ಕೇಂದ್ರ ಯೋಜನೆಗಳು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಅನ್ವೇಷಿಸಲು ಕರ್ನಾಟಕ ಪ್ರವಾಸ ಆರಂಭಿಸಿದ ಈಶಾನ್ಯ ರಾಜ್ಯಗಳ ಮಾಧ್ಯಮ ನಿಯೋಗ
ಮೇಘಾಲಯ ಮತ್ತು ತ್ರಿಪುರಾ (Meghalaya – Tripura) ಈಶಾನ್ಯ ರಾಜ್ಯಗಳ 14 ಸದಸ್ಯರ ಮಾಧ್ಯಮ ನಿಯೋಗವು, (Media delegation) ಪ್ರಮುಖ ಕೇಂದ್ರ ಸರ್ಕಾರಿ ಸಂಸ್ಥೆಗಳು, ಪ್ರಮುಖ ಅಭಿವೃದ್ಧಿ ಯೋಜನೆಗಳು ಮತ್ತು ರಾಜ್ಯದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರತ್ಯಕ್ಷವಾಗಿ ತಿಳಿದುಕೊಳ್ಳುವ ಉದ್ದೇಶದಿಂದ ಇಂದಿನಿಂದ ಕರ್ನಾಟಕ ಪ್ರವಾಸವನ್ನು (Karnataka Tour) ಕೈಗೊಂಡಿದೆ.
ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿರುವ ವಾರ್ತಾ ಶಾಖೆ (ಪಿಐಬಿ) ಬೆಂಗಳೂರು ಸಹಯೋಗದೊಂದಿಗೆ ಪಿಐಬಿ ಶಿಲ್ಲಾಂಗ್ ಆಯೋಜಿಸಿರುವ ಈ ಉಪಕ್ರಮವು, ಆ ಪ್ರದೇಶದ ಪತ್ರಕರ್ತರಿಗೆ ರಾಷ್ಟ್ರೀಯ ಪ್ರಮುಖ ಸಂಸ್ಥೆಗಳೊಂದಿಗೆ ನೇರವಾಗಿ ತೊಡಗಿಸಿಕೊಳ್ಳಲು ಮತ್ತು ಅಲ್ಲಿನ ಸುದ್ದಿಚಿತ್ರಣಗಳನ್ನು ತಮ್ಮ ಓದುಗರು ಮತ್ತು ಪ್ರೇಕ್ಷಕರಿಗಾಗಿ ಬಿತ್ತರಿಸಲು ಅನುವು ಮಾಡಿಕೊಡುವಂತೆ ವಿನ್ಯಾಸಗೊಳಿಸಲಾಗಿದೆ.
ಈ ನಿಯೋಗದಲ್ಲಿ ಮೇಘಾಲಯದ 11 ಮತ್ತು ದಕ್ಷಿಣ ತ್ರಿಪುರಾದ 2 ಪತ್ರಕರ್ತರು ಸೇರಿದ್ದಾರೆ. ಅವರು ಮುದ್ರಣ, ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಮಾಧ್ಯಮಗಳನ್ನು ಪ್ರತಿನಿಧಿಸುತ್ತಿದ್ದಾರೆ. ಇವರಲ್ಲಿ ಮೇಘಾಲಯ ಟೈಮ್ಸ್, ಈಸ್ಟ್ ಮೊಜೊ, ಯು ಪೈಟ್ನೊಗಾರ್, ಟಿವಿ7 ನ್ಯೂಸ್, ಎಸ್‍ಪಿ ನ್ಯೂಸ್ ಏಜೆನ್ಸಿ, ಮೇಘಾಲಯ ಮಾನಿಟರ್, ಮಾವ್‍ಫಾರ್, ಹೈಲ್ಯಾಂಡ್ ಪೋಸ್ಟ್, ಹಿಂದೂಸ್ಥಾನ್ ಟೈಮ್ಸ್, ಪಿಟಿಐ, ದೈನಿಕ ಸಂಬಾದ್ ಮತ್ತು ತ್ರಿಪುರಾ ದರ್ಪಣನಂತಹ ಪ್ರಮುಖ ಸುದ್ದಿ ಮಾಧ್ಯಮಗಳು ಸೇರಿವೆ. ಪಿಐಬಿ ಶಿಲ್ಲಾಂಗ್‌ನ ಸಹಾಯಕ ನಿರ್ದೇಶಕ ಶ್ರೀ ಗೋಪಾಜಿತ್ ದಾಸ್ ಅವರು ನಿಯೋಗದ ಅಧಿಕಾರಿಯಾಗಿ ಜೊತೆಗಿದ್ದು, ಪ್ರವಾಸವನ್ನು ಸಂಯೋಜಿಸುತ್ತಿದ್ದಾರೆ.
ಪ್ರವಾಸದ ಸಮಯದಲ್ಲಿ, ನಿಯೋಗವು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ – ISRO), ಭಾರತೀಯ ವಿಜ್ಞಾನ ಸಂಸ್ಥೆ (IISc), ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL), ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಸೇರಿದಂತೆ ಪ್ರಮುಖ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಸ್ಥೆಗಳಿಗೆ ಭೇಟಿ ನೀಡಲಿದೆ. ಬಾಹ್ಯಾಕಾಶ ಸಂಶೋಧನೆ, ವೈಜ್ಞಾನಿಕ ಆವಿಷ್ಕಾರ ಮತ್ತು ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಭಾರತದ ಪ್ರಗತಿಯನ್ನು ಪ್ರದರ್ಶಿಸುವುದು ಈ ಭೇಟಿಗಳ ಗುರಿಯಾಗಿದೆ.
ಸಂಸ್ಥೆಗಳಿಗೆ ಭೇಟಿ ನೀಡುವುದರ ಜೊತೆಗೆ, ಮೈಸೂರು ಅರಮನೆಯಂತಹ ಸ್ಥಳಗಳಿಗೆ ವಿಶೇಷ ಗಮನ ನೀಡುವ ಮೂಲಕ ಬೆಂಗಳೂರು, ಮೈಸೂರುಗಳಲ್ಲಿನ ಸಾಂಸ್ಕೃತಿಕ ಮತ್ತು ಪರಂಪರೆಯ ಅನುಭವಗಳನ್ನು ಸಹ ಪ್ರವಾಸದಲ್ಲಿ ಸೇರಿಸಲಾಗಿದೆ. ಇದರಿಂದ ನಿಯೋಗವು ಕರ್ನಾಟಕದ ಶ್ರೀಮಂತ ಸಂಪ್ರದಾಯ ಮತ್ತು ವಾಸ್ತುಶಿಲ್ಪದ ಪರಂಪರೆಯನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗುತ್ತದೆ. ಈ ಪ್ರವಾಸವು ಮೈಸೂರಿನಲ್ಲಿರುವ ಕರ್ನಾಟಕ ರೇಷ್ಮೆ ಕೈಗಾರಿಕೆಗಳ ನಿಗಮ ನಿಯಮಿತಕ್ಕೆ ಭೇಟಿ ನೀಡುವುದು, ಕೃಷಿ ಮತ್ತು ಸಂಬಂಧಿತ ವಲಯದ ಚಟುವಟಿಕೆಗಳನ್ನು ವೀಕ್ಷಿಸಲಿದೆ. ಮೈಸೂರಿನ ಬುಡಕಟ್ಟು ಗ್ರಾಮಗಳಿಗೆ ಭೇಟಿ ನೀಡಿ, ಬುಡಕಟ್ಟು ಸಮುದಾಯಗಳೊಂದಿಗೆ ಸಂವಾದ ನಡೆಸುವುದರ ಮೂಲಕ ವಲಯವಾರು ಚಟುವಟಿಕೆಗಳ ಮಾಹಿತಿ ಪಡೆಯಲಿದೆ.
ಪ್ರವಾಸದ ಸಮಯದಲ್ಲಿ ನಿಗದಿಪಡಿಸಿದ ಸಾಮಾಜಿಕ ಸಂವಾದಗಳ ಭಾಗವಾಗಿ, ಮಾಧ್ಯಮ ನಿಯೋಗವು ಕರ್ನಾಟಕದ ಮಾನ್ಯ ರಾಜ್ಯಪಾಲರನ್ನು ಸೌಜನ್ಯಯುತವಾಗಿ ಭೇಟಿ ಮಾಡಲಿದೆ.
ಈ ಮಾಧ್ಯಮ ಪ್ರವಾಸವು ಪ್ರಾದೇಶಿಕ ನಿರೂಪಣೆಗಳನ್ನು ಜೋಡಿಸುವ, ರಾಷ್ಟ್ರೀಯ ಏಕೀಕರಣ ಉತ್ತೇಜಿಸುವ ಮತ್ತು ದೇಶಾದ್ಯಂತದ ಅಭಿವೃದ್ಧಿ ಸುದ್ದಿಕಥೆಗಳ ಸಮತೋಲಿತ ಮಾಧ್ಯಮ ವ್ಯಾಪ್ತಿಯನ್ನು ಖಚಿತಪಡಿಸಿಕೊಳ್ಳಲು ಪಿಐಬಿಯ ಪ್ರಮುಖ ಮಾಹಿತಿ ತಲುಪಿಸುವ ಪ್ರಯತ್ನಗಳ ಭಾಗವಾಗಿದೆ. ಈ ಭೇಟಿಯಿಂದ ಪಡೆದ ಮಾಹಿತಿಗಳು, ಭಾಗವಹಿಸಿರುವ ಪತ್ರಕರ್ತರು ತಮ್ಮ ಪ್ರೇಕ್ಷಕರಿಗಾಗಿ ಗಾಢ ಮತ್ತು ಮಾಹಿತಿಪೂರ್ಣ ವರದಿಗಾರಿಕೆ ಮಾಡಲು ಸಹಾಯ ಮಾಡುತ್ತದೆ.





















