ಬೆಂಗಳೂರು, ಜುಲೈ 31: ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಬೃಹತ್ ಬೆಂಗಳೂರು ಮಹಾನಗರಪಾಲಿಕೆಯನ್ನು ಐದು ನಗರ ಪಾಲಿಕೆಗಳಾಗಿ ವಿಂಗಡಿಸಿ ಅಧಿಸೂಚನೆ ಹೊರಡಿಸಿದ್ದ ಹಿನ್ನೆಲೆಯಲ್ಲಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು “ಪಾಲಿಕೆ ಚುನಾವಣೆಗೆ ಸಿದ್ಧರಾಗಿ” ಎಂದು ಕರೆ ನೀಡಿದ್ದಾರೆ.
ಡಿಸಿಎಂ ಡಿಕೆಶಿ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಆಗಸ್ಟ್ 3ರಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವಾರ್ಡ್‌ಗಳ ಮರುವಿಂಗಡಣಾ ಆಯೋಗ ಕಾರ್ಯಾರಂಭ ಮಾಡಲಿದೆ. ಶೀಘ್ರದಲ್ಲೇ ಚುನಾವಣೆ ದಿನಾಂಕ ನಿಗದಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಾಧಿಕಾರದಡಿ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗಲಿದೆ. ಮರುರಚನೆ, ಗಡಿ ಗುರುತಿಸುವಿಕೆ ಹಾಗೂ ತಕರಾರು ಅರ್ಜಿಗಳ ಅಂತಿಮ ನಿರ್ಣಯಕ್ಕೆ ವೇಗ ನೀಡಲಾಗಿದೆ. ಈ ಪ್ರಕ್ರಿಯೆ ಸೆಪ್ಟೆಂಬರ್ 1ರೊಳಗೆ ಪೂರ್ಣಗೊಳ್ಳಲಿದೆ. ನಂತರ ಮೀಸಲಾತಿ ಪ್ರಕ್ರಿಯೆ ಪೂರೈಸಿ, ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುತ್ತದೆ. ಅದರ ಬಳಿಕ ಮಾತ್ರ ಚುನಾವಣೆ ದಿನಾಂಕ ನಿಗದಿಯಾಗಲಿದೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಡಿಸಿಎಂ, “ನವೆಂಬರ್ 1 ಅಥವಾ 2ರಂದು ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸುತ್ತೇವೆ” ಎಂದು ತಿಳಿಸಿದ್ದಾರೆ. ಒಳಮೀಸಲಾತಿ ಸಮೀಕ್ಷೆ ನಡೆಯುತ್ತಿದ್ದು, ಬೆಂಗಳೂರು ಹೊರಗಿನ ಪ್ರದೇಶಗಳಲ್ಲಿ ಹೆಚ್ಚು ಮಾಹಿತಿ ಬಂದಿದೆ. ಈಗ ಜಾತಿ ಜನಗಣತಿ ಮರುಸಮೀಕ್ಷೆ ನಡೆಯುತ್ತಿದೆ.
ಕಾರ್ಯಕರ್ತರು ಪ್ರಚಾರ ಹೆಚ್ಚಿಸಬೇಕು, ಮನೆಮಂದಿಯ ಹೆಸರು ನೋಂದಣಿ ಮಾಡಿಸಿ, ಮತದಾರರನ್ನು ಗಟ್ಟಿಮಾಡಿ, ಯಾವುದೇ ಊರಿಗೆ ಕೆಲಸಕ್ಕೆ ಹೋಗಿರುವವರನ್ನೂ ಜಾತಿ ನೊಂದಣಿಗೆ ಸೇರಿಸಬೇಕು ಎಂದು ಡಿಸಿಎಂ ಮನವಿ ಮಾಡಿದ್ದಾರೆ.
ಬಿ ಖಾತೆಗಳಿಂದ ಎ ಖಾತೆ ಪಡೆಯಲು ಅಗತ್ಯವಾದ ಮಾನದಂಡಗಳು ಆಗಸ್ಟ್ 15ರಂದು ಪ್ರಕಟಗೊಳ್ಳಲಿವೆ. ನಗರದ ಲಕ್ಷಾಂತರ ಬಿ ಖಾತೆಗಳ ಪೈಕಿ ಯಾರು ಎ ಖಾತೆಗೆ ಅರ್ಹ ಎಂಬುದರ ವಿವರವಿರುವ ಮಾನದಂಡ ಬಿಡುಗಡೆ ಮಾಡಲಾಗುತ್ತದೆ. ಅರ್ಜಿ ಸಲ್ಲನೆ, ಅರ್ಹತೆ, ಪ್ರಕ್ರಿಯೆಯ ಸಂಪೂರ್ಣ ಮಾಹಿತಿ ಕೂಡಾ ಹೊರಬೀಳಲಿದೆ.