ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ (PM Narendra Modi birthday) ಇದೇ ತಿಂಗಳ 21 ರಂದು 75 ನೇ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಭಾರತ ಕಂಡ ಅಪರೂಪದ ಪ್ರಧಾನಿಯ ಜನ್ಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಸಕಲ ಸಿದ್ಧತೆಗಳು ನಡೆದಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಗೌರವಾರ್ಥವಾಗಿ (PM Narendra Modi 75) ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ -BJYM) ಈ ವರ್ಷವೂ ಸಮಾಜಸೇವೆಯ ಅಂಗವಾಗಿ ಸೇವಾ ಪಖ್ವಾಡಾ (seva pakhwada 2025) ಹಮ್ಮಿಕೊಂಡಿದೆ. ಈ ಬಾರಿ ಸೇವಾ ಪಖ್ವಾಡಾದ ಭಾಗವಾಗಿ ನಡೆಯುವ ಬಿಜೆವೈಎಂ ನಮೋ ಯುವ ಓಟವು ನಶಾ ಮುಕ್ತ ಭಾರತಕ್ಕಾಗಿ ಎಂಬ ಘೋಷವಾಕ್ಯವನ್ನು ಹೊಂದಿದೆ. ಈ ಕುರಿತು ಬೆಂಗಳೂರು ದಕ್ಷಿಣ ಸಂಸದ ಹಾಗೂ ಭಾರತೀಯ ಜನತಾ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ (MP Tejasvi Surya) ಅವರು ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಅವರೊಂದಿಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಶ್ರೀ ಮನ್ಸುಖ್ ಮಾಂಡವೀಯ (Union Minister for Youth Affairs and Sports Mansukh Mandaviya) ಮತ್ತು ಶ್ರೀ ಮಿಲಿಂದ್ ಸೋಮನ್ (Milind Soman) ಅವರು ಉಪಸ್ಥಿತರಿದ್ದರು. ಸುದ್ದಿಗೋಷ್ಠಿ ಸಂದರ್ಭದಲ್ಲಿ ವೇದಿಕೆ ಮೇಲಿಂದಲೇ ತೇಜಸ್ವಿ ಸೂರ್ಯ ಮತ್ತು ಮಿಲಿಂದ್ ಸೋಮನ್ ಅವರು ತಮ್ಮ ದೈಹಿಕ ಸಾಮರ್ಥ್ಯವನ್ನು ಪ್ರಚುರಪಡಿಸಿದರು.
ಈ ಓಟವು ಸೆಪ್ಟೆಂಬರ್ 21, 2025 ರಂದು ನಿಗದಿಯಾಗಿದ್ದು, ದೇಶಾದ್ಯಂತ ಏಕಕಾಲದಲ್ಲಿ 100 ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಪ್ರತಿ ಕಾರ್ಯಕ್ರಮದಲ್ಲಿ ತಲಾ ಕನಿಷ್ಠ 10,000 ಮಂದಿ ಭಾಗವಹಿಸುವ ಗುರಿ ಹೊಂದಿದೆ. ದಶಕಗಳ ಕಾಲದ ಫಿಟ್‌ನೆಸ್ ಐಕಾನ್, ಬಾಲಿವುಡ್ ನಟ ಮಿಲಿಂದ್ ಸೋಮನ್ ಅವರು ದೇಶಾದ್ಯಂತ ಯುವಕರನ್ನು ತಮ್ಮ ಫಿಟ್‌ನೆಸ್ ಮತ್ತು ಅಥ್ಲೆಟಿಕ್ ಸಾಮರ್ಥ್ಯಗಳಿಂದ ಪ್ರೇರೇಪಿಸುವ ರಾಷ್ಟ್ರೀಯ ಓಟದ ರಾಯಭಾರಿಯಾಗಿದ್ದಾರೆ.
ಈ ಓಟವು 10 ಲಕ್ಷಕ್ಕೂ ಹೆಚ್ಚು ಯುವಕರನ್ನು ತೊಡಗಿಸಿಕೊಳ್ಳುತ್ತದೆ ಮತ್ತು ಭಾರತದ ಅತಿದೊಡ್ಡ ಯುವ ಫಿಟ್‌ನೆಸ್ ಮತ್ತು ಜಾಗೃತಿ ಅಭಿಯಾನದ ಹಿಂದಿನ ಪ್ರೇರಕ ಶಕ್ತಿಯಾಗಿ ಬಿಜೆವೈಎಂ ತನ್ನ ಪಾತ್ರವನ್ನು ಬಲಪಡಿಸುತ್ತದೆ ಎಂದು BJYM ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.
ನಮ್ಮ ರಾಷ್ಟ್ರದ ಭವಿಷ್ಯವು ಯುವಜನತೆಯನ್ನು ಅವಲಂಬಿಸಿದೆ. ಹಾಗಾಗಿ ಈ ಆಂದೋಲನವು ಬಿಜೆವೈಎಂ ಧ್ಯೇಯಕ್ಕೆ ಅನುಗುಣವಾಗಿ ಆರೋಗ್ಯಕರ ಮತ್ತು ಸದೃಢ ಭಾರತ ನಿರ್ಮಾಣಕ್ಕೆ ಅನುಗುಣವಾಗಿದೆ ಎಂದು ತೇಜಸ್ವಿ ತಿಳಿಸಿದರು.