ಕರ್ನಾಟಕ ಬಂಜಾರ ಚಲನಚಿತ್ರ ಮಂಡಳಿಯು (Karnataka Banjara Film Board) ಇಂದು ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿತು. ಬೆಂಗಳೂರಿನಲ್ಲಿ ಭಾನುವಾರ ನಡೆದ ಅದ್ದೂರಿ ಸಮಾರಂಭದಲ್ಲಿ ಮಂಡಳಿಯು ಉದ್ಘಾಟನೆಗೊಂಡಿತು. ಕರ್ನಾಟಕ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ (Karnataka Banjara Cultural & Language Academy) ಅಧ್ಯಕ್ಷರಾದ ಡಾ. ಎ. ಆರ್. ಗೋವಿಂದಸ್ವಾಮಿ (Dr. Govinda Swamy AR) ಅವರು ಮಂಡಳಿಯನ್ನು ಉದ್ಘಾಟಿಸಿದರು. ಮಂಡಳಿಯ ಉದ್ಘಾಟನಾ ಸಮಾರಂಭದ ಅಂಗವಾಗಿ ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು.
ಸಮಾರಂಭದಲ್ಲಿ ಮಾತನಾಡಿದ ಗೋವಿಂದಸ್ವಾಮಿ ಅವರು ಹೊಸದಾಗಿ ಜಾರಿಗೆ ಬಂದಿರುವ ಕರ್ನಾಟಕ ಬಂಜಾರ ಚಲನಚಿತ್ರ ಮಂಡಳಿಗೆ ಶುಭ ಕೋರಿದರು. ಭಾರತೀಯ ಕರ್ನಾಟಕ ಬಂಜಾರ ಸಿನಿಮಾ ಆರಂಭವಾಗಿ ರಜತ ಮಹೋತ್ಸವ ಕಾಣುತ್ತಿದೆ. ಬಂಜಾರ ಸಾಹಿತ್ಯ ಹಾಗೂ ಸಂಸ್ಕೃತಿ ಬೆಳವಣಿಗೆಗೆ ಅದ್ಭುತವಾದ ಅವಕಾಶವಿದ್ದು ಎಲ್ಲಾ ಕಲಾವಿದರು, ತಂತರಜ್ಞರು ಈ ಅವಕಾಶ ಉಪಯೋಗಿಸಿಕೊಂಡು ಸಾಂಸ್ಕೃತಿಕ ರಾಯಭಾರಿಗಳಾಗಿ ಕೆಲಸ ಮಾಡಬೇಕು ಎಂದು ಕರೆ ಕೊಟ್ಟರು.
ಇಂದಿನ ಡಿಜಿಟಲ್ ಯುಗದಲ್ಲಿ ಹಾಗೂ ಕೃತಿಕ ಬುದ್ಧಿಮತ್ತೆ ಸಮ್ಮುಖದಲ್ಲಿ ನಾವಿದ್ದು, ಇದನ್ನು ನಾವು ಸಾಮಾಜಿಕ ಹಾಗೂ ಜನಪರ ಮಾಧ್ಯಮದ ಯುಗವಾಗಿಸಬೇಕಾದ ಅನಿವಾರ್ಯವಿದೆ. ಬಂಜಾರ ಅಕಾಡೆಮಿ ವಿವಿಧ ಕ್ಷೇತ್ರಗಳಲ್ಲಿ ಕಾರ್ಯಾಗಾರಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಮುಂದೆ ಆಯೋಜಿಸಲಿದೆ. ಬಂಜಾರ ಸಮುದಾಯದವರು (Banjara community) ಈ ಅವಕಾಶವನ್ನು ಬಳಸಿಕೊಂಡು ಸಾಂಸ್ಕೃತಿಕವಾಗಿ ಹಾಗೂ ಆರ್ಥಿಕವಾಗಿ ಪ್ರಬಲವಾಗಿ ಬೆಳೆಯಬೇಕು ಎಂದು ಗೋವಿಂದಸ್ವಾಮಿ ಆಶಿಸಿದರು.
ಬಂಜಾರ ಸಿನಿಮಾ ಹಾಗೂ ತಂತ್ರಜ್ಞರಿಗೆ ಪ್ರತ್ಯೇಕ ಸಬ್ಸಿಡಿ, ರಾಜ್ಯ ಪ್ರಶಸ್ತಿ ಹಾಗು ಬಂಜಾರ ಚಲನಚಿತ್ರಗಳ ಉತ್ಸವಕ್ಕೆ ಸೂಕ್ತ ಪ್ರಮಾಣದಲ್ಲಿ ಬಜೆಟ್ ಒದಗಿಸಿ, ಸಹಕಾರ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೋರುವುದಾಗಿ ಗೋವಿಂದಸ್ವಾಮಿ ತಿಳಿಸಿದರು.
ಮಂಡಳಿಯ ಅಧ್ಯಕ್ಷರಾದ ಜೆ ಮಂಜುನಾಥ್, ಎನ್ ಅನಂತ ನಾಯ್ಕ್ ಪದಾಧಿಕಾರಿಗಳಾದ ಡಿ ಆರ್ ಗಿರೀಶ್, ವಿ ಚಂದ್ರಕಾಂತ್, ಆರ್ ಎನ್ ಶಶಿಕುಮಾರ್, ಎಸ್ ರಂಗನಾಥ್ ನಾಯ್ಕ್, ಶಶಿಕುಮಾರ್, ಬಂಜಾರ ನಟಿ ಅನು, ಕರಿಷ್ಮಾ, ಭೈರವಿ ಮತ್ತಿತತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.