತವಾಗಿವೆ.
ಧೇನುಪುರೀಶ್ವರರ್ ಶಿವನಿಗೆ ಅರ್ಪಿತವಾದ ಅತಿದೊಡ್ಡ ದೇವಾಲಯ. ದೇವಾಲಯದಲ್ಲಿ ಅತ್ಯಂತ ಪ್ರಸಿದ್ದ ದೇವತೆ ದುರ್ಗಾದೇವಿ. ಸೂರ್ಯನಾರಾಯಣ ದೇವಸ್ಥಾನವು ಸೂರ್ಯ ಮತ್ತು ಅವನ ಇಬ್ಬರು ಪತ್ನಿಯರಾದ ಉಷಾ ಮತ್ತು ಪ್ರತ್ಯುಷರಿಗೆ ಅರ್ಪಿತ ನವಗ್ರಹ ದೇವಾಲಯಗಳಲ್ಲಿ ಒಂದು. ದಂತಕಥೆಯಂತೆ ಕಾಲವ ಋಷಿ ಕುಷ್ಠರೋಗದಿಂದ ಬಳಲುತ್ತಿದ್ದು ನವಗ್ರಹಗಳನ್ನು ಪ್ರಾರ್ಥಿಸಿದನು. ಆತನ ಭಕ್ತಿಗೆ ಮೆಚ್ಚಿ ಅವರು ಗುಣಪಡಿಸಿದರು. ಅದೃಷ್ಟವನ್ನು ಯಾರು ಬದಲಾಯಿಸುವಂತಿಲ್ಲ ಎಂದು ಕೋಪಗೊಂಡ ಬ್ರಹ್ಮನು ಗ್ರಹಗಳಿಗೆ ಕುಷ್ಠರೋಗ ಬರಲೆಂದು ಶಪಿಸಿದನು. ಆಗ ಗ್ರಹಗಳು ಶಿವನ ಮೊರೆಹೋಗಿ ಶಿವ ರೋಗ ಗುಣಪಡಿಸಿ ಪೂರ್ಣ ನಂಬಿಕೆ ಭಕ್ತಿಯಿಂದ ಪ್ರಾರ್ಥಿಸುವವರೆಗೆ ಸಹಾಯ ಮಾಡುವಂತೆ ಆಶೀರ್ವದಿಸಿದನು.
ಶುಕ್ರ ಗ್ರಹಕ್ಕೆ ಸಮರ್ಪಿತವಾದ ಕಾವೇರಿ ಪ್ರದೇಶದಲ್ಲಿ ನೆಲೆಗೊಂಡಿರುವ 9 ನವಗ್ರಹಗಳಲ್ಲಿ ಕಂಜನೂರು ಒಂದು. ಅಗ್ನಿಯು ಇಲ್ಲಿ ಶಿವನನ್ನು ಪೂಜಿಸಿದ್ದನೆಂದು ಹೇಳಲಾಗುತ್ತದೆ.
ಶ್ರೀ ನಾಗನಾಥಸ್ವಾಮಿ ದೇವಾಲಯವು ರಾಹುವಿಗೆ ಸಮರ್ಪಿತವಾಗಿದೆ. ಇಲ್ಲಿ ರಾಹುವು ನಾಗವಲ್ಲಿ ಮತ್ತು ನಾಗಕನ್ನಿ ಎಂಬ ಇಬ್ಬರು ಪತ್ನಿಯರೊಂದಿಗೆ ಇರುವನು. ರಾಹು ಇಲ್ಲಿ ಶಿವನನ್ನು ಪೂಜಿಸಿ ಶಾಪದಿಂದ ಮುಕ್ತನಾದನು. ಸಾಮಾನ್ಯವಾಗಿ ಸರ್ಪ ಮುಖದೊಂದಿಗೆ ಇರುವ ರಾಹು ಭಗವಾನ್ ಇಲ್ಲಿ ಮಾನವ ಮುಖದೊಂದಿಗೆ ಇರುವನು. ಇಲ್ಲಿ ಪೂಜೆ ಸಲ್ಲಿಸಿದರೆ ಸರ್ಪನಾಶ ದೋಷಕ್ಕೆ ಪರಿಹಾರ ಸಿಗಲಿದೆ ಎಂಬುದು ನಂಬಿಕೆ. ಬಹುತೇಕ ನವಗ್ರಹ ದೇವಸ್ಥಾನಗಳಿಗೆ ಬತ್ತಿದೀಪಗಳನ್ನು ಕೊಂಡು ದೇವಾಲಯಗಳಲ್ಲಿ ಅದಕ್ಕಾಗಿಯೇ ಮೀಸಲಿರುವ ಸ್ಥಳದಲ್ಲಿ ಹಚ್ಚಿ ನಂತರ ದೇವರಗಳನ್ನು ದರ್ಶಿಸಿ ಕೈ ಮುಗಿದೆವು. ನಮ್ಮ ಭಾನುವಾರ ಪ್ರಯಣದಲ್ಲಿ ಮಧ್ಯೆ ಮದ್ಯಾಹ್ನ ಒಂದು ಸಮುದ್ರ ತೀರಕ್ಕೆ ಹೋದೆವು. ಕಪ್ಪುಕಲ್ಲುಗಳ ತಡೆಗೋಡೆಗಳ ನೆಡುಂಗಲ್ ಮಂದರಾಮ್ ಎಂಬ ಬೀಚ್ ನೋಟಕ್ಕೆ ಚೆಂದ ಕಂಡರೂ ಆಟಕ್ಕೆ ಮರಳಿಲ್ಲದೆ ಸಮುದ್ರಕ್ಕೆ ಇಳಿಯದೆ ಹೊರಟು ಮತ್ತೊಂದು ದೇವಸ್ಥಾನಕ್ಕೆ ಬರುವಷ್ಟರಲ್ಲಿ ಎರಡೂವರೆಯಾಗಿ ದೇವಸ್ಥಾನದ ಮುಚ್ಚಿತ್ತು. ನಾಲ್ಕಕ್ಕೆ ಮತ್ತೇ ಓಪನ್. ಅಲ್ಲಿಯವರೆಗೆ ಟಿಟಿಯಲ್ಲಿ ತೆಗೆದುಕೊಂಡುಹೋಗಿದ್ದ ಊಟ ಮಾಡಿ ನಂತರ ದೇವರು ದರ್ಶಿಸಿ ತಿರುನಲ್ಲರ್‍ಗೆ ಹೊರಟೆವು. ತಿರುನಲ್ಲರ್‍ನಲ್ಲಿ ಶನಿದೇವರ ದೇವಾಲಯವಿದೆ. ಇದು ಪುದುಚೇರಿಯ ಕೇಂದ್ರಾಡಳಿತ ಪ್ರದೇಶ ಕಾರೈಕಲ್‍ನಿಂದ 5 ಕಿ.ಮೀ. ದೂರದಲ್ಲಿದೆ. ನಳ ಮಹಾರಾಜನು 12 ವರ್ಷಗಳ ಕಾಲ ಶನಿಯ ಪ್ರಭಾವಕ್ಕೊಳಗಾಗಿ ತನ್ನ ರಾಜ್ಯ ಸಂಪತ್ತು ಹೆಂಡತಿ ಮಕ್ಕಳನ್ನು ಕಳೆದುಕೊಂಡು ದು:ಖ ಹತಾಶೆಯಲ್ಲಿ ಅಲೆದಾಡಿ ತಿರುನಲ್ಲರ್ ದೇವಾಲಯವನ್ನು ತಲುಪಿ ಅಲ್ಲಿ ನಳತೀರ್ಥಂ ಕೊಳದಲ್ಲಿ ಸ್ನಾನ ಮಾಡಿ ಶಿವನನ್ನು ಮತ್ತು ಶನಿದೇವರನ್ನು ಪ್ರಾರ್ಥಿಸಿದನು. ಆಗ ಶನಿದೇವರು ಕಾಣಿಸಿಕೊಂಡು ನಳನ ಕಷ್ಟಗಳಿಗೆ ಕ್ಷಮೆ ದಯಪಾಲಿಸಿ ತಿರುನಲ್ಲರ್ ದೇವಾಲಯಕ್ಕೆ ಭೇಟಿ ನೀಡುವ ಮತ್ತು ನಳತೀರ್ಥನಲ್ಲಿ ಸ್ನಾನ ಮಾಡುವ ಯಾರಾದರೂ ಶನಿಯ ದುಷ್ಪರಿಣಾಮಗಳಿಂದ ಮುಕ್ತರಾಗುವರು ಎಂದು ವರ ನೀಡಿದನೆಂದು ಹೇಳಿದೆ. ದೇವಾಲಯವು ಸುಮಾರು 15 ಎಕರೆ ವಿಸ್ತೀರ್ಣದಲ್ಲಿ ವ್ಯಾಪಿಸಿದೆ. ಮೂರು ಗೋಪುರಗಳನ್ನು ಹೊಂದಿದೆ.

ಶನಿಯ ವಿಗ್ರಹವು 5 ಅಡಿ ಎತ್ತರದ ಕಪ್ಪುಕಲ್ಲಿನ ವಿಗ್ರಹ ಮತ್ತು ಸುತ್ತಲೂ ಪತ್ನಿಯರು ನೀಲಾದೇವಿ ಮಂದಾದೇವಿ ಇಬ್ಬರು ಪುತ್ರರು ಮಾಂದಿ ಮತ್ತು ಕುಲಿಗನ್ ಮೂರ್ತಿಗಳಿವೆ. ಭಕ್ತರು ಎಣ್ಣೆ ಕಪ್ಪುಬಟ್ಟೆ ಕಪ್ಪುಎಳ್ಳು ಕರಿಮೆಣಸು ಅರ್ಪಿಸಿ ಕರುಣೆ ದಯೆಗಾಗಿ ಪ್ರಾರ್ಥಿಸುತ್ತಾರೆ. ದೇವಾಲಯ ಸಂಕೀರ್ಣವು ಮುರುಗನ್, ಗಣೇಶ, ವಿಷ್ಣು, ಬ್ರಹ್ಮ, ದಕ್ಷಿಣಾಮೂರ್ತಿ, ಚಂಡಿಕೇಶ್ವರ, ಭೈರವ, ನಟರಾಜ, ಸುಬ್ರಹ್ಮಣ್ಯ, ರಾಮ, ಅಯ್ಯಪ್ಪ ದೇವರುಗಳಿಂದ ಕೂಡಿದೆ. ನಾವು ಶನಿದೇವರ ದೇವಸ್ಥಾನದಿಂದ ಹೊರಬರುವ ಹೊತ್ತಿಗೆ ಕತ್ತಲು ಆವರಿಸಿತ್ತು. ಶನಿದೇವರ ದರ್ಶನ ಮಾಡಿದ ನಂತರ ಆಂಜನೇಯ ದೇವರನ್ನು ದರ್ಶಿಸಬೇಕೆಂದು ಮಾರ್ಗ ಮಧ್ಯೆ ಒಂದು ಆಂಜನೇಯ ದೇವಾಲಯದ ಬಳಿ ವಾಹನ ನಿಲ್ಲಿಸಿ ದರ್ಶನ ಮಾಡಿ ಮತ್ತೆ ಕುಂಭಕೋಣಂಗೆ ಬಂದೆವು. ಮಾರನೇ ದಿನ ಸೋಮುವಾರ ಬೆಳಿಗ್ಗೆ ಶಿವಲಿಂಗ ದೇವಸ್ಥಾನದ ಮೊದಲ ಬ್ಯಾಚ್‍ನ ಅಭಿಷೇಕ ನೋಡಲೆಂದು ಎಲ್ಲರೂ ನಾಲ್ಕೂವರೆಗೆ ಎದ್ದು ಸಿದ್ದರಾಗಲು ತಿಳಿಸಿದರು ಅದು ಸಾಧ್ಯವಾಗಲಿಲ್ಲ. ಕಲ್ಯಾಣಮಂಟಪ ಖಾಲಿ ಮಾಡಿ ಐದೂವರೆಗೆ ಹೊರಟು ದೇವಸ್ಥಾನ ತಲುಪುವಷ್ಟರಲ್ಲಿ ಲೇಟಾಗಿತ್ತು. ಆಗಲೇ ಜನ ತುಂಬಿದ್ದರು. 11 ಗಂಟೆಯ ಅಭಿಷೇಕಕ್ಕೆ 350 ರೂ. ಟಿಕೇಟ್ ಪಡೆದು ಮತ್ತೆ ಕುಂಭಕೋಣಂಗೆ ಬಂದು ಅಲ್ಲಿ ದೇವಸ್ಥಾನದಲ್ಲಿ ಆನೆಗೆ ಮಾವುತರು ಪೈಪ್‍ನಿಂದ ನೀರೊಡೆದು ತೊಳೆಯುತ್ತಿದ್ದರು. ಆನೆಗೆ ಕೊಡಲೆಂದೇ ಸುಮಾರು ಕಬ್ಬು, ಬಾಳೆದಿಂಡು ಬರುವಾಗಲೇ ತಂದಿದ್ದರಾಗಿ ಅದನ್ನು ತುಂಡುಮಾಡಿ ಆನೆಗೆ ಒಬ್ಬೊಬ್ಬರು ಒಂದೊಂದು ತುಂಡು ನೀಡಿ ಸೊಂಡಿಲಿನಿಂದ ತಲೆಬಾಗಿ ಮುಟ್ಟಿಸಿಕೊಂಡರು. ಒಂದು ದೇವಸ್ಥಾನದಲ್ಲಿ ಹಸುಕರುಗಳನ್ನು ಚೆನ್ನಾಗಿ ಸಾಕಿಸಲುಹಿ ಅವುಗಳಿಗೆ ನಮ್ಮ ಬೀಗರು ಹುಲ್ಲು ಅಕ್ಕಿ ಬಾಳೆಹಣ್ಣು ತಿನ್ನಿಸಿದರು. ಇತ್ತ ಶಿವಲಿಂಗುವಿಗೆ ನಾನಾ ಬಗೆಯ ಹಣ್ಣು ಹಾಲು ಮೊಸರು ಜೇನು ಮೊದಲಾಗಿ ಅರ್ಚಕರು ಮಾಡುವ ವಿಶೇಷ ಅಭಿಷೇಕವನ್ನು ನೋಡಿ ಎಲ್ಲರ ಮನಸ್ಸು ಸಂತೃಪ್ತಿಭಾವ ತಾಳಿತು. ಭಾನುವಾರವೇ ಎಂಟು ನವಗ್ರಹ ದೇವಸ್ಥಾನಗಳನ್ನು ದರ್ಶಿಸಿದ್ದ ನಾವು ಕಡೆಯಲ್ಲಿ ಚಂದ್ರನ ದೇವಸ್ಥಾನಕ್ಕೆ ಭೇಟಿ ನೀಡಿ ನೇರ ಕುಂಭಕೋಣಂ ರೈಲ್ವೆ ಸ್ಟೇಷನ್‍ಗೆ ಬಂದೆವು. ಅಲ್ಲಿ ಟೀ ಕುಡಿದು ರೈಲು ಹತ್ತಿದಾಗ ಸಂಜೆಯಾಗಿತ್ತು.

ಗೊರೂರು ಅನಂತರಾಜು, ಹಾಸನ.
ಮೊ:9449462879

 

ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";