ವಿಜಯಪುರ, ಜುಲೈ 27 – ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬಿಎಲ್‌ಡಿ ಸಂಸ್ಥೆಯ ಕಾರ್ಯಕ್ರಮದಲ್ಲಿ ಮಾತನಾಡುವಾಗ, ತಮ್ಮ ರಾಜಕೀಯ ಜೀವನದಲ್ಲಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಅವಕಾಶ ಕೈ ತಪ್ಪಿದ ದುಃಖವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದರು.
1999 ರಲ್ಲಿ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದ್ದಾಗ ಅದು ಕೈ ತಪ್ಪಿದ್ದು, “ನಾನು ವಿರೋಧ ಪಕ್ಷದ ನಾಯಕನಾಗಿ ಹೋರಾಟ ಮಾಡುತ್ತಿದ್ದೆ. ಆದರೆ ಕೇವಲ ನಾಲ್ಕು ತಿಂಗಳ ಹಿಂದೆ ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿ ಆಯ್ಕೆಯಾದರು,” ಎಂದು ಅವರು ಹೇಳಿದರು.
“ನನ್ನ ಸೇವೆ ನೀರಲ್ಲಿ ಹೋಯಿತು” ಎಂಬ ಖರ್ಗೆಯ ವಾಕ್ಯ:
ಖರ್ಗೆ ಮುಂದುವರೆದು, “ನಾನು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಅಪಾರ ಶ್ರಮಪಟ್ಟೆ. ಆದರೆ ನನ್ನ ಸೇವೆ ನೀರಲ್ಲಿ ಹೋಯಿತು,” ಎಂದು ಸ್ವಾಮೀಜಿಗಳ ಸಮ್ಮುಖದಲ್ಲಿ ಭಾವುಕರಾಗಿ ಹೇಳಿದರು. “ನಾನು ಬ್ಲಾಕ್ ಅಧ್ಯಕ್ಷನಿಂದ ಆರಂಭಿಸಿ ಇಂದು ಎಐಸಿಸಿ ಅಧ್ಯಕ್ಷನಾಗಿದ್ದೇನೆ. ನಾನು ಅಧಿಕಾರದ ಬೆನ್ನು ಹತ್ತಿ ಓಡಲಿಲ್ಲ, ಅದು ನನ್ನ ಬಳಿಗೆ ಸ್ವತಃ ಬಂದಿದೆ. ಇದು ನನ್ನ ಶ್ರಮದ ಫಲ,” ಎಂದರು.
ರಜಾಕರ ಹಾವಳಿಯ ಹಿನ್ನಲೆ ನೆನೆಸಿದ ಖರ್ಗೆ:
ಖರ್ಗೆ ಅವರು ತಮ್ಮ ಬಾಲ್ಯದ ಭೀತಿದಾಯಕ ಅನುಭವವನ್ನೂ ಹಂಚಿಕೊಂಡರು. “ರಜಾಕರ ಹಾವಳಿಯ ಸಮಯದಲ್ಲಿ ನನ್ನ ತಾಯಿ, ತಂಗಿ ಮತ್ತು ದೊಡ್ಡಪ್ಪ ಅವರನ್ನು ಕಳೆದುಕೊಂಡೆ. ನಮ್ಮ ತಂದೆ ನನ್ನನ್ನು ಪಣೆ ಇಲ್ಲಿನ ಪುಣೆಯ ಮಹಾರ್ ರೆಜಿಮೆಂಟ್‌ನಲ್ಲಿದ್ದ ಚಿಕ್ಕಪ್ಪನ ಮನೆಗೆ ಕಳುಹಿಸಿದರು. ಸ್ವಾತಂತ್ರ್ಯ ನಂತರ ಅವರು ಅಲ್ಲಿಂದ ತೆರಳಿದಾಗ ನಾವು ಗುಲ್ಬರ್ಗಾಕ್ಕೆ ಬಂದು ನೆಲೆಸಬೇಕಾಯಿತು,” ಎಂದು ಅವರು ಹೇಳಿದರು.