ಬೆಂಗಳೂರು : ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರುವಾರ ಮತ್ತು ಗುರುಪೂರ್ಣಿಮೆ ಪ್ರಯುಕ್ತ ಬೆಳಿಗ್ಗೆ ವಿಶೇಷ ಪೂಜಾ ಕೈಂಕರ್ಯಗಳು, ಅನ್ನದಾನ ಸೇವೆಗಳು ಜರುಗಿದವು. ಸಂಜೆಯ ಕಾರ್ಯಕ್ರಮದಲ್ಲಿ ತೊಟ್ಟಿಲು ಸೇವೆ, ಅಷ್ಟಾವಧಾನ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದುಷಿ ಶ್ರೀಮತಿ ದಿವ್ಯಾ ಗಿರಿಧರ್ ಅವರ ಶಿಷ್ಯೆಯರಾದ ಕು|| ಮನಸ್ವಿ ಕಶ್ಯಪ್ ಮತ್ತು ಕು|| ವರ್ಣಶ್ರೀ ಮುರೂರ್ ಅವರು ಅಪರೋಕ್ಷ ಜ್ಞಾನಿಗಳಿಂದ ರಚಿಸಲ್ಪಟ್ಟ ಹಲವಾರು ಅಪರೂಪದ ಹರಿದಾಸರ ಪದಗಳನ್ನು ತಾರತಮ್ಯೋಕ್ತವಾಗಿ ಸುಶ್ರಾವ್ಯವಾಗಿ ಹಾಡಿದರು. ಕಿಕ್ಕಿರಿದು ನೆರೆದಿದ್ದ ಸಹಸ್ರಾರು ಪ್ರೇಕ್ಷಕರು ಎದ್ದುನಿಂತು ಕರತಾಂಡವ ಮಾಡಿ ಹರ್ಷ ವ್ಯಕ್ತಪಡಿಸಿದರು. ಇವರ ಗಾಯನಕ್ಕೆ ಕೀ-ಬೋರ್ಡ್ ವಾದನದಲ್ಲಿ ವಿದ್ವಾನ್ ಶ್ರೀ ಜಯರಾಮಾಚಾರ್ ಮತ್ತು ತಬಲಾ ವಾದನದಲ್ಲಿ ಶ್ರೀ ಸತ್ಯಪ್ರಮೋದ ಸಾಥ್ ನೀಡಿದರು.
ರಿಪಬ್ಲಿಕ್ ಕನ್ನಡ ವಾಹಿನಿಯ ಹಿರಿಯ ವಾರ್ತಾ ನಿರೂಪಕರಾದ ಶ್ರೀ ಶ್ರೀಪಾದ ಪಾಟೀಲ್ ಕುಟುಂಬ ಸಮೇತ ರಾಯರ ದರ್ಶನ ಪಡೆದರು. ಈ ಎಲ್ಲಾ ಕಾರ್ಯಕ್ರಮಗಳು ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್ ಕೆ ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಜರುಗಿದವು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು. ಗುರುರಾಯರ ದರ್ಶನಕ್ಕೆ ಬೆಳಗ್ಗೆ 5-30 ರಿಂದ ರಾತ್ರಿ 11ರ ವರೆಗೆ ಜನಸಾಗರ ಹರಿದುಬರುತ್ತಿತ್ತು.