ನಿನ್ನೆ ಸೋಮವಾರ ದಿನಾಂಕ 06-10-2025 ರಂದು ಭಾರತದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ರವರನ್ನು ಗುರಿಯಾಗಿಸಿಕೊಂಡು ನಡೆಸಿದ ಅಪಚಾರ ಅತ್ಯಂತ ದುರದೃಷ್ಟಕರ ಮತ್ತು ಖಂಡನೀಯ.
ಇಂತಹ ಅಪಚಾರಗಳು ಸನಾತನ ಮೌಲ್ಯಗಳಿಗೆ ವಿರುದ್ಧವಾಗಿವೆ. ಸನಾತನ ಹಿಂದೂ ಧರ್ಮದಲ್ಲಿ ಈ ತರಹದ ಕೃತ್ಯಗಳಿಗೆ ಎಲ್ಲಿಯೂ ಸಹ ಬೆಲೆ ಇರುವುದಿಲ್ಲ. ಸನಾತನಿಯಾದ ನಾನು ಸಹ ಕೃತ್ಯವನ್ನು ಖಂಡಿಸುತ್ತೇನೆ.
ಭಾರತದ ಮುಖ್ಯ ನ್ಯಾಯಾಧೀಶರು ನ್ಯಾಯದ ಸಂಕೇತವಾಗಿದ್ದು, ಬಹುಶಃ ವಿಶ್ವದ ಅತಿದೊಡ್ಡ ನ್ಯಾಯಾಂಗವನ್ನು ಪ್ರತಿನಿಧಿಸುತ್ತಾರೆ. ಅವರಿಗೆ ತೋರಿಸಿರುವ ಅಗೌರವ ಇಡೀ ಸಂಸ್ಥೆಗೆ ತೋರಿದಂತಾಗುತ್ತದೆ.
ಯಾವುದೇ ಪರಿಸ್ಥಿತಿಯಲ್ಲಿಯೂ ಸಹ ನ್ಯಾಯಾಲಯದ ಕಲಾಪಗಳು ನಡೆಯುವಾಗ, ನ್ಯಾಯಾಲಯದಲ್ಲಿ, ನ್ಯಾಯಾಧೀಶರ ಮೇಲೆ ಶೂ ಎಸೆಯುವ ಅಥವಾ ಇನ್ಯಾವುದೇ ರೀತಿಯ ಕೃತ್ಯಗಳನ್ನು ನಡೆಸಿ ನ್ಯಾಯದಾನ ಪ್ರಕ್ರಿಯೆಯನ್ನು ಹತ್ತಿಕ್ಕಲು ಯಾರು ಪ್ರಯತ್ನಿಸಬಾರದು.
ಕೆಲವು ರಾಜಕೀಯ ಪ್ರೇರಿತ ವಕೀಲರುಗಳು, ತಮ್ಮ ಸ್ವಾರ್ಥಕ್ಕಾಗಿ ಈ ಘಟನೆಯನ್ನು ಸನಾತನದ ಧರ್ಮ ಮತ್ತು ಸನಾತನಿಗಳ ಮೇಲೆ ಅಪಪ್ರಚಾರ ಮಾಡುತ್ತಿರುವುದನ್ನು ಈ ಸಂದರ್ಭದಲ್ಲಿ ನಾನು ಖಂಡಿಸುತ್ತೇನೆ ಹಾಗೂ ಇಂತಹ ಸಣ್ಣತನಕ್ಕೆ ಯಾರು ಇಳಿಯಬಾರದು ಎಂದು ಅಗ್ರಹಿಸುತ್ತೇನೆ.
ಸಾವಿರಾರು ವರ್ಷಗಳಿಂದ ವಿಕಸನಗೊಂಡಿರುವ ಸನಾತನ ಧರ್ಮವು ಇಂತಹ ಯಾವುದೇ ಹೇಳಿಕೆಯಿಂದ ಪ್ರಭಾವಿತವಾಗುವುದಿಲ್ಲ.
ಸನಾತನಿಗಳಾದ ಭಾರತದ ಪ್ರಧಾನ ಮಂತ್ರಿಗಳು ಸಹ ಈ ಕೃತ್ಯವನ್ನು ಖಂಡಿಸಿದಲ್ಲದೆ, ಮುಖ್ಯ ನ್ಯಾಯಮೂರ್ತಿಗಳ ಸಂಯಮವನ್ನು ಹೊಗಳಿರುವುದನ್ನು, ಈ ಸಂದರ್ಭದಲ್ಲಿ ನಾನು ಗೌರವಿಸುತ್ತೇನೆ.
ಈಗಾಗಲೇ ಸನಾತನಿಯಾದ, ಭಾರತೀಯ ವಕೀಲರ ಪರಿಷತ್ತಿನ ಅಧ್ಯಕ್ಷರು, ದುಷ್ಕೃತ್ಯ ನಡೆಸಿದ ವಕೀಲನನ್ನು ವೃತ್ತಿಯಿಂದ ತಕ್ಷಣವೇ ಅಮಾನತುಗೊಳಿಸಿ ಕ್ರಮ ಕೈಗೊಂಡಿದ್ದಾರೆ. ಇಂತಹ ತಕ್ಷಣದ ಕ್ರಮ ಜರುಗಿಸಿರುವುದು ಶ್ಲಾಘನೀಯ.
ಸನಾತನಿ ವಕೀಲರುಗಳಾದ ನಾವುಗಳು ಈ ರಾಷ್ಟ್ರದ ಸಂವಿಧಾನ ಮತ್ತು ನ್ಯಾಯಾಂಗದ ರಕ್ಷಣೆಯಲ್ಲದೆ, ಸಾಮರಸ್ಯದ ಬದುಕು, ಸಾಮಾಜಿಕ ಬದ್ಧತೆಯನ್ನು ಎತ್ತಿ ಹಿಡಿಯಲು ಮುಂದಾಗಬೇಕು ಎಂದು ಈ ಸಂದರ್ಭದಲ್ಲಿ ವಿನಂತಿಸುತ್ತೇನೆ.
ಹರೀಶ್. ಎಸ್
ವಕೀಲರು-ಸದಸ್ಯರು
ಕರ್ನಾಟಕ ರಾಜ್ಯ ವಕೀಲರ ಪರಿಷತ್ತು
9845538833





















