ಗ್ರಾಮೀಣ ಅಂಚೆ ಸೇವೆಗಳ ಬೆನ್ನೆಲುಬಾದ ಗ್ರಾಮೀಣ ಡಾಕ್ ಸೇವಕರು ಬದ್ಧತೆಯಿಂದ ಕೆಲಸ ನಿರ್ವಹಿಸಬೇಕು. ಅವರಿಗೆ ಎಲ್ಲಾ ರೀತಿಯ ಸೌಲಭ್ಯ ಒದಗಿಸಲಾಗುವುದು ಎಂದು ಕೇಂದ್ರ ಸಂವಹನ ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವರಾದ ಜ್ಯೋತಿರಾದಿತ್ಯ ಎಂ.ಸಿಂಧ್ಯಾ ಅವರು ತಿಳಿಸಿದರು.
ಸರ್.ಪುಟ್ಟಣ್ಣ ಚೆಟ್ಟಿ ಟೌನ್ ಹಾಲ್‍ನಲ್ಲಿ ಭಾರತೀಯ ಅಂಚೆ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಬೆಂಗಳೂರಿನ ಅಂಚೆ ಕಚೇರಿಯ ಜಿಡಿಎಸ್ ಸಿಬ್ಬಂದಿಗಳೊಂದಿಗೆ ಸಂವಾದ ಸಮ್ಮೇಳನ ಕಾರ್ಯಕ್ರಮದ ಉದ್ಘಾಟನೆ ಹಾಗೂ ಕರ್ನಾಟಕ ಅಂಚೆ ವೃತ್ತದ ಅತ್ಯುತ್ತಮ ಸೇವಾ ಪ್ರದರ್ಶನ ನೀಡಿರುವ 15 ಗ್ರಾಮೀಣ ಡಾಕ್ ಸೇವಕರನ್ನು ಸನ್ಮಾನಿಸಿ ಮಾತನಾಡಿದ ಸಚಿವರು, ಡಾಕ್ ಸೇವಕರು ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಸಲ್ಲಿಸುತ್ತಿರುವ ಪ್ರಾಮಾಣಿಕ ಸೇವೆಯು “ಡಾಕ್ ಸೇವಾ, ಜನ ಸೇವಾ” ಎಂಬ ಮನೋಭಾವವನ್ನು ಬಲಪಡಿಸುತ್ತದೆ ಎಂದರು.
ಅಂಚೆ ಸೇವಕರು ಚೀಲದಲ್ಲಿ ಅಕ್ಷರವನ್ನು ಮಾತ್ರ ಕೊಂಡೊಯ್ಯವುದಿಲ್ಲ, ಜನರ ವಿಶ್ವಾಸವನ್ನು ಹೊಂದಿರುತ್ತಾರೆ. ದೇಶದ ಪ್ರತೀ ಕುಟುಂಬವೂ ತಮ್ಮ ಸೇವೆಯನ್ನು ನೆನೆಯುತ್ತದೆ. ನಮ್ಮ ಹಳ್ಳಿಯಲ್ಲಿರುವ ಪ್ರತಿಯೊಂದು ಅಂಚೆ ಕಚೇರಿಯು ಮಾಲ್ ಇದ್ದಂತೆ. ನಾವು ನಮ್ಮ ಗ್ರಾಹಕರಿಗೆ ಹೊಸ ಉತ್ಪನ್ನಗಳನ್ನು ಪರಿಚಯಿಸಬೇಕು. ಹೊಸತನ್ನು ಬಯಸುವುದರ ಜೊತೆಗೆ ಉತ್ಪಾದಕತೆಯನ್ನು ಹೆಚ್ಚಿಸಬೇಕು. ಡಾಕ್ ಸೇವಕರು ಅಂಚೆ ಇಲಾಖೆಯ ಪ್ರಮುಖ ಭಾಗವಾಗಿದ್ದು, ನಿಮ್ಮೊಂದಿಗೆ ನಾವು ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತೇವೆ. ನಿಮ್ಮ ಬದ್ಧತೆಯ ಸೇವೆಯನ್ನು ನಾವು ಬಯಸುತ್ತೇವೆ ಎಂದರು.
ಇಂದು ಗುರು ಪೂರ್ಣಿಮೆಯ ದಿನವಾಗಿದ್ದು, ಭಾವನಾತ್ಮಕ ಕ್ಷಣವಾಗಿದೆ. ನಮ್ಮ ತಾಯಿ-ತಂದೆ ಗುರುಗಳಾದರೆ, ನಮ್ಮ ಜೀವನದಲ್ಲಿ ಗೆಲುವಿನ ಹೆಜ್ಜೆ ಮೂಡಿಸುವ ಪ್ರತಿಯೊಬ್ಬರು ಗುರುಗಳ ಸ್ಥಾನ ತುಂಬುತ್ತಾರೆ ಎಂದರು.
ರಾಜ್ಯದ ಅಂಚೆ ಸೇವೆಯನ್ನು ಕೇಂದ್ರ ಸಂವಹನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಶ್ಲಾಘಿಸುತ್ತಾ, ಡಾಕ್ ಸೇವೆ ಅಂದರೆ ಜನಸೇವೆ ಎಂದು ಪ್ರತಿಪಾದಿಸಿದರು. ಕರ್ನಾಟಕದ ಅಂಚೆ ಸೇವೆ ವಾರ್ಷಿಕವಾಗಿ ಸುಮಾರು 200 ಕೋಟಿಗೂ ಹೆಚ್ಚು ಪಾರ್ಸೆಲ್ ಹಾಗೂ ಅಂಚೆ ಸೇವೆಯನ್ನು ನೀಡುತ್ತಿದೆ ಎಂದು ತಿಳಿಸಿದರು.
ಮುಂಬರುವ ದಿನಗಳಲ್ಲಿ ದೇಶದಲ್ಲೇ ಅಂಚೆ ಇಲಾಖೆಯನ್ನು ಲಾಭ ತರುವ ಇಲಾಖೆಯಾನ್ನಾಗಿ ಪರಿವರ್ತಿಸಲಾಗುವುದು. ವಿಶ್ವದಲ್ಲೇ ಭಾರತದ ಅಂಚೆ ಇಲಾಖೆ ಅತ್ಯುನ್ನತ ಸ್ಥಾನದಲ್ಲಿದ್ದು, ವಿಶ್ವದಲ್ಲಿಯೇ ಹಳ್ಳಿಗಳಲ್ಲಿಯೂ ಸೇವೆ ಸಲ್ಲಿಸುವ ಏಕೈಕ ಇಲಾಖೆ ಅಂಚೆ ಇಲಾಖೆ. ಅಂಚೆ ಇಲಾಖೆಯಿಂದಾಗಿ ದೇಶದ ಪ್ರತಿಯೊಂದು ತಾಯಂದಿರ ಪಿಂಚಣಿ ಯೋಜನೆಯನ್ನು ಪಡೆಯುವಂತಾಗಿದೆ ಎಂದು ತಿಳಿಸಿದರು.
ಇದೇ ವೇಳೆ ನಡೆದ ಸಂವಾದದಲ್ಲಿ ರಾಜ್ಯಾದ್ಯಂತ ಕಾರ್ಯ ನಿರ್ವಹಿಸುತ್ತಿರುವ ಗ್ರಾಮೀಣ ಡಾಕ್ ಸೇವಕರೊಂದಿಗೆ ಸಚಿವರು ಸಂವಾದ ನಡೆಸಿದರು. ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ರಾಜ್ಯದ 15 ಗ್ರಾಮೀಣ ಡಾಕ್ ಸೇವಕರನ್ನು ಅವರು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಅಂಚೆ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ವಂದಿತಾ ಕೌಲ್, ಅಂಚೆ ಸೇವೆಗಳ ಮಂಡಳಿಯ ಸದಸ್ಯೆ ಶ್ರೀಮತಿ ಮಂಜು ಕುಮಾರ್, ಅಂಚೆ ಇಲಾಖೆಯ ಹಿರಿಯ ಅಧಿಕಾರಿಗಳು, ಡಾಕ್ ಸೇವಕರು ಉಪಸ್ಥಿತರಿದ್ದರು.
VK NEWS HEADLINES :