ತೀರ್ಥಕ್ಷೇತ್ರಗಳಲ್ಲಿ ಪಿತೃಗಳನ್ನು ಉದ್ದೇಶಿಸಿ ಮಾಡುವ ಶ್ರಾದ್ಧಕ್ಕೆ ತ್ರಿಪಿಂಡಿ ಶ್ರಾದ್ಧ ಎಂದು ಹೇಳುತ್ತಾರೆ. ನಮಗೆ ತಿಳಿಯದೇ ಇರುವ, ನಮ್ಮ ವಂಶದಲ್ಲಿ ಸದ್ಗತಿ ಸಿಗದಿರುವವರ ಅಥವಾ ದುರ್ಗತಿಗೆ ಹೋಗಿರುವವರ ಮತ್ತು ನಮ್ಮ ಕುಲದವರನ್ನು ಪೀಡಿಸುವ ಪಿತೃಗಳಿಗೆ, ಅವರ ಪ್ರೇತತ್ವವು ದೂರವಾಗಿ ಸದ್ಗತಿಯು ಸಿಗಲು ಅಂದರೆ ಭೂಮಿ, ಅಂತರಿಕ್ಷ ಮತ್ತು ಆಕಾಶ ಈ ಮೂರು ಕಡೆಗಳಲ್ಲಿರುವ ಆತ್ಮಗಳಿಗೆ ಮುಕ್ತಿಯು ಸಿಗಲು ತ್ರಿಪಿಂಡಿ ಶ್ರಾದ್ಧವನ್ನು ಮಾಡುವ ಪದ್ಧತಿಯಿದೆ. ಎಂದಿನಂತೆ ಮಾಡುವ ಶ್ರಾದ್ಧಗಳು ಒಬ್ಬರನ್ನು ಉದ್ದೇಶಿಸಿ ಅಥವಾ ವಸು-ರುದ್ರ- ಆದಿತ್ಯ ಈ ಶ್ರಾದ್ಧ ದೇವತೆಗಳ ಪಿತೃಗಣದಲ್ಲಿನ ತಂದೆ, ತಾತ, ಮುತ್ತಾತ ಈ ತ್ರಯಿಗಳನ್ನು ಉದ್ದೇಶಿಸಿ ಮಾಡಿದ ಶ್ರಾದ್ಧಗಳು ೩ ಪೀಳಿಗೆಗಳಿಗೆ ಸೀಮಿತವಾಗಿರುತ್ತವೆ. ಆದರೆ ತ್ರಿಪಿಂಡಿ ಶ್ರಾದ್ಧದಿಂದ ಅದಕ್ಕೂ ಮೊದಲಿನ ಪೀಳಿಗೆಗಳಲ್ಲಿನ ಪಿತೃಗಳಿಗೂ ತೃಪ್ತಿ ಸಿಗುತ್ತದೆ. ಪ್ರತಿಯೊಂದು ಕುಟುಂಬದಲ್ಲಿ ಈ ವಿಧಿಯನ್ನು ಪ್ರತಿ ೧೨ ವರ್ಷಗಳಿಗೊಮ್ಮೆ ಮಾಡಬೇಕು ಅಥವಾ ಪಿತೃಗಳಿಂದ ತೊಂದರೆಯಾಗುತ್ತಿರುವ ಕುಟುಂಬಗಳು ಈ ವಿಧಿಯನ್ನು ದೋಷ ನಿವಾರಣೆಗಾಗಿ ಮಾಡಬೇಕು.
ವಿಧಿಯನ್ನು ಮಾಡಲು ಯೋಗ್ಯ ಕಾಲ : ತ್ರಿಪಿಂಡಿ ಶ್ರಾದ್ಧಕ್ಕಾಗಿ ಅಷ್ಟಮಿ, ಏಕಾದಶಿ, ಚತುರ್ದಶಿ, ಅಮಾವಾಸ್ಯೆ, ಹುಣ್ಣಿಮೆ ಈ ತಿಥಿಗಳು ಮತ್ತು ಸಂಪೂರ್ಣ ಪಿತೃಪಕ್ಷವು ಯೋಗ್ಯವಾಗಿರುತ್ತದೆ. ಗುರು ಶುಕ್ರಾಸ್ತ, ಗಣೇಶೋತ್ಸವ ಮತ್ತು ಶಾರದಾ ನವರಾತ್ರಿಯಲ್ಲಿ (ಶರನ್ನವರಾತ್ರಿ) ಈ ವಿಧಿಯನ್ನು ಮಾಡಬಾರದು. ಹಾಗೆಯೇ ಕುಟುಂಬದಲ್ಲಿ ಮಂಗಲಕಾರ್ಯವಾದ ಮೇಲೆ ಮತ್ತು ಅಶುಭ ಘಟನೆಗಳಾದ ಮೇಲೆ ಒಂದು ವರ್ಷದವರೆಗೆ ತ್ರಿಪಿಂಡಿಶ್ರಾದ್ಧವನ್ನು ಮಾಡಬಾರದು. ಅನಿವಾರ್ಯವಾಗಿದ್ದರೆ ಉದಾ.ಒಂದು ಮಂಗಲಕಾರ್ಯ ಆದ ಕೆಲವು ತಿಂಗಳುಗಳ ನಂತರ ಇನ್ನೊಂದು ಮಂಗಲಕಾರ್ಯವಿದ್ದರೆ ಇವೆರಡರ ಮಧ್ಯಕಾಲದಲ್ಲಿ ತ್ರಿಪಿಂಡಿ ಶ್ರಾದ್ಧವನ್ನು ಮಾಡಬೇಕು.
ವಿಧಿಯನ್ನು ಮಾಡಲು ಯೋಗ್ಯ ಸ್ಥಳ : ತ್ರ್ಯಂಬಕೇಶ್ವರ, ಗೋಕರ್ಣ ಮಹಾಬಲೇಶ್ವರ, ಗರುಡೇಶ್ವರ, ಹರಿಹರೇಶ್ವರ (ದಕ್ಷಿಣ ಕಾಶಿ), ಕಾಶಿ ಈ ಸ್ಥಳಗಳು ತ್ರಿಪಿಂಡಿಶ್ರಾದ್ಧವನ್ನು ಮಾಡಲು ಯೋಗ್ಯ ಸ್ಥಳಗಳಾಗಿವೆ.
ಪದ್ಧತಿ : ‘ಮೊದಲು ತೀರ್ಥಕ್ಷೇತ್ರದಲ್ಲಿ ಸ್ನಾನ ಮಾಡಿ ಶ್ರಾದ್ಧದ ಸಂಕಲ್ಪವನ್ನು ಮಾಡಬೇಕು. ನಂತರ ಮಹಾವಿಷ್ಣುವಿನ ಮತ್ತು ಶ್ರಾದ್ಧಕ್ಕಾಗಿ ಕರೆದಿರುವ ಬ್ರಾಹ್ಮಣರಿಗೆ ಶ್ರಾದ್ಧವಿಧಿಯ ಪ್ರಕಾರ ಪೂಜೆ ಮಾಡಬೇಕು. ನಂತರ ಜವೆಗೋಧಿ, ಅಕ್ಕಿ ಮತ್ತು ಎಳ್ಳು ಇವುಗಳ ಹಿಟ್ಟಿನ ಪ್ರತಿಯೊಂದರ ಒಂದೊಂದು ಪಿಂಡವನ್ನು ತಯಾರು ಮಾಡಬೇಕು. ದರ್ಭೆಯನ್ನು ಹಾಸಿ ಅದರ ಮೇಲೆ ತಿಲೋದಕವನ್ನು ಸಿಂಪಡಿಸಿ ಪಿಂಡದಾನ ಮಾಡಬೇಕು.
ಜವೆಗೋಧಿಯ ಪಿಂಡ (ಧರ್ಮಪಿಂಡ) : ತಾಯಿಯ ವಂಶದಲ್ಲಿನ ಮತ್ತು ತಂದೆಯ ವಂಶದಲ್ಲಿನ ಉತ್ತರಕ್ರಿಯೆ ಆಗದಿರುವವರು, ಸಂತಾನ ಇಲ್ಲವೆಂದು ಯಾರ ಪಿಂಡದಾನವಾಗಿಲ್ಲವೋ ಅವರು ಅಥವಾ ಜನ್ಮತಃ ಅಂಗವಿಕಲರು (ಅಂಗವಿಕಲರಾಗಿರುವುದರಿಂದ ಮದುವೆ ಆಗಿರದೇ ಸಂತಾನರಹಿತವಾಗಿದ್ದವರು), ಇಂತಹ ಪಿತೃಗಳ ಪ್ರೇತತ್ವವು ನಾಶವಾಗಿ ಸದ್ಗತಿ ಸಿಗಲೆಂದು ಜವೆಗೋಧಿಯ ಪಿಂಡವನ್ನು ಕೊಡುತ್ತಾರೆ. ಇದಕ್ಕೆ ಧರ್ಮಪಿಂಡ ಎಂಬ ಹೆಸರು ಇದೆ.
ಮಧುರತ್ರಯಯುಕ್ತ ಅನ್ನದ ಪಿಂಡ : ಪಿಂಡದ ಮೇಲೆ ಸಕ್ಕರೆ, ಜೇನುತುಪ್ಪ ಮತ್ತು ತುಪ್ಪ ಇವುಗಳ ಮಿಶ್ರಣವನ್ನು ಹಾಕುವುದಕ್ಕೆ ಮಧುರತ್ರಯೀ ಎನ್ನುತ್ತಾರೆ. ಇದನ್ನು ಕೊಡುವುದರಿಂದ ಅಂತರಿಕ್ಷದಲ್ಲಿರುವ ಪಿತೃಗಳಿಗೆ ಸದ್ಗತಿ ಸಿಗುತ್ತದೆ.
ಎಳ್ಳು ಪಿಂಡ : ಭೂಮಿಯ ಮೇಲೆ ಕ್ಷುದ್ರಯೋನಿಯಲ್ಲಿದ್ದು ಇತರರಿಗೆ ತೊಂದರೆ ಕೊಡುವ ಪಿತೃಗಳಿಗೆ ಎಳ್ಳು ಪಿಂಡದಿಂದ ಸದ್ಗತಿಯು ಪ್ರಾಪ್ತವಾಗುತ್ತದೆ. ಈ ಮೂರು ಪಿಂಡಗಳಿಗೆ ತಿಲೋದಕ ಕೊಡಬೇಕು. ನಂತರ ಪಿಂಡಗಳ ಪೂಜೆಯನ್ನು ಮಾಡಿ ಅರ್ಘ್ಯವನ್ನು ಅರ್ಪಿಸಬೇಕು. ಶ್ರೀವಿಷ್ಣುವಿಗೆ ತರ್ಪಣ ಕೊಡಬೇಕು. ಬ್ರಾಹ್ಮಣರಿಗೆ ಭೋಜನವನ್ನು ನೀಡಿ ದಕ್ಷಿಣೆಯೆಂದು ವಸ್ತ್ರ, ಪಾತ್ರೆ, ಬೀಸಣಿಗೆ, ಪಾದರಕ್ಷೆಗಳನ್ನು ಕೊಡಬೇಕು’.
ಪಿತೃದೋಷವಿದ್ದರೆ ತಾಯಿ-ತಂದೆ ಜೀವಂತವಿರುವಾಗಲೇ ಮಗನು ವಿಧಿಯನ್ನು ಮಾಡುವುದು ಯೋಗ್ಯವಾಗಿದೆ : ಶ್ರಾದ್ಧಕರ್ತನ ಜಾತಕದಲ್ಲಿ ಪಿತೃದೋಷವಿದ್ದರೆ ಅದರ ನಿವಾರಣೆಗಾಗಿ ತಾಯಿ-ತಂದೆ ಜೀವಂತ ಇರುವಾಗಲೇ ಈ ವಿಧಿಯನ್ನು ಮಾಡಬೇಕು.
ಶ್ರಾದ್ಧ ಕರ್ತನ ತಂದೆಯು ಜೀವಂತವಿಲ್ಲದಿದ್ದರೆ ಅವನು ವಿಧಿಯನ್ನು ಮಾಡುವಾಗ ಕೂದಲುಗಳನ್ನು ತೆಗೆಯಬೇಕು. ತಂದೆಯು ಜೀವಂತವಿರುವ ಶ್ರಾದ್ಧಕರ್ತನಿಗೆ ಕೂದಲುಗಳನ್ನು ತೆಗೆಯುವ ಆವಶ್ಯಕತೆ ಇರುವುದಿಲ್ಲ. ತ್ರಿಪಿಂಡಿ ಶ್ರಾದ್ಧದಲ್ಲಿ ಶ್ರಾದ್ಧಕರ್ತನಿಗೆ ಮಾತ್ರ ಅಶೌಚವಿರುತ್ತದೆ. ಮನೆಯಲ್ಲಿನ ಇತರರಿಗೆ ಇರುವುದಿಲ್ಲ. ಆದುದರಿಂದ ಮನೆಯಲ್ಲಿನ ಒಬ್ಬರು ವಿಧಿಯನ್ನು ಮಾಡುವಾಗ ಇತರರು ಪೂಜೆ ವಗೈರೆಗಳನ್ನು ನಿಲ್ಲಿಸುವ ಅವಶ್ಯಕತೆಯಿಲ್ಲ.
(ಆಧಾರ : ಸನಾತನ ನಿರ್ಮಿಸಿದ ಗ್ರಂಥ ‘ಶ್ರಾದ್ಧ – ೨ ಭಾಗಗಳು’)
ಸಂಗ್ರಹ
ಶ್ರೀ. ವಿನೋದ ಕಾಮತ್,
ರಾಜ್ಯ ವಕ್ತಾರರು, ಸನಾತನ ಸಂಸ್ಥೆ
(ಸಂಪರ್ಕ : ೯೩೪೨೫೯೯೨೯೯)