ಕನ್ನಡ ಜಾನಪದ ಸಾಹಿತ್ಯ ಕಲೆ ಸಂಸ್ಕøತಿ ಪರಂಪರೆಗೆ ಚಾಮರಾಜನಗರ ಜಿಲ್ಲೆಯ ಕೊಡುಗೆ ಸಾಕಷ್ಟಿದೆ. ಪರಂಪರಾಗತವಾಗಿ ಬಂದ ವೈವಿಧ್ಯ ಜನಪದ ಕಲೆಗಳಲ್ಲಿ ತಂಬೂರಿ ಪದವನ್ನು ಕಿರಿಯ ವಯಸ್ಸಿಗೆ ಮೈಗೂಡಿಸಿಕೊಂಡ ಕಲಾವಿದ ಕೊಳ್ಳೆಗಾಲ ತಾ. ಸಿದ್ದಯ್ಯನಪುರದ ಎಂ ಕೈಲಾಸಮೂರ್ತಿ. ಮಂಟೇಸ್ವಾಮಿ ಜನಪದ ಕಾವ್ಯ ಕೃತಿಯ ಸಂಪಾದಕಿ ಮಳವಳ್ಳಿ ಪಿ.ನಾಗರತ್ನಮ್ಮ ಅವರು ಇವರನ್ನು ನನಗೆ ಪರಿಚಯಿಸಿದರು. ತಮ್ಮೂರಿನ ಮನೆಯಲ್ಲೇ ಜನಪದ ಕಥೆ ಕಾವ್ಯ ಬೀಸು ಕಂಸಾಳೆ ಕೇಂದ್ರ ಪ್ರಾರಂಭಿಸಿ ಕಲಿಯುವ ಕಿರಿಯರಿಗೂ ಕಲಿಸಿಕೊಡುವ ಮೂಲಕ ಕಲೆ ಪ್ರಸರಣದ ರಾಯಭಾರಿಯಾಗಿಯೂ ಕರ್ತವ್ಯ ನಿರತರು. ಇವರ 30 ಶಿಷ್ಯರು ಸ್ವಂತ ಹಾಡುಗಾರಿಕೆ ರೂಢಿಸಿಕೊಂಡಿದ್ದಾರೆ. ಇವರ ತಂಡ ರಾಜ್ಯದ ವಿವಿಧೆಡೆ ತೆರಳಿ ಕಲಾ ಪ್ರದರ್ಶನ ನೀಡುತ್ತಿವೆ. ಮಲ್ಲಿಕಾರ್ಜುನ ಲಕ್ಷ್ಮಿ ದಂಪತಿಗಳ ಪುತ್ರರಾದ ಇವರು ದಿ.1-6-1988ರಂದು ಜನಿಸಿದರು.
7ನೇ ತರಗತಿಗೆ ಶಿಕ್ಷಣಕ್ಕೆ ಶರಣು ಹೇಳಿದರು. ಇವರ ಕುಟುಂಬ ಗುರು ಮಕ್ಕಳ ಪರಂಪರೆ ತತ್ವಪದ ಹಾಡುಗಾರಿಕೆಗೆ ಸೇರಿದವರಾಗಿ ದೊಡ್ಡಪ್ಪ ಮಹದೇವಯ್ಯ ದಮ್ಮಡಿ ಬಾರಿಸುತ್ತಿದ್ದರು. ತಂದೆ ಮಲ್ಲಿಕಾರ್ಜುನ ಅವರ ಜೊತೆ ಸೊಲ್ಲಿಕ್ಕುತ್ತಿದ್ದರು. ತಂದೆ ಸತ್ತವರ ಮನೆಗಳಿಗೆ ಹೋಗಿ ಭಜನೆ ಮಾಡುತ್ತಿದ್ದರು. ನಾನು ಅವರ ಜತೆಗೆ ಸೊಲ್ಲಿಕುತ್ತಿದ್ದೆ. ನಂತರ ನಾನೇ ಪರಿಕರ ಬಳಸಿ ಹಾಡುವುದನ್ನು ಕಲಿತೆ ಎನ್ನುತ್ತಾರೆ. ಕುರಿ ಮೇಯಿಸಲು ಹೊಲಕ್ಕೆ ಹೋದಾಗ ತಮ್ಮೂರಿನ ಬಸಮ್ಮ ಇವರು ಮಂಟೇಸ್ವಾಮಿ, ಮಹದೇಶ್ವರ, ಬಿಳಿಗಿರಿ ರಂಗನಾಥ, ನಂಜುಂಡೇಶ್ವರ, ಚಾಮುಂಡೇಶ್ವರಿ ಕಥೆ ಹಾಡುತ್ತಿದ್ದರು. ಇದನ್ನು ಕೇಳಿ ಕೈಲಾಸಮೂರ್ತಿ ಪ್ರಭಾವಿತರಾದರು. ಈಗ ಇವರೇ ಮಂಟೇಸ್ವಾಮಿ ಕಾವ್ಯ, ಸಿದ್ಧಪ್ಪಾಜಿ ಕಥೆ, ಮೈಲಾಳ ರಾಮನ ಕಥೆ, ನಂಜುಂಡೇಶ್ವರ ಮಲೆ ಮಹದೇಶ್ವರರ ಕಾವ್ಯಗಳನ್ನು ಹಾಡುವಲ್ಲಿ ಹೆಸರುವಾಸಿ. ಮಂಟೇಸ್ವಾಮಿ ಕಾವ್ಯದ ಮೂಲ ಗಾಯನ ಶೈಲಿಯನ್ನೇ ಅನುಸರಿಸುತ್ತಾರೆ.
ಮಳವಳ್ಳಿ ರಾಜೇಬೊಪ್ಪೇಗೌಡನ ಮಠದಲ್ಲಿ ಹಂಪಿ ವಿಶ್ವವಿದ್ಯಾಲಯ ನಡೆಸಿದ ಶ್ರೀ ಮಂಟೇಸ್ವಾಮಿ ಕಥೆ ಕಾವ್ಯ ದಮ್ಮಡಿ ತಾಳ ಕಲಿಕಾ ತರಬೇತಿಯಲ್ಲಿ ಭಾಗವಹಿಸಿ ಪೂರಿಗಾಲಿ ಮಹದೇವಣ್ಣರಿಂದ ಇನ್ನು ಹೆಚ್ಚಿನದಾಗಿ ಕಲಿತ್ತಿದ್ದಾರೆ. ಮಲೆ ಮಹದೇಶ್ವರ ಬೆಟ್ಟದಲ್ಲಿ 15 ವರ್ಷ ದೊಡ್ಡಭೂವಳ್ಳಿ ಮಹೇಶ್ ಹಾಗೂ ಇತರರೊಂದಿಗೆ ವೇದಿಕೆಗಳಲ್ಲಿ ಹಾಡಿದ್ದಾರೆ. 2003ರಿಂದ ತಮ್ಮದೇ ತಂಡ ಕಟ್ಟಿಕೊಂಡು ನಾಡಿನಾದ್ಯಂತ ತಿರುಗಿದ್ದಾರೆ.
ರಾಜ್ಯ ಮಟ್ಟದ ಯುವ ಜನ ಮೇಳ ಪುತ್ತೂರು, 2013ರಲ್ಲಿ ಅಳ್ವಾಸ್ ವಿಶ್ವ ನುಡಿಸಿರಿ ವಿರಾಸಾತ್ ಮೂಡುಬಿದರೆ ಉತ್ಸವದಲ್ಲಿ ಭಾಗವಹಿಸಿದ್ದಾರೆ. ಮುಂಬೈ, ಚೆನ್ನೈ, ಪುದುಚೇರಿ, ಕೇರಳ, ಆಂದ್ರಪ್ರದೇಶ, ತೆಲಂಗಾಣ, ದೆಹಲಿ ಇಲ್ಲಿನ ಸ್ಫರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಕರ್ನಾಟಕ ಅನೇಕ ಕಡೆಗಳಲ್ಲಿ ಇವರ ಕಂಚಿನ ಕಂಠ, ತನ್ಮಯತೆಯಿಂದ ನುಡಿಸುವ ತಂಬೂರಿಯ ನಿನಾದ ಅನುರಣಿಸಿವೆ.
ಚಿಕ್ಕಲ್ಲೂರು ಜಾತ್ರೆ, ಕಪ್ಪಡಿ, ಮಲೆ ಮಹದೇಶ್ವರ ಬೆಟ್ಟದ ಜಾತ್ರೆ, ಸುತ್ತೂರು ಜಾತ್ರೆಗಳಲ್ಲಿ ಸಿದ್ಧಪ್ಪಾಜಿ, ಮಂಟೇಸ್ವಾಮಿ, ಮಲೆಮಹದೇಶ್ವರ ಗೀತೆಗಳನ್ನು ಹಾಡಿದ್ದಾರೆ. ತಂಬೂರಿ ಮತ್ತು ಕಂಸಾಳೆ ನೃತ್ಯ ಪ್ರದರ್ಶಿಸಿದ್ದಾರೆ. ಮದುವೆ ಶುಭ ಸಮಾರಂಭಗಳು, ಗಣೇಶ ಉತ್ಸವ,
ಮೃತರ 11ನೇ ದಿನದ ಕಾರ್ಯಕ್ರಮದಲ್ಲಿ ಹಾಡುತ್ತಾರೆ. ಇವರಿಗೆ 2016-17ನೇ ಸಾಲಿನಲ್ಲಿ ಜಿಲ್ಲಾ ಯುವ ಪ್ರಶಸ್ತಿ ಬಂದಿದೆ. ಕನ್ನಡ ಜಾನಪದ ಪರಿಷತ್ ಗೋವಿಂದರಾಜನಗರ ರಾಜ್ಯ ಪ್ರಥಮ ಕನ್ನಡ ಜಾನಪದ ಸಮ್ಮೇಳನ ದಶಮಾನೋತ್ಸವ ಜಾನಪದ ಗೌರವ ಪ್ರಶಸ್ತಿ 2025 ದೊರಕಿದೆ.
ಗೊರೂರು ಅನಂತರಾಜು, ಹಾಸನ.
ಮೊ:9449462879
VK NEWS DIGITAL :