ಇಡೀ ದೇಶದಲ್ಲಿ ಹುತಾತ್ಮ ಯೋಧರಿಗೆ ರಾಷ್ಟ್ರೀಯ ಸೈನಿಕ ಸ್ಮಾರಕ ನಿರ್ಮಿಸಿರುವ ಏಕೈಕ ರಾಜ್ಯ ಕರ್ನಾಟಕವಾಗಿದ್ದು, ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಮತ್ತು ಗೌರವ ಸಲ್ಲಿಸಲು ನಿರ್ಮಾಣವಾಗಿರುವ 75 ಅಡಿ ಎತ್ತರ ಸುಮಾರು 400 ಟನ್ ತೂಕವುಳ್ಳ, ಭಾರತೀಯ ಸೇನೆಯ ವೀರರಂತೆಯೇ ಅಚಲ, ಧೃಡ, ಅಮರ ಮತ್ತು ಎಲ್ಲ ನೈಸರ್ಗಿಕ ತಾಪಗಳನ್ನು ತಡೆದುಕೊಳ್ಳಬಲ್ಲ ಶಕ್ತಿಶಾಲಿ ಏಕಶಿಲೆಯ ಸ್ತಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಿದರು.
ಸೈನಿಕ ಮತ್ತು ಪುನರ್ವಸತಿ ಇಲಾಖೆ ಹಾಗೂ ರಾಷ್ಟ್ರೀಯ ಸೈನಿಕ್ ಸ್ಮಾರಕ ಮ್ಯಾನೇಜ್ ಮೆಂಟ್ ಟ್ರಸ್ಟ್ ವತಿಯಿಂದ ಬೆಂಗಳೂರಿನ ರಾಷ್ಟ್ರೀಯ ಸೈನಿಕ ಸ್ಮಾರಕದಲ್ಲಿ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ದೇಶದ ಹೆಮ್ಮೆಯ ಸೈನಿಕರ ತ್ಯಾಗ – ಬಲಿದಾನದ ಸಂಕೇತವಾದ ವೀರಗಲ್ಲನ್ನು ಲೋಕಾರ್ಪಣೆಗೊಳಿಸಿ, ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು.
ಸೇನೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿರುವವರು ಈಗ 91 ವಸಂತಗಳನ್ನು ಪೂರೈಸಿರುವ ಮಾಜಿ ಸೇನಾಧಿಕಾರಿ ಏರ್ ಕಮೊಡೊರ್ ಎಂ.ಕೆ. ಚಂದ್ರಶೇಖರ್ ಹಾಗೂ ವೀರಗಲ್ಲನ್ನು ತಯಾರು ಮಾಡಿದ ಶಿಲ್ಪಿ ಅಶೋಕ್ ಗುಡಿಗಾರ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ, ವಸತಿ ಮತ್ತು ವಕ್ಫ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರಾದ ಜಮೀರ್ ಅಹ್ಮದ್ ಖಾನ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಮತ್ತು ನಿರೀಕ್ಷಕರಾದ ಡಾ.ಎಂ.ಎ.ಸಲೀಂ, ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ತುಷಾರ್ ಗಿರಿನಾಥ್ ಸೇರಿದಂತೆ ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.