ಬೆಂಗಳೂರು: ರಾಜಾಜಿನಗರದ ಸಂಯೋಗ ಕಲಾ ಶಾಲೆಯು (Rajajinagar Samyoga Kala Shala) ತನ್ನ ಆರನೆಯ ವಾರ್ಷಿಕೋತ್ಸವವನ್ನು (anniversary) ಮಲ್ಲೇಶ್ವರದ ಸೇವಾ ಸದನದಲ್ಲಿ ವಿಜೃಂಭಣೆಯಿಂದ ಆಚರಿಸಿತು. ಸಂಸ್ಥೆಯ (Classical Music School) ಮುಖ್ಯಸ್ಥೆ ಜ್ಯೋತಿ ಭಿಡೆ ಅವರ ತಾಯಿ ಶ್ರೀಮತಿ ಸಾವಿತ್ರಮ್ಮ ಮತ್ತು ಇತರ ಮುಖ್ಯ ಅತಿಥಿಗಳು ದೀಪ ಬೆಳಗಿಸಿ ಉದ್ಘಾಟಿಸಿದರು. ನಾಲ್ಕು ವರ್ಷದ ಮಕ್ಕಳಿಂದ ಹಿರಿಯರವರೆಗೆ ಇರುವ ಜ್ಯೋತಿ ಅವರ ಶಿಷ್ಯವರ್ಗ, ತಾವು ಕಲಿತಿರುವ ಸಂಗೀತವನ್ನು ಪ್ರದರ್ಶಿಸಿದರು.
ಮುಖ್ಯ ಅತಿಥಿಗಳಾಗಿ ಅನನ್ಯ ಸಂಸ್ಥೆಯ ಡಾ. ಆರ್.ವಿ. ರಾಘವೇಂದ್ರ, ವಿದುಷಿಗಳಾದ ಡಾ. ರಾಗಿಣಿ ಸನತ್ ಮತ್ತು ಆರ್. ಲಲಿತಾರವರು ಮಾತನಾಡಿ ಮಕ್ಕಳಿಗೆ ಪ್ರೋತ್ಸಾಹದಾಯಕ ಹಿತವಚನಗಳನ್ನು ನೀಡಿದರು. ನಂತರ ನಡೆದ ಭರತನಾಟ್ಯ ಕಾರ್ಯಕ್ರಮದಲ್ಲಿ ರಶ್ಮಿ ಹೆಗಡೆ ಅವರ ಶಿಷ್ಯರು ಪ್ರಸ್ತುತಪಡಿಸಿದ ರಂಜನಿ ಮಾಲ, ಶ್ರೀ ಜಯದೇವ ವಿರಚಿತ ದಶಾವತಾರದ ರಚನೆ ಮತ್ತು ಕೃಷ್ಣನ ಕುರಿತ ರಚನೆಯು ಸಭಾಂಗಣದಲ್ಲಿ ತುಂಬಿದ್ದ ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯಿತು.
ಕೊನೆಯಲ್ಲಿ ಈ ಹಿಂದೆ ವಿ.ಆರ್. ಲಲಿತಾ ಅವರು ನಡೆಸಿದ್ದ ಶ್ರೀ ತ್ಯಾಗರಾಜರ ಪಂಚರತ್ನ ಕೃತಿಗಳ ಕಾರ್ಯಗಾರದಲ್ಲಿ ಭಾಗವಹಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆರಭಿ ರಾಗದ ಸಾಧಿಂಚನೆ ಮತ್ತು ಶ್ರೀ ರಾಗದ ಎಂದರೋ ಮಹಾನುಭಾವಲು ಕೃತಿಗಳನ್ನು ಸುಶ್ರಾವ್ಯವಾಗಿ ಹಾಡಿದರು.
ಪಕ್ಕವಾದ್ಯಗಳಲ್ಲಿ ಎಸ್ ಶಶಿಧರ್ (ಪಿಟೀಲು), ಎನ್. ಎಸ್. ಕೃಷ್ಣಪ್ರಸಾದ್ (ಮೃದಂಗ), ಪರಶುರಾಮ್ (ಕೀ-ಬೋರ್ಡ್), ದೇವಕಿಚಂದ್ರ (ರಿದಂ ಪ್ಯಾಡ್) ಮತ್ತು ಪುಟ್ಟರಾಜು (ತಬಲಾ) ಅವರು ಒಳ್ಳೆಯ ಸಾಥ್ ನೀಡಿದರು.
ಸಂಸ್ಥೆಯು ಇನ್ನೂ ಹೆಚ್ಚು ಶಿಷ್ಯರನ್ನು ತಯಾರು ಮಾಡಿ ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡಲಿ ಎಂದು ಎಲ್ಲ ಪ್ರೇಕ್ಷಕರು ಹರಸಿದರು.