ಗೊರೂರು ಅನಂತರಾಜು, ಹಾಸನ.
ಕುಶಾಲನಗರದ ಶ್ರೀ ಚೌಡೇಶ್ವರಿ ಮಹಿಳಾ ಸಂಘದವರು ದೇವಾಲಯಗಳು ಮತ್ತು ಪ್ರವಾಸಿ ತಾಣಗಳಿಗೆ ಒಂದು ದಿನದ ಪ್ರವಾಸ ಏರ್ಪಡಿಸುತ್ತಾ ಬಂದು ಕಳೆದ ಮೂರು ವರ್ಷಗಳಿಂದ ನಾವು ಭಾಗಿಯಾಗುತ್ತಾ ಬಂದಿದ್ದೇವೆ. ಈ ಬಾರಿಯ ಪ್ರವಾಸ ಹುಣಸೂರು ಹೆಗ್ಗಡದೇವನಕೋಟೆ ಕಡೆಗೆ ಏರ್ಪಾಡಾಗಿತ್ತು. ಅವು ನಮಗೆ ಹೊಸ ಸ್ಥಳಗಳು. ಮಿನಿ ಬಸ್ಸು ಮಾಡಿದ್ದರು. ಕುಶಾಲನಗರವನ್ನು ಬೆ.6ಕ್ಕೆ ಬಿಟ್ಟು ಮದ್ಯೆ ಪಿರಿಯಾಪಟ್ಟಣದಲ್ಲಿ ಕಾಫಿ ಟೀ ಕುಡಿದು ಅಲ್ಲಿಂದ ನಾವು ಗದ್ದಿಗೆ ತಲುಪಿದಾಗ ಎಂಟಾಗಿತ್ತು.
ಹುಣಸೂರು ತಾಲ್ಲೂಕಿನ ಗದ್ದಿಗೆ ಶ್ರೀ ಗುರು ಕೆಂಡಗಣ್ಣ ಸ್ವಾಮಿಗಳ ನಿರ್ವಿಕಲ್ಪ ಸಮಾಧಿ ಹೊಂದಿದ ಪ್ರವಾಸಿ ತಾಣ. ಬಸ್ ನಿಲ್ದಾಣ ಸನಿಹದಲ್ಲಿಯೇ ಇರುವ ದೇವಾಲಯ ವಿಶಾಲವಾದ ಗುಡಿ ಗೋಪುರ ವಿನ್ಯಾಸದಿಂದ ಆಕರ್ಷಣೀಯವಾಗಿದೆ. ನಾವು ಹೋದ ದಿನ ಶ್ರೀ ಕೆಂಡಗಣ್ಣೇಶ್ವರ ಹಾಗೂ ಶ್ರೀ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಸಿದ್ಧತೆ ನಡೆದಿತ್ತು. ನಾವು ಮಠದಲ್ಲಿ ನೀಡಿದ ದಾಸೋಹ ಉಪ್ಪಿಟ್ಟು ಸೇವಿಸಿ ಗದ್ದಿಗೆ ವೀಕ್ಷಿಸಿದೆವು. ಸ್ಥಳ ಪರಿಚಯ ಬಗ್ಗೆ ತಿಳಿಯಲು ಒಬ್ಬರಲ್ಲಿ ವಿಚಾರಿಸಿದೆ. ಅವರು ಪ್ರೊ.ಎಂ.ಎಸ್. ವೀಠಶೆಟ್ಟಿ ರಚಿತ ಶ್ರೀಗುರು ಕೆಂಡಗಣ್ಣಸ್ವಾಮಿಗಳ ಬದುಕು ಮತ್ತು ಆಧ್ಯಾತ್ಮಿಕ ಸಾಧನೆ ಪುಸ್ತಕ ಕೊಟ್ಟು ಓದಿಕೊಳ್ಳಿ ಎಂದರು.
ಶ್ರೀ ಕೆಂಡಗಣ್ಣೇಶ್ವರ ಶಿವಯೋಗಿಗಳು ಎರಡು ಶತಮಾನ ಹಿಂದೆ ಜೀವಿಸಿದ್ದು ನಿರಾಭಾರಿ ಜಂಗಮರಾಗಿ ಕಾಡುಮೇಡು ನಾಡುಗಳಲ್ಲಿ ಸಂಚರಿಸುತ್ತ ಇತ್ತ ಬಂದು ಕೊನೆಗೆ ಹುಣಸೂರು ಹೆಚ್.ಡಿ.ಕೋಟೆ ಗಡಿ ಕುಟ್ಟವಾಡಿಯ ತೊರೆಯ ಬಲದಂಡೆಯಲ್ಲಿ ತಪಗೈದು ನಿರ್ವಿಕಲ್ಪ ಸಮಾಧಿಯಲ್ಲಿ ನೆಲೆಕಂಡರೆAದು ತಿಳಿಯುತ್ತದೆ. ಗುರುಗಳ ಸಮಾಧಿ ಕೆಂಡಗಣ್ಣಸ್ವಾಮಿ ಗದ್ದಿಗೆ ಎಂದು ಹೆಸರಾಗಿದೆ. ನಂಜನಗೂಡು, ಟಿ.ನರಸೀಪುರ, ಕೊಳ್ಳೆಗಾಲ, ಗುಂಡ್ಲುಪೇಟೆ, ಚಾಮರಾಜನಗರ, ಹೆಗ್ಗಡದೇವನಕೋಟೆ, ಹುಣಸೂರು, ಪಿರಿಯಾಪಟ್ಟಣ, ಯಳಂದೂರು ತಾಲ್ಲೂಕುಗಳ ಗ್ರಾಮೀಣ ಪ್ರದೇಶಗಳಲ್ಲಿ ಕೆಂಡಗಣ್ಣ, ಕೆಂಡಗಣ್ಣಪ್ಪ, ಕೆಂಡಗಣ್ಣಮ್ಮ, ಕೆಂಡಗಣ್ಣಿ, ಕೆಂಡಗಣ್ಣಯ್ಯ, ಚಿಕ್ಕಕೆಂಡ, ದೊಡ್ಡಕೆಂಡ ಎಂಬ ಹೆಸರಿನ ಜನರು ಸಾಕಷ್ಟಿದ್ದಾರೆ.
ಶಿಗ್ಗಾವಿಯ ರಾಜವಂಶದಲ್ಲಿ ಹುಟ್ಟಿದ ಇವರು ಮೈಸೂರು ಒಡೆಯರಿಂದ ರಾಜಪೂಜಿತರಾಗಿ ತಮ್ಮ ವೈರಾಗ್ಯ ಅವಧೂತ ವ್ಯಕ್ತಿತ್ವದಿಂದ ಜನಸಮುದಾಯವನ್ನು ಪ್ರಭಾವಿಸಿದ್ದಾರೆ. ಶ್ರೀಶೈಲ ರಾಜೇಂದ್ರ ಕಾಶಮ್ಮ ರಾಜದಂಪತಿಗಳ ಮಕ್ಕಳಲ್ಲಿ ಶ್ರೀ ಕೆಂಡಗಣ್ಣೇಶರೇ ಹಿರಿಯರು. ಇವರ ಅವಳಿ ಸೋದರ ವೀರರಾಜ. ನಂತರ 2 ವರ್ಷಕ್ಕೆ ಲಿಂಗರಾಜು, ಶಾಂತಮಲ್ಲಿಕಾರ್ಜುನರು ಅವಳಿ ಜವಳಿಯಾಗಿ ಜನಿಸಿದ ರಾಜಪುತ್ರರು. ನೆರೆರಾಜ್ಯದ ಸಂಚಿನಿAದ 2ನೇ ಬಾರಿ ಶಿಗ್ಗಾವಿ ಮೇಲೆ ದಾಳಿಯಿಟ್ಟ ವೇಳೆ ಇವರ ವಯಸ್ಸು ಹತ್ತು. ಪ್ರಜೆಗಳು ಇವರನ್ನು ಸುರಕ್ಷಿತ ಸ್ಥಳದಲ್ಲಿಟ್ಟು ರಕ್ಷಿಸಿದರು. ಸೋದರ ವೀರರಾಜ ರಾಜರಾಣಿಯರು ರಣರಂಗದಲ್ಲಿ ಮಡಿದರು. ಶತ್ರುಗಳು ಅರಮನೆಗೆ ಬೆಂಕಿ ಹಚ್ಚಿ ಕಿರಿಯ ಸಹೋದರಿಬ್ಬರೂ ಅಗ್ನಿಗಾಹುತಿಯಾಗಿ ರಾಜ್ಯ ಶತ್ರುವಶವಾಯಿತು. ಅಸಹಾಯಕರಾಗಿ ಇದನ್ನೆಲ್ಲ ಕಂಡು ಕೆಂಡಗಣ್ಣಯ್ಯನವರ ಮನ ಕದಡಿದ ಕೊಳದ ನೀರಿನಂತಾಯಿತು. ತಮ್ಮ ಕುಲಗುರು ಬಂಕಾಪುರದ ಅರಳೆಲೆ ಹಿರಿಯಮಠದ ರುದ್ರಮುನಿ ಶಿವಾಚಾರ್ಯಸ್ವಾಮಿಗಳ ಸನ್ನಿಧಿಗೆ ಧಾವಿಸಿ ತಮ್ಮ ದುಸ್ಥಿತಿಯನ್ನೆಲ್ಲ ನಿವೇದಿಸಿ ನಂತರ ಶಿಗ್ಗಾವಿ ತೊರೆದು ಶಿರಾಳಕೊಪ್ಪ, ಶಿಕಾರಿಪುರ, ಉಡುತಡಿ, ಬಳ್ಳಿಗಾವಿ, ಸಾಗರ ಮೂಲಕ ಹೊನ್ನಾಳಿ ಕಲ್ಲುಮಠಕ್ಕೆ ಬಂದು ನಂತರ ನ್ಯಾಮತಿ, ಚಿಕ್ಕನಾಯಕನಹಳ್ಳಿ, ಹುಳಿಯೂರು ಮೂಲಕ ಗುಬ್ಬಿ, ಸಿದ್ಧಗಂಗೆ ತಲುಪಿ ವಿಶ್ರಮಿಸಿ ಮುಂದೆ ಸಿದ್ದರಬೆಟ್ಟದಲ್ಲಿ ಕೆಲದಿನ ಮಂತ್ರಯೋಗ ನಿರತರಾಗಿ ಅಲ್ಲಿಂದ ಶಿವಗಂಗೆಗೆ ನಡೆದು ತಪಸ್ಸನ್ನಾಚರಿಸಿ ಬೆಂಗಳೂರಿಗೆ ಬರಲು ವರ್ಷವಾಯಿತಂತೆ! ಅಲ್ಲಿನ ಬೇಲಿಮಠದ ಕೆಂಪನAಜಸ್ವಾಮಿಗಳು ಇವರನ್ನು ಬರಮಾಡಿಕೊಂಡು ಅಲ್ಲಿ ನಾಲ್ಕು ವರ್ಷ ಇದ್ದು ವಿರಕ್ತಾಶ್ರಮ ಸ್ವೀಕರಿಸಿದರು. ರೇವಣಸಿದ್ದರ ಬೆಟ್ಟ ನಂತರ ಸಿಂಗಾನಲ್ಲೂರಿಗೆ ಬರುತ್ತಾರೆ. ದೊಡ್ಡಿಂದುವಾಡಿ ಸಮೀಪದ ಕನಕನೇರಿಯಲ್ಲಿ ನೆ¯ಸಿ ಸ್ಥಳೀಯರ ಬೆಂಬಲದಿAದ ಒಂದು ಮಠವನ್ನು ಕಟ್ಟಿಸಿದ್ದಾಗಿ ಕೃತಿಯಲ್ಲಿ ಹೇಳಿದೆ.
ಬಸವಾಪಟ್ಟಣದ ತೊಟ್ಟಿಮನೆ ಬಿ.ಸಿ.ಸಿದ್ದಬಸಪ್ಪಶೆಟ್ಟರು ಗದ್ದಿಗೆ ಪರಿಸರದ ಭಕ್ತಾದಿಗಳ ಸಹಕಾರದೊಂದಿಗೆ ಶ್ರೀ ಗದ್ದಿಗೆ ಕ್ಷೇತ್ರದಲ್ಲಿ ಶ್ರೀ ಕೆಂಡಗಣ್ಣೇಶ್ವರಸ್ವಾಮಿ, ಶ್ರೀ ಮಹದೇಶ್ವರಸ್ವಾಮಿ ದೇವಾಲಯಗಳ ಪುನರ್ ನಿರ್ಮಾಣ ಗೋಪುರಗಳ ಕಳಸ ಪ್ರತಿಷ್ಠಾಪನೆ ಮಾಡಿದ್ದಾಗಿ ಕೃತಿಯಲ್ಲಿ ತಿಳಿಸಿದೆ. ಶ್ರೀ ಕೆಂಡಗಣ್ಣಸ್ವಾಮಿಯ ಗದ್ದಿಗೆಯಲ್ಲಿ ಪ್ರತಿ ಹುಣ್ಣಿಮೆ, ಅಮಾವಾಸ್ಯೆಗೆ ಶ್ರಾವಣಮಾಸ, ಕಾರ್ತೀಕ ಮಾಸದಲ್ಲಿ ವಿಶೇಷ ಪೂಜಾಕಾ ಗಳು ಜರಗುತ್ತವೆ. ಪ್ರತಿ ಫಾಲ್ಗುಣ ಮಾಸದ ಶುಕ್ಲಪಕ್ಷದಲ್ಲಿ ಶ್ರೀಸ್ವಾಮಿಯ ರಥೋತ್ಸವವು ವಿಜೃಂಭಣೆಯಿ0ದ ಜರುಗುವುದು. ಭಕ್ತರು ಬಂದಾಗ ಅವರಿಗೆ ಉಳಿದುಕೊಳ್ಳಲು ಗದ್ದಿಗೆಯಲ್ಲಿ ಸಿದ್ಧಬಸಪ್ಪನವರು ಯಾತ್ರಾನಿವಾಸ ನಿರ್ಮಿಸಿ ಕೆಂಡಗಣ್ಣ ಸ್ವಾಮಿಗೆ ಚಿನ್ನದ ಮುಖವಾಡ ಮಾಡಿಸಿರುವುದಾಗಿ ಕೃತಿಯಲ್ಲಿ ಹೇಳಿದೆ. ಒಳಾಂಗಣದಲ್ಲಿ ಒಂದು ರಂಗಮAಟಪವಿದ್ದು ಪ್ರೇಕ್ಷಕರು ಕುಳಿತು ನೋಡಲು ವಿಸ್ತಾರ ಜಾಗವಿದೆ. ಅಲ್ಲಿ ಎರಡು ಮರಗಳು ವಿಶೇಷವಾಗಿ ಗೋಚರಿಸಿದವು. ಜಾತ್ರೆಗೆ ದಕ್ಷಯಜ್ಞ ನಾಟಕವಿರುವುದು ತಿಳಿಯಿತು. ಮುಂದೆ ನಾವು ಚಿಕ್ಕದೇವಿರಮ್ಮನ ಬೆಟ್ಟಕ್ಕೆ ಪ್ರಯಣಿಸಿದೆವು. ಬೆಟ್ಟಕ್ಕೆ ವಾಹನಗಳು ಹೋಗಲು ರಸ್ತೆ ನಿರ್ಮಿಸಿದ್ದಾರೆ. ಕಾಲಭೈರವೇಶ್ವರ ಸನ್ನಿಧಿಯಲ್ಲಿ ಸಂಘದ ಮಹಿಳೆಯರು ಹಾಡು ಹೇಳಿ ಆನಂದಿಸಿದರು. ಬೆಟ್ಟದ ಮೇಲಿಂದ ಕೆಳಗಿನ ಬಯಲು ಪ್ರದೇಶ ಸುಂದರವಾಗಿ ಕಾಣಿಸಿತು. ದೂರದಲ್ಲಿ ಡ್ಯಾಂ ಜಲಾಶಯ ಗೋಚರಿಸಿತು. ಅಲ್ಲಿಗೆ ಹೋಗೋಣ ಅದೊಂದು ಡ್ಯಾಂ ಇರಬೇಕು ಎಂದೆ. ಸಮಯ 12 ಗಂಟೆ. ಊಟಕ್ಕೆ ಇನ್ನೂ ವೇಳೆ ಇತ್ತು. ಡ್ಯಾಂ ನೋಡಿಕೊಂಡು ಆಮೇಲೆ ಊಟದ ಸ್ಥಳಕ್ಕೆ ಬನ್ನಿ ಎಂದು ಸಂಘಟಕರು ತಮ್ಮ ಕಾರಿನಲ್ಲಿ ಊಟದ ಏರ್ಪಾಡು ನೋಡಲು ಹೋದರು.
ಆ ಡ್ಯಾಂ ಕಪಿಲಾ ನದಿಯ ಉಪನದಿ ನುಗು ನದಿಗೆ ಹೆಗ್ಗಡದೇವನಕೋಟೆ ತಾ. ಬೀರವಾಳ ಹಳ್ಳಿ ಬಳಿ ನಿರ್ಮಿಸಿರುವ 2,020 ಅಡಿ ಉದ್ದದ ಅಣೆಕಟ್ಟೆ. ಆದರೆ ನಮಗೆ ಡ್ಯಾಂ ನೋಡಲು ಬಿಡಲಿಲ್ಲ. ನಿರಾಶರಾಗಿ ಹಿಂತಿರುಗಿ ಊಟದ ಸ್ಥಳಕ್ಕೆ ಬಂದವು. ನಾನ್ ವೆಜ್ ಊಟ ತಯಾರಾಗಿತ್ತು. ಅಂದಿನ ನಮ್ಮ ಪ್ರವಾಸದಲ್ಲಿ ಕಬಿನಿ ಬ್ಯಾಕ್ ವಾಟರ್ ಕೂಡ ಒಂದು. ನಾನು 2007ರಲ್ಲಿ ಕಾವೇರಿ ನದಿಯ ದಡದಲ್ಲಿ ಎಂಬ ಪುಸ್ತಕ ಪ್ರಕಟಿಸಿದ್ದು, ಇದು ಕಾವೇರಿ ಮತ್ತು ಅದರ ಉಪನದಿಗಳು, ಕಾವೇರಿ ನದಿ ಪ್ರವಹಿಸುವೆಡೆಗಳಲ್ಲಿ ಮನಮೋಹಕ ಜಲಪಾತಗಳು, ಭಕ್ತಿತಾಣದ ತೀರ್ಥಕ್ಷೇತ್ರಗಳು, ಅಣೆಕಟ್ಟುಗಳು ಇತ್ಯಾದಿ ಮಾಹಿತಿಗಳ ಸಂಗ್ರಹ ಕೃತಿ. ಕಾವೇರಿ ಉಪನದಿ ಕಪಿಲಾ ಕೇರಳ ರಾಜ್ಯದ ಪಶ್ಚಿಮ ಘಟ್ಟಗಳ ವೈನಾಡಿನಲ್ಲಿ ಉಗಮಿಸಿ ಕೇರಳ ರಾಜ್ಯದಲ್ಲಿ 12 ಕಿ.ಮಿ. ಹರಿದು ಹೆಗ್ಗಡದೇವನ ಕೋಟೆ ತಾಲ್ಲೂಕಿನ ನೈಋತ್ಯದಲ್ಲಿ ಕರ್ನಾಟಕ ಪ್ರವೇಶಿಸುತ್ತದೆ. ನಾವು ಊಟ ಮಾಡಿ ಹಿನ್ನೀರು ಪ್ರದೇಶ ಹರಸಿ ಸುಮಾರು ದೂರ ಪ್ರಯಣಿಸಿದೆವು. ದಾರಿಯಲ್ಲಿ ಅನೇಕ ಊರುಗಳು ಸಿಕ್ಕವು. ದಾರಿ ಉದ್ದಕ್ಕೂ ಕೇಳಿಕೊಂಡು ಅಂತೂ ಬ್ಯಾಕ್ ವಾಟರ್ ತಲುಪಿದೆವು. ಅಲ್ಲಿ ಹರಿಗೋಲು ಇತ್ತು ನಡೆಸುವವರು ಇರಲಿಲ್ಲ.
ಅಲ್ಲಿ ಹಿನ್ನೀರಿಗೆ ಇಳಿಜಾರಿನ ಸೋಪಾನಕಟ್ಟೆ ಇತ್ತಾಗಿ ಮಹಿಳೆಯರು ಅಲ್ಲಿ ಇಳಿದು ಕೈಕಾಲು ಮುಖ ತೊಳೆದುಕೊಂಡರು. ಅಲ್ಲೊಂದು ಮಹದೇಶ್ವರ ದೇವಸ್ಥಾನವಿತ್ತು. ಕಪಿಲಾ ನದಿಗೆ ಹೆಗ್ಗಡದೇವನಕೋಟೆ ತಾ. ಬಿದರಹಳ್ಳಿ, ಬೀಚನಹಳ್ಳಿ ಬಳಿ 1976ರಲ್ಲಿ ಅಣೆಕಟ್ಟೆ ಕಟ್ಟಲಾಗಿದೆ. ಕಪಿನಿ, ಕಬಿನಿ ಎಂದು ಕರೆಯುವ ಈ ನದಿಯ ಜಲಾಶಯಕ್ಕೆ 17 ಮೈಲಿಯ ಎಡದಂಡೆ 126 ಮೈಲಿಯ ಬಲದಂಡೆ ನಾಲೆ ಜೋಡಿಸಲಾಗಿದೆ. ನಾವು ವಾಪಸ್ಸು ಬರುವಾಗ ಕಬಿನಿ ಜಲಾಶಯ ಮಾರ್ಗವೇ ಬಂದೆವು. ಆದರೆ ನೋಡಲು ಇಳಿಯಲಿಲ್ಲ. ಅಲ್ಲಿಯೇ ಒಂದು ಕಡೆ ಕಾಫಿ ಕುಡಿದು ಮತ್ತೆ ಕುಶಾಲನಗರಕ್ಕೆ ಬರುವಷ್ಟರಲ್ಲಿ ರಾತ್ರಿ ಒಂಬತ್ತು ಗಂಟೆ ಆಗಿತ್ತು.