2019 / 1920 ರ ಎರಡು ವರ್ಷಗಳಲ್ಲಿ ಕೊರೋನಾ ಸಂದರ್ಭದಲ್ಲಿ ಪ್ರಪಂಚದಾದ್ಯಂತ ಲಕ್ಷಾಂತರ ಸಾವು ನೋವುಗಳಿಂದ ತತ್ತರಿಸಿದ ಸಂದರ್ಭ ದಲ್ಲಿ ಸಂಚಾರಕ್ಕೆ ಬಿಡುಗಡೆಯಾದ ಸಾವಿರಾರು ಬಿಎಸ್ 6 ( BS 6 ) ಆಟೋಗಳಿಗೆ ರಾಜ್ಯ ಸಾರಿಗೆ ಇಲಾಖೆಯವರು ಇದುವರೆವಿಗೂ ಪರ್ಮಿಟ್ ಗಳನ್ನು ನೀಡಿಲ್ಲ. ಆದರೆ ಈಗ ಏಕಾಏಕಿ ಆಟೋಗಳಿಗೆ ಎಲ್ಲೆಂದರಲ್ಲಿ ದಂಡವನ್ನು ವಿಧಿಸಿ ಜಪ್ತಿ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಆಮ್ ಆದ್ಮಿ ಪಕ್ಷವು ಇಂದು ಇಲ್ಲಿ ಕರೆದಿದ್ದ ಸಾರಿಗೆ ಇಲಾಖೆಯ ಸಭೆಯಲ್ಲಿ ಸಚಿವ ರಾಮಲಿಂಗರೆಡ್ಡಿ ಅವರನ್ನು ಪ್ರಶ್ನಿಸಿತು.
ಸಭೆಯ ನಂತರ ರಾಜ್ಯ ಆಟೋ ಘಟಕದ ಅಧ್ಯಕ್ಷ ಆಯುಬ್ ಖಾನ್ ಮಾತನಾಡಿ, “ಏಕಾಏಕಿ ಬಿಎಸ್ 7 ( BS 7) ಆಟೋಗಳನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡಲು ಅವಕಾಶ ನೀಡಿದ್ದೆ ಇದಕ್ಕೆ ಪ್ರಮುಖ ಕಾರಣ. ಕೊರೋನಾ ಸಂದರ್ಭದಲ್ಲಿ ಯಾವುದೇ ಸಾಲ ಸೌಲಭ್ಯಗಳು ಸಿಗದಿದ್ದ ದುಸ್ಥಿತಿಯ ಕಾಲದಲ್ಲಿ ತಮ್ಮ ಜೀವನವನ್ನು ನಡೆಸಲು ಬಿಎಸ್ 6 ಆಟೋಗಳನ್ನು ಖರೀದಿಸಿದ್ದ ಬೆಂಗಳೂರಿನ ಸಾವಿರಾರು ಆಟೋ ಚಾಲಕರುಗಳು ಸಾರಿಗೆ ಇಲಾಖೆಯಿಂದ ಕೇವಲ ನೊಂದಾವಣೆ ಮಾತ್ರ ಮಾಡಿಕೊಂಡು ಪರ್ಮಿಟ್ ಭಾಗ್ಯವಿಲ್ಲದೆ ಇದುವರೆಗೂ ಸಾರಿಗೆ ಕಚೇರಿಗಳಿಗೆ ಅಲೆಯುತ್ತಿದ್ದಾರೆ”
” ಆದರೆ ಈಗ ಏಕಾಏಕಿ ತಮ್ಮ ಸಾರಿಗೆ ಇಲಾಖೆಯ ಅಧಿಕಾರಿಗಳು ರಸ್ತೆಗಳಲ್ಲಿ ಅಲ್ಲಲ್ಲಿ ಪರ್ಮಿಟ್ ಇಲ್ಲದ ಕಾರಣ ಬಿಎಸ್ 6 ಆಟೋಗಳನ್ನು ಜಪ್ತಿ ಮಾಡಿ ದುಬಾರಿ ದಂಡಗಳನ್ನು ವಿಧಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂಬುದು ಪ್ರಶ್ನೆಯಾಗಿದೆ” ಎಂದು ಆಯುಬ್ ಖಾನ್ ಅವಲತ್ತುಕೊಂಡರು.
ಮುಂದುವರೆದು ಮಾತನಾಡುತ್ತಾ “ಈ ಕೂಡಲೇ ಬಿಎಸ್ 6 ಆಟೋಗಳಿಗೆ ಪರ್ಮಿಟ್ ಭಾಗ್ಯವನ್ನು ನೀಡಿ ಜಪ್ತಿ ಹಾಗೂ ಇನ್ನಿತರ ಕಾನೂನು ಕ್ರಮಗಳಿಂದ ಮುಕ್ತಗೊಳಿಸಬೇಕು. ಇದಲ್ಲದೆ ಬಡ ಆಟೋ ಚಾಲಕರು ತಮ್ಮ ಯೂನಿಫಾರಂ , ಎಮಿಷನ್ ಸರ್ಟಿಫಿಕೇಟ್, ಇನ್ಶೂರೆನ್ಸ್ ಗಳನ್ನು ಮಾಡಿಸಿಕೊಳ್ಳಲು ವಾರಗಟ್ಟಲೆ ಕಂಪನಿಗಳ ಮುಂದೆ ಸರಣಿ ಸಾಲಿನಲ್ಲಿ ನಿಲ್ಲುವ ದುಸ್ಥಿತಿ ಬಂದಿದೆ. ಕಾರಣವನ್ನು ಕೇಳಿದರೆ ಸರ್ವರ್ ಡೌನ್ ಎಂದು ಹೇಳುತ್ತಿದ್ದಾರೆ. ಮೀಟರ್ ತಯಾರಿ ಮಾಡಿಕೊಳ್ಳಲು ಅಂಗಡಿಗಳ ಮುಂದೆ ಕನಿಷ್ಠ 5 ದಿವಸಗಳ ಕಾಲ ಕಾಯಬೇಕಿದೆ. ಅಲ್ಲಿಯ ತನಕ ಬಡ ಆಟೋ ಚಾಲಕರುಗಳು ಹಾಗೂ ಅವರ ಕುಟುಂಬದವರಿಗೆ ಉಪವಾಸವೇ ಗಟ್ಟಿಯಾಗಿದೆ ”
” ಈಗಾಗಲೇ ಆಟೋ ಚಾಲಕರು ತಮ್ಮ ಮಕ್ಕಳ ಶಾಲಾ ಶುಲ್ಕಗಳು, ಆರೋಗ್ಯ ವೆಚ್ಚಗಳು ಹಾಗೂ ಹಬ್ಬ ಹರಿದಿನಗಳ ಸಲುವಾಗಿ ತಮ್ಮಲ್ಲಿದ್ದ ಹಣವನ್ನು ಖರ್ಚು ಮಾಡಿಕೊಂಡು ಈಗ ಸಾಲಗಾರರ ಸುಳಿಗೆ ಸಿಲುಕುವಂತಹ ಪರಿಸ್ಥಿತಿಗೆ ತಳ್ಳಲ್ಪಟ್ಟಿದ್ದಾರೆ. ಆಟೋ ಚಾಲಕರುಗಳಿಗೆ ಪರ್ಮಿಟ್ ಸೇರಿದಂತೆ ಎಲ್ಲ ತಮ್ಮಲ್ಲಿನ ದಾಖಲಾತಿಗಳನ್ನು ಸರಿಪಡಿಸಿಕೊಳ್ಳಲು ಮೂರು ತಿಂಗಳುಗಳ ಕಾಲಾವಕಾಶವನ್ನು ನೀಡಿ ಬಡ ಆಟೋ ಚಾಲಕರ ಕುಟುಂಬ ನಿರ್ವಹಣೆಗೆ ಸರ್ಕಾರ ಈ ಮೂಲಕ ನೆರವಾಗಬೇಕು ” ಎಂದು ಪಕ್ಷದ ಪರವಾಗಿ ಸಚಿವರಲ್ಲಿ ಮನವಿಯನ್ನು ಮಾಡಿಕೊಂಡರು.
VK NEWS DIGITAL : HEADLINES