Live Stream

[ytplayer id=’22727′]

| Latest Version 8.0.1 |

Cultural

Ananta Chaturdashi 2025: ಅನಂತ ಚತುರ್ದಶಿ ವ್ರತ ಆಚರಣೆಯ ಮಹತ್ವ ಏನು? ವಿವರವಾದ ಲೇಖನ ಇಲ್ಲಿದೆ

Ananta Chaturdashi 2025: ಅನಂತ ಚತುರ್ದಶಿ ವ್ರತ ಆಚರಣೆಯ ಮಹತ್ವ ಏನು? ವಿವರವಾದ ಲೇಖನ ಇಲ್ಲಿದೆ

ಭಾದ್ರಪದ ಶುಕ್ಲ ಪಕ್ಷ ಚತುರ್ದಶಿಯಂದು ಅನಂತ ಚತುರ್ದಶಿ ವ್ರತವನ್ನು (Ananta Chaturdashi Vrata 2025) ಆಚರಿಸಲಾಗುತ್ತದೆ. ಇದರ ಅವಧಿ ಹದಿನಾಲ್ಕು ವರ್ಷಗಳು. ನಂತರ ವ್ರತದ ಉದ್ಯಾಪನೆ ಮಾಡಲಾಗುತ್ತದೆ. ಈ ವ್ರತವನ್ನು ಯಾರಾದಾರೂ ಮಾಡಲು ಸೂಚಿಸಿದರೆ ಅಥವಾ ಅನಂತ ವ್ರತದ ದಾರ ದೊರೆತರ ಮಾಡುತ್ತಾರೆ (Devotional). ಅನಂತ ಚತುರ್ದಶಿಯಲ್ಲಿ ಬರುವ ‘ಅನಂತ’ದ ಅರ್ಥವೆಂದರೆ ಅನಾದಿ ಅನಂತ ರೂಪದಲ್ಲಿರುವ, ಎಂದೂ ಕಡಿಮೆಯಾಗದ ಚೈತನ್ಯ ರೂಪದಲ್ಲಿರುವ ಶಕ್ತಿ (Spiritual).

ಅ. ಅನಂತ ಚತುರ್ದಶಿ ವ್ರತದ ಉದ್ದೇಶ

ಲೌಕಿಕ ಇಚ್ಛೆ ಆಕಾಂಕ್ಷೆಗಳನ್ನು ಪೂರೈಸುವ ಉದ್ದೇಶದಿಂದ ಅನಂತ ಚತುರ್ದಶಿ ವ್ರತವನ್ನು ಆಚರಿಸಲಾಗುತ್ತದೆ (ಅಂದರೆ ಇದೊಂದು ‘ಕಾಮ್ಯ ವ್ರತ’ವಾಗಿದೆ). ಮುಖ್ಯವಾಗಿ ಕಳೆದುಹೋದ ಸಮೃದ್ಧಿಯನ್ನು (ಗತವೈಭವವನ್ನು) ಮರಳಿ ಪಡೆಯಲು ಈ ವ್ರತವನ್ನು ಆಚರಿಸಲಾಗುತ್ತದೆ.

ಅನಂತ ಚತುರ್ದಶಿಯ ದಿನ, ಬ್ರಹ್ಮಾಂಡದಲ್ಲಿ ಶ್ರೀ ವಿಷ್ಣುವಿನ ಲಹರಿಗಳು ಸಕ್ರಿಯವಾಗಿರುತ್ತವೆ. ಈ ದಿನ ಸಾಮಾನ್ಯ ಜನರಿಗೂ ಕೂಡ ಈ ಲಹರಿಗಳನ್ನು ಆಕರ್ಷಿಸಲು ಮತ್ತು ಗ್ರಹಿಸಲು ಸುಲಭವಿರುತ್ತದೆ. ಅನಂತಪೂಜೆ ಮಾಡುವುದು ಎಂದರೆ ಶ್ರೀ ವಿಷ್ಣುವಿನ ಕ್ರಿಯಾಶಕ್ತಿಯನ್ನು ಗ್ರಹಿಸಿಕೊಳ್ಳುವುದು.

ಸಾಮಾನ್ಯ ಭಕ್ತರು ಶ್ರೀ ವಿಷ್ಣುತತ್ತ್ವದ ಉನ್ನತ ಲಹರಿಗಳನ್ನು ಗ್ರಹಿಸಲು ಸಾಧ್ಯವಿಲ್ಲದ ಕಾರಣ, ಹಿಂದೂ ಧರ್ಮದಲ್ಲಿ ಸಾಮಾನ್ಯ ಜನರಿಗೆ ಅನುಕೂಲವಾಗುವಂತೆ, ಕನಿಷ್ಠ ಪಕ್ಷ ಈ ಲಹರಿಗಳಿಂದಾದರೂ ಲಾಭವಾಗಲಿ ಎಂದು ಅನಂತ ಚತುರ್ದಶಿ ವ್ರತವನ್ನು ಹೇಳಲಾಗಿದೆ.

ಅನಂತ ವ್ರತದ ಪ್ರಧಾನ ದೇವರು ಅನಂತ, ಅಂದರೆ ಭಗವಾನ ಶ್ರೀ ವಿಷ್ಣು. ಯಮುನಾ ಮತ್ತು ಶೇಷನಾಗ ದೇವತೆಗಳು ಈ ಪೂಜೆಯ ಗೌಣ ದೇವತೆಗಳಾಗಿರುತ್ತಾರೆ.

ಆ. ಅನಂತ ಚತುರ್ದಶಿ ವ್ರತ ಪೂಜೆ

ಸಾಧ್ಯವಾದಷ್ಟು ಅನಂತನ ವ್ರತದ ಪೂಜೆಯನ್ನು ದಂಪತಿಗಳು ನಡೆಸಬೇಕು. ಅಸಾಧಾರಣ ಸನ್ನಿವೇಷಗಳಲ್ಲಿ ಪುರುಷ ಅಥವಾ ಮಹಿಳೆ ಒಬ್ಬರೇ ಪೂಜೆಯನ್ನು ಮಾಡಬಹುದು. ಪೂಜೆಯನ್ನು ಹೇಗೆ ನಡೆಸಬೇಕು ಎಂದು ಸಂಕ್ಷಿಪ್ತವಾಗಿ ಇಲ್ಲಿ ನೀಡಲಾಗಿದೆ –

1. ವ್ರತದ ಪೂಜೆಯನ್ನು ಪ್ರಾರಂಭಿಸುವ ಮೊದಲು, ಕಳೆದುಹೋದ ಸಮೃದ್ಧಿಯನ್ನು ಮರಳಿ ಪಡೆಯಲು ಈ ಪೂಜೆಯನ್ನು ಮಾಡುವ ಸಂಕಲ್ಪವನ್ನು ಮಾಡಲಾಗುತ್ತದೆ.

2. ನಂತರ, ಯಮುನಾಪೂಜೆಯಲ್ಲಿ ಶಾಸ್ತ್ರೋಕ್ತವಾಗಿ ಶ್ರೀ ಯಮುನಾ ದೇವಿಯ ಷೋಡಶೋಪಚಾರ ಪೂಜೆ ನಡೆಸಲಾಗುತ್ತದೆ.

3. ಮೊದಲು ಶ್ರೀ ಯಮುನಾ ದೇವಿಗೆ ಆಸನವನ್ನು ನೀಡಬೇಕು.

4. ಶ್ರೀ ಯಮುನಾ ದೇವಿಯ ಪವಿತ್ರ ಪಾದಗಳನ್ನು ತೊಳೆಯಬೇಕು.

5. ನಂತರ, ಅರ್ಘ್ಯವನ್ನು ನೀಡಬೇಕು.

6. ನಂತರ, ಐದು ಪದಾರ್ಥಗಳೊಂದಿಗೆ ಸ್ನಾನ ಅರ್ಪಿಸಬೇಕು.

7. ದೇವಿಗೆ ನೀರಿನ ಅಭಿಷೇಕವನ್ನು ಮಾಡಬೇಕು.

8. ವ್ರತವನ್ನು ಆಚರಿಸುತ್ತಿರುವ ಮಹಿಳೆ ಅರಿಶಿನ-ಕುಂಕುಮವನ್ನು ಶ್ರೀ ಯಮುನಾ ದೇವಿಗೆ ಅರ್ಪಿಸಬೇಕು.

9. ನಂತರ ಕಳಶದಲ್ಲಿ ಅಕ್ಷತೆಗಳನ್ನು ಅರ್ಪಿಸಿ ಶ್ರೀ ಯಮುನಾ ದೇವಿಯ ಅಂಗ-ಪೂಜೆ ಮಾಡಲಾಗುತ್ತದೆ.

10. ಧೂಪ, ಆರತಿ, ನೈವೇದ್ಯ ಇತ್ಯಾದಿಗಳನ್ನು ಅರ್ಪಿಸುವ ಮೂಲಕ ಪೂಜೆಯನ್ನು ಮುಕ್ತಾಯಗೊಳಿಸಬೇಕು.

ಇ. ಶೇಷನಾಗನ ಪೂಜೆ

ಇದರಲ್ಲಿ ದರ್ಭೆಯಿಂದ ಮಾಡಿದ ಏಳು ಹೆಡೆಗಳ ನಾಗರಹಾವನ್ನು ಶೇಷನಾಗ‌ನ ಸಂಕೇತವಾಗಿ ತಯಾರಿಸಿ ಅದರ ಶಾಸ್ತ್ರೋಕ್ತ ಪೂಜೆ ನಡೆಸಲಾಗುತ್ತದೆ.

1. ಮೊದಲು ಶೇಷನಾಗನನ್ನು ಆಹ್ವಾನಿಸಲಾಗುತ್ತದೆ.

2. ಶೇಷನಾಗನಿಗೆ ಆಸನವನ್ನು ನೀಡಿ ನಂತರ, ಪಾದ್ಯಪೂಜೆ, ಅರ್ಘ್ಯ ಅರ್ಪಿಸಲಾಗುತ್ತದೆ.

3. ಶೇಷನಾಗನ ಅಂಗ-ಪೂಜೆ ಮಾಡಲಾಗುತ್ತದೆ.

4. ಶೇಷನಾಗನ ಏಳು ಹೆಡೆಳನ್ನು ಪೂಜಿಸಲಾಗುತ್ತದೆ.

5. ನಂತರ ಶೇಷನಾಗನ ನಾಮಪೂಜೆ ಮಾಡಲಾಗುತ್ತದೆ.

6. ಕೊನೆಯಲ್ಲಿ ಧೂಪ, ದೀಪ, ನೈವೇದ್ಯ ಇತ್ಯಾದಿ ಅರ್ಪಿಸಿ ಪೂಜೆಯನ್ನು ಮುಕ್ತಾಯಗೊಳಿಸಲಾಗುತ್ತದೆ.

ಅನಂತ ಚತುರ್ದಶಿ ವ್ರತದಲ್ಲಿ ಶೇಷನಾಗನನ್ನು ಪೂಜಿಸುವ ಕಾರಣ

1. ಅನಂತ ಚತುರ್ದಶಿಯ ದಿನ, ಶ್ರೀ ವಿಷ್ಣು ತತ್ತ್ವಕ್ಕೆ ಸಂಬಂಧಿಸಿದ ಕ್ರಿಯೆಯ ಲಹರಿಗಳು ಬ್ರಹ್ಮಾಂಡದಲ್ಲಿ ಹೊರಸೂಸಲ್ಪಡುತ್ತವೆ. ಶೇಷನಾಗನು ಈ ಲಹರಿಗಳ ಅತ್ಯುತ್ತಮ ವಾಹಕನಾಗಿದ್ದಾನೆ. ಹಾಗಾಗಿ ಅನಂತ ವ್ರತದಲ್ಲಿ ಶೇಷನಾಗನಿಗೆ ಪ್ರಮುಖ ಸ್ಥಾನ ನೀಡಲಾಗಿದೆ.

2. ಈ ದಿನ ಬ್ರಹ್ಮಾಂಡದಲ್ಲಿ ಕಾರ್ಯನಿರ್ವಹಿಸುವ ಕ್ರಿಯಾಶಕ್ತಿಯ ಲಹರಿಗಳುಗಳು ಸುರುಳಿಗಳ ರೂಪದಲ್ಲಿ ಇರುವುದರಿಂದ, ಶೇಷರೂಪದಲ್ಲಿರುವ ದೇವತೆಯ ಪೂಜೆಯೊಂದಿಗೆ ಈ ಲಹರಿಗಳನ್ನು ಅದೇ ರೂಪದಲ್ಲಿ ಪಡೆಯಲು ಸಾಧ್ಯವಾಗುತ್ತದೆ.

ಈ. ಅನಂತನ ಸಾಂಕೇತವಾಗಿರುವ ದಾರಗಳ ಪೂಜೆ

ಶೇಷನಾಗನ ಪೂಜೆಯ ನಂತರ, ಅನಂತನ ಅಂದರೆ ಶ್ರೀ ವಿಷ್ಣುವಿನ ಸಂಕೇತವಾಗಿರುವ ದಾರಗಳ ಪೂಜೆಯನ್ನು ಮಾಡಲಾಗುತ್ತದೆ. ಪೂಜೆ ಮಾಡುವ ಮೊದಲು ದಾರವನ್ನು ಮಂತ್ರಗಳಿಂದ ಶುದ್ಧೀಕರಿಸಲಾಗುತ್ತದೆ. ಮದನಂತ ದೇವತೆ ಅಂದರೆ ಭಗವಾನ ಶ್ರೀ ವಿಷ್ಣುವನ್ನು ದಾರದಲ್ಲಿ ಆಹ್ವಾನಿಸಲಾಗುತ್ತದೆ.

1. ದಾರದಲ್ಲಿ ಅನಂತನನ್ನು ಆಹ್ವಾನಿಸಿದ ನಂತರ, ಅನಂತನಿಗೆ ಆಸನವನ್ನು ನೀಡಲಾಗುತ್ತದೆ. 14 ಗಂಟುಗಳನ್ನು ಕಟ್ಟಿರುವ ದಾರಕ್ಕೆ ಕುಂಕುಮ ಮಿಶ್ರಿತ ಅಕ್ಷತೆಗಳನ್ನು ಅರ್ಪಿಸಲಾಗುತ್ತದೆ.

2. ಗಂಧೋದಕ ಸ್ನಾನ – ದೇವರಿಗೆ ಶ್ರೀಗಂಧ ಬೆರೆಸಿದ ನೀರಿನಿಂದ ಸ್ನಾನ ಅರ್ಪಿಸಲಾಗುತ್ತದೆ.

3. ಪುಷ್ಪೋದಕ ಸ್ನಾನ – ಹೂವುಗಳನ್ನು ಹೊಂದಿರುವ ನೀರಿನಿಂದ ದೇವರಿಗೆ ಸ್ನಾನ ಅರ್ಪಿಸಲಾಗುತ್ತದೆ.

4. ಫಲೋದಕ ಸ್ನಾನ – ಹಣ್ಣಿನ ರಸದಿಂದ ದೇವರಿಗೆ ಸ್ನಾನ ಅರ್ಪಿಸಲಾಗುತ್ತದೆ.

5. ನಂತರ ಅಮೂಲ್ಯವಾದ ರತ್ನಗಳಿರುವ ನೀರಿನಿಂದ ಸ್ನಾನ ಅರ್ಪಿಸಲಾಗುತ್ತದೆ.

6. ನಂತರ ದಾರಗಳನ್ನು ಪೂಜೆಗಾಗಿ ಇರಿಸಲಾಗುತ್ತದೆ.

7. ದಾರಗಳಿಗೆ ಶಾಸ್ತ್ರೋಕ್ತವಾಗಿ ಪಂಚೋಪಚಾರ ಪೂಜೆಯನ್ನು ಅರ್ಪಿಸಲಾಗುತ್ತದೆ.

8. ನಂತರ ದ್ವಾದಶ ಆವರಣ ಆಚರಣೆಯ ಪೂಜೆಯನ್ನು ನಡೆಸಲಾಗುತ್ತದೆ. ಅದರ ನಂತರ ಬಿಲ್ವ, ಕರವೀರ, ಶಮಿ, ತುಳಸಿ, ದತ್ತೂರಿ ಮುಂತಾದ ಎಲೆಗಳನ್ನು ಅರ್ಪಿಸುವ ಮೂಲಕ ಪತ್ರಪೂಜೆ ಮಾಡಲಾಗುತ್ತದೆ. ಅನಂತ ಪೂಜೆಯ ನಂತರ, ಕುಂಬಳಕಾಯಿಯಿಂದ ತಯಾರಿಸಿದ ಸಿಹಿ ಪೂರಿಗಳ ವಿಶೇಷ ನೈವೇದ್ಯವನ್ನು ನೀಡಲಾಗುತ್ತದೆ. ಪಂಚಪಾತ್ರೆಯಲ್ಲಿ ಇರಿಸಿದ ದಾರಗಳನ್ನು ತೆಗೆದು ತೋಳಿಗೆ ಕಟ್ಟಲಾಗುತ್ತದೆ ಮತ್ತು ಹಳೆಯ ದಾರಗಳನ್ನು ವಿಸರ್ಜಿಸಲಾಗುತ್ತದೆ.

(ಆಧಾರ : ಸನಾತನದ ಗ್ರಂಥ ‘ಧಾರ್ಮಿಕ ಉತ್ಸವ ಮತ್ತು ವ್ರತಗಳ ಹಿಂದಿನ ಶಾಸ್ತ್ರ)

ಶ್ರೀ ವಿನೋದ ಕಾಮತ್,
ರಾಜ್ಯ ವಕ್ತಾರರು, ಸನಾತನ ಸಂಸ್ಥೆ
(ಮೊಬೈಲ್ : 9342599299)

ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";