Live Stream

[ytplayer id=’22727′]

| Latest Version 8.0.1 |

Tumakuru

ವಿಕಲಚೇತನ ಮಕ್ಕಳ ಸಬಲೀಕರಣಕ್ಕೆ ಆದ್ಯತೆವಹಿಸಿ

ವಿಕಲಚೇತನ ಮಕ್ಕಳ ಸಬಲೀಕರಣಕ್ಕೆ ಆದ್ಯತೆವಹಿಸಿ
ಸಿರಾ : ವಿಕಲಚೇತನ ಮಕ್ಕಳ ಸಬಲೀಕರಣವು ಕೇವಲ ಜವಾಬ್ದಾರಿಯಲ್ಲ, ಅದು ನಮ್ಮ ಸಮಾಜದ ನೈತಿಕ ಕರ್ತವ್ಯ. ಪುನರ್ವಸತಿ ಕಾರ್ಯಕರ್ತರು ಈ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ವಿಕಲಚೇತನ ಮಕ್ಕಳ ಸವಾಲುಗಳು ಮತ್ತು ಅವರ ಅವಕಾಶಗಳ ನಡುವಿನ ಸೇತುವೆಯಾಗಿ, ವಿಕಲಚೇತನ ಮಕ್ಕಳಿಗೆ ದೈಹಿಕ, ಭಾವನಾತ್ಮಕ ಮತ್ತು ಸಾಮಾಜಿಕ ಅಡೆತಡೆಗಳನ್ನು ನಿವಾರಿಸಲು ಸಹಾಯ ಮಾಡುವ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸ ಮತ್ತು ಭರವಸೆಯನ್ನು ತುಂಬುವ ಪ್ರೇರಕರಾಗಿ ಕೆಲಸಮಾಡಬೇಕಾಗಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಕೆ.ಟಿ. ಹೇಳಿದರು.
ಅವರು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮೊಬಿಲಿಟಿ ಇಂಡಿಯಾ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ವಿಕಲಚೇತನರು ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ತುಮಕೂರು ಇವರ ಸಂಯುಕ್ತಾಶ್ರಯದಲ್ಲಿ ನಗರದ ಅಂಬೇಡ್ಕರ್ ಭವನದಲ್ಲಿ ಸಿರಾ ತಾಲ್ಲೂಕಿನ ಗ್ರಾಮೀಣ ಮತ್ತು ನಗರ ಪುನರ್ವಸತಿ ಕಾರ್ಯಕರ್ಯರಿಗೆ ಮಕ್ಕಳ ಹಕ್ಕುಗಳ ಬಗ್ಗೆ ಏರ್ಪಡಿಸಿದ್ದ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.
ವಿಕಲಚೇತನ ಮಕ್ಕಳಿಗೆ ಪರಿಕರಗಳನ್ನು ವಿತರಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಅವರು ಕುಟುಂಬಗಳಿಗೆ ಮಾರ್ಗದರ್ಶನ ನೀಡುವುದು, ವಿಕಲಚೇತನ ಮಕ್ಕಳನ್ನು ಶೈಕ್ಷಣಿಕ ಮತ್ತು ಸಾಮಾಜಿಕ ಬೆಂಬಲ ವ್ಯವಸ್ಥೆಗಳಿಗೆ ಸಂಪರ್ಕಿಸುವ ಮತ್ತು ಸಮುದಾಯದಲ್ಲಿ ಜಾಗೃತಿ ಮೂಡಿಸುವ ಮೂಲಕ, ಪುನರ್ವಸತಿ ಕಾರ್ಯಕರ್ತರು ಪ್ರತಿ ಮಗುವೂ ಘನತೆಯಿಂದ ಭಾಗವಹಿಸಲು ಅವಕಾಶ ಮಾಡಿಕೊಡಬೇಕೆಂದರು.  ಈ ಹಿನ್ನೆಲೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವೂ ಈ ವರ್ಷ ರಾಜ್ಯದ ಎಲ್ಲಾ ಜಿಲ್ಲೆಗಳ ಪುನರ್ವಸತಿ ಕಾರ್ಯಕರ್ತರಿಗೂ ತರಬೇತಿ ನೀಡಲಿದೆ. ಅದರ ಆರಂಭವನ್ನು ಸಿರಾ ತಾಲ್ಲೂಕಿನಿಂದ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶ್ರೀಮತಿ ಪವಿತ್ರರವರು ಮಾತನಾಡಿ ಸಂಕಷ್ಟದಲ್ಲಿನ ಮಕ್ಕಳ ಪುನರ್ವಸತಿ ಹಾಗೂ ಅವರ ರಕ್ಷಣೆಯನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮಾಡುತ್ತದೆ. ಇಂತಹ ಮಕ್ಕಳನ್ನು ಗುರುತಿಸುವ ಅವರನ್ನು ತಲುಪುವ ಕೆಲಸ ಪುನರ್ವಸತಿ ಕಾರ್ಯಕರ್ತರು ಮಾಡುತ್ತಿದ್ದು ಮಕ್ಕಳ ರಕ್ಷಣಾ ಘಟಕದ ಬೆಂಬಲ ಪಡೆಯಬಹುದಾಗಿದೆ ಎಂದರು.
ಜಿಲ್ಲಾ ವಿಕಲಚೇತನರ ಸಬಲೀಕರಣ ಅಧಿಕಾರಿ ಶ್ರೀ ಚಿದಾನಂದ್ ಮಾತನಾಡಿ ಪುನರ್ವಸತಿ ಕಾರ್ಯಕರ್ತರು ಇಲಾಖೆ ಹಾಗೂ ವಿಕಲಚೇತನರ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಸೌಲಭ್ಯಗಳು ತಳಮಟ್ಟಕ್ಕೆ ತಲುಪಲು ಗಣನೀಯ ಕೊಡುಗೆ ನೀಡುತ್ತಾರೆ. ಅದರಲ್ಲೂ ಸಿರಾ ತಾಲ್ಲೂಕಿನಲ್ಲಿ ಒಳ್ಳೆಯ ಸಂಘಟನೆ ಇದ್ದು ಮತ್ತಷ್ಟು ಕ್ರಿಯಾಶೀಲವಾಗಿ ಹಾಗೂ ಸಮುದಾಯವನ್ನು ಒಳಗೊಂಡು ತೊಡಗಿಸಿಕೊಂಡರೆ ಇತರೆ ಜಿಲ್ಲೆಗಳಿಗೆ ಮಾದರಿಯಾಗಲಿದೆ ಎಂದರು.
ಮೊಬಿಲಿಟಿ ಇಂಡಿಯಾ ಸಂಸ್ಥೆಯ ಶ್ರೀ ಆನಂದ್ ರವರು ತುಮಕೂರು ಜಿಲ್ಲೆಯಲ್ಲಿ ವಿಕಲಚೇತನರ ಏಳಿಗೆಗಾಗಿ ಸಂಸ್ಥೆ ಮಾಡುತ್ತಿರುವ ಕೆಲಸಗಳ ಬಗ್ಗೆ ಮಾಹಿತಿ ನೀಡಿದರು. ವಿಕಲಚೇತನರ ಗುರುತಿನ ಚೀಟಿ, ಅವರಿಗೆ ಇಲಾಖೆಗಳಿಂದ ಸೌಲಭ್ಯಗಳ ವಿತರಣೆಯಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಆಯೋಗ ಗಮನಿಸಬೇಕೆಂದರು.
ಕಾರ್ಯಕ್ರಮದಲ್ಲಿ ಸಿರಾ ತಾಲ್ಲೂಕಿನ ಎಂ.ಆರ್.ಡಬ್ಲು ಶ್ರೀ ಚಿತ್ತಯ್ಯ, ಶಿಕ್ಷಣ ಇಲಾಖೆಯ ಸಮನ್ವಯ ಶಿಕ್ಷಣಾಧಿಕಾರಿ ಶ್ರೀ ದೊಡ್ಡಯ್ಯ ಸೇರಿದಂತೆ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.

ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";