Live Stream

[ytplayer id=’22727′]

| Latest Version 8.0.1 |

Bengaluru UrbanCultural

‘ನೃತ್ಯ ದರ್ಪಣ್’ – ದಶಮಾಧ್ಯಾಯದ ‘ತಾಳ್ ತರಂಗ್’

‘ನೃತ್ಯ ದರ್ಪಣ್’ – ದಶಮಾಧ್ಯಾಯದ ‘ತಾಳ್ ತರಂಗ್’

Bengaluru : ಕಣ್ಮನ ಸೂರೆಗೊಳ್ಳುವ ‘ತಾಳ್ ತರಂಗ್’ – (TalTarang) ಒಂದೇ ವೇದಿಕೆಯ ಮೇಲೆ ವಿವಿಧ ಕಲಾ ಪ್ರಕಾರಗಳ ರಸದೌತಣ ನೀಡುವ ಒಂದು ವಿಶಿಷ್ಟ ಪ್ರಯೋಗ. ಈ ಹೊಸ ಪರಿಕಲ್ಪನೆಯ ಕಾರ್ಯಕ್ರಮವನ್ನು ಬೆಂಗಳೂರಿನ ಕಲಾರಸಿಕರ ಸಮ್ಮುಖ ಅರ್ಪಣೆ ಮಾಡುತ್ತಿರುವವರು ‘ನೃತ್ಯ ದರ್ಪಣ್’ (Nrithya Darpan Academy) ಅಕಾಡೆಮಿ. ವರ್ಷ ಪೂರ್ತಿ ನಿರಂತರ ಸಕ್ರಿಯರಾಗಿರುವ ಪ್ರಯೋಗಶೀಲ ಕಥಕ್ ನೃತ್ಯಗಾರ್ತಿ ವೀಣಾ ಆರ್. ಭಟ್ (Veena R Bhat) ಕಳೆದ ಒಂದೂವರೆ ದಶಕಕ್ಕೂ ಹೆಚ್ಚಿನ ಕಾಲದಿಂದ ‘ನೃತ್ಯದರ್ಪಣ್’ -ಕಥಕ್ ನೃತ್ಯಶಾಲೆಯ ಅರ್ಟಿಸ್ಟಿಕ್ ಡೈರೆಕ್ಟರ್ ಆಗಿ ಉತ್ತಮ ಗುರುವಾಗಿ ಜನಪ್ರಿಯತೆ ಪಡೆದಿದ್ದು, ನೂರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಯಶಸ್ವಿಯಾಗಿ ಸಮ್ಮೋಹಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.

ಉತ್ತಮ ಕಥಕ್ ನೃತ್ಯ ಕಲಾವಿದೆಯಾಗಿ ಹೆಸರು ಮಾಡಿರುವ ವೀಣಾಭಟ್ , ಹೊಸ ಪರಿಕಲ್ಪನೆಗಳ ಸಾಕಾರದಲ್ಲಿ ‘ಕಥಕ್ ‘ ನೃತ್ಯಪ್ರಸ್ತುತಿಯನ್ನು ಅರಳಿಸುವ, ಬೆಳೆಸುವ ನಿಟ್ಟಿನಲ್ಲಿ ನಿರಂತರ ಹೊಸಪ್ರಯೋಗಗಳಲ್ಲಿ ತೊಡಗಿಕೊಂಡವರು ಎಂದರೆ ಅತಿಶಯೋಕ್ತಿಯಲ್ಲ. ಇವರ ವಿಶಿಷ್ಟ ಪರಿಕಲ್ಪನೆಯ ‘‘ತಾಳ್ ತರಂಗ್’ – ಹತ್ತನೆಯ ಅಧ್ಯಾಯವು ಇದೇ ಡಿಸೆಂಬರ್ ತಿಂಗಳ 7 ನೇ ತಾ. ಭಾನುವಾರ ಸಂಜೆ 4 .30 ಕ್ಕೆ ಜೆ.ಸಿ. ರಸ್ತೆಯ ಎ.ಡಿ.ಎ. ರಂಗಮಂದಿರದಲ್ಲಿ – ವರ್ಣರಂಜಿತ ಕಾರ್ಯಕ್ರಮ ವೈವಿಧ್ಯಪೂರ್ಣ ನೃತ್ಯೋಲ್ಲಾಸದಿಂದ ಕಲಾರಸಿಕರ ಮನಸ್ಸನ್ನು ತಣಿಸಲಿದೆ.
ಅಂದಿನ ಮುದವಾದ ರಸಸಂಜೆಯಲ್ಲಿ ನವೋತ್ಸಾಹದ ವಿವಿಧ ಖ್ಯಾತ ನೃತ್ಯಸಂಸ್ಥೆಗಳಿಂದ ಭಾರತೀಯ ಸಂಸ್ಕೃತಿಯ ಶಾಸ್ತ್ರೀಯ ನೃತ್ಯಗಳಾದ ಭರತನಾಟ್ಯ, ಕುಚಿಪುಡಿ, ಕಥಕ್, ಒಡಿಸ್ಸಿ ಮತ್ತು ಸಮಕಾಲೀನ ನೃತ್ಯಗಳ ರಸಧಾರೆ. ಒಂದೇ ವೇದಿಕೆಯ ಮೇಲೆ ವಿವಿಧ ನೃತ್ಯಶೈಲಿಯ ನಾಟ್ಯ ಸಂಭ್ರಮವನ್ನು ‘ನೃತ್ಯ ದರ್ಪಣ್’ ರಸಿಕಸ್ತೋಮಕ್ಕೆ ಅರ್ಪಿಸಲಿದೆ.
ಈ ಕಾರ್ಯಕ್ರಮದಲ್ಲಿ ಹೆಸರಾಂತ ಕಲಾವಿದರು ಭಾಗವಹಿಸುತ್ತಿದ್ದು, ಅವರು- ಗುರು ವಿ. ಅಕ್ಷರ ಭಾರಧ್ವಾಜ್ ಮತ್ತು ಅವರ ತಂಡ -ಭರತನಾಟ್ಯ ( ಸ್ಟ್ರಕ್ಚರಲ್ ಸ್ಕೂಲ್ ಆಫ್ ಫೈನ್ ಆರ್ಟ್ಸ್), ಗುರು ಶ್ವೇತಾ ವೆಂಕಟೇಶ್ – ಕಥಕ್ (ನಿರಂತರ ಸ್ಕೂಲ್ ಆಫ್ ಡ್ಯಾನ್ಸ್), ಗುರು ಕರ್ಪಗಂ ಮತ್ತು ಶಿಷ್ಯರು- ಕುಚಿಪುಡಿ ( ಎಸ್.ಬಿ.ಎಲ್.ಕೆ.ಸಿ ), ಗುರು ಸೋಮಾ ದಾಸ್ ಮತ್ತು ಶಿಷ್ಯರು – ಕಥಕ್ (ನೂಪುರ ಧ್ವನಿ ಡ್ಯಾನ್ಸ್ ಅಕಾಡೆಮಿ), ವಿ.ಶುಭಾ ನಾಗರಾಜನ್ ಮತ್ತು ವಿ. ರಾಧಿಕಾ ಮಕರಂ – ಒಡಿಸ್ಸಿ – ಯುಗಳ ನೃತ್ಯ, ಕಾರ್ತೀಕ್ ತಂತ್ರಿ ಮತ್ತು ತಂಡದವರಿಂದ ಸಮಕಾಲೀನ ನೃತ್ಯ (ಆಬ್ಸ್ಟ್ರಾಟಿಕ್ಸ್ ಕ್ರಿಯೇಟಿವ್ ಡ್ಯಾನ್ಸ್ ಕಂಪೆನಿ), ವಿ. ಗೌರಿ ಸಾಗರ್ ಶಿಷ್ಯರಿಂದ ಭರತನಾಟ್ಯ ಮತ್ತು ವಿ. ವೀಣಾ ಭಟ್ ಮತ್ತು ಸುಚೇತಾ ಶಿಷ್ಯರಿಂದ ಕಥಕ್ ( ಶ್ರೀಕಂಟೇಶ್ವರ ಸ್ಕೂಲ್), ಹಾಗೂ ದಶಮ ಅಧ್ಯಾಯದಲ್ಲಿ ವಿ. ವೀಣಾ ಭಟ್- ಅರ್ಟಿಸ್ಟಿಕ್ ಡೈರೆಕ್ಟರ್ ಅವರಿಂದ ಕಥಕ್ ಮತ್ತು ದಶಮ ಅಧ್ಯಾಯದಲ್ಲಿ ಭರತನಾಟ್ಯ – ಗುರು ಸುನಿತಾ ಎಂ.ಡಿ ಮತ್ತು ಅವರ ಶಿಷ್ಯರಿಂದ ಭರತನಾಟ್ಯ. ವಿಶೇಷ ಕಾರ್ಯಕ್ರಮವಾಗಿ ಡಾ. ರಾಗಶ್ರೀ ಭಾರಧ್ವಾಜ್ ಮತ್ತು ತಂಡದಿಂದ ಕಲೆಗಳ ಉತ್ಸವ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಾಯಿ ವೆಂಕಟೇಶ್- ಅಧ್ಯಕ್ಷರು- ಕರ್ನಾಟಕ ನೃತ್ಯ ಕಲಾ ಪರಿಷತ್ ಮತ್ತು ಲೇಖಕಿ, ರಂಗಕರ್ಮಿ, ಅಂಕಣಕಾರ್ತಿ ಹಾಗೂ ನೃತ್ಯ- ನಾಟಕ ವಿಮರ್ಶಕಿ ಲಿಪಿಪ್ರಾಜ್ಞೆ ವೈ.ಕೆ.ಸಂಧ್ಯಾ ಶರ್ಮ ಭಾಗವಹಿಸಲಿದ್ದಾರೆ. ಮಿಸ್ ಇಂಡಿಯಾ ಸಿನಿಮಾ ಕ್ವೀನ್ -2025 ರೂಪದರ್ಶಿ, ನಟಿ ಅಲುಮ್ನಿ ವಿಶೇಷ ಅತಿಥಿ. ಆಯೋಜನೆ ಮತ್ತು ಸಂಘಟನೆ ನೃತ್ಯದರ್ಪಣದ ವೀಣಾ ಭಟ್- ಅರ್ಟಿಸ್ಟಿಕ್ ಡೈರೆಕ್ಟರ್ ಮತ್ತು ಅಂಜಲಿ ರಾಮಣ್ಣ – ಲೇಖಕಿ, ಲಾಯರ್, ಅಂಕಣಕಾರ್ತಿ.
ರಸಾನುಭವ ನೀಡುವ ವಿವಿಧ ನೃತ್ಯಶೈಲಿಗಳ ವಿಹಂಗಮ ವೀಕ್ಷಣೆಗೆ ಸರ್ವರಿಗೂ ಅಆದರದ ಸ್ವಾಗತ.
ವೈ.ಕೆ.ಸಂಧ್ಯಾ ಶರ್ಮ

ವೀ ಕೇ ನ್ಯೂಸ್
";