ಬೆಂಗಳೂರು, ಆಗಸ್ಟ್ 18, (ಕರ್ನಾಟಕ ವಾರ್ತೆ) : ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲ್ಲೂಕಿನ ಯಲ್ಲಾಪುರದ ಕಾಳಮ್ಮ ನಗರದಲ್ಲಿರುವ ಪರಿಶಿಷ್ಟ ಪಂಗಡದ ಮತ್ತು ಇತರೆ ಸಮುದಾಯಗಳ ಕೆಲವು ಕಚ್ಚಾ ಮನೆಗಳಿಗೆ ಅಗತ್ಯ ದಾಖಲೆಗಳನ್ನು ಒದಗಿಸಿದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮವಹಿಸಲಾಗುವುದು. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೂ ದಾಖಲಾತಿಗಳನ್ನು ಪಡೆದು ಕೂಡಲೇ ವಿದ್ಯುತ್ ಸಂಪರ್ಕ ನೀಡುವಂತೆ ಸೂಚನೆ ನೀಡಲಾಗುವುದು ಎಂದು ಇಂಧನ ಇಲಾಖೆ ಸಚಿವ ಕೆ.ಜೆ. ಜಾರ್ಜ್ ಅವರು ತಿಳಿಸದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಶಾಂತರಾಮ ಬುಡ್ನ ಸಿದ್ದಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲ್ಲೂಕಿನ ಯಲ್ಲಾಪುರದ ಕಾಳಮ್ಮ ನಗರದಲ್ಲಿರುವ ಪರಿಶಿಷ್ಟ ಪಂಗಡದ ಮತ್ತು ಇತರೆ ಸಮುದಾಯಗಳ ಕೆಲವು ಕಚ್ಚಾ ಮನೆಗಳಿಗೆ (ಕಚ್ಚಾ ಮನೆ) ವಿದ್ಯುತ್ ಸಂಪರ್ಕ ನೀಡುವಂತೆ ಮನವಿಗಳು ಸ್ವೀಕೃತಗೊಂಡಿರುತ್ತವೆ. ಆದರೆ, ವಿದ್ಯುತ್ ಸಂಪರ್ಕ ನೀಡಲು KERC ನಿಯಮದಂತೆ ಅಗತ್ಯವಿರುವ ದಾಖಲಾತಿಗಳಾದ ವಾರಸುದಾರಿಕೆ ರುಜುವಾತು/ ಮಾಲೀಕತ್ವದ ಪುರಾವೆ/ ಅನುಭವದ ರುಜುವಾತು/ ಸ್ಥಳೀಯ ಪ್ರಾಧಿಕಾರದ ಅನುಮತಿ ಪತ್ರ ಒದಗಿಸಿರದ ಕಾರಣ ಅರ್ಜಿ ನೊಂದಾವಣೆಗೊಂಡಿರುವುದಿಲ್ಲ. ಇದಲ್ಲದೇ, ಸದರಿ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಬಾರದೆಂದು ಜಮೀನಿನ ವಾರಸುದಾರರೆಂದು ಹೇಳಿಕೊಂಡಿರುವವರು ಮನವಿ ಸಲ್ಲಿಸಿರುತ್ತಾರೆ. ಈ ಬಗ್ಗೆ ಪರಿಶೀಲಿಸಿ ಕೂಡಲೇ ಅಗತ್ಯ ದಾಖಲೆಗಳನ್ನು ಪಡೆದು ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಸಂಬಂಧಿಸಿದವರಿಗೆ ತಿಳಿಸಲಾಗುವುದು ಎಂದು ಸಚಿವರು ತಿಳಿಸಿದರು.