ಬೆಂಗಳೂರು, ಆಗಸ್ಟ್ 14, (ಕರ್ನಾಟಕ ವಾರ್ತೆ) : ರೈತರ ಹಿತ ಕಾಪಾಡಲು ನಾವು ಸದಾ ಬದ್ದರಾಗಿದ್ದೇವೆ. ನಾಡಪ್ರಭು ಕೆಂಪೇಗೌಡ ಬಡಾವಣೆ ನಿಮಾರ್ಣಕ್ಕಾಗಿ ಭೂ ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಭೂಮಿ ಕಳೆದುಕೊಂಡಿರುವ ರೈತರಿಗೆ ಸೂಕ್ತ ಪರಿಹಾರ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ವಿಧಾನ ಪರಿಷತ್ ಸದಸ್ಯ ಟಿ.ಎನ್. ಜವರಾಯಿಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಉಪ ಮುಖ್ಯಮಂತ್ರಿಗಳು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕಾಗಿ ಬಿ.ಡಿ.ಎ ಕಾಯ್ದೆ 1976 ಕಲಂ 17(1) ಮತ್ತು (3) ರಡಿ ದಿನಾಂಕ: 21-05-2008 ರಂದು ಒಟ್ಟು 4814 ಎಕರೆ 15 ಗುಂಟೆ ವಿಸ್ತೀರ್ಣದ ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳು ಪ್ರಥಮಿಕ ಅಧಿಸೂಚನೆ ಹೊರಡಿಸಲಾಗಿದೆ.
ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಕಾಯ್ದೆ ಕಲಂ 19 (1)ರಡಿಯಲ್ಲಿ ದಿನಾಂಕ: 18-02-2010 ರಂದು 4043 ಎಕರೆ 27 ಗುಂಟೆ ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳಲು ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಭೂ ಸ್ವಾಧೀನ ಪ್ರಕ್ರಿಯೆ ಅಂತಿಮಗೊಳಿಸಿ ಇಂಜಿನಿಯರಿಂಗ್ ವಿಭಾಗಕ್ಕೆ ಹಸ್ತಾಂತರಿಸಿದ ಜಮೀನಿನ ವಿಸ್ತೀರ್ಣ 2806 ಎಕರೆ 08 ಗುಂಟೆ, ಇದರಲ್ಲಿ ಒಟ್ಟು 30296 ನಿವೇಶನಗಳನ್ನು ರಚಿಸಲಾಗಿದ್ದು, 22481 ನಿವೇಶನಗಳನ್ನು ಹಂಚಿಕೆ / ಹರಾಜು ಮಾಡಲಾಗಿದೆ.
ಡಾ. ಕೆ. ಶಿವರಾಮಕಾರಂತ ಬಡಾವಣೆ ರಚನೆಗಾಗಿ ದಿನಾಂಕ: 30-12-2008ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿ ದಿನಾಂಕ: 30-10-2018 ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಡಾ. ಕೆ. ಶಿವರಾಮ ಕಾರಂತ ಬಡಾವಣೆಯಲ್ಲಿ ಸಂಪರ್ಕವನ್ನು ಸುಧಾರಿಸಲು ಆರ್.ಎಂ.ಪಿ 2015 ರಸ್ತೆ ಮತ್ತು ಬೈಪಾಸ್ ರಸ್ತೆ ಗಾಗಿ ದಿನಾಂಕ: 18-02-2022 ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದು, ದಿನಾಂಕ: 06-08-2022ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಪ್ರಾಥಮಿಕ ಮತ್ತು ಅಂತಿಮ ಅಧಿಸೂಚನೆಯಲ್ಲಿ ಬಿಟ್ಟುಹೋದ ಭೂಮಿಯನ್ನು ಬಡಾವಣೆಯೊಳಗೆ ಗುರುತಿಸಲು ದಿನಾಂಕ: 19-08-2022ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದ್ದು, ದಿನಾಂಕ: 18-10-2022 ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಮಾನ್ಯ ಉಚ್ಚ ನ್ಯಾಯಾಲಯವು ರಿಟ್ ಅಪೀಲ್ ಸಂ. 252/2017ರಲ್ಲಿ Status quo ಆದೇಶ ನೀಡಿರುವುದರಿಂದ ನಿವೇಶನಗಳನ್ನು ಹಂಚಿಕೆ ಮಾಡಿರುವುದಿಲ್ಲ ಎಂದು ತಿಳಿಸಿದರು.