ನವದೆಹಲಿ: ರಾಷ್ಟ್ರೀಯ ರಾಜಧಾನಿ ನವದಿಲ್ಲಿಯಲ್ಲಿ ಭದ್ರತಾ ವಲಯವಾದ ಚಾಣಕ್ಯಪುರಿಯಲ್ಲಿ Congress ಸಂಸದೆ ಸುಧಾ ರಾಮಕೃಷ್ಣನ್ (MP Sudha Ramakrishnan) ಅವರ ಚಿನ್ನದ ಚೈನ್ ಕದಿಯಲ್ಪಟ್ಟ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ. ಈ ಘಟನೆ ದೇಶದ ಮಹಿಳಾ ಭದ್ರತೆ ಕುರಿತು ಗಂಭೀರ ಚಿಂತನೆಗೆ ಕಾರಣವಾಗಿದೆ.
ತಮಿಳುನಾಡಿನ ಮೈಲಾಡುತುರೈ ಕ್ಷೇತ್ರದ ಸಂಸದೆ ಸುಧಾ ರಾಮಕೃಷ್ಣನ್ ಅವರು, ಡಿಎಂಕೆ ಶಾಸಕಿ ರಾಜತಿ ಅವರೊಂದಿಗೆ ಬೆಳಗ್ಗೆ 6:15ರ ಸುಮಾರಿಗೆ ಚಾಣಕ್ಯಪುರಿಯ ಪೋಲೆಂಡ್ ರಾಯಭಾರ ಕಚೇರಿ ಬಳಿ ನಡೆದುಕೊಂಡು ಹೋಗುತ್ತಿದ್ದ ವೇಳೆ, ಹೆಲ್ಮೆಟ್ ಧರಿಸಿದ ವ್ಯಕ್ತಿ ಸ್ಕೂಟರ್‌ನಲ್ಲಿ ಬಂದು ಅವರ ಚಿನ್ನದ ಚೈನ್ ಕಿತ್ತು ಪರಾರಿಯಾಗಿದ್ದಾನೆ.
ಅವರ ಹೇಳಿಕೆಯಲ್ಲಿ, ಕಳ್ಳ ನಿದಾನವಾಗಿ ಎದುರಿನಿಂದ ಬರುತ್ತಿದ್ದ. ಆತ ಚೈನ್ ಕಳ್ಳ ಎಂಬ ಅನುಮಾನ ಬರಲಿಲ್ಲ. ಚೈನ್ ಎಳೆದ ವೇಳೆ, ಅವರ ಕುತ್ತಿಗೆಗೆ ಗಾಯಗಳು ಆಗಿದ್ದು, ಬಟ್ಟೆ ಕೂಡ ಹರಿದಿದೆ ಎಂದು ತಿಳಿಸಿದ್ದಾರೆ. ಸಹಾಯಕ್ಕಾಗಿ ಕೂಗಿದ ಬಳಿಕ, ದೆಹಲಿ ಪೊಲೀಸರ ಗಸ್ತು ವಾಹನಕ್ಕೆ ದೂರು ನೀಡಿದ್ದಾರೆ.
ಸುಧಾ ರಾಮಕೃಷ್ಣನ್ ಅವರು ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದು, ರಾಷ್ಟ್ರೀಯ ರಾಜಧಾನಿಯ ಅತ್ಯಂತ ಭದ್ರ ಪ್ರದೇಶದಲ್ಲೂ ಮಹಿಳೆಯರು ಸುರಕ್ಷಿತವಾಗಿ ನಡೆಯಲು ಸಾಧ್ಯವಿಲ್ಲದ ಸ್ಥಿತಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
“ರಾಜಧಾನಿಯಲ್ಲಿ ಸಂಸದೆ ಸ್ವತಃ ಅದೆಷ್ಟು ಅಪಾಯಕ್ಕೆ ಒಳಗಾಗುತ್ತಿದ್ದಾರೆ ಎಂದರೆ ಸಾಮಾನ್ಯ ಮಹಿಳೆಯರ ಸ್ಥಿತಿ ಹೇಗಿರಬಹುದು?” ಎಂದು ಅವರು ಪತ್ರದಲ್ಲಿ ಪ್ರಶ್ನಿಸಿದ್ದಾರೆ.