ಮಾನವರ ವಾಸನೆಗೆ ಕೆರೆಗಳು ಸಂಕುಚಿತಗೊಂಡವೊ ಅಥವಾ ಕೆರೆಯ ವಾಸನೆಗೆ ಮಾನವ ಸಂಕುಚಿತಗೊಂಡನೊ ಎಂಬ ಗೊಂದಲದೊಳಗೆ ಕೆರೆಗಳಿದ್ದ ಸುಳಿವುಗಳ ನಾಮಾವಶೇಷ ಮಾಡುವ ಮಾನವನ ದುರಾಸೆಗೆ ಕೆರೆ ಹಾಗೂ ಮಾನವರ ಬದುಕು ಅನಾರೋಗ್ಯಕ್ಕಿಡಾಗಿದೆ.
ಇಂತಹ ಕೆರೆಗಳ ನವ ನಿರ್ಮಾಣಕ್ಕಾಗಿ ಪಣ ತೊಟ್ಟಿರುವ ರಾಜ್ಯ ಸರ್ಕಾರ ರಚಿಸಿರುವ ಸ್ಥಾಯಿ ಸಮಿತಿಯು ಇಂದು ನಗರದ ಹೊರ ವಲಯದ ವಿವಿಧ ಕೆರೆಗಳಿಗೆ ಬೇಟಿ ನೀಡಿ ವೀಕ್ಷಣೆ ನೆಡೆಸಿತು.
ಬೆಂಗಳೂರು ನಗರದ ಸಂರಕ್ಷಿತ ಕೆರೆಗಳು ಹಾಗೂ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಿಗೆ ಕರ್ನಾಟಕ ವಿಧಾನಮಂಡಲದ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿಯ ಪರಿವೀಕ್ಷಣಾ ಭೇಟಿ ತಂಡವು ಇಂದು ವಿಧಾನಸೌಧದ ಕೊಠಡಿ ಸಂಖ್ಯೆ 106 ರಲ್ಲಿ ಸಭೆ ಸೇರಿ ಇಂದು ಭೇಟಿ ನೀಡಬೇಕಾದ ಕೆರೆಗಳ ಸ್ಥಿತಿಗತಿ ಕುರಿತು ಪೂರ್ವಭಾವಿ ಸಭೆ ನೆಡೆಸಿ ನಂತರ ಕೆರೆಗಳ ವೀಕ್ಷಣೆಗೆ ತೆರಳಿತು.
ಶಿವಾಜಿ ನಗರದ ಶಾಸಕರು ಹಾಗೂ ಸ್ಥಾಯಿ ಸಮಿತಿಯ ಅಧ್ಯಕ್ಷರು ಆದ ರಿಜ್ವಾನ್ ಅರ್ಷದ್ ಅವರ ನೇತೃತ್ವದಲ್ಲಿ ಸಮಿತಿಯ ಸದಸ್ಯರಾದ ಹಾಗೂ ಶಾಸಕರುಗಳಾದ ರವಿಸುಬ್ರಹ್ಮಣ್ಯ, ಹರೀಶ್ ಪೂಂಜ, ವೆಂಕಟಶಿವಾ ರೆಡ್ಡಿ, ವಿಧಾನ ಪರಿಷತ್ ಸದಸ್ಯರುಗಳಾದ ಗೋವಿಂದರಾಜು ಮತ್ತು ಶ್ರೀಮತಿ ಶಶಿಕಲಾ ಜೊಲ್ಲೆ ಅವರನ್ನೊಳಗೊಂಡ ತಂಡ ಮೊದಲು ಭೇಟಿ ನೀಡಿದ್ದು ಮೇಡಹಳ್ಳಿಯ ಎಲೆ ಮಲ್ಲಪ್ಪ ಶೆಟ್ಟಿ ಕೆರೆಗೆ, ಅಲ್ಲಿನ ವಾಸ್ತವಾಂಶವನ್ನು ಪರಿಶೀಲಿಸಿ ಈಗಾಗಲೇ 9.5 ಕಿ.ಮೀ. ಫೆನ್ಸಿಂಗ್ ಹಾಕಲಾಗಿದೆ, ಇನ್ನೂ 4.5 ಕಿ.ಮೀ. ಬಾಕಿ ಇರುವ ಕಾರಣಕ್ಕಾಗಿ ಸ್ಥಳದಲ್ಲಿದ್ದ ಸಂಬಂಧಿತ ಅಧಿಕಾರಿಗಳಿಗೆ ಕೆರೆಗೆ 10 ದಿನದ ಒಳಗಾಗಿ ಪೆÇಲೀಸ್ ನೆರವು ಪಡೆದು ಮಾಕಿರ್ಂಗ್ ಮಾಡಿ ಬೇಲಿ ಹಾಕುವ ಕಾರ್ಯವನ್ನು ತ್ವರಿತವಾಗಿ ಮಾಡಬೇಕೆಂದು ಗಡುವು ವಿಧಿಸಿದರು.
ಕೆರೆಗೆ ಹೊಂದಿಕೊಂಡಂತಿರುವ ಖಾಸಗಿ ಲೇಔಟ್ ನವರು ಕೆರೆ ಜಾಗವನ್ನೆ ರಸ್ತೆಯನ್ನಾಗಿ ಮಾಡಿಕೊಂಡಿರುವ ಕುರಿತು ವಿವರ ಕೇಳಿದ ಅಧ್ಯಕ್ಷರು ಶೀಘ್ರದಲ್ಲಿ ಬಿಡಿಎ ನೊಂದಿಗೆ ಚರ್ಚಿಸಲು ಸೂಚಿಸಿದರು. ಇದೇ ಸಂದರ್ಭದಲ್ಲಿ ಕೆರೆಯ ಹತ್ತಿರವಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ಮಿಸಿರುವ ಎಲೆ ಮಲ್ಲಪ್ಪ ಚೆಟ್ಟಿಕೆರೆ ಸಮೀಪದ ತ್ಯಾಜ್ಯ ನೀರು ಸಂಸ್ಕರಣಾ ಘಟಕಕ್ಕೆ ಸಹ ಭೇಟಿ ನೀಡಿ ಪರಿಶೀಲಿಸಿದರು. ಒತ್ತುವರಿ ತೆರವು ಹಾಗೂ ವಾಟರ್ ಟ್ರೀಟ್ ಮೆಂಟ್ ಪ್ಲಾಂಟ್ ಹೆಚ್ಚಿನ ಸಾಮಥ್ರ್ಯದ ನವೀಕರಣ ಕೈಗೊಳ್ಳಲು ಅಗತ್ಯ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಎರಡನೆಯದಾಗಿ ವರ್ತೂರು ಕೆರೆಗೆ ಭೇಟಿ ನೀಡಿದ ತಂಡಕ್ಕೆ ಕೆರೆಗೆ ಚರಂಡಿ ನೀರು ಸೇರದಂತೆ ಕ್ರಮ ಕೈಗೊಂಡಿರುವ ಬಗ್ಗೆ ಹಾಗೂ ಕೆರೆ ಸುತ್ತ ಬಂದೋಬಸ್ತ್ ಮಾಡಲಾಗಿದೆ, ಕೇವಲ ಮಳೆ ನೀರು ಕೆರೆಗೆ ಬರುವಂತೆ ಕ್ರಮವಹಿಸಲಾಗಿದೆ, ಯಾವುದೇ ಒತ್ತುವರಿ ಇರುವುದಿಲ್ಲ, ಬಿಬಿಎಂಪಿ ಗೆ ಕೆರೆ ನಿರ್ವಹಣೆಯನ್ನು ವರ್ಗಾಯಿಸುವ ಬಗ್ಗೆ ಮಾತುಕತೆ ನಡೆದಿದ್ದು ಶೀಘ್ರದಲ್ಲಿ ವರ್ಗಾಯಿಸಲಾಗುವುದು ಎಂದು ಬಿಡಿಎ ಅಧಿಕಾರಿಗಳು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಕೆರೆಯ ಸುತ್ತಲಿನ ಸ್ವಚ್ಛತೆ ಕುರಿತಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಅಧ್ಯಕ್ಷರು ಬಿಡಿಎ, ಬಿಬಿಎಂಪಿ, ಕಂದಾಯ ಹಾಗೂ ಕೆರೆಗಳಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳನ್ನು ಒಳಗೊಂಡ ಸಭೆಯನ್ನು ಶೀಘ್ರದಲ್ಲಿ ಹಮ್ಮಿಕೊಳ್ಳಲು ಮತ್ತು ಉತ್ತಮ ಗುಣಮಟ್ಟದಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಮಾಡುವ ಬಗ್ಗೆ ಕ್ರಮವಹಿಸಬೇಕೆಂದು ಬಿಡಿಎ ಮುಖ್ಯ ಇಂಜಿನಿಯರ್ ಡಾ.ಶಾಂತರಾಜಣ್ಣ ಅವರಿಗೆ ಸೂಚಿಸಿದರು.
ಕೆರೆಯ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ತಲೆ ಎತ್ತಿರುವ ಸಾವಿರಾರು ಅಪಾರ್ಟ್ ಮೆಂಟ್ ಗಳು ಬಳಸಿ ಬಿಡುವ ನೀರು ಯಾವ ಪ್ರಮಾಣದಲ್ಲಿ ಶುದ್ದಿಕರಿಸಲಾಗುತ್ತಿದೆ ಹಾಗೂ ಎಲ್ಲಿಗೆ ಬಿಡುತ್ತಿದ್ದಾರೆ ಎನ್ನುವ ಕುರಿತು ಸಂಬಂಧಿಸಿದ ಇಲಾಖೆಗಳು ಕಾಲ-ಕಾಲಕ್ಕೆ ಪರಿಶೀಲಿಸಬೇಕು ಎಂದರು.
ಸ್ಥಳದಲ್ಲಿದ್ದ ಸಾರ್ವಜನಿಕರಿಂದ ಕೆರೆಯ ಪರಿಸ್ಥಿತಿ ಕುರಿತು ಅಭಿಪ್ರಾಯ ಪಡೆದ ಸಮಿತಿಯು ಎಲ್ಲಾ ಸಮಸ್ಯೆಗಳನ್ನು ಆಲಿಸಿ ಸಂಬಂಧಿಸಿದ ಇಲಾಖೆಗಳಿಗೆ ಪರಿಹಾರ ಕಾರ್ಯ ಕೈಗೊಳ್ಳಲು ಸೂಚಿಸಿದರು.
ನೂರಾರು ಕೋಟಿ ಪ್ರತಿ ವರ್ಷ ಸರ್ಕಾರದಿಂದ ಖರ್ಚು ಮಾಡಿದರು ಸಹ ಬೆಂಗಳೂರಿನ ಕೆರೆಗಳ ಸ್ಥಿತಿ ಬದಲಾಗದಿರುವುದು ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ ಎಂದರು.
ಮೂರನೆಯದಾಗಿ ಬೆಳ್ಳಂದೂರು ಕೆರೆಗೆ ಭೇಟಿ ನೀಡಿ ಅದರ ವಿಶಾಲತೆಗೆ ಮಾರು ಹೋದ ಅಧ್ಯಕ್ಷರು ನಗರದ ನಡುವೆ ಇರುವ ವಿಶಾಲವಾದ ಕೆರೆ ಬೆಂಗಳೂರಿನ ಆಸ್ತಿ, ಇದನ್ನು ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿ, ಒಳ ಹರಿವು ಮಾಹಿತಿ ಪಡೆದು ವೈಜ್ಞಾನಿಕವಾಗಿ ನೀರಿನ ಸ್ವಚ್ಛತೆ ಕಾಪಾಡುವ ಹಾಗೂ ಇತರೇ ಸಮಸ್ಯೆಗಳನ್ನು ಗುರುತಿಸಿ ಶೀಘ್ರಿದಲ್ಲಿ ಪರಿಹಾರ ಕಂಡುಕೊಳ್ಳಬೇಕು ಹಾಗೂ ಕೆರೆಯನ್ನು ಅಭಿವೃದ್ಧಿಪಡಿಸಬೇಕು.
ನಾಲ್ಕನೆಯದಾಗಿ ಅಗರ ಕೆರೆಗೆ ಭೇಟಿ ನೀಡಿದ ತಂಡ ಕೆರೆಯ ಅಭಿವೃದ್ಧಿ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸಿ ಸ್ಥಳದಲ್ಲಿದ್ದ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿತು. ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ಸತೀಶ್ ರೆಡ್ಡಿ ಅವರ ಒತ್ತಾಯದ ಮೇರೆಗೆ ಅಗರ ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು ಸಹ ವೀಕ್ಷೀಸಿದರು. ಎರಡು ವಿಶೇಷ ಬಿ ಎಮ್ ಟಿ ಸಿ ಬಸ್ ಗಳಲ್ಲಿ ತೆರಳಿದ್ದ ಸಮಿತಿ ಸದಸ್ಯರು ಹಾಗೂ ಹಿರಿಯ ಅಧಿಕಾರಿಗಳ ಜೊತೆಯಲ್ಲಿ ಬಿಬಿಎಂ ಪಿ ವಿಶೇಷ ಆಯುಕ್ತರಾದ ಕರಿಗೌಡ, ಸಣ್ಣ ನೀರಾವರಿ ಜಂಟಿ ಕಾರ್ಯದರ್ಶಿ ಪವಿತ್ರ ಅವರು ಉಪಸ್ಥಿತರಿದ್ದರು.