ಕೇಂದ್ರ ಸರ್ಕಾರದ ನೌಕರ-ವಿರೋಧಿ, ಕಾರ್ಮಿಕ-ವಿರೋಧಿ ಮತ್ತು ಜನ-ವಿರೋಧಿ ನೀತಿಗಳ ವಿರುದ್ದ ದೇಶದ ಪ್ರಮುಖ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ದಿನಾಂಕ: 09.07.2025ರಂದು ಅಖಿಲ ಭಾರತ ಮಟ್ಟದ ಮುಷ್ಕರಕ್ಕೆ ಕರೆ ನೀಡಲಾಗಿದೆ. ಈ ಮುಷ್ಕರದಲ್ಲಿ , ಕೇಂದ್ರ ಸರ್ಕಾರಿ ನೌಕರರ ಸಂಘಟನೆ, ದೇಶದ ಇತರೆ ರಾಜ್ಯಗಳ ರಾಜ್ಯ ಸರ್ಕಾರಿ ನೌಕರ ಸಂಘಟನೆಗಳ, ದೇಶದ ವಿಮಾ ನೌಕರರ ಸಂಘಟನೆಗಳು, ಬ್ಯಾಂಕ್ ನೌಕರರ ಸಂಘಟನೆಗಳು, ರಕ್ಷಣಾ ವಲಯದ ನೌಕರ ಸಂಘಟನೆಗಳು, ಸಾರ್ವಜನಿಕ ಉದ್ದಿಮೆಗಳ ಕಾರ್ಮಿಕ ಸಂಘಟನೆಗಳು, ಸೇವಾ ಸಂಘಟನೆಗಳು, ಬಿಸಿಯೂಟ ನೌಕರರ ಸಂಘಟನೆ, ಆಶಾ ಕಾರ್ಯಕರ್ತೆಯರ ಸಂಘಟನೆ, ಅಂಗನವಾಡಿ ನೌಕರರ ಸಂಘಟನೆ, ಸಂಘಟಿತ & ಅಸಂಘಟಿತ ವಲಯದ ಕಾರ್ಮಿಕರು ಇತ್ಯಾದಿ ವಲಯದ ನೌಕರರು ಭಾಗವಹಿಸುತ್ತಿದ್ದಾರೆ.
ಅಖಿಲ ಭಾರತ ರಾಜ್ಯ ಸರ್ಕಾರಿ ನೌಕರರ ಒಕ್ಕೂಟವು ಸಹ ಸದರಿ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಷೇರುಪೇಟೆ ಆಧಾರಿತ & NPS ಪಿಂಚಣಿ ಪದ್ದತಿ/ UPS ಪದ್ದತಿ/ PFRDA ಕಾಯಿದೆಯನ್ನು ರದ್ದುಗೊಳಿಸಿ ನಿಶ್ಚಿತ ಪಿಂಚಣಿ ಪದ್ದತಿಯನ್ನು(OPS) ಮರುಸ್ಥಾಪಿಸುವಂತೆ ಆಗ್ರಹಿಸಿ, ಖಾಲಿ ಹುದ್ದೆ ಭರ್ತಿ ಮಾಡುವುದು, ಸರ್ಕಾರಿ ಉದ್ದಿಮೆಗಳ ಖಾಸಗೀಕರಣ ಕೈಬಿಡುವುದು ಸೇರಿದಂತೆ ಸರ್ಕಾರಿ ನೌಕರರ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟವು ಈ ಮುಷ್ಕರಕ್ಕೆ ಬೆಂಬಲ ನೀಡುತ್ತಿದೆ.
ದಿನಾಂಕ: 09.07.2025ರಂದು ರಾಜ್ಯ ಸರ್ಕಾರಿ ನೌಕರರು ಒಂದು ದಿನದ ಸಾಂದರ್ಭಿಕ ರಜೆ ಹಾಕಿ ತಮ್ಮ ತಮ್ಮ ಜಿಲ್ಲೆಗಳ ಕೇಂದ್ರ ಸ್ಥಾನದಲ್ಲಿ ಇತರೆ ಸಂಘಟನೆಗಳು ಹಾಗೂ ದುಡಿಯುವ ಜನತೆ ನಡೆಸುವ ಪ್ರತಿಭಟನಾ ಧರಣಿಯಲ್ಲಿ ಭಾಗವಹಿಸುವುದರ ಮೂಲಕ ಬೆಂಬಲ ವ್ಯಕ್ತಪಡಿಸಿ ಮುಷ್ಕರವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಲಾಗಿದೆ.
ಪ್ರಮುಖ ಬೇಡಿಕೆಗಳು:
1) NPS/ UPS/ PFRDA ಕಾಯ್ದೆಯನ್ನು ರದ್ದುಗೊಳಿಸಿ, ನಿಶ್ಚಿತ ಹಳೆಯ ಪಿಂಚಣಿ (OPS) ಅನ್ನು ಮರುಸ್ಥಾಪಿಸುವುದು.
2) ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವುದು. ಇನ್ನು ಮುಂದೆ ಗುತ್ತಿಗೆ/ಹೊರಗುತ್ತಿಗೆ ನೇಮಕಾತಿಯನ್ನು ಕೈಬಿಡುವುದು.
3) ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪರಿಷ್ಕರಿಸಿ, ಪದೋನ್ನತಿ ನೀಡಲು ಕ್ರಮ ಕೈಗೊಳ್ಳುವುದು.
4) ಶಿಕ್ಷಕರ ಹುದ್ದೆ ಭರ್ತಿ, ವರ್ಗಾವಣೆ, ಸಿ &ಆರ್ ಪರಿಷ್ಕರಣೆ, ಸಮಸ್ಯೆಗಳನ್ನು ಬಗೆಹರಿಸಿ, ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸುವುದು.
5) ಆಡಳಿತ ಸುಧಾರಣೆ ಆಯೋಗ-2 ರ ನೌಕರ ವಿರೋಧಿ ಶಿಫಾರಸ್ಸುಗಳನ್ನು ಹಿಂಪಡೆಯುವುದು ಮತ್ತು ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸುವುದನ್ನು ನಿಲ್ಲಿಸುವುದು.
6) ಪ್ರಸ್ತುತ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಗುತ್ತಿಗೆ/ಹೊರಗುತ್ತಿಗೆ/ಅತಿಥಿ ನೌಕರರಿಗೆ ಸೇವಾ ಭದ್ರತೆಯನ್ನು ಒದಗಿಸುವುದು ಹಾಗೂ ನೇರ ನೇಮಕಾತಿಯಲ್ಲಿ ಇವರುಗಳಿಗೆ ಪ್ರಾತಿನಿಧ್ಯ ಕಲ್ಪಿಸುವುದು.
7) ಬಡ್ತಿ ಮೀಸಲಾತಿ ಕಾಯಿದೆ ಸಂಪೂರ್ಣ ಅನುಷ್ಟಾನಗೊಂಡು ಬ್ಯಾಕ್ ಲಾಗ್ ಹುದ್ದೆ ಭರ್ತಿ ಮಾಡುವುದು
8) ಮಹಿಳಾ ನೌಕರರ ಮೇಲಿನ ದೌರ್ಜನ್ಯ ತಡೆಗಟ್ಟುವುದು.
9) ಅನುದಾನಿತ ಶಾಲಾ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ/ ಬೋಧಕೇತರ ಸಿಬ್ಬಂದಿಗೆ OPS ಸೌಲಭ್ಯ ಜಾರಿಗೊಳಿಸುವುದು.
10) ಕಾರ್ಮಿಕ-ವಿರೋಧಿ 4 ಲೇಬರ್ ಕೋಡ್ ಕಾಯ್ದೆಗಳನ್ನು ಹಿಂಪಡೆಯುವುದು.
11) ಲಾಕ್ ಡೌನ್ ಸಮಯದಲ್ಲಿ ಮುಟ್ಟುಗೋಲು ಹಾಕಿಕೊಂಡಿರುವ 18 ತಿಂಗಳ ತುಟ್ಟಿಭತ್ಯೆಯನ್ನು ಕೂಡಲೇ ಬಿಡುಗಡೆ ಮಾಡುವುದು.
12) ಯಾವುದೇ ವಿಚಾರಣೆ ಇಲ್ಲದೆ, ಅಧಿಕಾರಿ/ನೌಕರರನ್ನು ಸೇವೆಯಿಂದ ವಜಾಗೊಳಿಸಲು ಅವಕಾಶ ಕಲ್ಪಿಸುವ ಸಂವಿಧಾನದ ವಿಧಿ 310, 311(2) a b& c ಅನ್ನು ರದ್ದುಗೊಳಿಸುವುದು : ಹೊಸ 3 ಅಪರಾಧ ಕಾಯಿದೆಗಳನ್ನು ರದ್ದುಗೊಳಿಸುವುದು.
13) ನಿಯಮಾನುಸಾರ 5 ವರ್ಷಕ್ಕೊಮ್ಮೆ ವೇತನ ಆಯೋಗ ರಚನೆ ಮಾಡುವುದು.
14) ಪ್ರಸ್ತಾಪಿತ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಲ್ಲಿ ʼಸಿʼ ಮತ್ತು ʼಡಿʼ ಗುಂಪಿನ ನೌಕರರಿಗೆ ಪ್ರಸ್ತುತ ನೀಡುತ್ತಿರುವ ವೈದ್ಯಕೀಯ ಭತ್ಯೆಯನ್ನು ಮುಂದುವರೆಸುವುದು.
15) ಪಿಂಚಣಿದಾರರಿಗೂ ಕೂಡಲೇ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸುವುದು ಹಾಗೂ ಮಾಸಿಕ ರೂ.500/- ವೈದ್ಯಕೀಯ ಭತ್ಯೆ ನೀಡುವುದು.
16) ಇತರೆ ರಾಜ್ಯ ಸರ್ಕಾರಗಳು ಜಾರಿ ಮಾಡಿರುವಂತೆ ನಿವೃತ್ತರ ಕಮ್ಯುಟೇಷನ್ ಪಿಂಚಣಿ ಅವಧಿಯನ್ನು15 ವರ್ಷದಿಂದ 11 ವರ್ಷಕ್ಕೆ ಇಳಿಸುವುದು.
17) ನಿವೃತ್ತರ ಪಿಂಚಣಿಯ ಪರಿಷ್ಕರಣೆ ಮತ್ತು ತುಟ್ಟಿ ಭತ್ಯೆ ಪರಿಷ್ಕರಣೆಯನ್ನು ರದ್ದುಪಡಿಸುವ ಕೇಂದ್ರ ಹಣಕಾಸು ಕಾಯ್ದೆ 2025ರ ಭಾಗ 4ನ್ನು ರದ್ದತಿ ಮಾಡಿ ಪಿಂಚಣಿದಾರರ ಹಕ್ಕುಗಳನ್ನು ರಕ್ಷಣೆ ಮಾಡುವುದು.
18) ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಗೊಳಿಸುವುದು.
19) ಸಂವಿಧಾನದಲ್ಲಿರುವ ಧರ್ಮನಿರಪೇಕ್ಷತೆಯನ್ನು ಎತ್ತಿಹಿಡಿಯುವುದು; ಎಲ್ಲ ರೀತಿಯ ಮತೀಯವಾದಗಳನ್ನು ಹಿಮ್ಮೆಟ್ಟಿಸುವುದು.
VK News Digital : Today Headlines