ಬೆಂಗಳೂರು – ರಾಜ್ಯದಲ್ಲಿ ಯೂರಿಯಾ ಗೊಬ್ಬರ ಕೊರತೆಯಿಂದಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಬಿಜೆಪಿಯು ಸರ್ಕಾರದ ನಿರ್ಲಕ್ಷ್ಯ ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿರುವ ನಡುವೆ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕೇಂದ್ರ ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ.
ಮಂಗಳವಾರ ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಡಿಕೆಶಿ, “ಗೊಬ್ಬರದ ಇಲಾಖೆ ನಮ್ಮ ಕೈಯಲ್ಲೇನಿಲ್ಲ. ಇದು ಸಂಪೂರ್ಣವಾಗಿ ಕೇಂದ್ರ ಕೃಷಿ ಇಲಾಖೆಯ ಅಧೀನದಲ್ಲಿದೆ. ನಾವು ಫ್ಯಾಕ್ಟರಿ ಹೊಂದಿಲ್ಲ, ಕೇವಲ ಹಂಚಿಕೆ ಮಾತ್ರ ಮಾಡುತ್ತೇವೆ” ಎಂದು ಸ್ಪಷ್ಟಪಡಿಸಿದರು.
“ಬಿಜೆಪಿ ನಮ್ಮ ವಿರುದ್ಧವಲ್ಲ, ತಮ್ಮ ಪಕ್ಷದ ವಿರುದ್ಧವೇ ಪ್ರತಿಭಟನೆ ಮಾಡಬೇಕು. ಅವರೇನು ಮಾಡಿದ್ರು? ತಮ್ಮ ಆಡಳಿತದ ಕಾಲದಲ್ಲೇ ರೈತರಿಗೆ ಗೊಬ್ಬರ ಸಿಗದೇ ಗುಂಡು ಹಾರಿಸಿದ ಘಟನೆ ಉಂಟು” ಎಂದು ಡಿಕೆಶಿ ಹಿಂದಿನ ಸರ್ಕಾರವನ್ನು ಹೊಡೆದಿದ್ದಾರೆ.
ಅದೇ ಸಮಯದಲ್ಲಿ, ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಎಷ್ಟು ಗೊಬ್ಬರ ಪೂರೈಕೆ ಮಾಡಲಾಗಿದೆ ಎಂಬ ವಿವರಗಳು ದಾಖಲೆಗಳೊಂದಿಗೆ ಲಭ್ಯವಿದ್ದು, ಯಾವುದೇ ತಾರತಮ್ಯ ಇಲ್ಲ ಎಂದು ಹೇಳಿದರು.
ಸಿಎಂ ಸಭೆಗೆ ಆಹ್ವಾನ ಇಳಿವಿಲ್ಲದ ಬಗ್ಗೆ ಪ್ರತಿಕ್ರಿಯೆ
“ಸಿಎಂ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರ ಬಳಸಿ ಶಾಸಕರ ಸಭೆ ನಡೆಸುತ್ತಿದ್ದಾರೆ. ಇದರಲ್ಲಿ ತಪ್ಪೇನಿದೆ?” ಎಂದು ಪ್ರತಿಕ್ರಿಯಿಸಿದ ಡಿಕೆಶಿ, “ನನ್ನ ಸಮಸ್ಯೆ ನನಗೆ ಇಲ್ಲದಿದ್ದರೆ ನಿಮಗೇಕೆ? ಈ ವಿಷಯವನ್ನು ನೀವು ಕಥೆಯಾಗಿ ಮಾಡಬೇಡಿ” ಎಂದು ಪತ್ರಕರ್ತರ ಪ್ರಶ್ನೆಗೆ ತೀವ್ರವಾಗಿ ಪ್ರತಿಕ್ರಿಯಿಸಿದರು.