ರಾಯಚೂರು : ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳ ೩೫೪ನೇ ಆರಾಧನಾ ಮಹೋತ್ಸವಕ್ಕೆ ಶ್ರೀಮಠದ ಪೀಠಾಧಿಪತಿಯಾದ ಸುಬುದೇಂಧ್ರತೀರ್ಥ ಸ್ವಾಮೀಜಿ ಧ್ವಜಾರೋಹಣ ನೆರವೇರಿಸುವ ಮೂಲಕ ಶುಕ್ರವಾರ ಸಂಜೆ ಚಾಲನೆ ನೀಡಿದರು.
ಇದಕ್ಕೂ ಪೂರ್ವದಲ್ಲಿ ರಾಯರ ಮೂಲವೃಂದಾವನಕ್ಕೆ ಪೂಜೆ ಸಲ್ಲಿಸಿದರು. ನಂತರ ಗೋಪೂಜೆ, ಅಶ್ವಪೂಜೆ ನೆರವೇರಿಸಿ, ಯೋಗೇಂದ್ರ ಮಂಟಪದಲ್ಲಿ ದೀಪ ಪ್ರಜ್ವಲಿಸುವ ಮೂಲಕ ಸಪ್ತರಾತ್ರೋತ್ಸವಕ್ಕೆ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿ, ಇಂದಿನಿಂದ ಏಳು ದಿನಗಳ ಕಾಲ ಸಪ್ತರಾತ್ರೋತ್ಸವ ಅತ್ಯಂತ ವೈಭವದಿಂದ ಜರುಗಲಿದೆ ಎಂದರು.
ದೇಶವಿದೇಶಗಳಿಂದ ಲಕ್ಷಾಂತರ ಭಕ್ತರು ಆಗಮಿಸಲಿದ್ದು ಅವರಿಗೆಲ್ಲ ವಸತಿ, ಪ್ರಸಾದದ ವ್ಯವಸ್ಥೆ ಮಾಡಲಾಗುತ್ತಿದೆ. ಆಗಮಿಸುವ ಭಕ್ತರು ಗುರುರಾಘವೇಂದ್ರರ ಕೃಪೆಗೆ ಪಾತ್ರರಾಗಬೇಕೆಂದು ಹೇಳಿದರು.
ಪ್ರಥಮದಿನದ ಅಂಗವಾಗಿ ಮಾಲೂರಿನ ಪ್ರಸನ್ನ ಕೊರ್ತಿ ದಾಸವಾಣಿ ಪ್ರಸ್ತುತ ಪಡಿಸಿದರು. ಧರ್ಮಾವರಂನ ಲಲಿತಾ ಕಲಾನಿಕೇತನ ಇವರು ಕುಚಪುಡಿ ಸೇವೆ ಸಲ್ಲಿಸಿದರು.
ನಂತರ ರಜತ ರಥೋತ್ಸವ, ಸುವರ್ಣ ರಥೋತ್ಸವ, ಆನೆ ಅಂಬಾರಿ ಸೇವೆ ಜರುಗಿತು. ಮಠದ ಕಂಬಗಳಿಗೆ ಸುವರ್ಣ ಲೇಪಿತ ಕವಚಗಳನ್ನು ಅಳವಡಿಸಲಾಯಿತು.
೦-೦-೦-೦