Live Stream

[ytplayer id=’22727′]

| Latest Version 8.0.1 |

Politics NewsState News

ದೇಶದಲ್ಲಿ ಗೊಂದಲ ಸೃಷ್ಟಿಸಲು ಹೊರಟ ಕಾಂಗ್ರೆಸ್ ಪಕ್ಷ: ವಿಜಯೇಂದ್ರ ಆಕ್ಷೇಪ

ದೇಶದಲ್ಲಿ ಗೊಂದಲ ಸೃಷ್ಟಿಸಲು ಹೊರಟ   ಕಾಂಗ್ರೆಸ್ ಪಕ್ಷ: ವಿಜಯೇಂದ್ರ ಆಕ್ಷೇಪ

ಬೆಂಗಳೂರು: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಸಾಧ್ಯ; ಎನ್‍ಡಿಎ ಅಲ್ಲಿ ಅಧಿಕಾರಕ್ಕೆ ಬರಲಿದೆ ಎಂಬುದು ಖಾತರಿ ಆದ ಬಳಿಕ ದೇಶದಲ್ಲಿ ಗೊಂದಲ ಸೃಷ್ಟಿಸುವ ಕೆಲಸವನ್ನು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.
“ಹರ್ ಘರ್ ತಿರಂಗ” (ಮನೆ ಮನೆಗೆ ತ್ರಿವರ್ಣ) ಅಭಿಯಾನದ ಸಂಬಂಧ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ರಾಜ್ಯ ಮಟ್ಟದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಹಾರಾಷ್ಟ್ರ ಮತ್ತಿತರ ರಾಜ್ಯಗಳಲ್ಲಿ ಚುನಾವಣಾ ಆಯೋಗದ ದುರ್ಬಳಕೆ ಆಗಿದೆ ಎಂದಿದ್ದಾರೆ. ಕರ್ನಾಟಕದಲ್ಲೂ ಮತ ಅಕ್ರಮ ಆಗಿದೆ ಎಂದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಹೇಳುತ್ತಿದ್ದಾರೆ ಎಂದು ಟೀಕಿಸಿದರು. ಬೆಂಗಳೂರು ಕೇಂದ್ರ, ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಚುನಾವಣಾ ಆಯೋಗದ ದುರುಪಯೋಗ ಮಾಡಿಕೊಂಡಿದೆ ಎಂದು ಆರೋಪಿಸಿ, ಅಪಪ್ರಚಾರ ಮಾಡುತ್ತಿದ್ದಾರೆ. ಈ ಮೂಲಕ ದೇಶದಲ್ಲಿ ಗೊಂದಲ ಸೃಷ್ಟಿಸಲು ಕಾಂಗ್ರೆಸ್ ಹೊರಟಿದೆ ಎಂದು ದೂರಿದರು.
ಮಹಾರಾಷ್ಟ್ರ ಮತ್ತಿತರ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು ಪರಾಭವಗೊಂಡಿತ್ತು. ಬಳಿಕ ಕೇಂದ್ರದಲ್ಲಿ ಹೇಗಾದರೂ ಮಾಡಿ ಅಧಿಕಾರಕ್ಕೆ ಬರಬೇಕೆಂಬ ಹಪಾಹಪಿ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಇತ್ತು. ಅದರಲ್ಲೂ ಅವರು ಯಶಸ್ಸು ಕಾಣಲು ಸಾಧ್ಯವಾಗಿಲ್ಲ ಎಂದು ವಿಶ್ಲೇಷಿಸಿದರು.

ರಾಹುಲ್ ಅಪಪ್ರಚಾರಕ್ಕೆ ಪ್ರತ್ಯುತ್ತರ: ಬಿಜೆಪಿ ಸಿದ್ಧ..ಕರ್ನಾಟಕ ಎಂದರೆ ರಾಹುಲ್ ಅವರಿಗೆ ವಿಶೇಷ ಪ್ರೀತಿ. ರಾಜ್ಯವನ್ನು ಕಾಂಗ್ರೆಸ್ ಪಕ್ಷದ ಎಟಿಎಂ ಆಗಿ ಪರಿವರ್ತಿಸಲಿದ್ದಾರೆ ಎಂದು ನಾವು ಚುನಾವಣೆ ವೇಳೆ ಹೇಳಿದ್ದೆವು. ಕಪ್ಪ ಕಾಣಿಕೆಗೆ ಕರ್ನಾಟಕವನ್ನು ದುರ್ಬಳಕೆ ಮಾಡಲಿದ್ದಾರೆ ಎಂದು ಹೇಳುತ್ತಿದ್ದೆವು. ಬೆಲೆ ಏರಿಕೆ ಮೂಲಕ ರಾಜ್ಯದ ಜನರ ಮೇಲೆ ಬರೆ ಎಳೆಯುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ ಎಂದು ವಿಜಯೇಂದ್ರ ಅವರು ಆರೋಪಿಸಿದರು.
ದೇಶದ್ರೋಹಿಗಳಿಗೆ ಕರ್ನಾಟಕ ಸ್ವರ್ಗವಾದರೆ, ರಾಹುಲ್ ಅವರಿಗೆ ಕರ್ನಾಟಕ ಎಂದರೆ ಬಹಳ ಪ್ರೀತಿ. ಇದು ಇಲ್ಲಿನ ಜನತೆಯ ಮೇಲಲ್ಲ; ದೆಹಲಿಗೆ ಎಲ್ಲ ರೀತಿ ವ್ಯವಸ್ಥೆ ತಲುಪುತ್ತಿದೆ ಎಂಬುದೇ ಇದಕ್ಕೆ ಕಾರಣ ಎಂದು ವಿವರಿಸಿದರು. ಅಪಪ್ರಚಾರಕ್ಕಾಗಿ ನಾಳೆ ಮತ್ತೆ ಬರುತ್ತಾರೆ. ಬಿಜೆಪಿ ಕೂಡ ಇದಕ್ಕೆ ಪ್ರತ್ಯುತ್ತರ ಕೊಡಲು ಸಜ್ಜಾಗಿದೆ ಎಂದರು.ಕಾಂಗ್ರೆಸ್ ಪಕ್ಷದವರು ದೇಶದ್ರೋಹಿಗಳೆಂದರೆ ತಪ್ಪಾಗಲಾರದು. ಕೇವಲ ಅಲ್ಪಸಂಖ್ಯಾತರನ್ನು ಓಲೈಕೆ ಮಾಡಲು ಸಮಾಜದ ನಡುವೆ ವಿಷಬೀಜ ಬಿತ್ತುತ್ತಿದ್ದಾರೆ. ದೇಶ- ರಾಜ್ಯದಲ್ಲಿ ಅಶಾಂತಿಯನ್ನು ಸೃಷ್ಟಿಸುವ ಕೆಲಸ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ನಡೆಯುತ್ತಿದೆ ಎಂದು ಹೇಳಿದರು.

ಮನ್ ಕೀ ಬಾತ್ ವೀಕ್ಷಣೆಯಲ್ಲಿ ಸಾಧನೆ
ದೇಶದ ಆಗುಹೋಗುಗಳು, ಪ್ರಚಲಿತ ವಿದ್ಯಮಾನಗಳು, ಸಾಧಕರ ಬಗ್ಗೆ ನರೇಂದ್ರ ಮೋದಿ ಜೀ ಅವರು ಮನ್ ಕೀ ಬಾತ್ ಮೂಲಕ ದೇಶದ ಜನತೆಗೆ ಯಶಸ್ವಿಯಾಗಿ ನಡೆಸಿಕೊಡುತ್ತಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು. ಕಳೆದ ಮನ್ ಕೀ ಬಾತ್ 33 ಸಾವಿರ ಬೂತ್‍ಗಳಲ್ಲಿ ವೀಕ್ಷಣೆ ಆಗಿದ್ದು, ದೇಶದ ನಾಲ್ಕನೇ ಸ್ಥಾನಕ್ಕೆ ಕರ್ನಾಟಕ ಬಿಜೆಪಿ ಏರಿದೆ ಎಂದು ಸಂತಸ ವ್ಯಕ್ತಪಡಿಸಿದರು. ಇದಕ್ಕಾಗಿ ಕಾರ್ಯಕರ್ತರನ್ನು ಅಭಿನಂದಿಸಿದರು.
ಮೋದಿಜೀ ಅವರು ರಾಜಕೀಯ ಕುಟುಂಬದ ಹಿನ್ನೆಲೆ ಉಳ್ಳವರಲ್ಲ; ಗುಜರಾತ್ ರಾಜ್ಯದ ಮುಖ್ಯಮಂತ್ರಿಗಳಾಗಿದ್ದವರು. ಯುಪಿಎ ಸರಕಾರದ ಬಗ್ಗ್ಗೆ ದೇಶದ ಜನರು ಬೇಸತ್ತಿದ್ದರು. ಭಾರತಕ್ಕೆ ಭವಿಷ್ಯವೇ ಇಲ್ಲ ಎಂದು ಯುವಜನರು ಯೋಚಿಸುತ್ತಿದ್ದ ಸಂದರ್ಭದಲ್ಲಿ ಈ ದೇಶಕ್ಕೆ ಉಜ್ವಲ ಭವಿಷ್ಯ ಇದೆ; ಭಾರತದಲ್ಲಿ ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಿದೆ. ಭ್ರಷ್ಟಾಚಾರರಹಿತ ಆಡಳಿತ ಕೊಡಲು ಸಾಧ್ಯವಿದೆ ಎಂದು ಸ್ವಾಭಿಮಾನಿ ಜನರಲ್ಲಿ ವಿಶ್ವಾಸ ಮೂಡಿಸಿದವರು. ಅವರು ತಮ್ಮನ್ನು ದೇಶದ ಜನಸೇವಕ ಎಂದೇ ತಿಳಿಸಿ ಕೆಲಸ ಮಾಡಿದವರು ಎಂದು ವಿವರಿಸಿದರು.
ಅನುಕಂಪದ ಆಧಾರದಲ್ಲಿ ಮೋದಿಜೀ ಅವರು ಪ್ರಧಾನಿಗಳಾಗಲಿಲ್ಲ; ಪಾರದರ್ಶಕ ಆಡಳಿತ, ಅಭಿವೃದ್ಧಿ ಮಾಡಿದ್ದು, ಭಾರತವು ಜಗತ್ತಿನ ನಾಲ್ಕನೇ ಆರ್ಥಿಕ ಶಕ್ತಿಯಾಗಿ ಪರಿವರ್ತನೆ ಆಗಿದೆ. ಭಾರತದ ರಕ್ಷಣಾ ಕ್ಷೇತ್ರದ ವೆಚ್ಚವು ಕೇವಲ 11 ವರ್ಷಗಳಲ್ಲಿ ಮೂರು ಪಟ್ಟುಗಳಷ್ಟು ಹೆಚ್ಚಾಗಿದೆ ಎಂದು ತಿಳಿಸಿದರು. ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ಹೆಮ್ಮೆ, ಸ್ವಾಭಿಮಾನದಿಂದ ಪ್ರತಿಯೊಬ್ಬ ಭಾರತೀಯರೂ ಪಾಲ್ಗೊಳ್ಳಬೇಕೆಂಬುದು ಪ್ರಧಾನಿ ನರೇಂದ್ರ ಮೋದಿ ಜೀ ಅವರ ಆಶಯ ಇದೀಗ ಈಡೇರುತ್ತಿದೆ ಎಂದು ನುಡಿದರು.

ಕಾಂಗ್ರೆಸ್ ಪಕ್ಷ ಭಾರತ ವಿರೋಧಿ- ಸುರೇಂದ್ರನ್
ಉದ್ಘಾಟನೆ ನೆರವೇರಿಸಿದ ಕೇರಳ ಬಿಜೆಪಿ ನಿಕಟಪೂರ್ವ ರಾಜ್ಯಾಧ್ಯಕ್ಷ ಮತ್ತು ದಕ್ಷಿಣ ಭಾರತದ ‘ಹರ್ ಘರ್ ತಿರಂಗ’ ಅಭಿಯಾನದ ಪ್ರಭಾರಿ ಕೆ.ಸುರೇಂದ್ರನ್ ಅವರು ಮಾತನಾಡಿ, ಭಾರತವು ಆಪರೇಷನ್ ಸಿಂದೂರದ ಮೂಲಕ ಪಾಕ್ ಭಯೋತ್ಪಾದಕರಿಗೆ ಪಾಠ ಕಲಿಸಿದೆ. ಆದರೆ, ರಾಹುಲ್ ಗಾಂಧಿಯವರ ಕಾಂಗ್ರೆಸ್ ಕಂಪೆನಿಯು ಪಾಕಿಸ್ತಾನದ ಜೊತೆ ನಿಂತಿದೆ. ಸೋನಿಯಾ- ರಾಹುಲ್ ಅವರ ನೇತೃತ್ವದ ಕಾಂಗ್ರೆಸ್ ಪಕ್ಷವು ಈಗ ಭಾರತ ವಿರೋಧಿ ಪಕ್ಷವಾಗಿ ವರ್ತಿಸುತ್ತಿದೆ ಎಂದು ಟೀಕಿಸಿದರು.
ರಾಹುಲ್ ಗಾಂಧಿಯನ್ನು ನಗರ ನಕ್ಸಲರು, ಟುಕ್ಡೇ ಟುಕ್ಡೇ ಗ್ಯಾಂಗ್ ನಿಯಂತ್ರಿಸುತ್ತಿವೆ. ವಿದೇಶಕ್ಕೆ ಹೋದಾಗ ರಾಹುಲ್ ಗಾಂಧಿ, ಭಾರತದ ವಿರೋಧಿಯಾಗಿ ಮಾತನಾಡುತ್ತಾರೆ. ಚನಾವಣಾ ಆಯೋಗದ ವಿರುದ್ಧವೂ ಅವರು ಮಾತನಾಡುತ್ತಿದ್ದಾರೆ. ಕೇಂದ್ರದ ತನಿಖಾ ಸಂಸ್ಥೆಗಳು, ಸುಪ್ರೀಂ ಕೋರ್ಟಿನ ವಿರುದ್ಧ, ಆಧಾರ್ ಕಾರ್ಡ್- ಜಿಎಸ್‍ಟಿ ವಿರುದ್ಧ ಅವರು ಮಾತುಗಳು ಇರುತ್ತವೆ. ಭಾರತದ ವಿನಾಶವನ್ನು ಅವರು ಬಯಸುತ್ತಾರೆ ಎಂದು ಆಕ್ಷೇಪಿಸಿದರು.
ಕಾಂಗ್ರೆಸ್- ಎಡಪಕ್ಷಗಳ ದೇಶವಿರೋಧಿ ನಡೆಯನ್ನು ಅವರು ಖಂಡಿಸಿದರು. ನರೇಂದ್ರ ಮೋದಿಜೀ ಅವರ ನೇತೃತ್ವದಲ್ಲಿ ಯುವಜನರು, ಜನತೆ ಬಿಜೆಪಿ ಜೊತೆಗಿದ್ದಾರೆ. ಈ ಬಾರಿ ಹರ್ ಘರ್ ತಿರಂಗವು ಹೆಚ್ಚು ಮಹತ್ವದ್ದು ಎಂದು ನುಡಿದರು.
ಇದೇವೇಳೆ ಗಣ್ಯರು ಅಭಿಯಾನದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ರಾಜ್ಯ ಕಾರ್ಯದರ್ಶಿ ಹೆಚ್.ಸಿ.ತಮ್ಮೇಶ್ ಗೌಡ, ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಕು. ಸಿ. ಮಂಜುಳಾ, ಬಿಜೆಪಿ ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಶಾಸಕ ಧೀರಜ್ ಮುನಿರಾಜು, ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಡಾ. ಮಲ್ಲಿಕಾರ್ಜುನ ಬಾಳಿಕಾಯಿ, ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಸ್.ದತ್ತಾತ್ರಿ ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು.

VK DIGITAL NEWS:

ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";