ತಾಯಿಯ ಜೀವ ಆಪತ್ತಿನಲ್ಲಿದ್ದಾಗ ವೈದ್ಯರ ಕಾಳಜಿ ಮತ್ತು ಯೋಜಿತ ಚಿಕಿತ್ಸೆಯಿಂದ ಯಶಸ್ವಿಯಾಗಿ ಮಗುವಿಗೆ ಜನ್ಮ ನೀಡಿದ ಘಟನೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಗರ್ಭಿಣಿಯೊಬ್ಬರು ಮೂರನೇ ತಿಂಗಳ ಅವಧಿಯಲ್ಲಿ ವೈದ್ಯರನ್ನು ಸಂಪರ್ಕಿಸಿದಾಗ ತಮಗೆ ʼಪ್ಲಾಸೆಂಟಾ ಪರ್‌ಕ್ರಿಯೆಟಾ (Placenta Percreta) ಸಮಸ್ಯೆಯಿದೆ ಎಂದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಮಹಿಳೆಗೆ ಕೇವಲ 28 ವಾರಗಳಿಗೆ ಸಿಸೇರಿಯನ್ ಮಾಡಲು ವೈದ್ಯರು ಸಲಹೆ ನೀಡಿದ್ದರು. ಹೀಗಾಗಿ ರೋಗಿಯು ಮತ್ತೊಬ್ಬ ತಜ್ಞರ ಸಲಹೆಯನ್ನು ಪಡೆಯಲು ಬೆಂಗಳೂರಿನ ವಾಸವಿ ಆಸ್ಪತ್ರೆಯ ಮಹಿಳಾ ತಜ್ಞರಾದ ಡಾ. ನಿಶಾ ಬುಚಾಡೆ ಅವರನ್ನು ಭೇಟಿ ಮಾಡಿದ್ದಾರೆ.
ಈ ವೇಳೆ ವೈದ್ಯರು ಗರ್ಭಿಣಿಯನ್ನು ಪರೀಕ್ಷಿಸಿದಾಗ ಮಹಿಳೆಯು ತೀವ್ರ ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿದ್ದು, ಹೀಮೋಗ್ಲೋಬಿನ್ ಮಟ್ಟ 8 g/dL ಇರುವುದು ಗೊತ್ತಾಗಿದೆ. ಅದಲ್ಲದೆ ಭ್ರೂಣವು FGR ಅಂದರೆ ಗರ್ಭಾವಸ್ಥೆಯ ಅವಧಿಯಲ್ಲಿ ಮಗು ನಿರೀಕ್ಷೆಗಿಂತ ಚಿಕ್ಕದಾಗಿರುವುದು ಕೂಡ ಗಮನಕ್ಕೆ ಬಂದಿದೆ.
ಡಾ ನಿಶಾ ಬುಚಾಡೆ ಅವರು ಕೂಡಲೇ ಅಗತ್ಯ ಚಿಕಿತ್ಸೆಯನ್ನು ನೀಡಲು ಮುಂದಾದರು. ಮೊದಲು ರಕ್ತಹೀನತೆ ಸಮಸ್ಯೆಯನ್ನು ನಿಯಂತ್ರಣಕ್ಕೆ ತರಲು ಕಬ್ಬಿಣಾಂಶ ಪೂರೈಕೆ ಮತ್ತು ಭ್ರೂಣದ ಬೆಳವಣಿಗೆಗೆ ಪೂರಕವಾದ ಔಷಧಗಳನ್ನು ನೀಡಲಾರಂಭಿಸಿದರು. ಆರು ವಾರಗಳಲ್ಲಿ ಗರ್ಭಿಣಿಯ ಹಿಮೋಗ್ಲೋಬಿನ್ 11.4 g/dL ಗೆ ಏರಿಕೆ ಕಂಡಿತು ಮತ್ತು ಭ್ರೂಣದ ಬೆಳವಣಿಗೆಯು ಕೂಡ ಗಣನೀಯವಾಗಿ ಸುಧಾರಿಸಿತು. ಮಗುವಿನ ತೂಕ ಹೆಚ್ಚಾಗಿದ್ದು, 2 ಕೆ.ಜಿ. ತಲುಪಿತು ಎಂದು ತಜ್ಞೆ ನಿಶಾ ಬುಚಾಡೆ ತಿಳಿಸಿದರು.
ಗರ್ಭಿಣಿಗೆ 36 ವಾರಗಳ ಕಾಲ ಸೂಕ್ತ ಚಿಕಿತ್ಸೆಯನ್ನು ನೀಡಿ ನಂತರ ಯೋಜಿತವಾಗಿ ಸಿಸೇರಿಯನ್ ಮಾಡಲು ನಿರ್ಧರಿಸಲಾಯಿತು. ಆದರೆ ಆ ವೇಳೆಗೆ ಮಹಿಳೆಗೆ ಮಧುಮೇಹ’ (gestational diabetes) ಇರುವುದು ಪತ್ತೆಯಾಯಿತು. ಇದರಿಂದಾಗಿ ಮಹಿಳೆಯ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಯಿತು. ಅದನ್ನು ಇನ್ಸುಲಿನ್ ಚಿಕಿತ್ಸೆಯ ಮೂಲಕ ನಿಯಂತ್ರಣಕ್ಕೆ ತರಲಾಯಿತು ಎಂದು ತಜ್ಞರು ಹೇಳಿದರು.
ಶಸ್ತ್ರಚಿಕಿತ್ಸೆ ವೇಳೆ ರೋಗಿಗೆ ‘ಪ್ಲಾಸೆಂಟಾ ಪರ್‌ಕ್ರಿಟಾ’ ಇರುವುದು ದೃಢವಾಗಿದೆ. ಇದೊಂದು ‘ಪ್ಲಾಸೆಂಟಾ ಅಕ್ರೀಟಾ ಸ್ಪೆಕ್ಟ್ರಮ್ ಡಿಸಾರ್ಡರ್ ಹಾಗೂ ತೀವ್ರತೆಯಿಂದ ಕೂಡಿರುತ್ತದೆ. ಈ ಸಂದರ್ಭದಲ್ಲಿ ಜರಾಯು ಗರ್ಭಾಶಯದ ಗೋಡೆಯ/ಮೆಲ್ಭಾಗದ ಮೂಲಕ ಮೂತ್ರಕೋಶಕ್ಕೂ ಹರಡುತ್ತದೆ. ಜರಾಯು ಗರ್ಭಾಶಯದ ಕೆಳಭಾಗವನ್ನು ಸಂಪೂರ್ಣವಾಗಿ ಆಕ್ರಮಿಸಿ, ಮೂತ್ರಕೋಶ ಮತ್ತು ಸುತ್ತಮುತ್ತಲಿನ ಸ್ನಾಯುಗಳಿಗೆ ಅಂಟಿಕೊಂಡಿರುತ್ತದೆ. ಇದನ್ನು ಕತ್ತರಿಸಲು ಪ್ರಯತ್ನಿಸಿದರೆ ರಕ್ತಸ್ರಾವವಾಗತೊಡಗುತ್ತದೆ. ಹೀಗಾಗಿ ಸಿಸೇರಿಯನ್ ಮಾಡುವ ವೇಳೆ ಶಸ್ತ್ರಚಿಕಿತ್ಸಾ ತಂಡದ ಸಹಾಯದ ಮೂಲಕ ಜರಾಯುವನ್ನು ಬೇರ್ಪಡಿಸಲು ಪ್ರಾರಂಭಿಸಲಾಯಿತು. ಜರಾಯುವಿನ ಒಂದು ಭಾಗವು ಬೇರ್ಪಡಲು ಪ್ರಾರಂಭಿಸಿದಾಗ ತಕ್ಷಣವೇ ನಿರ್ಧರಿಸಿ ಮಗುವನ್ನು ಹೊರತೆಗೆದು ಮಕ್ಕಳ ವೈದ್ಯಕೀಯ ತಂಡಕ್ಕೆ ನೀಡಲಾಯಿತು. ರಕ್ತಸ್ರಾವವನ್ನು ನಿಯಂತ್ರಿಸಲು ಕ್ಲಾಂಪ್ ಮಾಡಿ, ರಕ್ತಸ್ರಾವವನ್ನು ತಡೆಯಲು ಯೋಜಿತ ಗರ್ಭಕೋಶ ತೆಗೆಯುವ (hysterectomy) ಶಸ್ತ್ರಚಿಕಿತ್ಸೆಯನ್ನು ಕೈಗೊಳ್ಳಲಾಯಿತು ಎಂದು ನಿಶಾ ಅವರು ಹೇಳಿದರು.
ಇಂತಹ ತೀವ್ರ ಸಂದರ್ಭದಲ್ಲಿ ನಮ್ಮ ಶಸ್ತ್ರಚಿಕಿತ್ಸಾ ತಂಡವು ಮೂತ್ರಕೋಶ ಅಥವಾ ಇತರ ಯಾವುದೇ ಅಂಗಗಳಿಗೆ ಹಾನಿಯಾಗದಂತೆ ಅತ್ಯಂತ ಕಾಳಜಿಯಿಂದ ಚಿಕಿತ್ಸೆ ನೀಡಿದೆ. ಒಂದು ತಿಂಗಳ ಕಾಲ ಈ ಶಸ್ತ್ರಚಿಕಿತ್ಸೆಯ ಕುರಿತು ವೈದ್ಯರ ತಂಡವು ಚರ್ಚೆಯನ್ನು ಕೈಗೊಂಡಿದ್ದು, ಅತ್ಯಂತ ಯಶಸ್ವಿಯಾಗಿ ತಾಯಿ ಹಾಗೂ ಮಗುವಿನ ಆರೋಗ್ಯವನ್ನು ಕಾಪಾಡಿದ್ದೇವೆ ಎಂದು ಬುಚಾಡೆ ಅವರು ಸಂತಸ ವ್ಯಕ್ತಪಡಿಸಿದರು.
ಶಸ್ತ್ರಚಿಕಿತ್ಸೆಯ ಬಳಿಕ ತಾಯಿಯನ್ನು ‘ಹೈ ಡಿಪೆಂಡೆನ್ಸಿ ಯೂನಿಟ್’ನಲ್ಲಿ (High Dependency Unit – HDU) ನಿಗಾದಲ್ಲಿ ಇರಿಸಲಾಯಿತು ಮತ್ತು ಮೂರನೇ ದಿನವೇ ಡಿಸ್ಚಾರ್ಜ್ ಮಾಡಲಾಗಿದೆ. ಈಗ ಮಹಿಳೆಯು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದರು.
ಪ್ಲಾಸೆಂಟಾ ಪರ್ಕ್ರಿಟಾ ಎಂದರೇನು ?
ಪ್ಲಾಸೆಂಟಾ ಪರ್ಕ್ರಿಟಾ ಎಂಬುದು ಪ್ರಸೂತಿಯ ವೇಳೆ ಎದುರಾಗುವ ಅತ್ಯಂತ ಅಪಾಯಕಾರಿ ಸಂದರ್ಭಗಳಲ್ಲೊಂದು. ಇದು ಸಾಮಾನ್ಯವಾಗಿ ಸಿಸೇರಿಯನ್ ಗೆ ಒಳಗಾದ ಮಹಿಳೆಯರಲ್ಲಿ ಕಂಡುಬರುತ್ತದೆ. ಸೂಕ್ತ ಸಮಯದಲ್ಲಿ ಪತ್ತೆಹಚ್ಚದಿದ್ದರೆ ಮತ್ತು ಯೋಜಿತವಾಗಿ ಶಸ್ತ್ರಚಿಕಿತ್ಸೆಯನ್ನು ಕೈಗೊಳ್ಳದಿದ್ದರೆ ಅಪಾಯವನ್ನು ತಂದೊಡ್ಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಇಂತಹ ಬಹು ವಿರಳ ಘಟನೆಯನ್ನು ಅತ್ಯಂತ ಯಶಸ್ವಿಯಾಗಿ ಎದುರುಸಿರುವುದು ವೈದ್ಯರ ಕಾರ್ಯಬದ್ಧತೆಯನ್ನು ತೋರುತ್ತದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 6364466240, 6364409651.