ವ್ಯಾಸ ಪೂರ್ಣಿಮೆಯ ಸಂದರ್ಭದಲ್ಲಿ ಸೌಂದರ್ಯ ಶೈಕ್ಷಣಿಕ ಸಂಸ್ಥೆಯು ಭಾರತೀಯ ಶಿಕ್ಷಣ ಮಂಡಳಿಯ ಕರ್ನಾಟಕ ದಕ್ಷಿಣ ಶಾಖೆಯ ಸಹಯೋಗದಲ್ಲಿ ಭವ್ಯ “ಗುರು ವಂದನಾ” ಕಾರ್ಯಕ್ರಮ ಆಯೋಜಿಸಿತ್ತು. ಶಿಕ್ಷಣ ತಜ್ಞರು, ವಿವಿ ಕುಲಪತಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಕಾಲೇಜಿನ ಸೌಂದರ್ಯ ಸೀತಾ ಸಭಾಂಗಣದಲ್ಲಿ ಭಾರತದ ಶ್ರೀಮಂತ ಗುರು-ಶಿಷ್ಯ ಪರಂಪರೆಯ ಗೌರವ ಸೂಚಿಸುವ ಹೃದಯಸ್ಪರ್ಶಿ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಯೋಜಿಸಲಾಯಿತು.
ಭಾರತೀಯ ಶಿಕ್ಷಣ ಮಂಡಳಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಆರ್. ಶಂಕರಾನಂದ್ ಜಿ ಮಾತನಾಡಿ, ಗುರುಗಳು ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಯಾವಾಗಲೂ ಪ್ರೇರಣಾದಾಯಕವಾಗಿದ್ದು, ಮಹತ್ವದ ಸುಧಾರಣೆಗೆ ಕಾರಣರಾಗಿದ್ದಾರೆ. ಗುರು ಪರಂಪರೆ ಇಲ್ಲವಾಗಿದ್ದಲ್ಲಿ ಜ್ಞಾನದ ಕೋಶ ಖಾಲಿ ಇರುತ್ತಿತ್ತು. ಪ್ರತಿಯೊಂದು ಬೆಳವಣಿಗೆಗೆ ಗುರುಗಳ ಕೊಡುಗೆ ಅನನ್ಯ ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ನಿರಂಜನ ವಾನಳ್ಳಿ, ಮೈಸೂರಿನ ಕೆ.ಎಸ್.ಓ.ಯು ಉಪಕುಲಪತಿ ಪ್ರೊ. ಶರಣಪ್ಪ ವಿ ಹಾಲ್ಸೆ, ಕೊಡಗು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಅಶೋಕ್ ಎಸ್ ಅಲೂರು, ಹಾಸನ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಟಿ ಸಿ ತಾರಣಾಥ್, ಚಾಮರಾಜನಗರ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಎಂ. ಆರ್. ಗಂಗಾಧರ್ ಹಾಗೂ ಭಾರತೀಯ ಶಿಕ್ಷಣ ಮಂಡಳಿಯ ಕರ್ನಾಟಕ ದಕ್ಷಿಣ ಪ್ರಾಂತದ ಅಧ್ಯಕ್ಷರಾದ ಪ್ರೊ. ಸತೀಶ ವಿ ಕೈಲಾಸ್ ಉಪಸ್ಥಿತರಿದ್ದರು.
ಸೌಂದರ್ಯ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಶ್ರೀ ಸೌಂದರ್ಯ ಪಿ ಮಂಜಪ್ಪ ಅಧ್ಯಕ್ಷತೆ ವಹಿಸಿದ್ದರು. ಸುನೀತಾ ಮಂಜಪ್ಪ, ಸಿಇಒ ಕೀರ್ತನ್ ಕುಮಾರ್ ಎಂ, ಹಾಗೂ ನಿರ್ದೇಶಕ ವರುಣ್ ಕುಮಾರ್ ಎಂ ಭಾಗಿಯಾಗಿದ್ದರು. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಐಐಟಿ-ಮೆಡ್ರಾಸ್ ಹಾಗೂ ಐಐಎಸ್ಸಿ ಸಂಯುಕ್ತವಾಗಿ ಸ್ಥಾಪಿಸಿದ “ಸ್ಮಾರ್ಟ್ ಏರ್ ಪ್ಯೂರಿಫೈಯರ್” ಅನ್ನು ಉದ್ಘಾಟಿಸಿದರು. ಇದು ಶುದ್ಧವಾಯು ಹಾಗೂ ಚತುರ ಶೈಕ್ಷಣಿಕ ವಾತಾವರಣದತ್ತ ಇಟ್ಟ ಹೆಜ್ಜೆಯಾಗಿದೆ.
ಶಿಕ್ಷಣಜ್ಞರನ್ನು ಗೌರವಿಸುವ ಮತ್ತು ಗುರು ಪೂರ್ಣಿಮೆಯ ಅನನ್ಯ ಅರ್ಥವನ್ನು ಉಳಿಸಿಕೊಂಡು ಬೆಳಗಿಸುವ ನಿಟ್ಟಿನಲ್ಲಿ ಹಲವು ಪ್ರಾಧ್ಯಾಪಕರು, ಶಿಕ್ಷಣ ಕ್ಷೇತ್ರದ ಸದಸ್ಯರು ಒಟ್ಟಾಗಿ ಸೇರಿದ ಮಹತ್ವದ ವೇದಿಕೆ ಇದಾಗಿತ್ತು. ಈ ಸಂಭ್ರಮವು ಪರಂಪರೆಯ ಮೌಲ್ಯಗಳನ್ನು ಆಧುನಿಕ ಕನಸುಗಳೊಂದಿಗೆ ಒಗ್ಗಟ್ಟಾಗಿ ಹೆಜ್ಜೆ ಇಟ್ಟು ಸಾಗಿತು.