ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಎನ್‌ಡಿಎ (NDA) ಸಂಸದೀಯ ಪಕ್ಷದ ಸಭೆಯಲ್ಲಿ ಭಾಗವಹಿಸಿ ಮಹತ್ವದ ವಿಷಯಗಳ ಕುರಿತು ಮಾತನಾಡಿದರು. ವಿಶೇಷವಾಗಿ ಮೇ ತಿಂಗಳಲ್ಲಿ ಆರಂಭಗೊಂಡಿದ್ದ ಆಪರೇಷನ್ ಸಿಂದೂರ್ ಕುರಿತು ವಿರೋಧ ಪಕ್ಷದ ಟೀಕೆಯನ್ನು ಗಂಭೀರವಾಗಿ ಪ್ರಶ್ನಿಸಿದ್ರು. “ಇದೊಂದು ದೇಶದ ಭದ್ರತೆಗೆ ಸಂಬಂಧಪಟ್ಟ ವಿಷಯ. ಈ ಬಗ್ಗೆ ಮಾತನಾಡಲು ವಿಪಕ್ಷಗಳಿಗೆ ಯೋಗ್ಯತೆ ಇಲ್ಲ,” ಎಂದು ಮೋದಿ ತೀಕ್ಷ್ಣವಾಗಿ ಟೀಕಿಸಿದರು.
ಈ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಹಲವು ಎನ್‌ಡಿಎ ನಾಯಕರಿದ್ದರು. ಸಭೆಯಲ್ಲಿ ಭಾಗವಹಿಸಿದ ಸಂಸದರು, ಆಪರೇಷನ್ ಸಿಂದೂರ್‌ನ ಯಶಸ್ಸಿಗೆ ಪ್ರಧಾನಿ ಮೋದಿಗೆ ಶ್ಲಾಘನೆ ಸಲ್ಲಿಸಿ, ಅವರ ನಾಯಕತ್ವವನ್ನು ಪ್ರಶಂಸಿಸಿದರು.
ಆಪರೇಷನ್ ಸಿಂದೂರ್ ಮಾರ್ಗವಾಗಿ ದೇಶದ ಭದ್ರತೆಯ ಹಿತವನ್ನೇ ಕೇಂದ್ರಬಿಂದುವಾಗಿ ಇಟ್ಟುಕೊಂಡು ಕಾರ್ಯಚಟುವಟಿಕೆ ನಡೆಯಿತು ಎಂದು ಅಭಿಪ್ರಾಯ ವ್ಯಕ್ತವಾಯಿತು. ಪ್ರಧಾನಿ ಮೋದಿ ಅವರ “ದೃಢ ಸಂಕಲ್ಪ” ಹಾಗೂ “ದೂರದೃಷ್ಟಿ”ಯು ದೇಶದ ಜನತೆಗೆ ಹೆಮ್ಮೆಯ ಭಾವನೆ ಉಂಟುಮಾಡಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಇನ್ನು ಆಗಸ್ಟ್ 7ರಿಂದ ಉಪರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. NDA ಅಭ್ಯರ್ಥಿ ಬಹುಮತದಿಂದ ಗೆಲ್ಲಲಿದ್ದಾರೆ ಎಂಬ ನಿರೀಕ್ಷೆ ಇದೆ. ಆದರೆ ಮೈತ್ರಿಕೂಟವು ಆಗಸ್ಟ್ 21 ರೊಳಗೆ ತನ್ನ ಅಭ್ಯರ್ಥಿಯನ್ನು ಘೋಷಿಸಬೇಕಾಗಿದ್ದು, ರಾಜಕೀಯವಾಗಿ ಚಟುವಟಿಕೆ ತೀವ್ರಗೊಂಡಿದೆ.
ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮತ್ತು ಪ್ರಮುಖ ನಾಯಕರೊಂದಿಗೆ ಮಿತ್ರಪಕ್ಷಗಳ ಸಮನ್ವಯವೂ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.