Live Stream

[ytplayer id=’22727′]

| Latest Version 8.0.1 |

Bengaluru Urban

ಕಲಾಸಿಪಾಳ್ಯ ಬಸ್ ನಿಲ್ದಾಣ ಮರು ನಾಮಕರಣ “ಜನೋಪಕಾರಿ ಶ್ರೀ ದೊಡ್ಡಣ್ಣ ಶೆಟ್ಟರ ಕಲಾಸಿಪಾಳ್ಯ ಬಸ್ ನಿಲ್ದಾಣ”

ಕಲಾಸಿಪಾಳ್ಯ ಬಸ್ ನಿಲ್ದಾಣ ಮರು ನಾಮಕರಣ “ಜನೋಪಕಾರಿ ಶ್ರೀ ದೊಡ್ಡಣ್ಣ ಶೆಟ್ಟರ ಕಲಾಸಿಪಾಳ್ಯ ಬಸ್ ನಿಲ್ದಾಣ”

ಬೆಂಗಳೂರು, ಜುಲೈ 26 (ಕರ್ನಾಟಕ ವಾರ್ತೆ):  ಸಮಾಜಕ್ಕೆ ಶ್ರೀ ದೊಡ್ಡಣ್ಣ ಶೆಟ್ಟರು ನೀಡಿರುವ ಕೊಡುಗೆ ಅಪಾರವಾಗಿದ್ದು, ಅವರ ಕೊಡುಗೆಯನ್ನು ಪರಿಗಣಿಸಿ, ಕಲಾಸಿಪಾಳ್ಯದಲ್ಲಿ ನಿರ್ಮಿಸಿರುವ ಬಸ್ ನಿಲ್ದಾಣಕ್ಕೆ “ಜನೋಪಕಾರಿ ಶ್ರೀ ದೊಡ್ಡಣ್ಣ ಶೆಟ್ಟರ ಕಲಾಸಿಪಾಳ್ಯ ಬಸ್ ನಿಲ್ದಾಣ” ಎಂದು ಮರು ನಾಮಕರಣ ಮಾಡಲಾಗಿದೆ ಎಂದು ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಕಲಾಸಿಪಾಳ್ಯ ಬಸ್ ನಿಲ್ದಾಣಕ್ಕೆ “ಜನೋಪಕಾರಿ ಶ್ರೀ ದೊಡ್ಡಣ್ಣಶೆಟ್ಟರ ಕಲಾಸಿಪಾಳ್ಯ ಬಸ್ ನಿಲ್ದಾಣ” ಎಂದು ಮರುನಾಮಕರಣಗೊಳಿಸುವ ನಾಮಫಲಕ ಅನಾವರಣಗೊಳಿಸಿ ಮಾತನಾಡಿದ ಅವರು, ಜನೋಪಕಾರಿ ಶ್ರೀ ದೊಡ್ಡಣ್ಣಶೆಟ್ಡರ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಧರ್ಮಸಂಸ್ಥೆಯನ್ನು 1906ರಲ್ಲಿಯೇ ಸ್ಥಾಪಿಸಿ, ಸಮಾಜದಲ್ಲಿನ ಬಡವರು, ಹಿಂದುಳಿದವರು ಎಂಬ ಭೇದ-ಭಾವವಿಲ್ಲದೇ ಸರ್ವ ಜನಾಂಗಕ್ಕೂ ಸಮಾನ ಶಿಕ್ಷಣವನ್ನು ನೀಡಬೇಕೆಂಬ ದೂರದೃಷ್ಟಿಯನ್ನು ಇಟ್ಟುಕೊಂಡು, ಶಾಲಾ ಕಾಲೇಜುಗಳನ್ನು ಸ್ಥಾಪಿಸಿ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಎಂದರು.

ಸ್ವಾತಂತ್ರ್ಯ ಹೋರಾಟಗಾರರ ಹೆಸರಿನಲ್ಲಿ ವರ್ಷದಲ್ಲಿ ಎರಡು ಬಾರಿ ಲಾಲ್ ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸುತ್ತಿದ್ದು, ಜನೋಪಕಾರಿ ಶ್ರೀ ದೊಡ್ಡಣ್ಣ ಶೆಟ್ಟರ ಹೆಸರಿನಲ್ಲೂ ಫಲಪುಷ್ಪ ಪ್ರದರ್ಶನ ಏರ್ಪಡಿಸಲು ತೋಟಗಾರಿಕೆ ಇಲಾಖೆ ಸಚಿವರೊಂದಿಗೆ ಚರ್ಚಿಸಿ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು, ಬೆಂಗಳೂರು ನಗರ ಹಾಗೂ ಹೊರ ವಲಯದ ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ, ಸುಲಭ, ಸುರಕ್ಷಿತ ಸಾರಿಗೆ ಸೇವೆಯನ್ನು ಒದಗಿಸಲು ನಿರಂತರವಾಗಿ ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ಪ್ರತಿದಿನ ಹವಾನಿಯಂತ್ರಿತ ಸಾರಿಗೆಗಳನ್ನು ಒಳಗೊಂಡಂತೆ 1,795 ಮಾರ್ಗಗಳಲ್ಲಿ 6,187 ಅನುಸೂಚಿಗಳನ್ನು 64,975 ಸುತ್ತುವಳಿಗಳೊಂದಿಗೆ 12.79 ಲಕ್ಷ ಕಿ.ಮೀ.ಗಳಲ್ಲಿ ಬೆಂಗಳೂರು ನಗರ ಹಾಗೂ ಹೊರವಲಯದ ಪ್ರಯಾಣಿಕರ ದಟ್ಟಣೆ, ಅವಶ್ಯಕತೆಗನುಗುಣವಾಗಿ ಕಾರ್ಯಾಚರಣೆ ಮಾಡುತ್ತಿದ್ದು, ಸರಾಸರಿ 42 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ ಎಂದರು.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಿಂದ 25 ಕಿ.ಮೀ.ವರೆಗೆ ಕಾರ್ಯಾಚರಣೆ ವ್ಯಾಪ್ತಿಯನ್ನು ಹೊಂದಿದ್ದು, ನಗರದ ಕೇಂದ್ರ ಭಾಗದಿಂದ ಸುಮಾರು 50.0 ಕಿ.ಮೀ ವ್ಯಾಪ್ತಿಯಲ್ಲಿ ಸಾರಿಗೆ ಸೇವೆಯನ್ನು ಪ್ರಯಾಣಿಕರಿಗೆ ಒದಗಿಸಲಾಗುತ್ತಿದೆ.
ಸಂಸ್ಥೆಯು ಸತತವಾಗಿ ನಾಲ್ಕು ವರ್ಷಗಳಿಂದ ಎಲೆಕ್ಟ್ರಿಕ್ ಬಸ್ಸುಗಳನ್ನು ಪರಿಚಯಿಸುತ್ತಿದ್ದು, ಇಲ್ಲಿಯವರೆಗೆ 1473 ಎಲೆಕ್ಟ್ರಿಕ್ ಬಸ್ಸುಗಳು ಕಾರ್ಯಾಚರಣೆಗೆ ನಿಯೋಜಿಸಲಾಗಿರುತ್ತದೆ. ಪಿಎಂ ಇ-ಡ್ರೈವ್ ಯೋಜನೆಯಡಿಯಲ್ಲಿ 400 ಹವಾನಿಯಂತ್ರಿತ ಹಾಗೂ 4100 ಸಾಮಾನ್ಯ ಹವಾನಿಯಂತ್ರಣರಹಿತ ಎಲೆಕ್ಟ್ರಿಕ್ ಬಸ್ಸುಗಳನ್ನು ನಿಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಕಲಾಸಿಪಾಳ್ಯ ಬಸ್ ನಿಲ್ದಾಣ ಮಾಹಿತಿ:
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು 04 ಪ್ರಮುಖ ಬಸ್ ನಿಲ್ದಾಣಗಳು, 10 ಟಿ.ಟಿ.ಎಂ.ಸಿ ಗಳನ್ನು ಮತ್ತು 36 ಮಧ್ಯಮ, ಸಣ್ಣ ಬಸ್ ನಿಲ್ದಾಣಗಳನ್ನು ಹೊಂದಿದೆ. ಈ ಬಸ್ ನಿಲ್ದಾಣಗಳ ಪೈಕಿ ಒಂದಾದ ಕಲಾಸಿಪಾಳ್ಯದಲ್ಲಿ ಸುಸಜ್ಜಿತ, ಮೂಲಭೂತ ಸೌಕರ್ಯಗಳನ್ನು ಒಳಗೊಂಡ ನೂತನ ಬಸ್ ನಿಲ್ದಾಣವನ್ನು ನಾಗರೀಕರ ಬಳಕೆಗೆ 2023 ರ ಮಾರ್ಚ್ 10 ರಂದು ಸಮರ್ಪಿಸಲಾಗಿದೆ. ಬಸ್ ನಿಲ್ದಾಣದಲ್ಲಿ 07 ಬಸ್-ಬೇ, ಪ್ರತಿ ಬಸ್-ಬೇಯಲ್ಲಿ 6 ಪ್ಲಾಟ್ ಫಾರಂಗಳು, ವಾಣಿಜ್ಯ ಮಳಿಗೆಗಳು, ಕುಡಿಯುವ ನೀರು, ಶೌಚಾಲಯಗಳು, ದ್ವಿಚಕ್ರ ಹಾಗೂ ಕಾರುಗಳ ನಿಲುಗಡೆಗೆ ಸ್ಥಳಾವಕಾಶದ ಸೌಲಭ್ಯಗಳನ್ನು ಹೊಂದಿದೆ.

ಪ್ರಸ್ತುತ, ಕಲಾಸಿಪಾಳ್ಯ ಬಸ್ ನಿಲ್ದಾಣದಿಂದ ವಿವಿಧ ಪ್ರದೇಶಗಳಿಗೆ 671 ಅನುಸೂಚಿಗಳಲ್ಲಿ 2004 ಸುತ್ತುವಳಿಗಳನ್ನು ಹಾಗೂ ಚಂದ್ರಭವನನಿಂದ 505 ಅನುಸೂಚಿಗಳಲ್ಲಿ 1217 ಸುತ್ತುವಳಿಗಳನ್ನು ಒಟ್ಟಾರೆಯಾಗಿ ಕೃಷ್ಣ ರಾಜ ಮಾರುಕಟ್ಟೆಯಿಂದ ಒಟ್ಟು 1176 ಅನುಸೂಚಿಗಳಲ್ಲಿ 3221 ಸುತ್ತುವಳಿಗಳನ್ನು ಆಚರಣೆಗೊಳಿಸಲಾಗುತ್ತಿದೆ.

ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲಿ 62,374 ಚದರ ಅಡಿ ವಾಣಿಜ್ಯ ಜಾಗ ಹಾಗೂ 52,180 ಚದರ ಅಡಿ ಪಾಕಿರ್ಂಗ್ ಜಾಗ ಸೇರಿ ಒಟ್ಟು 1,14,914 ಚದರ ಅಡಿ ವಾಣಿಜ್ಯ ಜಾಗವಿರುತ್ತದೆ. ನಿಲ್ದಾಣದಲ್ಲಿನ ವಾಣಿಜ್ಯ, ಕಛೇರಿ ಜಾಗವನ್ನು ಪರವಾನಗಿ ಆಧಾರದಲ್ಲಿ ಹಂಚಿಕೆ ಪಡೆಯುವಂತೆ ವಿವಿಧ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಛೇರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಹಂಚಿಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.

ಈ ಬಸ್ ನಿಲ್ದಾಣದಲ್ಲಿನ ವಾಣಿಜ್ಯ ಜಾಗಗಳಿಂದ ಮಾಸಿಕ ಅಂದಾಜು ರೂ.42,88,497/- ಸಾರಿಗೇತರ ಆದಾಯ ನಿರೀಕ್ಷಿಸಲಾಗಿದ್ದು, ಪ್ರಸ್ತುತ ಮಾಸಿಕ ರೂ.2,52,074/- ಆದಾಯ ಗಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ವೈಶ್ಯ ಸಮುದಾಯದ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ ಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಚೆಕ್ ನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಹಾಗೂ ಸಮುದಾಯದ ಮುಖಂಡರು ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

- Advertisement -  - Advertisement - 
ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";