ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಶೌಚಾಲಯಗಳ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅನುದಾನವನ್ನು ಹೆಚ್ಚಿಸುವ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ವಹಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ವಿಧಾನ ಪರಿಷತ್ ಸದಸ್ಯ ರಾಮೋಜಿಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಸ್ವಚ್ಛತಾಗಾರರ ಹುದ್ದೆಗಳು ಮಂಜೂರಾಗಿರುವುದಿಲ್ಲ. ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ವಹಣೆಗಾಗಿ ಅನುದಾನ ಮಂಜೂರಾಗುತ್ತಿದ್ದು, ಸದರಿ ಅನುದಾನದಲ್ಲಿ ಸ್ವಚ್ಛತೆಗಾಗಿ ಸಿಬ್ಬಂದಿಗಳನ್ನು ಸ್ಥಳೀಯವಾಗಿ ಶಾಲಾ ಮೇಲುಸ್ತುವಾರಿ ಸಮಿತಿ ವತಿಯಿಂದ ನೇಮಕ ಮಾಡಲು ಅವಕಾಶ ಕಲ್ಪಿಸಲಾಗಿದೆ. ಎಂದು ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಯ ಕೆಲವು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಶೌಚಾಲಯ ಮತ್ತು ಸ್ವಚ್ಛತೆಯ ಕೆಲಸವನ್ನು ಹಾಗೂ ಇತರೆ ಕೆಲಸಗಳನ್ನು ನಿರ್ವಹಿಸಲು ಖಾಯಂ ಗ್ರೂಪ್-ಡಿ ಗಳನ್ನು ನೇಮಿಸಲಾಗಿದೆ.
ಖಾಯಂ ಗ್ರೂಪ್- ಡಿ ಗಳಿಲ್ಲದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಶೌಚಾಲಯ ಮತ್ತು ಸ್ವಚ್ಛತೆಯ ಕೆಲಸವನ್ನು ಹಾಗೂ ಇತರೆ ಕೆಲಸಗಳನ್ನು ನಿರ್ವಹಿಸಲು ಕಾಲೇಜು ಅಭಿವೃದ್ಧಿ ಸಮಿತಿಯ ವತಿಯಿಂದ ಗೌರವಧನ ಆಧಾರದ ಮೇಲೆ ಗ್ರೂಪ್-ಡಿ ಸಿಬ್ಬಂದಿಯ ಸೇವೆಯನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಸರ್ಕಾರಿ ಶಾಲೆಗಳ ನಿರ್ವಹಣೆಗೆ ಸಮಗ್ರ ಶಿಕ್ಷಣ ಕರ್ನಾಟಕ ವತಿಯಿಂದ ಮಕ್ಕಳ ದಾಖಲಾತಿಗೆ ಅನುಗುಣವಾಗಿ ಶಾಲಾ ಅನುದಾನ ಕಾರ್ಯಕ್ರಮದಡಿ ವಾರ್ಷಿಕವಾಗಿ ಬಿಡುಗಡೆ ಗೊಳಿಸಲಾಗುತ್ತಿದೆ. ಶಾಲಾನುದಾನ ಅನುದಾನದ ಲಭ್ಯತೆಗನುಗುಣವಾಗಿ ಪ್ರತಿ ವರ್ಷ ಶಾಲಾನುದಾನ ಬಿಡುಗಡೆಗೊಳಿಸಲಾಗುವುದು. ಬಿಡುಗಡೆ ಮಾಡಲಾಗುವ ಶಾಲಾನುದಾನದಲ್ಲಿ ಶೇಕಡಾ 10% ರಷ್ಟು ಅನುದಾನವನ್ನು ಶಾಲಾ ಸ್ವಚ್ಛತೆಗೆ ಬಳಸಲು ನಿಗದಿಪಡಿಸಲಾಗಿದೆ. ಈ ಅನುದಾನವನ್ನು ಹೆಚ್ಚಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿರುವ 308 ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಮಕ್ಕಳ ದಾಖಲಾತಿ ಸಂಖ್ಯೆ ಅನುಗುಣವಾಗಿ 5 ಲಕ್ಷದಿಂದ 9 ಲಕ್ಷಗಳವರೆಗೆ ಶಾಲಾ ನಿರ್ವಹಣಾ ಅನುದಾನ ಒದಗಿಸಲಾಗುತ್ತಿದ್ದು, ಸದರಿ ಅನುದಾನದಲ್ಲಿ ಶೌಚಾಲಯ ನಿರ್ವಹಣೆಗೆ ರೂ. 20,000/- ರಿಂದ ರೂ.45,000/- ರವರೆಗೆ ಬಳಸಲು ಅವಕಾಶ ಕಲ್ಪಿಸಲಾಗಿದೆ. ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸ್ವಚ್ಛತಾಗಾರರ ಸೇವೆ ಪಡೆಯಲು ಹುದ್ದೆ ಮಂಜೂರಾತಿ ಇರುವುದಿಲ್ಲ. ಶಾಲಾ ನಿರ್ವಹಣೆಗೆ ಬಿಡುಗಡೆ ಮಾಡಲಾದ ಅನುದಾನ ಬಳಸಿಕೊಂಡು ಶಾಲಾ ಶೌಚಾಲಯ ಸ್ವಚ್ಛತೆ ಮತ್ತು ಇತರೇ ಸ್ವಚ್ಛತೆ ಕೈಗೊಳ್ಳಲು ಶಾಲಾ ಮುಖ್ಯಶಿಕ್ಷಕರಿಗೆ ಸೂಚಿಸಲಾಗಿದೆ.
ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಶೌಚಾಲಯ ಹಾಗೂ ಸ್ವಚ್ಛತೆಯ ಕೆಲಸವನ್ನು ನಿರ್ವಹಿಸಲು, ಖಾಯಂ ಸಿಬ್ಬಂದಿಗಳಿಲ್ಲದ ಕಾಲೇಜು ಅಭಿವೃದ್ಧಿ ಸಮಿತಿಯ ವತಿಯಿಂದ (CDC) ಗೌರವಧನ ಆಧಾರದ ಮೇಲೆ ಗ್ರೂಪ್-ಡಿ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದರು.