ರಾಜ್ಯೋತ್ಸವದ (Rajyhothsava) ತಿಂಗಳು ಒಂದು ಬಗೆಯ ಸಂಭ್ರಮವನ್ನು ತರುತ್ತದೆ. ಜೊತೆಯಲ್ಲೇ ಕನ್ನಡದ ಸಮಸ್ಯೆಗಳು ಧುತ್ತೆಂದು ಬಂದು ನಿಲ್ಲುತ್ತವೆ. ಹಲವು ರಂಗಗಳಲ್ಲಿ ಕನ್ನಡ ಹಿಂದೆ ಬೀಳುತ್ತಿದೆ. ಕನ್ನಡಕ್ಕೆ ಸಿಕ್ಕ ಶಾಸ್ತ್ರೀಯ ಭಾಷೆ ವಿಚಾರ ‘ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ’ ಅನ್ನುವಂತಾಗಿದೆ, ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ ಕುಸಿಯುತ್ತಿದೆ. ಶಾಲಾ ಶಿಕ್ಷಣದಲ್ಲಿ ಕನ್ನಡಕ್ಕೆ ಆದ್ಯತೆ ಇಲ್ಲವಾಗಿದೆ, ಉನ್ನತ ಅಧ್ಯಯನದಲ್ಲಿ ಕನ್ನಡದ ವಿದ್ಯಾರ್ಥಿಗಳ ಸಂಖ್ಯೆ ಕಡಮೆಯಾಗುತ್ತಿರುವುದು, ತಂತ್ರಜ್ಞಾನದ (Technology) ಕ್ಷೇತ್ರದಲ್ಲಿ ಭಾಷೆ, (Language) ಸಂಸ್ಕೃತಿ (Culture) ಇನ್ನೂ ಸರಿಯಾದ ಸ್ಥಾನ ಪಡೆದುಕೊಳ್ಳದಿರುವುದು ಹೀಗೆ ಸಮಸ್ಯೆಗಳ ಸರಮಾಲೆಯೇ ಇದೆ. ಎಲ್ಲದಕ್ಕೂ ಪರಿಹಾರ ಕೂಡಲೇ ದೊರಕಿಬಿಡುವುದಿಲ್ಲ. ಅವುಗಳ ಸಂಬAಧವಾಗಿ ಏನು ಮಾಡಬೇಕು, ಏನು ಮಾಡಬಹುದು ಎಂಬುದನ್ನು ಚಿಂತಿಸಲು ರಾಜ್ಯೋತ್ಸವ ವೇದಿಕೆಯಾಗಲಿ ಎಂದು ಕನ್ನಡ ಗಣಕ ಪರಿಷತ್ತಿನ ಕಾರ್ಯದರ್ಶಿ ಜಿ.ಎನ್. ನರಸಿಂಹಮೂರ್ತಿ ಅವರು ಕನ್ನಡ ಗೆಳೆಯರ ಬಳಗವು (Kannada Geleyara Balaga) ರಾಜ್ಯೋತ್ಸವದಂದು ನಡೆಸಿದ ಕವಿ ಪ್ರತಿಮೆಗಳಿಗೆ ಮಾಲಾರ್ಪಣೆ ಮತ್ತು ಕನ್ನಡ ಚಿಂತನೆ ಕಾರ್ಯಕ್ರಮದಲ್ಲಿ ನುಡಿದರು.
ಇಷ್ಟೆಲ್ಲ ಸಮಸ್ಯೆಗಳಿವೆ, ಆದರೆ ಎಲ್ಲವೂ ನಿರಾಶಾದಾಯಕವಾಗೇನೂ ಇಲ್ಲ. ಆಡಳಿತ ಭಾಷೆಯಾಗಿ ಕನ್ನಡ ಸ್ವಲ್ಪಮಟ್ಟಿಗೆ ಸ್ಥಿರವಾಗಿದೆ. ಅನೇಕ ಉತ್ಸಾಹಿಗಳು ಕನ್ನಡೇತರರಿಗೆ ನೇರ ತರಗತಿಗಳ ಅಥವಾ ಅಂತರಜಾಲದ ಮೂಲಕ ಕನ್ನಡವನ್ನು ಕಲಿಸುತ್ತಿದ್ದಾರೆ. ಬೇರೆ ದೇಶಗಳಲ್ಲಿ ಹಲವೆಡೆ ಶಿಕ್ಷಣದಲ್ಲಿ ಕನ್ನಡ ಒಂದು ವಿಷಯವಾಗಿದೆ. ಬೆಂಗಳೂರಿನಲ್ಲಿ ಕನ್ನಡದ ನಾಮಫಲಕಗಳು ಕಾಣಬರುತ್ತಿವೆ. ತಂತ್ರಜ್ಞಾನ ಕ್ಷೇತ್ರದಲ್ಲಿ ನಿಧಾನಕ್ಕಾದರೂ ಕನ್ನಡ ಜಾಗ ಪಡೆಯುತ್ತಿದೆ. ಗತಿ ಪಡೆದುಕೊಳ್ಳಬೇಕಷ್ಟೆ. ಎಲ್ಲ ಕನ್ನಡಿಗರೂ ಇನ್ನಷ್ಟು ಸ್ವಾಭಿಮಾನಿಗಳಾಗಬೇಕು ಎಂಬ ಹಳೆಯ ಹೇಳಿಕೆಯನ್ನೇ ಇಂದೂ ಗಂಭಿರವಾಗಿ ತೆಗೆದುಕೊಳ್ಳಬೇಕಾಗಿದೆ ಎಂದರು.
ಏಳು ದಶಕಗಳಲ್ಲಿ ಆಗಿರುವ ನಾಡು–ನುಡಿಯ ಕೆಲಸಗಳ ಬಗ್ಗೆ ಸರ್ಕಾರ ಸಮೀಕ್ಷೆ ನಡೆಸಲಿ
ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದು ೭೦ ವರ್ಷಗಳಾಗುತ್ತಿರುವ ಈ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಈ ಏಳು ದಶಕಗಳಲ್ಲಿ ಆಗಿರುವ ಕೆಲಸಗಳ ಬಗ್ಗೆ ಸಮೀಕ್ಷೆ ನಡೆಸಲು ಮತ್ತು ಆಗಬೇಕಾದ ಕೆಲಸಗಳನ್ನು ಸೂಚಿಸಲು ಸಮಿತಿ ರಚಿಸುವ ಅಗತ್ಯವಿದೆ. ಹಾಗೇ ಕೇಂದ್ರ ಸರ್ಕಾರ ಭಾಷಾವಾರು ಪ್ರಾಂತಗಳ ಬಗ್ಗೆ ಮೌಲ್ಯಮಾಪನ ಮಾಡಲು ಇದು ಸಕಾಲ ಎಂದು ಪ್ರಾಸ್ತಾವಿಕ ಮಾತುಗಳನ್ನಾಡಿದ ರಾ.ನಂ. ಚಂದ್ರಶೇಖರ ಹೇಳಿ, ರಾಜ್ಯದಲ್ಲಿರುವ ಕೇಂದ್ರ ಮತ್ತು ಖಾಸಗೀ ಉದ್ದಿಮೆ/ಸಂಸ್ಥೆ/ಬ್ಯಾAಕ್ ಮುಂತದೆಡೆಗಳಲ್ಲಿ ಉದ್ಯೋಗದಲ್ಲ್ಲಿ ಕನ್ನಡಿಗರಿಗೆ(ಸ್ಥಳೀಯರಿಗೆ) ನ್ಯಾಯಯುತ ಪಾಲು ದೊರೆಯಲು ಪರಿಷ್ಕೃತ ಮಹಿಷಿ ವರದಿಯನ್ನು ಚಳಿಗಾಲದ ಅಧಿವೇಶನದಲ್ಲಿ ಮಂಡಿಸಿ ಕಾಯಿದೆ ರೂಪಿಸಿ, ವರದಿಗೆ ಕಾನೂನು ಬಲ ಕೊಟ್ಟು ಕನ್ನಡಿಗರಿಗೆ ಬದುಕಿಗೆ ಭದ್ರತೆ ಒದಗಿಸ ಬೇಕು ಎಂದು ಆಗ್ರಸಿದರು. ಕನ್ನಡಿಗರು ಎಪ್ಪತ್ತರ ನೆನಪಿನಲ್ಲಿ ‘ಮನೆ ಮನೆಯಲ್ಲಿ ಕನ್ನಡ ಕಲರವ’ ಕಾರ್ಯಕ್ರಮ ನಡೆಸುವಂತೆ ಮನವಿ ಮಾಡಿದರು.
ಬಸವನಗುಡಿ ನ್ಯಾಷನಲ್ ಸ್ಕೂಲ್ ವೃತ್ತದಲ್ಲಿರುವ ಬಿ.ಎಂ.ಶ್ರೀ ಪ್ರತಿಮೆ ಎದುರು ನಡೆದ ಕನ್ನಡ ಚಿಂತನ ಸಭೆಯಲ್ಲಿ ಕ.ರಾ.ರ.ಸಾ.ಸಂ ಕನ್ನಡ ಕ್ರಿಯಾ ಸಮಿತಿ ಖÀಜಾಂಚಿ ಕೆ.ಎಸ್.ಎಂ. ಹುಸೇನ್ ಅವರನ್ನು ಸನ್ಮಾನಿಸಲಾಯಿತು. ಬಾ.ಹ. ಉಪೇಂದ್ರ ನಿರೂಪಿಸಿದ ಕಾರ್ಯಕ್ರಮದಲ್ಲಿ ಬಿ.ವಿ. ರವಿಕುಮಾರ್ ಸ್ವಾಗತಿಸಿದರು ಮತ್ತು ಮ. ಚಂದ್ರಶೇಖರ ವಂದಿಸಿದರು. ಸಭೆಗೆ ಮುನ್ನ ತೀ.ನಂ.ಶ್ರೀ. ಪ್ರತಿಮೆಗೆ ವಿಶ್ವನಾಥ ಸಪಲ್ಯ, ಕು.ವೆಂ.ಪು. ಪ್ರತಿಮೆಗೆ ಯೋಗಶ್ರೀ ಎಚ್.ಜಿ,, ಬಿ.ಎಂ.ಶ್ರೀ., ಪ್ರತಿಮೆಗೆ ಪ್ರೊ, ಭಾಗ್ಯಲಕ್ಷ್ಮಿ ಪದಕಿ, ಎಚ್.ಎನ್. ಪ್ರತಿಮೆಗೆ ಕೇಂದ್ರೀಯ ಸದನ ಕನ್ನಡ ಸಂಘದ ಕೆಂಪಯ್ಯ ಅವರುಗಳು ಮಾಲಾರ್ಪಣೆ ಮಾಡಿದರು. ಸಭೆಯಲ್ಲಿ ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ ವ.ಚ. ಚನ್ನೇಗೌಡ, ಕನ್ನಡ ಗೆಳೆಯರ ಬಳಗದ ಖಜಾಂಚಿ ಎಚ್.ಎನ್ ರಮೇಶ್ ಬಾಬು ಮತ್ತು ಹಲವು ಕನ್ನಡ ಸಂಘಟನೆಗಳ ಕರ್ಯಕರ್ತರು ಇದ್ದರು.





















