Live Stream

[ytplayer id=’22727′]

| Latest Version 8.0.1 |

Health & Fitness

ರಾಜ್ಯದ ಎಲ್ಲಾ ಅಸ್ಪತ್ರೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಅಸ್ಪತ್ರೆ ನಿರ್ಮಾಣಕ್ಕೆ ಕ್ರಮ

ರಾಜ್ಯದ ಎಲ್ಲಾ ಅಸ್ಪತ್ರೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಅಸ್ಪತ್ರೆ ನಿರ್ಮಾಣಕ್ಕೆ ಕ್ರಮ

ಹೃದಯಾಘಾತಗಳ ಬಗ್ಗೆ ಜನತೆ ಅನಗತ್ಯವಾಗಿ ಗೊಂದಲಕ್ಕೆ ಒಳಗಾಗಬಾರದು – ಸಚಿವ  ಡಾ.ಶರಣ್ ಪ್ರಕಾಶ್ ಪಾಟೀಲ್

 

 ಬೆಂಗಳೂರು, ಆಗಸ್ಟ್  18, (ಕರ್ನಾಟಕ ವಾರ್ತೆ) : ರಾಜ್ಯದಲ್ಲಿ  ಹೆಚ್ಚುತ್ತಿರುವ ಹೃದಯಾಘಾತಗಳ ಬಗ್ಗೆ  ಜನತೆ ಅನಗತ್ಯವಾಗಿ ಗೊಂದಲಕ್ಕೆ ಒಳಗಾಗಬಾರದು. ವ್ಯಾಯಾಮ, ಪ್ರಾಣಾಯಾಮ, ಆಹಾರಪದ್ಧತಿ  ಹಾಗೂ ಜೀವನ ಶೈಲಿಯನ್ನು ಬದಲಾವಣೆ ಮಾಡಿಕೊಂಡರೆ ಯಾವುದೇ ಸಮಸ್ಯೆ  ಬರುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ  ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ತಿಳಿಸಿದರು.

 ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ವಿಧಾನ ಪರಿಷತ್ ಸದಸ್ಯ  ದಿನೇಶ್ ಗೂಳಿಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಇತ್ತೀಚೆಗೆ   ಹೃದಯಾಘಾತ ಪ್ರಕರಣಗಳ ಸಂಖ್ಯೆ ಹೆಚ್ಚಳದ ಬಗ್ಗೆ ಎಲ್ಲರಲ್ಲೂ ಆತಂಕ ಮನೆ ಮಾಡಿದೆ. ಜಯದೇವ ಆಸ್ಪತ್ರೆಯಲ್ಲಿ ಜನರು ಪ್ರತಿನಿತ್ಯ ಬಂದು ಹೃದಯ ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ. ಇದರ  ಪ್ರಮಾಣ ಶೇ.25ರಷ್ಟು ಏರಿಕೆಯಾಗಿದೆ ಎಂದು  ಮಾಹಿತಿ ನೀಡಿದರು.

 ವಿಶೇಷವಾಗಿ ಹಾಸನ ಜಿಲ್ಲೆಯಲ್ಲಿ ಹೃದಯಘಾತಗಳ ಸಂಖ್ಯೆ ಹೆಚ್ಚಳವಾಗಿದೆ ಎಂಬ ಆತಂಕ ಜನರಲ್ಲಿ  ಮೂಡಿದೆ. ಇದು ತಪ್ಪು ಗ್ರಹಿಕೆ. ವಾಸ್ತವವಾಗಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಸರಾಸರಿ ಪ್ರಮಾಣದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಶೇ.5ರಿಂದ 6ರಷ್ಟು ಪ್ರಕರಣಗಳು ಹೃದಯಾಘಾತಕ್ಕೆ ಸಂಬಂಧಿಸಿದವು. ಈ ವರ್ಷವು ಇಷ್ಟೇ ಪ್ರಮಾಣದಲ್ಲಿ ಇದೆ ಎಂದು ಸಚಿವರು ಹೇಳಿದರು.

 ಬದಲಾದ ಜೀವನಶೈಲಿ, ಅಧಿಕ ಒತ್ತಡ, ಬೊಜ್ಜು, ಮದ್ಯಪಾನ, ಧೂಮಪಾನ, ಡ್ರಗ್ಸ್ ಸೇವನೆ, ಕುಟುಂಬದ ಹಿನ್ನಲೆ ಇತ್ಯಾದಿ ಕಾರಣಗಳಿಂದ ಹೃದಯಘಾತಗಳು ಸಂಭವಿಸಿವೆ. ಯಾವುದೋ ಒಂದು ಪ್ರಕರಣವನ್ನು ಆಧಾರವಾಗಿಟ್ಟುಕೊಂಡು ಜನತೆ ಆತಂಕಕ್ಕೆ ಒಳಗಾಗಬಾರದು ಎಂದು ತಿಳಿಸಿದರು.

ಕೋವಿಡ್ ನಂತರ ಹೃದಯಘಾತ  ಪ್ರಕರಣಗಳು ಹೆಚ್ಚಾಗುತ್ತಿವೆ ಎಂಬ ಗುಮಾನಿಯೂ ಇದೆ. ವಾಸ್ತವವಾಗಿ ಇದಕ್ಕೂ ಅದಕ್ಕೂ ಸಂಬಂಧವೇ ಇಲ್ಲ. ಪ್ರತಿದಿನ ವ್ಯಾಯಾಮ, ಪ್ರಾಣಯಾಮ, ಸರಿಯಾದ ಸಮಯಕ್ಕೆ ನಿದ್ದೆ, ಒತ್ತಡ ಇಲ್ಲದಿರುವುದು, ಖಿನ್ನತೆ ಒಳಗಾಗದೆ ಸಮತೋಲನ ಕಾಯ್ದುಕೊಂಡರೆ ಯಾವುದೇ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ ಎಂದು ಸಚಿವರು ಸಲಹೆ ಕೊಟ್ಟರು.

 ಈ ಪ್ರಕರಣಗಳ ಕುರಿತಂತೆ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾದ ಡಾ.ಕೆ ಎಸ್ ರವೀಂದ್ರನಾಥ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕಾರ್ಯಪಡೆಯನ್ನು ಸಹ ರಚಿಸಿತ್ತು.  ಸರ್ಕಾರಕ್ಕೆ ನೀಡಿರುವ ವರದಿಯಲ್ಲಿ ಜನರ ಊಹೆಗೂ  ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಜನರು ಮೊದಲು ವದಂತಿಗಳಿಗೆ ಕಿವಿಗೊಡುವುದನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದರು.

 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ :

ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಜೊತೆ ಕಡ್ಡಾಯವಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ತೆರೆಯಬೇಕೆಂಬುದು ನಮ್ಮ  ಸರ್ಕಾರದ ಸಿದ್ದಾಂತವಾಗಿದೆ. ಈಗಾಗಲೇ ಅನೇಕ ಜಿಲ್ಲೆಗಳಲ್ಲಿ ಈ ಆಸ್ಪತ್ರೆಗಳು ಕಾರ್ಯಾರಂಭ ಮಾಡಿವೆ.

 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಸ್ಥಾಪನೆ ಮಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೂಚನೆ ಕೊಟ್ಟಿದ್ದಾರೆ.  ಈ ನಿಯಮವನ್ನು ನಾವು ಈಗಾಗಲೇ ಅಳವಡಿಸಿಕೊಂಡು ಕಾರ್ಯಾರಂಭ ಮಾಡಿದ್ದೇವೆ. ಎಲ್ಲಾ ಜಿಲ್ಲೆಗಳಲ್ಲೂ ಸೂಪರ್ ಸ್ಪೆಷಾಲಿಟಿ ಜೊತೆಗೆ ಟ್ರಾಮಾ  ಕೇಂದ್ರಗಳನ್ನು ಪ್ರಾರಂಭಿಸಲಾಗುವುದು ಎಂದರು.

 ಬೆಂಗಳೂರು- ಮೈಸೂರು, ಕಲಬುರಗಿ, ಹುಬ್ಬಳ್ಳಿಯ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭವಾಗಿದೆ. ಇದೇ ರೀತಿ ಬಾಗಲಕೋಟೆ, ಯಾದಗಿರಿ, ರಾಯಚೂರಿನಲ್ಲೂ ಶೀಘ್ರದಲ್ಲೇ ಕಾರ್ಯಾರಂಭ ಮಾಡಲಾಗುವುದು. ಬೀದರ್, ಕೊಪ್ಪಳ, ಬೆಳಗಾವಿಯಲ್ಲಿ ಎರಡರಿಂದ ಮೂರು ತಿಂಗಳೊಳಗೆ ಈ ಆಸ್ಪತ್ರೆಗಳು ಲೋಕಾರ್ಪಣೆಗೊಳ್ಳಲಿವೆ ಎಂದು ಪಾಟೀಲ್  ತಿಳಿಸಿದ್ದಾರೆ.

ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";