ಬೆಂಗಳೂರು: ರಾಜಧಾನಿ ಬೆಂಗಳೂರಿನ ಅಭಿವೃದ್ಧಿಯನ್ನು ಗುತ್ತಿಗೆಗೆ ತೆಗೆದುಕೊಂಡಂತಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (Bangalore Development Authority, BDA) ತನ್ನನ್ನು ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ’ದ (ಕೆ–ರೇರಾ) (Karnataka Real Estate Regulatory Authority, K-RERA) ವ್ಯಾಪ್ತಿಯಿಂದ ದೂರವಿಡಬೇಕು ಎಂಬ ಅಸಮಂಜಸ ಮತ್ತು ವಿಚಿತ್ರ ಕೂಗು ಎಬ್ಬಿಸಿದೆ. ರಾಜ್ಯದಲ್ಲಿ ಯಾವುದೇ ರಿಯಲ್ ಎಸ್ಟೇಟ್ ವ್ಯವಹಾರವನ್ನು ಸುಸೂತ್ರವಾಗಿ ನಡೆಸಿಕೊಡುವ ಜವಾಬ್ದಾರಿ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಹೆಗಲ ಮೇಲಿದೆ. ಇದು ಸರ್ಕಾರವೇ ವಿಧಿಸಿರುವ ಶಾಸನ. ಹೀಗಿರುವಾಗ ಸರ್ಕಾರದ ಮತ್ತೊಂದು ಸಂಸ್ಥೆಯು ತಾನು ಅದರ ಅಧಿನಕ್ಕೆ ಬರುವುದಿಲ್ಲ ಎಂದು ತಗಾದೆ ತೆಗೆಯುವುದು ಸಮಂಜಸವಲ್ಲ ಎಂಬುದು ನಾಗರಿಕರ ಅಭಿಪ್ರಾಯ. ಇದಕ್ಕೆ ಜನಪ್ರತಿನಿಧಿಗಳೂ ದನಿಗೂಡಿಸಿದ್ದಾರೆ. ಬಿಡಿಎ ಹೀಗೆ ವರಾತ ತೆಗೆದಿರುವುದನ್ನು ಧಿಕ್ಕರಿಸಿ ಮಾತನಾಡಿದ್ದಾರೆ. ಇದಕ್ಕೆ ರಾಜಾಜಿನಗರ ವಿಧಾನಸಭಾ ಕ್ಷೇತ್ರದ (Rajajinagar Assembly Constituency) ಹಾಲಿ ಶಾಸಕ ಎಸ್. ಸುರೇಶ್ ಕುಮಾರ್ (BJP MLA S Suresh Kumar) ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ (ಕೆ–ರೇರಾ) ವ್ಯಾಪ್ತಿಯಿಂದ ತನ್ನನ್ನು ಹೊರಗಿಡಬೇಕು ಎನ್ನುವ ‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ’ದ (ಬಿಡಿಎ) ಬೇಡಿಕೆ ನ್ಯಾಯಸಮ್ಮತವಾದುದಲ್ಲ. ಬಿಡಿಎ ಸಲ್ಲಿಸಿರುವ ಬೇಡಿಕೆ ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಅಪಾಯಕರ ಕೂಡ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಶಾಸನಬದ್ಧ ಸಂಸ್ಥೆಯಾಗಿರುವ ಹಾಗೂ ರಿಯಲ್ ಎಸ್ಟೇಟ್ ಪ್ರವರ್ತಕ ಸಂಸ್ಥೆ ಆಗದಿರುವ ಕಾರಣದಿಂದಾಗಿ ‘ಕೆ–ರೇರಾ’ ವ್ಯಾಪ್ತಿಯಿಂದ ತನ್ನನ್ನು ಹೊರಗಿಡಬೇಕು ಎನ್ನುವುದು ಬಿಡಿಎ ವಾದ. ಖಾಸಗಿ ಸಂಸ್ಥೆಗಳಂತೆ ಲಾಭಕ್ಕಾಗಿ ಕಾರ್ಯನಿರ್ವಹಿಸದೆ, ಬಡ ಹಾಗೂ ಮಧ್ಯಮವರ್ಗಕ್ಕೆ ತಾನು ಸೇವೆ ಸಲ್ಲಿಸುತ್ತಿರುವುದಾಗಿಯೂ ಬಿಡಿಎ ಹೇಳಿಕೊಂಡಿದೆ. ವಿರೋಧಾಭಾಸದ ಸಂಗತಿಯೆಂದರೆ, ಬಿಡಿಎ ಯಾವೆಲ್ಲ ಕಾರಣಗಳಿಂದಾಗಿ ‘ಕೆ–ರೇರಾ’ ವ್ಯಾಪ್ತಿಯಿಂದ ತನ್ನನ್ನು ಹೊರಗಿಡಬೇಕು ಎಂದು ವಾದಿಸುತ್ತಿದೆಯೋ, ಅದೇ ಕಾರಣಗಳಿಗಾಗಿ ಅದನ್ನು ನಿಯಂತ್ರಣ ಪ್ರಾಧಿಕಾರದ ವ್ಯಾಪ್ತಿಗೆ ತರಬೇಕಾಗಿದೆ ಎಂಬುದು ಶಾಸಕ ಸುರೇಶ್ ಕುಮಾರ್ ಅವರ ಸ್ಪಷ್ಟ ನಿಲುವು.
ಸರ್ಕಾರಿ ಸಂಸ್ಥೆಯಲ್ಲಿ ನಂಬಿಕೆಯಿಟ್ಟು ತಮ್ಮ ಜೀವಮಾನದ ಉಳಿತಾಯವನ್ನು ತೊಡಗಿಸುವವರಿಗೆ ದುರ್ಬಲ ರಕ್ಷಣೆಯ ಬದಲಾಗಿ ಹೆಚ್ಚಿನ ಸುರಕ್ಷತೆಯನ್ನು ಒದಗಿಸುವುದಕ್ಕಾಗಿ ಈ ನಿಯಂತ್ರಣ ಅಗತ್ಯವಾಗಿದೆ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ.