ಬೆಂಗಳೂರು: “ಜಿಎಸ್‌ಟಿ ನೋಟಿಸ್ ಪಡೆದವರು ಗಾಬರಿಯಾಗಬೇಡಿ, ನೀವು ನೀಡುವ ಸ್ಪಷ್ಟನೆ ಮೇಲೆ ತೆರಿಗೆ ಹಾಗೂ ದಂಡ ನಿಗದಿಯಾಗುತ್ತದೆ” ಎಂದು ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಮೀರಾ ಪಂಡಿತ್ ಅವರು ಹೇಳಿದ್ದಾರೆ. ಮಂಗಳವಾರ ಕೋರಮಂಗಲದಲ್ಲಿನ ತೆರಿಗೆ ಕಚೇರಿಯಲ್ಲಿ ನಡೆದ ‘ಜಿಎಸ್ಟಿ ತಿಳಿಯಿರಿ’ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದರು.
850 ವ್ಯಾಪಾರಿಗಳಿಗೆ ನೋಟಿಸ್ ಜಾರಿ:
ಪ್ರಥಮ ಹಂತದಲ್ಲಿ ಕೋಟ್ಯಂತರ ರೂ. ವಹಿವಾಟು ನಡೆಸಿದ ಸುಮಾರು 850 ವ್ಯಾಪಾರಿಗಳಿಗೆ ನೋಟಿಸ್ ನೀಡಲಾಗಿದೆ. ಸಿಗರೇಟು, ಗುಟ್ಕಾ ಉತ್ಪನ್ನಗಳಂತಹ 28% ಜಿಎಸ್‌ಟಿ ಇರುವ ವಸ್ತುಗಳ ಜೊತೆಗೆ, ಹಣ್ಣು, ಹಾಲು, ತರಕಾರಿ ಮುಂತಾದ ವಿನಾಯಿತಿದಾರ ವಸ್ತುಗಳ ವ್ಯಾಪಾರದ ನಡುವಿನ ವ್ಯತ್ಯಾಸವನ್ನು ಸ್ಪಷ್ಟಪಡಿಸುವ ಅಗತ್ಯವಿದೆ ಎಂದು ಅಧಿಕಾರಿಗಳು ಹೇಳಿದರು.
ಡೇಟಾ ಆಧಾರದ ಮೇಲೆ ಕ್ರಮ:
2025ರ ಜನವರಿ ತಿಂಗಳ ಪೇಟಿಎಂ ಮತ್ತು ಫೋನ್‌ಪೇ ಡೇಟಾ ಆಧಾರದ ಮೇಲೆ ವ್ಯಾಪಾರಿಗಳನ್ನು ಗುರುತಿಸಿ ನೋಟಿಸ್ ನೀಡಲಾಗಿದೆ. ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ರೇರಾ ಮೂಲದಿಂದ ಮಾಹಿತಿ ಸಂಗ್ರಹಿಸಿ ನೋಟಿಸ್ ಜಾರಿಯಾಗಿದೆ
ಜಿಎಸ್‌ಟಿ ಮಿತಿ ಹೆಚ್ಚಿಸುವ ಮನವಿ:
ಸೇವೆಗಾಗಿ 20 ಲಕ್ಷ ರೂ. ಮತ್ತು ವಸ್ತು ಮಾರಾಟಕ್ಕೆ 40 ಲಕ್ಷ ರೂ. ಮಿತಿಯನ್ನು ಕ್ರಮವಾಗಿ 50 ಲಕ್ಷ ಮತ್ತು 1 ಕೋಟಿ ರೂ.ಗೆ ಹೆಚ್ಚಿಸಲು ವ್ಯಾಪಾರಿಗಳು ಆಗ್ರಹಿಸಿದ್ದಾರೆ. ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲು ಅಧಿಕಾರಿಗಳು ಸಲಹೆ ನೀಡಿದ್ದಾರೆ.