ಮಳೆಗಾಲದಲ್ಲಿ ನಿಮ್ಮ ಕಣ್ಣುಗಳಿಗೆ ವಿಶೇಷ ಕಾಳಜಿ ಬೇಕೇ? ಹೌದು, ಎಂದು ತಜ್ಞರು ಹೇಳುತ್ತಾರೆ. ವಾತಾವರಣದಲ್ಲಿನ ತೇವಾಂಶ ರೋಗಕಾರಕ ಕ್ರಿಮಿಗಳಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತದೆ. ಇದರಿಂದ ಬ್ಯಾಕ್ಟೀರಿಯಾ, ವೈರಸ್ ಮತ್ತು ಶಿಲೀಂಧ್ರ, ಕಣ್ಣುಗಳಿಗೆ ಸೋಂಕು ಉಂಟುಮಾಡುವ ಸಾಧ್ಯತೆಯಿದೆ ಮತ್ತು ಕಣ್ಣಿನ ಅಲರ್ಜಿಯನ್ನೂ ಸಹ ಪ್ರಚೋದಿಸಬಹುದು.
ಸಾಮಾನ್ಯ ಮಳೆಗಾಲದ ಕಣ್ಣಿನ ಸಮಸ್ಯೆಗಳು ಹಾಗೂ ಅದರ ಪರಿಹಾರಗಳ ಬಗ್ಗೆ ಈಗ ತಿಳಿದುಕೊಳ್ಳೋಣ:
ಕಣ್ಣುಗಳಿಗೆ ಮಳೆ ನೀರು ಚಿಮ್ಮುವುದು:
ಮಳೆಗಾಲದಲ್ಲಿ ಕೆಸರು ನೀರು ಚಿಮ್ಮುವುದು ಸಾಮಾನ್ಯ, ವಿಶೇಷವಾಗಿ ಚಿಕ್ಕ ಮಕ್ಕಳು ಮಳೆಯಲ್ಲಿ ಆಡುವಾಗ ಇದು ಸಂಭವಿಸುತ್ತದೆ. ರಸ್ತೆಯಲ್ಲಿ ವಾಹನದಲ್ಲಿ ಅತ್ಯಂತ ವೇಗವಾಗಿ ಹೋಗುವಾಗಲೂ ಕೆಸರು ನೀರು ಆಕಸ್ಮಿಕವಾಗಿ ಚಿಮ್ಮಬಹುದು. ಕೆಸರು ನೀರಿನಲ್ಲಿ ಹಲವಾರು ಕಲುಷಿತ ಅಂಶಗಳು ಇರುವುದರಿಂದ ಕಣ್ಣಿನ ಸೋಂಕು ಅಥವಾ ಅಲರ್ಜಿ ಉಂಟಾಗಬಹುದು. ನೀರು ಚಿಮ್ಮಿದ ತಕ್ಷಣ, ಕೊಳಕು ನೀರನ್ನು ಹೊರಹಾಕಲು ನಿಮ್ಮ ಕಣ್ಣುಗಳನ್ನು ಶುದ್ಧವಾದ, ಉಗುರು ಬೆಚ್ಚಗಿನ ನೀರಿನಿಂದ ನಿಧಾನವಾಗಿ ತೊಳೆಯಿರಿ. ನಿಮ್ಮ ಕಣ್ಣುಗಳನ್ನು ಉಜ್ಜಬೇಡಿ. ನೀವು ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಧರಿಸಿದ್ದರೆ, ದಯವಿಟ್ಟು ಅವುಗಳನ್ನು ತೆಗೆದು ಲೆನ್ಸ್ ದ್ರಾವಣದಲ್ಲಿ ಚೆನ್ನಾಗಿ ತೊಳೆಯಿರಿ. ಕಣ್ಣು ಕೆಂಪಾಗುವುದು, ಕಿರಿಕಿರಿ ಅಥವಾ ತೀಕ್ಷ್ಣವಾದ ನೋವು ಇದ್ದರೆ ಅಥವಾ ಕಣ್ಣಿನಿಂದ ಸ್ರಾವ ಬರುವುದು ಶುರುವಾದರೆ, ದಯವಿಟ್ಟು ತಕ್ಷಣ ಕಣ್ಣಿನ ವೈದ್ಯರನ್ನು ಸಂಪರ್ಕಿಸಿ.
ರಕ್ಷಣಾತ್ಮಕ ಕನ್ನಡಕವನ್ನು ಧರಿಸುವುದರಿಂದ ಮಳೆ ನೀರು ನಿಮ್ಮ ಕಣ್ಣುಗಳ ಒಳಗೆ ಬೀಳುವುದನ್ನು ತಡೆಯಬಹುದು.
ಪಿಂಕ್ ಐ / ಮದ್ರಾಸ್ ಐ ಅಥವಾ ಕಂಜಂಕ್ಟಿವೈಟಿಸ್:
ಕಂಜಂಕ್ಟಿವೈಟಿಸ್ ಎನ್ನುವುದು ಕಣ್ಣಿನ ಬಿಳಿ ಭಾಗ ಮತ್ತು ಕಣ್ಣುರೆಪ್ಪೆಯ ಒಳಗಿನ ಮೇಲ್ಮೈಯನ್ನು ಆವರಿಸಿರುವ ತೆಳುವಾದ ಪಾರದರ್ಶಕ ಪೊರೆಯ ಸೋಂಕು. ಇದರ ಲಕ್ಷಣಗಳು ಕಣ್ಣು ಕೆಂಪಾಗುವುದು, ಕಣ್ಣಿನಲ್ಲಿ ಏನೋ ಸಿಕ್ಕಿದಂತಹ ಭಾವನೆ, ತುರಿಕೆ, ಅತಿಯಾಗಿ ನೀರು ಬರುವುದು ಅಥವಾ ಸ್ರಾವ, ಕಣ್ಣುರೆಪ್ಪೆಗಳ ಊತ ಮುಂತಾದವು. ಎದ್ದಾಗ ಕಣ್ಣುರೆಪ್ಪೆ ಅಂಟಿಕೊಂಡಿರುವುದು ಮತ್ತು ಕೆಲವು ಸಂದರ್ಭಗಳಲ್ಲಿ ದೃಷ್ಟಿ ಮಂಜಾಗುವುದು ಸಹ ಇದರ ಲಕ್ಷಣಗಳು. ಇದು ತುಂಬ ಬೇಗ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಇದು ಹರಡುವುದನ್ನು ತಡೆಯಲು ನಿಮ್ಮ ಕಣ್ಣುಗಳನ್ನು ಪದೇ ಪದೇ ಮುಟ್ಟಬೇಡಿ. ನಿಮ್ಮ ಕೈಗಳನ್ನು ಶುಚಿಯಾಗಿಡಿ. ಟವೆಲ್, ಬ್ರಷ್ ಇತ್ಯಾದಿ ವಯಕ್ತಿಕ ವಸ್ತುಗಳನ್ನು ಇತರರ ಜೊತೆ ಹಂಚಿಕೊಳ್ಳಬೇಡಿ ಮತ್ತು ಲೆನ್ಸ್‌ಗಳನ್ನು ಸ್ವಚ್ಛವಾಗಿಡಿ. ನಿಮ್ಮ ಲಕ್ಷಣಗಳು ಹೆಚ್ಚುತ್ತಿವೆ ಅಥವಾ ನಿಮಗೆ ತೊಂದರೆ ಕೊಡುತ್ತಿವೆ ಎಂದು ನಿಮಗೆ ಅನಿಸಿದರೆ, ಕೂಡಲೆ ಕಣ್ಣಿನ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಕಣ್ಣಿನ ಕುರು(ಸ್ಟೈ):
ಮಳೆಗಾಲದಲ್ಲಿ ಸ್ಟೈ ಅಥವಾ ಕಣ್ಣಿನ ಕುರು ತುಂಬ ಸಾಮಾನ್ಯ ಕಣ್ಣಿನ ಸೋಂಕು.
ಡಾ. ಯತೀಶ್ ಎಸ್, ಹೆಚ್. ಓ. ಡಿ ಮತ್ತು ಕನ್ಸಲ್ಟೆಂಟ್, ಕಾರ್ನಿಯಾ ವಿಭಾಗ, ನಾರಾಯಣ ನೇತ್ರಾಲಯ, ಬೆಂಗಳೂರು, ಇವರುಗಳು ವಿವರಿಸುತ್ತಾರೆ – ” ಸ್ಟೈ ಅಥವಾ ಕಣ್ಣಿನ ಕುರು ಎಂದರೆ ಕಣ್ಣಿನ ರೆಪ್ಪೆಯ ಅಂಚಿನಲ್ಲಿ ಕಂಡುಬರುವ ಗುಳ್ಳೆ. ಇದು ಮೊಡವೆ ಅಥವಾ ಕುರುವಿನಂತೆ ಕಾಣುತ್ತದೆ. ಇದು ಸಾಮಾನ್ಯವಾಗಿ, ಸ್ವಚ್ಛತೆಯಿಲ್ಲದ ಕಾರಣ ಅಥವಾ ಪರಿಸರದಲ್ಲಿ ಹೆಚ್ಚಿದ ತೇವಾಂಶದಿಂದಾಗಿ ಮುಚ್ಚಿಹೋಗಿರುವ ತೈಲ ರಂಧ್ರದಿಂದ ಸೋಂಕಿಗೆ ಒಳಗಾಗಬಹುದು.”
ವೈದ್ಯರ ಪ್ರಕಾರ, ಕಣ್ಣುಕುರು ಬೆಳವಣಿಗೆಗೆ ಒಂದು ಸಾಮಾನ್ಯ ಕಾರಣ- ಅವಧಿ ಮೀರಿದ/ಅಥವಾ ಕಳಪೆ ಗುಣಮಟ್ಟದ ಮೇಕಪ್ ಉತ್ಪನ್ನಗಳನ್ನು ಬಳಸುವುದು. ಏಕೆಂದರೆ ಇದು ಸೋಂಕುಗಳಿಗೆ ಆಶ್ರಯ ತಾಣವಾಗಬಹುದು.
ಕೆಲವು ಕಣ್ಣುಕುರುಗಳನ್ನು ಬೆಚ್ಚಗಿನ ಬಟ್ಟೆಯಿಂದ ಮನೆಯಲ್ಲಿಯೇ ಚಿಕಿತ್ಸೆ ನೀಡಬಹುದು, ಆದರೆ ಕೆಲವುದಕ್ಕೆ ಕಣ್ಣಿನ ವೈದ್ಯರಿಂದ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುತ್ತದೆ.
ಕಣ್ಣುಗಳ ಶುಷ್ಕತೆ:
ಮಳೆಗಾಲದಲ್ಲಿ ವಾತಾವರಣದಲ್ಲಿನ ತೇವಾಂಶ ಹೆಚ್ಚಳವು ಕಣ್ಣುಗಳ ಶುಷ್ಕತೆ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸಬಹುದು. ಅಲ್ಲದೆ, ಮಳೆಯ ಕಾರಣದಿಂದ ಮನೆಯಲ್ಲೇ ಹೆಚ್ಚು ಸಮಯ ಸ್ಕ್ರೀನ್ ಗಳನ್ನು (ಟಿವಿ, ಕಂಪ್ಯೂಟರ್, ಮೊಬೈಲ್) ನೋಡುವುದರಿಂದ ಅಥವಾ ಹವಾನಿಯಂತ್ರಿತ ಕೊಠಡಿಗಳಲ್ಲಿ ಕೂರುವುದರಿಂದಲೂ ಕಣ್ಣುಗಳ ಶುಷ್ಕತೆ ಉಂಟಾಗುವ ಸಾಧ್ಯತೆ ಇದೆ.
ಕಾರ್ನಿಯಲ್ ಅಲ್ಸರ್ (ಕಣ್ಣಿನ ಪಾರದರ್ಶಕ ಪಟಲದ ಹುಣ್ಣು):
ಮಳೆಗಾಲದಲ್ಲಿ ಗಾಳಿಯಲ್ಲಿ ತೇವಾಂಶ ಹೆಚ್ಚಾಗಿರುವುದು ಮತ್ತು ಬ್ಯಾಕ್ಟೀರಿಯಾ, ವೈರಸ್ ಹಾಗೂ ಶಿಲೀಂಧ್ರಗಳಿಂದ ಸೋಂಕು ತಗುಲುವ ಸಾಧ್ಯತೆ ಹೆಚ್ಚು ಇರುವುದರಿಂದ, ಕಣ್ಣಿನ ಕಾರ್ನಿಯಾ ಮೇಲೆ ಹುಣ್ಣು ಆಗುವ ಸಾಧ್ಯತೆ ಇದೆ. ಇದು ಗಂಭೀರ ಪರಿಸ್ಥಿತಿಯಾಗಿದ್ದು, ತುರ್ತು ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ.
ಈ ಮೇಲ್ಕಂಡ ಕಣ್ಣಿನ ಕಾಯಿಲೆಗಳು ಮಳೆಗಾಲದ ಆನಂದವನ್ನು ತಗ್ಗಿಸುವುದು ನೀವು ಬಯಸದಿದ್ದರೆ, ಕಣ್ಣಿನ ವೈದ್ಯರು ನೀಡಿರುವ ಈ ಸರಳ ಸಲಹೆಗಳನ್ನು ಅನುಸರಿಸಿ.
ಕಣ್ಣಿನ ಆರೈಕೆ ಸಲಹೆಗಳು:-
ಕೈಗಳನ್ನು ತೊಳೆಯದೆ ನಿಮ್ಮ ಕಣ್ಣುಗಳನ್ನು ಮುಟ್ಟಬೇಡಿ.
ಯಾವ ಕಾರಣಕ್ಕೂ ನಿಮ್ಮ ಕಣ್ಣುಗಳನ್ನು ಉಜ್ಜಿಕೊಳ್ಳಬೇಡಿ.
ಕಣ್ಣು ಕೆಂಪಾಗಿದ್ದರೆ, ಸ್ವಂತವಾಗಿ ಔಷಧಿಯ ಅಂಗಡಿಗಳಿಂದ ಐ ಡ್ರಾಪ್ಸ್ ಖರೀದಿಸಿ ಬಳಸಬೇಡಿ, ತಜ್ಞರ ಸಲಹೆ ಪಡೆಯಿರಿ.
ಈ ಸಮಯದಲ್ಲಿ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಬಳಸಬೇಡಿ. ಒಂದು ವೇಳೆ ಬಳಸಲೇಬೇಕಿದ್ದರೆ, ಡಿಸ್ಪೋಸಬಲ್ ಲೆನ್ಸ್‌ಗಳನ್ನು ಬಳಸಿ ಅಥವಾ ಸೂಕ್ತ ದ್ರಾವಣಗಳಿಂದ ಲೆನ್ಸ್‌ಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಬಳಸಿ.
ಕಣ್ಣು ಕೆಂಪಾಗಿದ್ದಾಗ ಅಥವಾ ಸ್ರಾವವಿದ್ದಾಗ ಕಣ್ಣಿನ ಮೇಕಪ್ ಬಳಸಬೇಡಿ.
ಗಾಳಿ ಮತ್ತು ಧೂಳಿನಿಂದ ಕಣ್ಣುಗಳನ್ನು ಕಾಪಾಡಲು ಗೊಗ್ಗಲ್ಸ್ / ಕನ್ನಡಕಗಳನ್ನು ಬಳಸಿ, ಮತ್ತು ಈಜುವಾಗ ರಕ್ಷಣಾತ್ಮಕ ಗೊಗ್ಗಲ್ಸ್ ಧರಿಸಿ.
ಕಣ್ಣಿನ ಆರೋಗ್ಯಕ್ಕೆ ಅಗತ್ಯವಾದ ವಿಟಮಿನ್ ಎ, ಸಿ, ಇ, ಮತ್ತು ಸತು (ಝಿಂಕ್) ಇರುವ ಆಹಾರಗಳನ್ನು ಸೇವಿಸಿ. ಸೊಪ್ಪಿನ ತರಕಾರಿಗಳು, ಸಿಟ್ರಸ್ ಹಣ್ಣುಗಳು, ಕ್ಯಾರೆಟ್, ಮೊಟ್ಟೆ ಮತ್ತು ಬಾದಾಮಿ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಮಳೆಗಾಲದಲ್ಲಿ ಸಾಮಾನ್ಯವಾದ ಅಲರ್ಜಿಗಳು ಹಾಗೂ ಸೋಂಕುಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
ಮಳೆಗಾಲದಲ್ಲಿ ನಿಮ್ಮ ಕಣ್ಣುಗಳಿಗೆ ಬೇಕಾದ ಸರಿಯಾದ ಆರೈಕೆ ನೀವು ನೀಡಿದರೆ ಕಣ್ಣಿನ ಸೋಂಕುಗಳಿಂದ ಅವುಗಳನ್ನು ಕಾಪಾಡಬಹುದು. ಮಳೆಯಲ್ಲೂ ನಿಮ್ಮ ಕಣ್ಣುಗಳಲ್ಲಿ ಆರೋಗ್ಯದ, ಸಂತಸದ ಕಾಂತಿ ಬೆಳಗುವಂತೆ
ನೋಡಿಕೊಳ್ಳುವುದು ನಿಮ್ಮ ಕೈಯಲ್ಲಿದೆ!