ಶಿಡ್ಲಘಟ್ಟ : ಎಂ ಆರ್ ಪಿ ಎಸ್ ಸಂಸ್ಥಾಪಕ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಮಂದಕೃಷ್ಣ ಮಾದಿಗ ಅವರ 60 ನೇಯ ಹುಟ್ಟು ಹಬ್ಬವನ್ನು ತಾಲೂಕಿನ ಮಾದಿಗ ದಂಡೋರ ಸಂಘಟನೆಯ ಪದಾಧಿಕಾರಿಗಳು ಹಾಗೂ ವಿವಿಧ ದಲಿತ ಸಂಘಟನೆಗಳು, ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಿ, ನಂತರ ಕೇಕ್ ಕತ್ತರಿಸುವ ಮೂಲಕ ಆಚರಣೆ ಮಾಡಲಾಯಿತು.
ಎಂ ಆರ್ ಪಿ ಎಸ್ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಜೆಎಂ ದೇವರಾಜ್ ಮಾತನಾಡಿ, ಮಾದಿಗ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಮತ್ತು ಸಮಾನತೆಗಾಗಿ ಚಳುವಳಿಯನ್ನು ಮುಂದಕ್ಕೆ ಕೊಂಡೊಯ್ಯುತ್ತಿರುವ ಮಹಾನ್ ವ್ಯಕ್ತಿ ಮಂದಕೃಷ್ಣ ಮಾದಿಗ ಅವರು ನಮಗೆ ಸದಾ ಪ್ರೇರಣೆ. ಅವರು ಸಾರ್ವಜನಿಕ ಪ್ರದರ್ಶನಗಳ ಮೂಲಕ ಮಾದಿಗ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ರಾಷ್ಟ್ರೀಯ ಜಾಗೃತಿ ಮೂಡಿಸಿ ಮಾದಿಗ ಸಮುದಾಯ ಎದುರಿಸುತ್ತಿರುವ ಅನ್ಯಾಯಗಳನ್ನು ನಿರಂತರವಾಗಿ ಎದುರಿಸುತ್ತಾ ಬಂದಿದ್ದಾರೆ. ಆರ್ಥಿಕ ಮತ್ತು ಶೈಕ್ಷಣಿಕ ಉದ್ಯೋಗಾವಕಾಶಗಳಿಗೆ ಮಂದ ಕೃಷ್ಣ ಮಾದಿಗ ಅವರ ಸಮರ್ಪಣೆ ಮತ್ತು ನಾಯಕತ್ವವು ಅನೇಕರಿಗೆ ಸ್ಫೂರ್ತಿ ನೀಡುತ್ತಿದೆ ಎಂದು ತಿಳಿಸಿದರು.
ದಲಿತ ಮುಖಂಡ ನಾಗಸರಸಿಂಹ ಮಾತನಾಡಿ,ಮಂದಕೃಷ್ಣ ಮಾದಿಗ ಅವರ ಪ್ರಮುಖವಾಗಿ ದಲಿತ ಜಾತಿಯ ಅಂಚಿನಲ್ಲಿರುವ ಮಾದಿಗ ಸಮುದಾಯದ ಹಕ್ಕುಗಳಿಗಾಗಿ ಕಳೆದ 30 ವರ್ಷಗಳಿಂದ ಹೋರಾಟ ಮಾಡುತ್ತಿದ್ದು, ಹಾಗೆಯೇ ಮಕ್ಕಳ ಮತ್ತು ಅಂಗ ವಿಕಲರ ಪರ ಅವರ ಹಕ್ಕುಗಳಿಗಾಗಿ ಹೋರಾಟ ಮಾಡಿದ್ದಾರೆ. ಪರಿಶಿಷ್ಟ ಜಾತಿಗಳಲ್ಲಿ ಮೀಸಲಾತಿ ಸವಲತ್ತುಗಳ ಸಮಾನ ವಿತರಣೆಗಾಗಿ ಹೋರಾಡಲು ಮೀಸಲಾಗಿರುವ ಮಾದಿಗ ಮೀಸಲಾತಿ ಹೋರಾಟ ಸಮಿತಿ (ಎಂ ಆರ್ ಪಿ ಎಸ್) ಸ್ಥಾಪನೆ ಅವರ ಹೋರಾಟದ ಫಲವಾಗಿ ಕೇಂದ್ರ ಸರ್ಕಾರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಸಹ ಇತ್ತೀಚಿಗೆ ಪಡೆದಿದ್ದಾರೆ ಎಂದು ಅವರಿಗೆ 60ನೇ ವರ್ಷದ ಶುಭಾಶಯಗಳು ಕೋರಿದರು.
ಮಾದಿಗ ದಂಡೋರ ಕೃಷ್ಣಪ್ಪ ಮಾತನಾಡಿ ಮಾದಿಗ ಸಮುದಾಯದೊಳಗಿನ ಉದ್ದೇಶಿತ ಫಲಾನುಭವಿಗಳಿಗೆ ಮೀಸಲಾತಿ ನೀತಿಗಳ ಪ್ರಯೋಜನಗಳನ್ನು ನ್ಯಾಯಯುತವಾಗಿ ಒದಗಿಸಲು ಹಗಲಿರುಳು ಹೋರಾಟ ಎಲ್ಲಾ ಮಾದಿಗ ಸಮಾಜದವರಿಗೆ ಫಲ ನೀಡಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭಗವಂತಪ್ಪ,ಡಿ ಕೃಷ್ಣಪ್ಪ, ತಾತಹಳ್ಳಿ ಚಲಪತಿ, ಕೆ ನಾರಾಯಣಸ್ವಾಮಿ, ಮಂಜುನಾಥ್ ಅಲಸೂರು,ಭಕ್ತರಹಳ್ಳಿ ಡಾ. ವಿಶ್ವನಾಥ್, ಹಲಸೂರುದಿನ್ನೆ ಆಂಜಿ,ಚನ್ನಹಳ್ಳಿ ದೇವರಾಜ್, ಲೋಕೇಶ್, ವೇಣುಗೋಪಾಲ್, ಗೋಕುಲ್, ನರಸಿಂಹಪ್ಪ, ನಾರಾಯಣಸ್ವಾಮಿ, ಪ್ರಕಾಶ್, ಅಶೋಕ್, ರಾಮರಾಜ್, ಗುರುಮೂರ್ತಿ, ರವಿಶಂಕರ್, ಚನ್ನಕೃಷ್ಣ, ಹಾಗೂ ದಲಿತ ಮುಖಂಡರು ಭಾಗವಹಿಸಿದ್ದರು.
8-7-2025 Today’s Headlines :