ಬೆಂಗಳೂರು : ಕರ್ನಾಟಕವು ದೇಶದ ಪ್ರವಾಸೋದ್ಯಮ (TOURISM) ಬೆಳವಣಿಗೆಗೆ ಪ್ರಮುಖ ಕೊಡುಗೆದಾರನಾಗಿ ರೂಪುಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ಹೇಳಿದರು. ಬೆಂಗಳೂರಿನಲ್ಲಿ ಫೆಡರೇಶನ್ ಆಫ್ ಹೋಟೆಲ್ (Federation of Hotel & Restaurant Associations of India) & ರೆಸ್ಟೋರೆಂಟ್ ಅಸೋಸಿಯೇಷನ್ಸ್ ಆಫ್ ಇಂಡಿಯಾ (FHRAI) ನ 55ನೇ ವಾರ್ಷಿಕ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. “ಫ್ಯುಚರ್ ಸ್ಕೇಪ್ 2047: (Future Scape 2047) ನವ ಭಾರತಕ್ಕಾಗಿ ಆತಿಥ್ಯದ ಮರುರೂಪಿಸುವಿಕೆ” ಎಂಬ ವಿಷಯದಡಿ ನಡೆಯುತ್ತಿರುವ ಈ ಮೂರು ದಿನಗಳ ಸಮಾವೇಶವು, 2047ರ ಹೊತ್ತಿಗೆ ಪ್ರವಾಸೋದ್ಯಮವನ್ನು ಮೂರು ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಪರಿವರ್ತಿಸಲು ಅಗತ್ಯವಾದ ನೀತಿ ಮತ್ತು ಹೂಡಿಕೆಗಳ ಮಾರ್ಗಸೂಚಿಯನ್ನು ರೂಪಿಸಲು ಮೀಸಲಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ನೀತಿ ನಿರೂಪಕರು, ಉದ್ಯಮದ ಮುಖಂಡರು, ಜಾಗತಿಕ ಮತ್ತು ದೇಶೀಯ ಹೋಟೆಲ್ ಬ್ರ್ಯಾಂಡ್ಗಳು, ಹೂಡಿಕೆದಾರರು, ಹಾಗೂ ಚಿಂತಕರ ಸಮೂಹವನ್ನು ಒಳಗೊಂಡ 1,000ಕ್ಕೂ ಹೆಚ್ಚು ಪ್ರತಿನಿಧಿಗಳು ಈ ಸಮಾವೇಶದಲ್ಲಿ ಭಾಗವಹಿಸಿದ್ದಾರೆ. ಆತಿಥ್ಯ ಕ್ಷೇತ್ರವು 50 ಮಿಲಿಯನ್ ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸಬಹುದು, ನಿರಂತರ ವಿದೇಶಿ ನೇರ ಹೂಡಿಕೆಯನ್ನು ಆಕರ್ಷಿಸಬಹುದು ಮತ್ತು ಭಾರತವನ್ನು ವಿಶ್ವದ ಅಗ್ರ ಐದು ಪ್ರವಾಸೋದ್ಯಮ ಆರ್ಥಿಕತೆಗಳಲ್ಲಿ ಒಂದನ್ನಾಗಿ ಮಾಡಬಹುದು ಎಂಬುದನ್ನು ಈ ಸಮಾವೇಶ ಒತ್ತಿಹೇಳುತ್ತದೆ.
ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು, “ಸಾಂಸ್ಕೃತಿಕ ರಾಜಧಾನಿ ಮತ್ತು ತಂತ್ರಜ್ಞಾನದ ಕೇಂದ್ರ ಎರಡರ ಗುರುತನ್ನೂ ಹೊಂದಿರುವ ಬೆಂಗಳೂರಿನ ಅನನ್ಯತೆಯ ಬಗ್ಗೆ ಗುಣಗಾನ ಮಾಡಿದರು. ಸುಸ್ಥಿರ ಪ್ರವಾಸೋದ್ಯಮ ಮೂಲಸೌಕರ್ಯ, ಪ್ರಾದೇಶಿಕ ಸರ್ಕ್ಯೂಟ್ಗಳ ಅಭಿವೃದ್ಧಿ, ಮತ್ತು ದೊಡ್ಡ ಪ್ರಮಾಣದ ಹೂಡಿಕೆಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ತಮ್ಮ ಸರ್ಕಾರದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ಕರ್ನಾಟಕವು ದೇಶದ ಪ್ರವಾಸೋದ್ಯಮ ಬೆಳವಣಿಗೆಗೆ ಪ್ರಮುಖ ಕೊಡುಗೆದಾರನಾಗಿ ರೂಪುಗೊಳ್ಳಲಿದೆ” ಎಂದು ಅವರು ಹೇಳಿದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ. ಪಾಟೀಲ್ ಮಾತನಾಡುತ್ತಾ,“ಕರ್ನಾಟಕವು ಭಾರತದ ಪ್ರಮುಖ ಪ್ರವಾಸೋದ್ಯಮ ರಾಜ್ಯಗಳಲ್ಲಿ ಒಂದಾಗಿದೆ. 2024ರಲ್ಲಿ ಇಲ್ಲಿಗೆ 2.5 ಕೋಟಿ ದೇಶೀಯ ಪ್ರವಾಸಿಗರು ಭೇಟಿ ನೀಡಿದ್ದಾರೆ. ಹಂಪಿ, ಬಾದಾಮಿ, ಮೈಸೂರು, ಜೋಗ್ ಜಲಪಾತ ಮತ್ತು ಬೆಂಗಳೂರಿನಂತಹ ವಿಶಿಷ್ಟ ಪ್ರವಾಸಿ ತಾಣಗಳನ್ನು ಕರ್ನಾಟಕ ಹೊಂದಿದೆ. ಅತ್ಯುತ್ತಮ ವಿಮಾನ ಸಂಪರ್ಕ, ಆಧುನಿಕ ಸಮಾವೇಶ ಸೌಲಭ್ಯಗಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ಐಟಿ ಕ್ಷೇತ್ರವು ಕರ್ನಾಟಕವನ್ನು ವ್ಯಾಪಾರ, ಮನರಂಜನೆ ಮತ್ತು ಎಂಐಸಿಇ ಪ್ರವಾಸೋದ್ಯಮಕ್ಕೆ ಆದರ್ಶ ತಾಣವನ್ನಾಗಿ ಮಾಡಿದೆ.”
ಮುಂದುವರಿದು, ಪ್ರವಾಸೋದ್ಯಮ ಕ್ಷೇತ್ರವು ಲಕ್ಷಾಂತರ ಯುವಕರಿಗೆ ಉದ್ಯೋಗ ನೀಡುತ್ತಾ, ಭಾರತದ ಸಂಸ್ಕೃತಿ, ಆಹಾರ ಪದ್ಧತಿ ಮತ್ತು ಆತಿಥ್ಯವನ್ನು ಜಗತ್ತಿಗೆ ಪರಿಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕೋವಿಡ್ ನಂತರ ಈ ಕ್ಷೇತ್ರದಲ್ಲಿ ಬೇಡಿಕೆ ಹೆಚ್ಚಾಗಿದ್ದು, ರಾಜ್ಯ ಸರ್ಕಾರವು ಹೋಟೆಲ್ಗಳು, ರೆಸಾರ್ಟ್ಗಳು ಮತ್ತು ಹೋಂ ಸ್ಟೇಗಳಲ್ಲಿ ಹೂಡಿಕೆ ಮಾಡಲು ಪ್ರೋತ್ಸಾಹ ನೀಡುತ್ತಿದೆ.ಮುಂದಿನ ದಿನಗಳಲ್ಲಿ ಆತಿಥ್ಯ ಉದ್ಯಮವು ಉದ್ಯೋಗ ಸೃಷ್ಟಿ, ಹೂಡಿಕೆ ಮತ್ತು ಜಾಗತಿಕ ಮಟ್ಟದಲ್ಲಿ ದೇಶದ ಹೆಸರನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅತಿಥಿ ಸತ್ಕಾರದಲ್ಲಿ ವಿಶ್ವ ಗುಣಮಟ್ಟದ ಸೇವೆಯನ್ನು ಒದಗಿಸುವುದು, ಸುಸ್ಥಿರ ಆತಿಥ್ಯವನ್ನು ಉತ್ತೇಜಿಸುವುದು ಮತ್ತು ಕರ್ನಾಟಕವನ್ನು ಪ್ರೀಮಿಯರ್ ಪ್ರವಾಸೋದ್ಯಮ ಕೇಂದ್ರವನ್ನಾಗಿ ಮಾಡುವುದು ನಮ್ಮ ಸಹಭಾಗಿತ್ವದ ಗುರಿಯಾಗಿದೆ” ಎಂದರು.
ಸಚಿವ ಎಚ್.ಕೆ. ಪಾಟೀಲ್ ಅವರು ಕರ್ನಾಟಕ ಪ್ರವಾಸೋದ್ಯಮ ನೀತಿ 2024-29ರ ಕುರಿತು ಮಾತನಾಡುತ್ತಾ, ಈ ನೀತಿಯು ಆತಿಥ್ಯ ಕ್ಷೇತ್ರಕ್ಕೆ ಸಹಕಾರಿಯಾಗುವಂತೆ ರೂಪಿಸಲಾಗಿದೆ ಮತ್ತು ಕರ್ನಾಟಕವನ್ನು ದೇಶದ ಅತ್ಯುತ್ತಮ ಪ್ರವಾಸಿ ತಾಣವನ್ನಾಗಿ ಮಾಡುವ ಗುರಿಯನ್ನು ಹೊಂದಿದೆ. ಭವಿಷ್ಯದಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಮತ್ತು ಖಾಸಗಿ ವಲಯದ ಸಹಭಾಗಿತ್ವ ಬಹಳ ಮುಖ್ಯ ಎಂದು ಸಚಿವರು ಒತ್ತಿ ಹೇಳಿದರು. ಕೊನೆಯದಾಗಿ, ಎಲ್ಲಾ ಪ್ರವಾಸಿಗರಿಗೆ ಉತ್ತಮ ಅನುಭವ ನೀಡಲು, ನುರಿತ ಸಿಬ್ಬಂದಿ ಮತ್ತು ಜಾಗತಿಕ ಮಟ್ಟದ ಸೇವೆಯನ್ನು ಒದಗಿಸಲು ಸರ್ಕಾರದೊಂದಿಗೆ ಕೆಲಸ ಮಾಡುವಂತೆ ಎಫ್ಎಚ್ಆರ್ಎಐ ಸದಸ್ಯರಿಗೆ ಸಚಿವರು ಕರೆ ನೀಡಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡುತ್ತಾ, ಕರ್ನಾಟಕವು ಒಂದು ಕ್ರಿಯಾಶೀಲ ಸರ್ಕಾರವನ್ನು ಹೊಂದಿದ್ದು, ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡುವ ಎರಡನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿದೆ. ಇಲ್ಲಿ 25 ಲಕ್ಷಕ್ಕೂ ಹೆಚ್ಚು ಕನ್ನಡಿಗರು ಮತ್ತು ಎರಡು ಲಕ್ಷಕ್ಕೂ ಹೆಚ್ಚು ವಿದೇಶಿಗರು ವಿವಿಧ ವಲಯಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಆತಿಥ್ಯ ಉದ್ಯಮ ಮಾತ್ರವಲ್ಲ, ನಮ್ಮ ಆರೋಗ್ಯ ಕ್ಷೇತ್ರವೂ ಉತ್ತಮವಾಗಿದೆ. ಕರ್ನಾಟಕವು ವಿವಿಧ ಸಂಸ್ಕೃತಿಗಳಿಗೆ ಹೆಸರುವಾಸಿಯಾಗಿದೆ.ನವೆಂಬರ್ 19 ಮತ್ತು 20 ರಂದು ನಾವು ದೊಡ್ಡ ಐಟಿ ನೀತಿಯೊಂದಿಗೆ ಬರಲಿದ್ದೇವೆ. ಕಳೆದ ವರ್ಷ ನಾವು ನಡೆಸಿದ ‘ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್’ ಯಶಸ್ವಿಯಾಗಿದ್ದು, ಈ ಬಾರಿಯೂ ಅದನ್ನು ಮುಂದುವರಿಸುತ್ತೇವೆ. ದಸರಾ ಉತ್ಸವವನ್ನು ಸಹ ಆಧುನಿಕ ಸ್ವರೂಪದಲ್ಲಿ ಬದಲಾಯಿಸುತ್ತಿದ್ದೇವೆ. ಮೈಸೂರು ಪ್ರದೇಶವು ತೀವ್ರವಾಗಿ ಬೆಳೆಯುತ್ತಿದೆ.ಗೋವಾ ಮತ್ತು ಕೇರಳ ಯಾವ ರೀತಿ ಪ್ರವಾಸಿಗರನ್ನು ಸೆಳೆಯುತ್ತಿದೆಯೋ ಅದೇ ರೀತಿ ನಾವು ಕೆಲಸ ಮಾಡುತ್ತಿದ್ದೇವೆ” ಎಂದರು.
ಭಾರತದ ಪ್ರವಾಸ ಮತ್ತು ಪ್ರವಾಸೋದ್ಯಮ ಕ್ಷೇತ್ರವು 2024ರಲ್ಲಿ ಒಟ್ಟು ₹20.9 ಟ್ರಿಲಿಯನ್ (USD 249.3 ಬಿಲಿಯನ್) ಅನ್ನು ಜಿಡಿಪಿಗೆ ಕೊಡುಗೆ ನೀಡಿದೆ. ಇದು 2019ಕ್ಕೆ ಹೋಲಿಸಿದರೆ 20% ಹೆಚ್ಚಳವಾಗಿದ್ದು, ದೇಶದ ಆರ್ಥಿಕತೆಯ ಸುಮಾರು 6.6% ನಷ್ಟಿದೆ. WTTC ಯ ಮುನ್ನೋಟಗಳ ಪ್ರಕಾರ, 2025ರಲ್ಲಿ ಈ ಮೊತ್ತವು ₹22.5 ಟ್ರಿಲಿಯನ್ (USD 268.7 ಬಿಲಿಯನ್) ಗೆ ಏರಲಿದೆ. 2035ರ ಹೊತ್ತಿಗೆ, ಈ ಕ್ಷೇತ್ರವು ಸುಮಾರು ದುಪ್ಪಟ್ಟಾಗಿ, ₹41.9 ಟ್ರಿಲಿಯನ್ (USD 501.1 ಬಿಲಿಯನ್) ತಲುಪುವ ನಿರೀಕ್ಷೆಯಿದೆ, ಇದು ದೇಶದ ಜಿಡಿಪಿಯ ಅಂದಾಜು 10.9% ಆಗಲಿದೆ.
ಉದ್ಯಮದ ಮೂಲಭೂತ ಅಂಶಗಳು ಬಲವಾಗಿವೆ: 2023ರಲ್ಲಿ ಪ್ರೀಮಿಯಂ ಹೋಟೆಲ್ಗಳು 70–72% occupancy (ಶೇ. 70-72ರಷ್ಟು ಭರ್ತಿ) ದಾಖಲಿಸಿವೆ. ಪ್ರತಿದಿನದ ಸರಾಸರಿ ದರ ₹6,000 ಮೀರಿದ್ದು, operating margins (ಕಾರ್ಯಾಚರಣೆಯ ಲಾಭಾಂಶ) 30% ಕ್ಕಿಂತ ಹೆಚ್ಚಿದೆ, ಇದು ಕೋವಿಡ್ ಪೂರ್ವದ ಮಟ್ಟವನ್ನು ಮೀರಿಸಿದೆ. G20 ಶೃಂಗಸಭೆ ಮತ್ತು ICC ಕ್ರಿಕೆಟ್ ವಿಶ್ವಕಪ್ನಂತಹ ಪ್ರಮುಖ ಅಂತರರಾಷ್ಟ್ರೀಯ ಕಾರ್ಯಕ್ರಮಗಳು ಬೇಡಿಕೆಯನ್ನು ಮತ್ತಷ್ಟು ಹೆಚ್ಚಿಸಿವೆ. ICRA ವರದಿಗಳ ಪ್ರಕಾರ, ಆರ್ಥಿಕ ವರ್ಷ 2025ರಲ್ಲಿ ಆದಾಯವು 7–9% ರಷ್ಟು ಬೆಳೆಯುವ ನಿರೀಕ್ಷೆಯಿದೆ.
 
			

 
		



















 
    