ಬೆಂಗಳೂರು, ಸೆಪ್ಟೆಂಬರ್ 02, (ಕರ್ನಾಟಕ ವಾರ್ತೆ): ಸ್ಪ್ರೀ- 2025 (ಉದ್ಯೋಗದಾತರು ಮತ್ತು ಉದ್ಯೋಗಿಗಳನ್ನು ನೋಂದಾವಣೆ ಉತ್ತೇಜಿಸುವ ಯೋಜನೆ 2025) ಎಂಬ ಯೋಜನೆಯನ್ನು ಕಾರ್ಮಿಕರ ವಿಮಾ ನಿಗಮವು ಜಾರಿಗೆ ತಂದಿದ್ದು, ಈ ಯೋಜನೆಯು 2025ನೇ ಜುಲೈ 01 ರಿಂದ ಡಿಸೆಂಬರ್ 31 ವರೆಗೆ ಜಾರಿಯಲ್ಲಿರುತ್ತದೆ.
ಕಾರ್ಮಿಕ ಇಲಾಖೆಯು ಈ ಯೋಜನೆಯಡಿ ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ ನೋಂದಾವಣಿ ಮಾಡಲು ಒಂದು ಬಾರಿಯ ಅವಕಾಶವನ್ನು ನೀಡಿದೆ. ಈ ಅವಧಿಯಲ್ಲಿ ಉದ್ಯೋಗದಾತರು ನೋಂದಾವಣೆಯಾದಲ್ಲಿ ಹಿಂದಿನ ಅವಧಿಗೆ ಯಾವುದೇ ದಂಡ ಅಥವಾ ಬಾಕಿ ಪಾವತಿಯ ಅವಶ್ಯಕತೆ ಇರುವುದಿಲ್ಲ ಮತ್ತು ಯಾವುದೇ ತಪಾಸಣೆ ಇರುವುದಿಲ್ಲ.
ಉದ್ಯೋಗದಾತರು ತಮ್ಮಲ್ಲಿ ಕಾರ್ಯನಿರ್ವಹಿಸುವ ಗುತ್ತಿಗೆ ಉದ್ಯೋಗಿಗಳನ್ನು ಒಳಗೊಂಡಂತೆ ಎಲ್ಲಾ ಉದ್ಯೋಗಿಗಳನ್ನು ಈ ಯೋಜನೆಯಡಿಯಲ್ಲಿ ನೋಂದಾಯಿಸಿದಲ್ಲಿ ನೋಂದಾವಣೆ ದಿನದಿಂದಲೇ ಕಾರ್ಮಿಕರ ವಿಮಾ ಕಾಯ್ದೆಯಡಿ ದೊರೆಯುವ ವಿವಿಧ ಸೌಲಭ್ಯಗಳನ್ನು ಪಡೆಯಲು ಅರ್ಹರಾಗುತ್ತಾರೆ.
ಈ ಯೋಜನೆಯ ಮತ್ತು ಮುಖ್ಯ ಕಛೇರಿಯ ಸೂಚನೆಯಂತೆ ಉಪಪ್ರಾದೇಶಿಕ ಕಛೇರಿ, ಬೊಮ್ಮಸಂದ್ರ ಕಛೇರಿಯು ಫಲಾನುಭವಿಗಳ ಸಹಕಾರದಲ್ಲಿ ಮತ್ತು ರಾಜ್ಯ ಸರ್ಕಾರದ ವಿವಿಧ ಕಛೇರಿಗಳ ಸಹಯೋಗದೊಡನೆ ಹಲವಾರು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವಧಿಯಲ್ಲಿ ಉದ್ಯೋಗದಾತರು ಮತ್ತು ಉದ್ಯೋಗಿಗಳು ನೋಂದಾವಣೆಯಾದಲ್ಲಿ ಅವರಿಗೆ ದೊರಕುವ ಅನುಕೂಲತೆಗಳ ಬಗ್ಗೆ ಅರಿವನ್ನು ಮೂಡಿಸಲಾಗುತ್ತಿದೆ.
ಈ ಅವಧಿಯಲ್ಲಿ ಸಾವಿರಾರು ಉದ್ಯೋಗಿಗಳನ್ನು ಈ ಯೋಜನೆಯಡಿಯಲ್ಲಿ ನೋಂದಾಯಿಸಲಾಗಿದೆ ಮತ್ತು ಅವರ ಅಗತ್ಯತೆಗಳಿಗೆ ಅನುಸಾರ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಇದುವರವಗೂ ಈ ಕಛೇರಿಯು ವಿವಿಧ 23 ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿವಿಧ ಕೈಗಾರಿಕಾ ಸಂಘಗಳಲ್ಲಿ ಕಾರ್ಯಕ್ರಮವನ್ನು ನಡೆಸಲಾಗಿದೆ ಮತ್ತು ಉದ್ಯೋಗಿಗಳನ್ನು ಸಾಮಾಜಿಕ ಸುರಕ್ಷತೆಯ ವ್ಯಾಪ್ತಿಗೆ ತರಲಾಗಿದೆ.
ಈ ಯೋಜನೆಯು ಒಂದು ಮೈಲಿಗಲ್ಲಾಗಿದ್ದು ಅರ್ಧ ಅವಧಿಯನ್ನು ಕ್ರಮಿಸಿ ಸಫಲತೆಯತ್ತ ಸಾಗುತ್ತಿದ್ದು, ಎಲ್ಲಾ ಉದ್ಯೋಗದಾತರು ಈ ಅವಧಿಯಲ್ಲಿ ತಮ್ಮ ಸಂಸ್ಥೆಗಳು, ಘಟಕಗಳನ್ನು ಹಾಗೂ ಉದ್ಯೋಗಿಗಳನ್ನು ನೋಂದಾವಣೆ ಮಾಡುವುದರ ಮೂಲಕ ಕಾರ್ಮಿಕರ ರಾಜ್ಯ ನಿಗಮದಿಂದ ದೊರೆಯುವ ಹಲವಾರು ರೀತಿಯ ವಿಮಾ ಸೌಲಭ್ಯಗಳನ್ನು ಪಡೆಯುವಂತೆ ಇಎಸ್‍ಐಸಿಯು ತಿಳಿಸಿದೆ
ಇಎಸ್‍ಐಸಿಯ ಈ ಉಪಕ್ರಮವು ಸರಳ ಹಾಗೂ ತಡೆಹರಿತ ವ್ಯವಹಾರವನ್ನು ಉದ್ಯೋಗದಾತರು ಯಾವುದೇ ದಂಡಶುಲ್ಕವಿಲ್ಲದೆ ತಮ್ಮ ಸಂಸ್ಥೆಯನ್ನು ನೋಂದಾವಣೆ ಮಾಡಿಕೊಂಡು ಮತ್ತು ಉದ್ಯೋಗಿಗಳನ್ನು ನೋಂದಾವಣೆ ಮಾಡಿ ಆರೋಗ್ಯ ಸೌಲಭ್ಯ ಹಾಗೂ ಸಾಮಾಜಿಕ ಸುರಕ್ಷೆಯ ವ್ಯಾಪ್ತಿಯನ್ನು ವಿಸ್ತರಿಸುವುದರ ಜೊತೆಗೆ ಈ ಯೋಜನೆಯಡಿ ದೊರೆಯುವ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸುವುದಾಗಿದೆ.
ಸ್ಪ್ರೀ ಯೋಜನೆ ಕುರಿತು ಮಾಹಿತಿಗಾಗಿ ಇ-ಮೇಲ್ sro-bommasandra@esic.nic.in ಅಥವಾ ದೂರವಾಣಿ ಸಂಖ್ಯೆ 080-26786391 ಸಂಪರ್ಕಿಸಬಹುದು ಎಂದು ಭಾರತ ಸರ್ಕಾರದ ಇ.ಎಸ್.ಐ.ಸಿ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.