” ಶ್ರೀ ಪ್ರಹ್ಲಾದರಾಜರೇ ಶ್ರೀ ರಾಘವೇಂದ್ರರು – 1 ”
” ಶ್ರೀ ವ್ಯಾಸರಾಜ ಸ್ತುತಿ – ಉಗಾಭೋಗ ”
ಶ್ರೀ ವ್ಯಾಸರಾಜರು :
ಕ್ರಿ ಶ 1447 – 1539
ಅಂಶ :
ಶ್ರೀ ಪ್ರಹ್ಲಾದಂಶ
ಆವೇಶ :
ಶ್ರೀ ವಾಯುದೇವರ ನಿತ್ಯಾವೇಶ ಮತ್ತು ಶ್ರೀ ಲಕ್ಷ್ಮೀ ನಾರಾಯಣರ ನಿತ್ಯ ಸನ್ನಿಧಾನಯುಕ್ತರು.
ಶ್ರೀ ಕನಕದಾಸರು :
ಕ್ರಿ ಶ 1508 – 1606
ಅಂಶ :
ಶ್ರೀ ಯಮಧರ್ಮರಾಜರ ಸಾಕ್ಷಾತ್ ಅವತಾರ.
ಶ್ರೀ ಯಮಧರ್ಮರಾಜರು ಶ್ರೀ ಕೃಷ್ಣನ ವಿಭೂತಿ ರೂಪದಿಂದ ಮೆರೆಯುತ್ತಿರುವ 12ನೇ ಕಕ್ಷಾ ಸಂಪನ್ನರಾದ ದೇವತೆಗಳು.
ಶ್ರೀ ವ್ಯಾಸರಾಜರನ್ನು ಕಂಡು ಶ್ರೀ ಕನಕದಾಸರು ಅತ್ಯಂತ ಮನೋಜ್ಞವಾಗಿ ಸ್ತುತಿಸಿದ್ದಾರೆ.
ಆ ಉಗಾಭೋಗದಲ್ಲಿ ತಮ್ಮ ( ಶ್ರೀ ಕನಕದಾಸರ ), ಶ್ರೀ ವ್ಯಾಸರಾಜರ, ಶ್ರೀ ಪುರಂದರದಾಸರು ಮತ್ತು ಶ್ರೀ ಪುರಂದರದಾಸರ ಮಕ್ಕಳ ಅವತಾರ ಕುರಿತು ಖಚಿತ ಪಡಿಸಿದ್ದಾರೆ.
ವ್ಯಾಸರಾಯರಿಗೆ ಮೂರು ಜನ್ಮ ! ದಾಸರಿಗೆ ಎರಡು ಜನ್ಮ ! ಶ್ರೀ ! ವ್ಯಾಸರಾಯರೇ ರಾಘವೇಂದ್ರರಾಯರು ! ರಾಮಚಂದ್ರನ ಆಶ್ರಿತ ಜನ ಕೋಟಿಯೊಳಗೆ ಉತ್ಕೃಷ್ಟರಾದವರು ! ನಾರದರ ಅಂಶವೇ ಪುರಂದರದಾಸರು ! ತಮ್ಮ ಕೂಸಾದ ಭೃಗುಮುನಿಯಲ್ಲಿ ! ತಾವು ಒಂದಂಶದಿ ನಿಂದು ವಿಜಯದಾಸರೆಂದು ಪೆಸರು ಪಡೆವ ! ನಾ ಯಮನು ಮುಂದೆ ಮಾಂಡವ್ಯ ಶಾಪದಿಂದ ! ಎರಡು ಜನ್ಮ ಶೂದ್ರ ಯೋನಿಯಲ್ಲಿ ಪೊಕ್ಕೆನಲು ಒಂದು ಜನುಮ ವಿದುರನಾಗಿ ಕುರುಬರ ಕುಲದಲ್ಲೀಗ ಪುಟ್ಟಿದೆ ! ಎನಗೆ ಈ ಜನ್ಮದಲಿ ಮುಕುತಿ ಎಂತೆಂಬೆ ! ವರದಪ್ಪನೆ ಸೋಮ ಗುರುರಾಯ ದಿನಕರನು ! ಅಭಿನವ ಬೃಹಸ್ಪತಿ ಮಧ್ವಪತಿ ಭೃಗು ಅಂಶದಿ ಮೆರೆವ ! ಮಹಾ ಮಹಿಮೆ ಪೊಗಳುವನು ! ಭಾಗವತರೊಳಗೆ ಯೋಗೇಂದ್ರ ಕೃಷ್ಣನ್ನ ! ಬಾಗಿ ನಮಿಸುವ ದಾಸ ಜನರ ಪೋಷಕ ಕಾಗಿನೆಲೆಯಾದಿ ಕೇಶವರಾಯ ! ದಾಸೋತ್ತಮರ ಗುಣವ ಕನಕದಾಸ ಪೇಳಿದನು !!
” ವಿವರಣೆ ”
” ವ್ಯಾಸರಾಯರಿಗೆ ಮೂರು ಜನ್ಮ ”
ಶ್ರೀ ಪ್ರಹ್ಲಾದ, ಶ್ರೀ ಬಾಹ್ಲೀಕ, ಶ್ರೀ ವ್ಯಾಸರಾಜರು
ಶ್ರೀ ವ್ಯಾಸರಾಜರೇ ಶ್ರೀ ರಾಘವೇಂದ್ರಾರಾಯರು.
ಶ್ರೀ ಮನ್ಮೂಲರಾಮಚಂದ್ರನ ಆಶ್ರಿತ ಜನರೊಳಗೆ ಶ್ರೇಷ್ಠರಾದವರು.
” ದಾಸರಿಗೆ ಎರಡು ಜನ್ಮ ”
ಒಂದು ” ದಾಸೀ ಪುತ್ರ ”
ಎರಡನೆಯದ್ದು ” ಶ್ರೀ ನಾರದರು ”
ಶ್ರೀ ನಾರದ ಮಹರ್ಷಿಗಳ ಅಂಶ ಸಂಭೂತರೇ ಶ್ರೀ ಪುರಂದರ ದಾಸರು.
ತಮ್ಮ ಪುತ್ರ ಶ್ರೀ ಭೃಗು ಮಹರ್ಷಿಯಲ್ಲಿ ಒಂದಂಶದಿ ನಿಂದಿದ್ದರಿಂದ ಮುಂದೆ ಶ್ರೀ ವಿಜಯದಾಸರೆಂದು ಪ್ರಸಿದ್ಧಿ ಪಡೆವರು!
” ನಾ ಯಮನು ಮುಂದೆ ಮಾಂಡವ್ಯ ಶಾಪದಿಂದ ಎರಡು ಜನ್ಮ ಶೂದ್ರ ಯೋನಿಯಲ್ಲಿ ಪುಕ್ಕೆನಲು ಒಂದು ಜನುಮ ವಿದುರನಾಗಿ ಕುರುಬರ ಕುಲದಲ್ಲೀಗ ಪುಟ್ಟಿದೆ ಎನಗೆ ಈ ಜನ್ಮದಲಿ ಮುಕುತಿ ”
ಶ್ರೀ ಮಾಂಡವ್ಯರ ಶಾಪದಿಂದ ಭುವಿಯಲ್ಲಿ ಎರಡು ಶೂದ್ರ ಯೋನಿಯಲ್ಲಿ ಅವತಾರ ಮಾಡಿದ್ದಾರೆ.
ಮೊದಲನೆಯದ್ದು ” ಶ್ರೀ ವಿದುರ ”
ಎರಡನೆಯದ್ದು ” ಶ್ರೀ ಕನಕದಾಸರು ”
ಇನ್ನು ಶ್ರೀ ಪುರಂದರ ದಾಸರ ನಾಲ್ಕು ಪುತ್ರರ ಅವತಾರವನ್ನು ತಿಳಿದಿದ್ದಾರೆ.
ಶ್ರೀ ವರದಪ್ಪ ನಾಯಕರು ( ಶ್ರೀ ವೆಂಕಪ್ಪ – ಶ್ರೀ ವರದ ಪುರಂದರವಿಠ್ಠಲ ) ಶ್ರೀ ಚಂದ್ರಾಂಶರು.
ಶ್ರೀ ಗುರುರಾಯ ನಾಯಕರು ( ಶ್ರೀ ಅಪ್ಪಣ್ಣ ಭಾಗವತರು – ಶ್ರೀ ಗುರು ಪುರಂದರವಿಠ್ಠಲ ) – ಶ್ರೀ ಸೂರ್ಯಾಂಶರು.
ಶ್ರೀ ಅಭಿನವ ನಾಯಕರು ( ಶ್ರೀ ಅಭಿನವ ಪುರಂದರ ವಿಠ್ಠಲ ) – ಶ್ರೀ ಬೃಹಸ್ಪತ್ಯಾಚಾರ್ಯರ ಅಂಶಜರು.
ಶ್ರೀ ಮಧ್ವಪತಿ ವಿಠ್ಠಲ – ಶ್ರೀ ಭೃಗು ಮಹರ್ಷಿಗಳ ಅವತಾರ !
ಎಂದು ಸ್ಪಷ್ಟ ಪಡಿಸಿದ್ದಾರೆ.
ಆದ್ದರಿಂದ ಶ್ರೀ ಪ್ರಹ್ಲಾದರಾಜರೇ ಶ್ರೀ ಬಾಹ್ಲೀಕ ಶ್ರೀ ವ್ಯಾಸರಾಜರ ಶ್ರೀ ರಾಘವೇಂದ್ರ ತೀರ್ಥರೆಂದು ಶ್ರೀ ಕನಕದಾಸರ ಭವಿಷ್ಯ ವಾಣಿಯಂತೆ ” ಶ್ರೀ ವ್ಯಾಸರಾಜರ ಅವರ ಮುಂದಿನ ಅವತಾರ ಶ್ರೀ ರಾಘವೇಂದ್ರ ತೀರ್ಥ ” ರೆಂದು ಸ್ಪಷ್ಟವಾಗಿದೆ.
” ವಿಶೇಷ ವಿಚಾರ ”
1. ಈ ಶ್ರೀ ಕನಕದಾಸರ ಉಗಾಭೋಗವನ್ನು ಪ್ರಪ್ರಥಮವಾಗಿ ಸಂಗ್ರಹಿಸಿ ಶ್ರೀ ವರದೇಂದ್ರ ಹರಿದಾಸ ಸಾಹಿತ್ಯ ಮಂಡಲ ಲಿಂಗಸೂಗೂರುನಿಂದ ಪರಮಪೂಜ್ಯ ಶ್ರೀ ಗೊರೆಬಾಳು ಹನುಮಂತರಾಯರು ಮುದ್ರಿಸಿ ಪ್ರಕಟಿಸಿದ್ದಾರೆ.
2. ಶ್ರೀ ಗುರುಸಾರ್ವಭೌಮ ಸಂಶೋಧನಾ ಕೇಂದ್ರ
ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠ
ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ, ಮಂತ್ರಾಲಯದಿಂದ ಕ್ರಿ ಶ 2019 ರಲ್ಲಿ ಪ್ರಕಟಣೆಗೊಂಡ ” ಹರಿದಾಸರು ಕಂಡ ವಿದ್ಯಾಮಠ ” ಸಂಪುಟ – 2 ” ದಲ್ಲಿ ಮುದ್ರಿತವಾಗಿದೆ.
ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ