ಬೆಂಗಳೂರು : ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದರೆ ತಾಳ್ಮೆ ಬಹಳ ಮುಖ್ಯ ಎಂದು ಹಿರಿಯ ಸಾಹಿತಿ ಶ್ರೀ ಕಾ.ತ.ಚಿಕ್ಕಣ್ಣ ನವರು ಹೇಳಿದರು. ಇತ್ತೀಚೆಗೆ ನಯನ ಸಭಾಂಗಣದಲ್ಲಿ ಸಂಭ್ರಮ ಸಂಸ್ಥೆಯು ಆಯೋಜಿಸಿದ್ದ ನೃತ್ಯ ಗುರು ಉಷಾಬಸಪ್ಪ ರವರಿಗೆ ನೃತ್ಯಾಭಿನಂದನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು ಶ್ರೀಯುತರು ಪ್ರತಿಯೊಬ್ಬ ಕಲಾವಿದನು ಮತ್ತೊಬ್ಬ ಕಲಾವಿದನಿಗೆ ಆಸರೆಯಾದರೆ, ನಮ್ಮ ಎಲ್ಲರ ಕಲಾ ಬದುಕು ಹಸನಾಗುತ್ತದೆ ಎಂದರು. ಕಳೆದ 25 ವರ್ಷಗಳಿಂದ ಕಲೆಯನ್ನು ಉಸಿರಾಗಿಸಿಕೊಂಡು ಜನಪದದ ಕಲೆಯನ್ನು ಬೆಳೆಸಿ ಅದರ ಜೊತೆಗೆ ಮತ್ತಷ್ಟು ಕಲಾವಿದರ ಬದುಕನ್ನು ಬೆಳಕಿನತ್ತ ಕೊಂಡ್ಯೊಯ್ಯುವ ಕೆಲಸವನ್ನು ಸಂಭ್ರಮ ಸಂಸ್ಥೆಯು ಮಾಡಿಕೊಂಡು ಬರುತ್ತಿದೆ.
ಕೆಲವು ಹಳ್ಳಿಗಳ ಕೆರೆಗಳ ಹೂಳೆತ್ತುವ ಕೆಲಸ ಸಸಿಗಳನ್ನು ನೆಟ್ಟು ಅದರ ಪೋಷಣೆ, ಉತ್ತಮವಾದ ಮರಗಳಿಂದ ನಮ್ಮ ಬದುಕು ಸುಂದರ, ಅಷ್ಟೇ ಅಲ್ಲದೇ ಅನೇಕ ಸಾಮಾಜಿಕ ಕಳಕಳಿಯ ಸೇವೆಯನ್ನು ಮಾಡುತ್ತಿರುವ ಈ ಸಂಭ್ರಮಕ್ಕೆ ಈಗ ಬೆಳ್ಳಿ ಹಬ್ಬದ ಸಂಭ್ರಮ.
ಖ್ಯಾತ ನೃತ್ಯ ಗುರು ವಿದುಷಿ ಉಷಾಬಸಪ್ಪ ನವರು ನೃತ್ಯ, ಸಂಗೀತ, ಜನಪದ ಕ್ಷೇತ್ರದ ಕಲಾಸೇವೆ ಮತ್ತು ಬೆಳವಣಿಗೆಯನ್ನು ಮೈಗೂಡಿಸಿಕೊಂಡು ಈ ಸಾಲಿನ 2025ರ “ಕಿತ್ತೂರು ರಾಣಿ ಚೆನ್ನಮ್ಮ” ಪ್ರಶಸ್ತಿಗೆ ಭಾಜನರಾದ ಈ ಸಂದರ್ಭದಲ್ಲಿ ಅವರು ಮಾಡಿದ ಅಮೋಘ ಸೇವೆಯನ್ನು ಗುರುತಿಸಿ ಸಂಭ್ರಮ ಸಂಸ್ಥೆಯು ಅವರಿಗೆ ನೃತ್ಯಾಭಿನಂದನೆಯನ್ನು ಸಲ್ಲಿಸಿತು.
ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಅನೇಕ ಪ್ರತಿಷ್ಟಿತ ನೃತ್ಯ ಸಂಸ್ಥೆಯ ಕಲಾವಿದರು ನೃತ್ಯವನ್ನು ಪ್ರದರ್ಶಿಸಿದರು, ನಂತರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿದುಷಿ ಶುಭ ಧನಂಜಯ, ಅಧ್ಯಕ್ಷರು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ವಿದುಷಿ ಕೆ.ಎಂ.ಕುಸುಮ, ಖ್ಯಾತ ಹಿನ್ನೆಲೆ ಗಾಯಕಿ, ವಿದ್ವಾನ್ ಎಸ್.ವಿ.ಗಿರಿಧರ್, ಖ್ಯಾತ ಮೃದಂಗ ವಿದ್ವಾಂಸರುಗಳು ಕಲಾವಿದೆ ಉಷಾಬಸಪ್ಪ ರವರಿಗೆ ನೃತ್ಯಾಭಿನಂದನೆಯನ್ನು ಸಲ್ಲಿಸಿದರು, ಸಂಭ್ರಮದ ಕಾರ್ಯದರ್ಶಿ ಡಾ.ಜೋಗಿಲ ಸಿದ್ದರಾಜು ರವರು ಸಾಹಿತಿ ಶ್ರೀ ಅವಿರತ ಹರೀಶ್, ಕಲಾ ನಿರ್ದೇಶಕ ಶ್ರೀ ಓ.ವೆಂಕಟೇಶ್ ರವರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಬಹಳ ವ್ಯವಸ್ಥಿತವಾಗಿ ಆಯೋಜಿಸಲಾಗಿತ್ತು. ನೃತ್ಯ ಪ್ರದರ್ಶನಗಳು ಮನಸೂರೆಗೊಂಡವು. ನಯನ ಸಭಾಂಗಣವು ಕಲಾರಸಿಕರಿಂದ ತುಂಬಿ ತುಳುಕುತ್ತಿತ್ತು. ಒಂದು ಉತ್ತಮವಾದ ಕಾರ್ಯಕ್ರಮವನ್ನು ಆಯೋಜಿಸಿದರೆ ರಸಿಕ ಪ್ರಭುಗಳು ಬರುತ್ತಾರೆ ಎಂಬ ಭಾವನೆ ಮನೆಮಾಡಿತ್ತು. ಇದೇ ಸಂದರ್ಭದಲ್ಲಿ ಉಷಾಬಸಪ್ಪ ರವರ ಬಗ್ಗೆ ಒಂದು ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.
ಅತಿಥಿಗಳ ಮಾತುಗಳು ಪ್ರೇರಣದಾಯಕವಾಗಿತ್ತು, ನಂತರ ವಿದುಷಿ ಉಷಾಬಸಪ್ಪ ರವರು ಅವರ ಮನದಾಳದ ಮಾತನಾಡಿದರು. ಈ ಸಾಧನೆಗೆ ಪ್ರೇರಣೆ ನನ್ನ ತಂದೆ, ತಾಯಿ, ನೃತ್ಯ ಗುರುಗಳಾದ ದಿವಂಗತ ಪದ್ಮಿನಿರಾವ್, ವಿದುಷಿ ಕೆ.ಎಂ.ಕುಸುಮ, ವಿದ್ವಾನ್ ಎಸ್. ವಿ.ಗಿರಿಧರ್, ಹಾಗೂ ಡಾ.ಜೋಗಿಲ ಸಿದ್ದರಾಜು, ರವರ ಸ್ನೇಹ ಮತ್ತು ಮಾರ್ಗದರ್ಶನ ನನ್ನ ಸಾಧನೆಗೆ ಸ್ಪೂರ್ತಿ ಎಂದರು. ಈ ಸಂದರ್ಭ ನನ್ನ ಅನೇಕ ವರ್ಷದ ಗೆಳೆಯರು, ಸ್ನೇಹಿತರು, ಹಿತೈಷಿಗಳನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಿಕೊಟ್ಟ ಸಂಭ್ರಮ ಸಂಸ್ಥೆಗೆ ಎಂದೆಂದೂ ಅಭಾರಿಯಾಗಿದ್ದೇನೆ ಎಂದರು.
ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ವಿನೂತನ ಕಾರ್ಯಕ್ರಮದ ಜೊತೆಗೆ ಇಂತಹ ಸಂಗೀತ ಮತ್ತು ನೃತ್ಯ ಕ್ಷೇತ್ರದ ಸಾಧಕರನ್ನು ಗೌರವಿಸುವ ಕಾಯಕದಲ್ಲಿ ನಾವು ನಿರತರಾಗುತ್ತೇವೆ ಎಂದು ಡಾ.ಜೋಗಿಲ ಸಿದ್ದರಾಜು ರವರು ತಿಳಿಸಿದರು. ರಸಿಕರ ಒತ್ತಾಯದ ಮೇರೆಗೆ ಗಾಯಕಿ ವಿದುಷಿ ಕೆ.ಎಂ.ಕುಸುಮ ರವರು ಭಕ್ತಿಸಾರದಲ್ಲಿ ತೇಲಿಸುವ ಒಂದು ಗೀತೆಗೆ ಧ್ವನಿಯಾದರು ಕೇಳುಗರು ಚಪ್ಪಾಳೆಯ ಮಳೆಸುರಿಸಿದರು. ವಿದುಷಿ ದೀಪಾ ಸುಧೀಂದ್ರ ರವರ ನಿರೂಪಣೆ ಬಹಳ ಚೆಂದವಾಗಿ ಮೂಡಿಬಂದಿತು.
ಒಟ್ಟಿನಲ್ಲಿ ಒಂದು ವಿಶೇಷ ಕಾರ್ಯಕ್ರಮಕ್ಕೆ ನಾವೆಲ್ಲಾ ಸಾಕ್ಷಿಯಾಗಿದ್ದು ಖುಷಿತಂದಿತ್ತು.
–ಎಸ್. ನಂಜುಂಡರಾವ್ ವಿಮರ್ಶಕರು.