ಬೆಂಗಳೂರು, ಆಗಸ್ಟ್ 13, (ಕರ್ನಾಟಕ ವಾರ್ತೆ) : ಉಚ್ಚ ನ್ಯಾಯಾಲಯದ ತೀರ್ಪಿನ ನಂತರ, ನ್ಯಾಯಾಲಯದ ತೀರ್ಪಿಗೆ ಬದ್ದರಾಗಿ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಯೋಜನೆಯನ್ನು ಜಾರಿಗೊಳಿಸಲು ಕ್ರಮ ವಹಿಸಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ದಿನಾಂಕ: 14-09-2018 ರಂದು ನಡೆದ ಸಭೆಯಲ್ಲಿ ತೀರ್ಮಾನಿಸಿದಂತೆ ಸರ್ಕಾರದ ದಿನಾಂಕ: 20-09-2018 ರ ಆದೇಶದಲ್ಲಿ ಬೆಂಗಳೂರು ನಗರದಲ್ಲಿ ಬೈಕ್ ಟ್ಯಾಕ್ಸಿ ಯೋಜನೆ ಜಾರಿಗೊಳಿಸುವ ಕುರಿತಂತೆ ಸಾಧಕ – ಬಾಧಕಗಳನ್ನು ಪರಿಶೀಲಸಲು ಬಿ.ಎಂ.ಆರ್.ಸಿ.ಎಲ್ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿ ಆದೇಶಿಸಲಾಗಿತ್ತು. ಸದರಿ ಸಮಿತಿಯು ದಿನಾಂಕ: 22-05-2019 ರಂದು ಸಲ್ಲಿಸಿರುವ ವರದಿಯಲ್ಲಿ ಬೈಕ್ ಟ್ಯಾಕ್ಸಿ ಯೋಜನೆಯನ್ನು ಜಾರಿಗೊಳಿಸುವುದು ಕಾರ್ಯಸಾಧು ಆಗಿರುವುದಿಲ್ಲವೆಂದು ವರದಿಯನ್ನು ಸಲ್ಲಿಸಿತು.
ಏತನ್ಮಧ್ಯೆ ಸರ್ಕಾರದ ಅಧಿಸೂಚನೆ ಸಂ. ಟಿ.ಟಿ 180 ಟಿಡಿಒ 2020 ದಿನಾಂಕ: 14-07-2021 ರಲ್ಲಿ ಸಾರ್ವಜನಿಕ ಸಾರಿಗೆಗಾಗಿ ಮೊದಲ ಮತ್ತು ಕೊನೆಯ ಹಂತದ ಸಾರಿಗೆ ಸಂಪರ್ಕವನ್ನು ಕಲ್ಪಿಸುವ ಉದ್ದೇಶದಿಂದ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಸದರಿ ಯೋಜನೆಯು ಬ್ಯಾಟರಿ ಚಾಲಿತ ವಿದ್ಯುತ್ ಮೋಟಾರು ಸೈಕಲ್ ಅಥವಾ ವಿದ್ಯುತ್ ಬೈಕ್‍ಗಳಿಗೆ ಮಾತ್ರ ಅನ್ವಯವಾಗತಕ್ಕದ್ದು ಎಂದು ಆದೇಶಿಸಲಾಗಿತ್ತು. ಆದರೆ ಪ್ರಸ್ತುತ ಕೆಲವು ಖಾಸಗಿ ಆಫ್ ಆಧಾರಿತ ಸಂಸ್ಥೆಗಳು ಮೋಟಾರು ವಾಹನ ಕಾಯ್ದೆ ಮತ್ತು ಅದರಡಿ ರಚಿತವಾದ ನಿಯಮಗಳನ್ನು ಉಲ್ಲಂಘಿಸಿ ಅನಧಿಕೃತವಾಗಿ ಸಾರಿಗೇತರ (ಪೆಟ್ರೋಲ್ ದ್ವಿ ಚಕ್ರ) ವಾಹನಗಳನ್ನು ಉಪಯೋಗಿಸುತ್ತಿರುವ ಬಗ್ಗೆ ಹಲವಾರು ದೂರುಗಳು ಬಂದಿರುತ್ತವೆ. ಹಾಗಾಗಿ ಕಾನೂನಿನಲ್ಲಿ ಪೆಟ್ರೋಲ್ ದ್ವಿ-ಚಕ್ರ ವಾಹನಗಳಿಗೆ ಅವಕಾಶವಿಲ್ಲದಿರುವುದರಿಂದ ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆಯನ್ನು ಸರ್ಕಾರದ ಅಧಿಸೂಚನೆ ಸಂ. ಟಿ.ಡಿ 160 ಟಿಡಿಒ 2020 ದಿನಾಂಕ 06-03-2024 ರಲ್ಲಿ ರದ್ದುಗೊಳಿಸಿ ಆದೇಶಿಸಲಾಗಿದೆ.
ಓಲಾ, ಉಬರ್, ರಾಪಿಡೋ ಕಂಪನಿಗಳು ರಾಜ್ಯದಲ್ಲಿ ಬೈಕ್, ಟ್ಯಾಕ್ಸಿ ಸೇವೆಯನ್ನು ನಿರ್ವಹಿಸುವುದಕ್ಕೆ ಸಂಬಂಧಿಸಿದಂತೆ ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದ ಮುಂದೆ ರಿಟ್ ಅರ್ಜಿಗಳ ಸಂಖ್ಯೆ 6421/2022 (ಎಂ.ವಿ.ಐ) 14627/2021 (ಎಂ.ವಿ) 19869/2021 (ಎಂ.ವಿ) ಮತ್ತು 24569/2023 (ಎಂ.ವಿ) ಗಳನ್ವಯ ಪ್ರಕರಣಗಳನ್ನು ದಾಖಲಿಸಿದ್ದು, ಸದರಿ ಪ್ರಕರಣಗಳನ್ನು ಮಾನ್ಯ ಉಚ್ಚ ನ್ಯಾಯಾಲಯವು ದಿನಾಂಕ: 02-04-2025 ರಂದು ಹೊರಡಿಸಿರುವ ಆದೇಶದಲ್ಲಿ ವಜಾಗೊಳಿಸಿರುತ್ತದೆ.
ಉಚ್ಚ ನ್ಯಾಯಾಲಯದ ಏಕ ಸದಸ್ಯ ಪೀಠವು ದಿನಾಂಕ: 02-04-2025ರಂದು ಹೊರಡಿಸಿರುವ ಆದೇಶದಿಂದ ಬಾಧಿತರಾಗಿ ಮೆ. ಉಬರ್ ಇಂದಿಯಾ ಸಿಸ್ಟಂ ಪ್ರೈವೈಟ್ ಲಿಮಿಟೆಡ್, ಮೆ. ಎ.ಎನ್.ಐ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್, ರೂಪೇನ್ ಟ್ರಾನ್ಸ್‍ಪೋರ್ಟೆಷನ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಮತ್ತು ಬೈಕ್ ಟ್ಯಾಕ್ಸಿ ವೆಲ್ಪೇರ್ ಅಸೋಸಿಯೇಷನ್ ಇವರುಗಳು ಮಾನ್ಯ ಉಚ್ಚ ನ್ಯಾಯಾಲಯ ದ್ವಿ ಸದಸ್ಯ ಪೀಠದ ಮುಂದೆ ಸರ್ಕಾರದ ವಿರುದ್ದ ಪ್ರಕರಣಗಳನ್ನು ದಾಖಲಿಸಿರುತ್ತಾರೆ.
ಪ್ರಸ್ತುತ ಸದರಿ ಪ್ರಕರಣಗಳು ಮಾನ್ಯ ಉಚ್ಚ ನ್ಯಾಯಾಲಯದ ದ್ವಿ ಸದಸ್ಯ ಪೀಠದ ಮುಂದೆ ವಿಚಾರಣೆಗಾಗಿ ಬಾಕಿ ಇರುತ್ತದೆ. ವಿಚಾರಣೆ ಮುಗಿದ ನಂತರ ನ್ಯಾಯಾಲಯವು ಹೊರಡಿಸುವ ಆದೇಶದ ತೀರ್ಪಿಗೆ ಬದ್ದರಾಗಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.