ಬೆಂಗಳೂರು,ಆಗಸ್ಟ್ 13 (ಕರ್ನಾಟಕ ವಾರ್ತೆ)
ಬಾಲಗರ್ಭಿಣಿ ಪ್ರಕರಣಗಳನ್ನು ತಡೆಗಟ್ಟಲು ಮಕ್ಕಳ ಸಹಾಯವಾಣಿ 1098 ಸಂಖ್ಯೆ 24/7 ಮಕ್ಕಳ ಸುರಕ್ಷತೆಗಾಗಿ ಕಾರ್ಯನಿರ್ವಹಿಸುತ್ತಿದೆ. ಮಕ್ಕಳ ರಕ್ಷಣೆಗಾಗಿ ಕೆಲವು ಜಿಲ್ಲೆಗಳಲ್ಲಿ “ಅಕ್ಕಾ ಪಡೆ”ಯನ್ನು ರಚಿಸಲಾಗಿದೆ. ಕೆಲವು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಈ ಅಕ್ಕಾಪಡೆಯು ಕಾರ್ಯಚರಣೆ ಕೆಲಸ ಪ್ರಾರಂಭಿಸಿದೆ. ಆಗಸ್ಟ್ 15 ರಿಂದ ಇಡೀ ರಾಜ್ಯದಲ್ಲಿ ಅಕ್ಕಾ ಪಡೆಯು ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ತಿಳಿಸಿದರು.
ಇಂದು ವಿಧಾನಸಭೆಯ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಸದಸ್ಯರಾದ ಸುರೇಶ್ ಬಾಬು ಇವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಾಲಗರ್ಭಿಣಿ ಪ್ರಕರಣಗಳನ್ನು ತಡೆಗಟ್ಟಲು ಮಕ್ಕಳ ಸಹಾಯವಾಣಿ 1098, 24*7 ಮಕ್ಕಳ ಸುರಕ್ಷತೆಗಾಗಿ ಕಾರ್ಯನಿರ್ವಹಿಸುತ್ತಿದೆ. ಸಂಕಷ್ಟದಲ್ಲಿರುವ ಮಗುವಿನ ಬಗ್ಗೆ ಯಾವುದೇ ಸಮಯದಲ್ಲಿ ಕರೆ ಸ್ವೀಕೃತವಾದರೂ ತಕ್ಷಣ ಮಗುವನ್ನು ರಕ್ಷಿಸಲು ಸಂಬಂಧಿಸಿದ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿರುತ್ತಾರೆ. ಪ್ರತಿ ಜಿಲ್ಲೆಯಲ್ಲೂ ಮಕ್ಕಳ ಕಲ್ಯಾಣ ಸಮಿತಿ, ಬಾಲ ನ್ಯಾಯಮಂಡಳಿ, ಮಕ್ಕಳ ವಿಶೇಷ ಪೊಲೀಸ್ ಘಟಕ, ಮಕ್ಕಳ ಪಾಲನಾ ಸಂಸ್ಥೇ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳು, ಪಾಲನೆ / ಪೋಷಣೆ ಅವಶ್ಯಕತೆ ಇರುವ ಮಕ್ಕಳು ಮತ್ತು ಕಾನೂನು ಸಂಘರ್ಷಕ್ಕೊಳಗಾದ ಮಕ್ಕಳ ಪುನರ್ವಸತಿಗೋಸ್ಕರ ಕಾರ್ಯ ನಿರ್ವಹಿಸುತ್ತಿದೆ. ಬಾಲ್ಯವಿವಾಹ ಪ್ರಕರಣಗಳನ್ನು ತಡೆಯುವ ತಾಲ್ಲೂಕು ಮಟ್ಟದ ಸಮನ್ವಯ ಹಾಗೂ ಪರಿಶೀಲನಾ ಸಮಿತಿ ಅಧ್ಯಕ್ಷರನ್ನಾಗಿ ಆಯಾ ತಾಲ್ಲೂಕು ತಹಸೀಲ್ದಾರರನ್ನು ಸರ್ಕಾರವು ನೇಮಿಸಿದೆ. ಪ್ರಕರಣಗಳನ್ನು ತಡೆಗಟ್ಟಲು ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಗೃಹ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಿದೆ ಎಂದು ತಿಳಿಸಿದರು.
ಆಸ್ಪತ್ರೆಗಳಲ್ಲಿ ದಾಖಲಾಗುವ ಗರ್ಭಿಣಿಯರ ಮಾಹಿತಿಯನ್ನು ಆರ್.ಸಿ.ಹೆಚ್. ಪೋರ್ಟಲ್ ನಲ್ಲಿ ದಾಖಲಿಸಲಾಗುತ್ತಿದೆ. ಸದರಿ ಪೋರ್ಟಲ್ ನಲ್ಲಿ ಗುರುತಿಸಲಾದ ಬಾಲ ಗರ್ಭಿಣಿಯ ಪ್ರಕರಣಗಳನ್ನು ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಿಸಿ ಕ್ರಮ ವಹಿಸಲಾಗುತ್ತಿದೆ. ಬಾಲಗರ್ಭಿಣಿಯ ಪೋಷಕರ ಒಟ್ಟಿಗೆ ಹೋಗಲು ಇಚ್ಛಿಸಿದಲ್ಲಿ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಮಂಡಿಸಿ ಆದೇಶದಂತೆ ಪೋಷಕರ ವಶಕ್ಕೆ ನೀಡಲಾಗುತ್ತಿದೆ. ಬಾಲಗರ್ಭಿಣಿಯರು ಪುನರ್ವಸತಿ ಕೋರಿದ್ದಲ್ಲಿ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ದಾಖಲಿಸಿ ಅವರಿಗೆ ರಕ್ಷಣೆ ಮತ್ತು ಪೋಷಣೆಯನ್ನು ನೀಡಲಾಗುತ್ತಿದೆ. ಬಾಲಗರ್ಭಿಣಿಯರು ವಿದ್ಯಾಭ್ಯಾಸ ಮುಂದುವರೆಸಲು ಇಚ್ಛಿಸಿದಲ್ಲಿ ಶಾಲೆಗೆ ದಾಖಲಿಸಿ ವಿದ್ಯಭ್ಯಾಸವನ್ನು ಮುಂದುವರೆಸಲು ಅವಕಾಶ ಮಾಡಿಕೊಡಲಾಗುತ್ತದೆ ಎಂದು ಸದನದಲ್ಲಿ ತಿಳಿಸಿದರು.