ಬೆಂಗಳೂರು, ಆಗಸ್ಟ್ 18, (ಕರ್ನಾಟಕ ವಾರ್ತೆ) : ನಂಜನಗೂಡು ತಾಲ್ಲೂಕು ಆಸ್ಪತ್ರೆಯಲ್ಲಿ ಟ್ರಮಾ ಕೇರ್ ಸೇವೆಗಳನ್ನು ಆರಂಭಿಸುವ ಉದ್ದೇಶವಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರು ತಿಳಿಸಿದರು
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಡಾ. ಯತೀಂದ್ರ ಎಸ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಆಸ್ಪತ್ರೆಗಳನ್ನು ರಾಷ್ಟ್ರೀಯ ಅಪಘಾತ ಮತ್ತು ಸುಟ್ಟಗಾಯಗಳ ಕಾರ್ಯಕ್ರಮದಡಿಯಲ್ಲಿ ಬಲಗೊಳಿಸಲು ರೂ. 10.00 ಕೋಟಿಗಳ ಕ್ರಿಯಾ ಯೋಜನೆಗೆ ಅನುಮೋದನ ನೀಡಲಾಗಿದೆ.
ದಿನಾಂಕ: 19.03.2025 ರಂದು ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ರಸ್ತೆ ಸುರಕ್ಷತಾ ಪ್ರಾಧಿಕಾರದ ಸಭೆಯು ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿರುತ್ತದೆ. ಇದರಲ್ಲಿ ನಂಜನಗೂಡು ತಾಲ್ಲೂಕು ಆಸ್ಪತ್ರೆಗೆ ಅಗತ್ಯವಿರುವ ಉಪಕರಣಗಳನ್ನು ಸಹ ಪ್ರಸ್ತಾಪಿಸಲಾಗಿದೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ಅಪಘಾತ ಮತ್ತು ಸುಟ್ಟ ಗಾಯಗಳ ತಡೆಗಟ್ಟುವಿಕೆ ಮತ್ತು ನಿರ್ವಹಣಾ ಕಾರ್ಯಕ್ರಮದ ಮಾರ್ಗಸೂಚಿಯನ್ವಯ – ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿನ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿನ ತುರ್ತು ಚಿಕಿತ್ಸಾ ವಿಭಾಗವನ್ನು ಮೇಲ್ದರ್ಜೆಗೇರಿಸಿ ಅಪಘಾತಕ್ಕೆ ಒಳಗಾದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವುದು ಹಾಗೂ ಅವಶ್ಯಕವಿದ್ದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮೇಲ್ದರ್ಜೆಯ ಆಸ್ಪತ್ರೆಗಳಿಗೆ ತುರ್ತು ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿರುತ್ತದೆ ಪ್ರತ್ಯೇಕ ಟ್ರಾಮಾ ಕೇರ್ ಸೆಂಟರ್ಗಳನ್ನು ಕಲ್ಪಿಸಬೇಕೆಂಬ ನಿಯಮವು ಮಾರ್ಗಸೂಚಿಯಲ್ಲಿ ಇಲ್ಲದಿರುವುದರಿಂದ ಟ್ರಾಮಾ ಕೇರ್ ಸೆಂಟರ್ ಸ್ಥಾಪಿಸಲು ಜಾಗದ ಅವಶ್ಯಕತೆ ಇರುವುದಿಲ್ಲ ಎಂದು ತಿಳಿಸಿದರು.