ಕಳೆದ ಅಧಿವೇಶನದ ನಂತರ ಇತ್ತೀಚಿಗೆ ಅಗಲಿದ ರಾಜ್ಯದ ವಿವಿಧ ಕ್ಷೇತ್ರಗಳ ಗಣ್ಯರಿಗೆ ಇಂದು ಆರಂಭವಾದ ಅಧಿವೇಶನದಲ್ಲಿ ಮೇಲ್ಮನೆ ವಿಧಾನಪರಿಷತ್ತಿನಲ್ಲಿ ಸಂತಾಪ ಸೂಚಿಸಲಾಯಿತು.
ಅಧಿವೇಶನದ ಆರಂಭದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಸದÀನವನ್ನು ಉದ್ದೇಶಿಸಿ ಮಾತನಾಡಿ ಇತ್ತೀಚಿಗೆ ಅಗಲಿದ ಗಣ್ಯರುಗಳಾದ ವಿಧಾನ ಪರಿಷತ್ತಿನ ಮಾಜಿ ಸಭಾಪತಿಗಳು ಹಾಗೂ ಉಪ ಸಭಾಪತಿಗಳಾಗಿದ್ದ ಕಲಬುರಗಿ ಜಿಲ್ಲೆಯ ಡೇವಿಡ್ ಸಿಮೆಯೋನ್, ವಿಧಾನ ಪರಿಷತ್ತಿನ ಮಾಜಿ ಶಾಸಕರು ಹಾಗೂ ಪ್ರೋಟೆಮ್ ಸಭಾಪತಿಗಳಾಗಿದ್ದ ಡಾ: ಎನ್. ತಿಪ್ಪಣ್ಣ, ಮಾಜಿ ಸಚಿವ ಬೇಗಾನೆ ರಾಮಯ್ಯ, ಭಾರತದ ಪ್ರಖ್ಯಾತ ಬಾಹ್ಯಾಕಾಶ ವಿಜ್ಞಾನಿ ಡಾ.ಕೆ. ಕಸ್ತೂರಿರಂಗನ್, ಖ್ಯಾತ ವಿಮರ್ಶಕ ಹಾಗೂ ಹಿರಿಯ ಸಾಹಿತಿಗಳಾಗಿದ್ದ ಜಿ.ಎಸ್. ಸಿದ್ದಲಿಂಗಯ್ಯ, ಖ್ಯಾತ ಕೃಷಿ ವಿಜ್ಞಾನಿಯಾಗಿದ್ದ ಪೆÇ್ರ. ಸುಬ್ಬಣ್ಣ ಅಯ್ಯಪ್ಪನ್, ಹಿರಿಯ ಪರಮಾಣು ವಿಜ್ಞಾನಿ ಡಾ: ಎಮ್.ಆರ್. ಶ್ರೀನಿವಾಸನ್, ಹಿರಿಯ ಸಾಹಿತಿಗಳು, ಅಂಕಣಕಾರರು ಹಾಗೂ ವಿಮರ್ಶಕರಾಗಿದ್ದ ಡಾ.ಹೆಚ್.ಎಸ್. ವೆಂಕಟೇಶ್ ಮೂರ್ತಿ ಹಾಗೂ ಬಹುಭಾμÁ ತಾರೆ ಡಾ. ಬಿ. ಸರೋಜಾದೇವಿ ಅವರುಗಳು ನಿಧನರಾದುದನ್ನು ಈ ಸದನಕ್ಕೆ ತಿಳಿಸಲು ವಿμÁಧ ವ್ಯಕ್ತಪಡಿಸುತ್ತೇನೆ ಎಂದು ಹೇಳಿದರು.
ತದನಂತರ ಸಭಾನಾಯಕ ಹಾಗೂ ಸಣ್ಣ ನೀರಾವರಿ ಸಚಿವರಾದ ಎನ್ ಎಸ್ ಬೋಸರಾಜು, ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ, ಸದಸ್ಯರಾದ ಸುನೀಲ್ ವಲ್ಲೇಪುರ, ಸಿ ಟಿ ರವಿ ಅವರು ಸೇರಿದಂತೆ ಅನೇಕ ಸದಸ್ಯರು ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದರು.
ಡೇವಿಡ್ ಸಿಮೆಯೋನ್:
ವಿಧಾನ ಪರಿಷತ್ತಿನ ಮಾಜಿ ಸಭಾಪತಿಗಳು, ಮಾಜಿ ಉಪ ಸಭಾಪತಿಗಳು ಹಾಗೂ ವಿಧಾನ ಪರಿಷತ್ತಿನ ಮಾಜಿ ಸದಸ್ಯರಾಗಿದ್ದ ಡೇವಿಡ್ ಸಿಮೆಯೋನ್ ಅವರು 2025 ನೇ ಜೂನ್ 10 ರಂದು ನಿಧನ ಹೊಂದಿರುತ್ತಾರೆ.
1950ರ ಜೂನ್ 11ರಂದು ಗುಲಬರ್ಗಾ ಜಿಲ್ಲೆಯ ಯಾದಗಿರಿ ತಾಲ್ಲೂಕಿನ ಮಲ್ಹಾರ ಗ್ರಾಮದಲ್ಲಿ ಜನಿಸಿದ್ದ ಶ್ರೀಯುತರು ರಾಜಕೀಯ ವಿಜ್ಞಾನದಲ್ಲಿ ಎಂ.ಎ. ಪದವೀಧರರಾಗಿದ್ದು, ವೃತ್ತಿಯಲ್ಲಿ ಸಮಾಜ ಸೇವಕರಾಗಿದ್ದರು. 1973-74ರಲ್ಲಿ ಕಲಬುರ್ಗಿ ಕಲಾ ಮತ್ತು ವಿಜ್ಞಾನ ಕಾಲೇಜಿನ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾಗಿ, 1974ರಿಂದ 1976ರವರೆಗೆ ಕಲಬುರ್ಗಿಯ ಜಿಮ್ ಖಾನಾ ಉನ್ನತ ಶಿಕ್ಷಣ ಕೇಂದ್ರದ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ 1983ರಿಂದ 1988ರವರೆಗೆ ಕಲಬುರ್ಗಿ ನಗರಸಭೆಯ ಸದಸ್ಯರಾಗಿ ಮತ್ತು 1988ರಿಂದ 1991ರವರೆಗೆ ಗುಲಬರ್ಗಾ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.
1996ರಿಂದ 2002ರ ಅವಧಿಗೆ ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಹೊಂದಿದ ಸದಸ್ಯರಾಗಿ ಸೇವೆ ಸಲ್ಲಿಸಿರುತ್ತಾರೆ. 1999 ರಿಂದ 2002ರವರೆಗೆ ಉಪ ಸಭಾಪತಿಗಳಾಗಿ ಹಾಗೂ 2000ದಿಂದ 2001ರವರೆಗೆ ವಿಧಾನ ಪರಿಷತ್ತಿನ ಸಭಾಪತಿಯವರ ಹುದ್ದೆಯ ಕರ್ತವ್ಯಗಳನ್ನು ನಿರ್ವಹಿಸಿದ್ದರು. ಶ್ರೀಯುತರ ನಿಧನದಿಂದಾಗಿ ರಾಜ್ಯವು ಓರ್ವ ರಾಜಕಾರಣಿಯೊಬ್ಬರನ್ನು ಕಳೆದುಕೊಂಡಂತಾಗಿದೆ.
ಡಾ: ಎನ್. ತಿಪ್ಪಣ್ಣ
ವಿಧಾನ ಪರಿಷತ್ತಿನ ಮಾಜಿ ಸಭಾಪತಿಗಳು ಹಾಗೂ ಮಾಜಿ ಸದಸ್ಯರಾಗಿದ್ದ ಡಾ: ಎನ್. ತಿಪ್ಪಣ್ಣ ಅವರು 2025 ನೇ ಜುಲೈ 11 ರಂದು ನಿಧನ ಹೊಂದಿರುತ್ತಾರೆ.
1928ರ ನವೆಂಬರ್ 23ರಂದು ಚಿತ್ರದುರ್ಗ ಜಿಲ್ಲೆಯ ತುರುವನೂರಿನಲ್ಲಿ ಜನಿಸಿದ್ದ ಶ್ರೀಯುತರು ಬಿ.ಎ., ಬಿ.ಎಲ್.. ಪದವೀಧರರಾಗಿದ್ದು, ವೃತ್ತಿಯಲ್ಲಿ ವಕೀಲರಾಗಿದ್ದರು. 1988-1994, 1994-2000 ಹಾಗೂ 2006-2012ರವರೆಗೆ ಮೂರು ಬಾರಿ ವಿಧಾನ ಪರಿಷತ್ತಿನ ಶಾಸಕರಾಗಿ ಸೇವೆ ಸಲ್ಲಿಸಿದ್ದ ಶ್ರೀಯುತರು ದಿನಾಂಕ:01-07-2008 ರಿಂದ 05-08-2008ರವರೆಗೆ ವಿಧಾನ ಪರಿಷತ್ತಿನ ಪ್ರೋಟಮ್ ಸಭಾಪತಿಯಾಗಿ ಕಾರ್ಯನಿರ್ವಹಿಸಿದ್ದರು.
ಶ್ರೀಯುತರು ಕಾನೂನು, ರಾಜಕೀಯ ಮತ್ತು ಸಾಮಾಜಿಕ ಸಾಂಸ್ಕøತಿಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಸುಮಾರು 26 ವರ್ಷಗಳ ಕಾಲ ಬಳ್ಳಾರಿಯ ವೀರಶೈವ ವಿದ್ಯಾವರ್ದಕ ಸಂಘದ ಗೌರವಾನ್ವಿತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ 40 ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ನೇತೃತ್ವ ವಹಿಸಿದ್ದರು. ಇವರ ಶೈಕ್ಷಣಿಕ ಕ್ಷೇತ್ರದ ಕೊಡುಗೆಗೆ ವಿಜಯನಗರದ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ.
12 ವರ್ಷಗಳ ಕಾಲ ಬಳ್ಳಾರಿಯಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್‍ರಾಗಿ, ಕರ್ನಾಟಕ ರಾಜ್ಯ ವಕೀಲರ ಸಂಘದ ಅಧ್ಯಕ್ಷರಾಗಿ, ಹೊಸಪೇಟೆಯ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ, ಬಳ್ಳಾರಿ ರಾಮಕೃಷ್ಣ ವಿವೇಕಾನಂದ ಕೇಂದ್ರದ ಉಪಾಧ್ಯಕ್ಷರಾಗಿ, ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ, ಗುಲ್ಬರ್ಗಾ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ಶ್ರೀಯುತರು ಬಸವಾದಿ ಪ್ರಮಥರ ತತ್ವಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಸಾವಿರಾರು ವಿದ್ಯಾರ್ಥಿಗಳಿಗೆ ಅನ್ನದಾಸೋಹ, ಜ್ಞಾನದಾಸೋಹಕ್ಕೆ ದಾರಿದೀಪವಾಗಿದ್ದರು. ಶ್ರೀಯುತರ ನಿಧನದಿಂದಾಗಿ ರಾಜ್ಯವು ಹಿರಿಯ ಮುತ್ಸದ್ದಿಯೊಬ್ಬರನ್ನು ಕಳೆದುಕೊಂಡಂತಾಗಿದೆ.
ಬೇಗಾನೆ ರಾಮಯ್ಯ
ಮಾಜಿ ಸಚಿವ ಹಾಗೂ ವಿಧಾನ ಸಭೆಯ ಮಾಜಿ ಸದಸ್ಯರಾಗಿದ್ದ ಬೇಗಾನೆ ರಾಮಯ್ಯ ಅವರು 2025 ನೇ ಏಪ್ರಿಲ್ 24 ರಂದು ನಿಧನ ಹೊಂದಿರುತ್ತಾರೆ.
1922ರ ಏಪ್ರಿಲ್ 20 ರಂದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಅಡ್ಡಗದ್ದೆ ಗ್ರಾಮದಲ್ಲಿ ಜನಿಸಿದ್ದ ಶ್ರೀಯುತರು ಎಂ.ಎ., ಬಿ.ಎಲ್.. ಪದವೀಧರರಾಗಿದ್ದು, ವೃತ್ತಿಯಲ್ಲಿ ವಕೀಲರಾಗಿದ್ದರು. 1972ರಲ್ಲಿ ನರಸಿಂಹರಾಜಪುರ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ರಾಜಕೀಯ ಜೀವನ ಆರಂಭಿಸಿದ ಶ್ರೀಯುತರು 1978ರಲ್ಲಿ 6ನೇ ವಿಧಾನಸಭೆಗೆ ಶೃಂಗೇರಿ ಕ್ಷೇತ್ರದಿಂದ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದರು. ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಮಲೆನಾಡು ಭಾಗಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದಕ್ಕಾಗಿ ಶ್ರೀಯುತರು ಮಲೆನಾಡಿನ ಭಗೀರಥ ಹಾಗೂ ಬೋರ್‍ವೆಲ್ ರಾಮಯ್ಯ ಎಂಬ ಅಂಕಿತದಿಂದ ಪ್ರಸಿದ್ಧರಾಗಿದ್ದರು.
ಅಧ್ಯಯನ ಶೀಲತೆ ಹಾಗೂ ವಿಚಾರ ಮಂಡನೆ ಚಾಕಚಕ್ಯತೆಯಿಂದಾಗಿ ಅತ್ಯುತ್ತಮ ಸಂಸದೀಯ ಪಟು ಎಂದು ಗುರುತಿಸಲ್ಪಟ್ಟಿದ್ದ ಶ್ರೀಯುತರು ಜನಪರ ಚಿಂತನೆ, ಗ್ರಾಮೀಣಾಭಿವೃದ್ಧಿ, ನಿಸ್ವಾರ್ಥ ಸೇವೆಯ ಮೂಲಕ ಮಾದರಿ ವ್ಯಕ್ತಿಯಾಗಿ ಜನಮಾನಸದಲ್ಲಿ ಉಳಿದಿದ್ದರು. ಶ್ರೀಯುತರ ನಿಧನದಿಂದಾಗಿ ರಾಜ್ಯವು ಹಿರಿಯ ಮುತ್ಸದ್ದಿಯೊಬ್ಬರನ್ನು ಕಳೆದುಕೊಂಡಂತಾಗಿದೆ.
ಡಾ: ಕೆ. ಕಸ್ತೂರಿರಂಗನ್:
ಭಾರತದ ಪ್ರಖ್ಯಾತ ಬಾಹ್ಯಾಕಾಶ ವಿಜ್ಞಾನಿ ಪದ್ಮವಿಭೂಷಣ ಡಾ: ಕೆ. ಕಸ್ತೂರಿರಂಗನ್ ಅವರು 2025 ನೇ ಏಪ್ರಿಲ್ 25 ರಂದು ನಿಧನ ಹೊಂದಿರುತ್ತಾರೆ.
1940ರ ಅಕ್ಟೋಬರ್ 24ರಂದು ಕೇರಳದ ಎರ್ನಾಕುಲಂನಲ್ಲಿ ಜನಿಸಿದ್ದ ಶ್ರೀಯುತರು ಮುಂಬೈ ವಿಶವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು, ಅಹಮದಾಬಾದ್ ವಿಶ್ವವಿದ್ಯಾಲಯದಿಂದ High Energy Astronomy ಯಲ್ಲಿ ಪಿಹೆಚ್‍ಡಿ ಪದವಿಯನ್ನು ಪಡೆದಿದ್ದರು. 1971ರಲ್ಲಿ ಇಸ್ರೋದೊಂದಿಗೆ ತಮ್ಮ ವೃತ್ತಿ ಜೀವನವನ್ನು ಆರಂಭಿಸಿ, ಭಾರತದ ಮೊದಲ ಎರಡು ಭೂವೀಕ್ಷಣಾ ಉಪಗ್ರಹಗಳಾದ ಭಾಸ್ಕರ-I ಮತ್ತು ಭಾಸ್ಕರ-IIರ ಯೋಜನಾ ನಿರ್ದೇಶಕರಾಗಿ, ಇಸ್ರೋ ಉಪಗ್ರಹ ಕೇಂದ್ರದ ನಿರ್ದೇಶಕರು ಹಾಗೂ ಅಧ್ಯಕ್ಷರಾಗಿ, ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷರಾಗಿದ್ದರಲ್ಲದೆ ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ರಚಿಸುವ ಸಮಿತಿಯ ಮುಖ್ಯಸ್ಥರಾಗಿ, ಬೆಂಗಳೂರಿನ ರಾಮನ್ ಸಂಶೋಧನಾ ಸಂಸ್ಥೆ ಟ್ರಸ್ಟ್‍ನ ಮಂಡಳಿ ಸದಸ್ಯರಾಗಿಯೂ ಸಹ ಕಾರ್ಯನಿರ್ವಹಿಸಿರುತ್ತಾರೆ.
2003 ರಿಂದ 2009 ರವರೆಗೆ ರಾಜ್ಯಸಭೆಯ ಸದಸ್ಯರಾಗಿ ಮತ್ತು 2015ರಲ್ಲಿ ನೀತಿ ಆಯೋಗ ಎಂದು ಮರುನಾಮಕರಣಗೊಂಡ ಭಾರತದ ಯೋಜನಾ ಆಯೋಗದ ಸದಸ್ಯರಾಗಿ ಸೇವೆ ಸಲ್ಲಿಸಿದ್ದರಲ್ಲದೆ ಹಲವು ವಿಶ್ವವಿದ್ಯಾಲಯಗಳ ಕುಲಪತಿಗಳಾಗಿ ಕಾರ್ಯನಿರ್ವಹಿಸಿದ್ದರು.
ಶ್ರೀಯುತರು ವಿಜ್ಞಾನ ಕ್ಷೇತ್ರದಲ್ಲಿ ನೀಡಿರುವ ಅಪಾರ ಕೊಡಗೆಗೆ 27 ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪದವಿಗಳು ದೊರೆತಿವೆ. ಆರ್ಯಭಟ ಪ್ರಶಸ್ತಿ, ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣ ಹಾಗೂ ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಶ್ರೀಯುತರು ಭಾಜನರಾಗಿರುತ್ತಾರೆ. ಶ್ರೀಯುತರ ನಿಧನದಿಂದಾಗಿ ರಾಷ್ಟ್ರವು ಮಹಾನ್ ವಿಜ್ಞಾನಿಯೊಬ್ಬರನ್ನು ಕಳೆದುಕೊಂಡಂತಾಗಿದೆ
ಜಿ.ಎಸ್. ಸಿದ್ದಲಿಂಗಯ್ಯ:
ಖ್ಯಾತ ವಿಮರ್ಶಕ ಹಾಗೂ ಹಿರಿಯ ಸಾಹಿತಿಗಳಾಗಿದ್ದ ಜಿ.ಎಸ್. ಸಿದ್ದಲಿಂಗಯ್ಯ ಅವರು 2025 ನೇ ಮೇ 07 ರಂದು ನಿಧನ ಹೊಂದಿರುತ್ತಾರೆ.
1931ರ ಫೆಬ್ರವರಿ 20ರಂದು ತುಮಕೂರು ಜಿಲ್ಲೆಯ ಬೆಳ್ಳಾವೆಯಲ್ಲಿ ಜನಿಸಿದ್ದ ಶ್ರೀಯುತರು ಬಿ.ಎ. ಆನರ್ಸ್ ಮತ್ತು ಎಂ.ಎ ಪದವಿಯನ್ನು ಕನ್ನಡದಲ್ಲಿ ಪಡೆದಿದ್ದರು. ಕನ್ನಡ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದ ಶ್ರೀಯುತರು ಪ್ರಾಚಾರ್ಯರಾಗಿ, ಉಪ ಪ್ರಾಧ್ಯಾಪಕರಾಗಿ, ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಹೆಚ್ಚುವರಿ ನಿರ್ದೇಶಕರಾಗಿ, ಗುಲ್ಬರ್ಗಾ ವಿಶ್ವವಿದ್ಯಾಲಯದ ಬಸವಾದಿ ಶರಣ ಸಾಹಿತ್ಯ ಕೇಂದ್ರದ ನಿರ್ದೇಶಕರಾಗಿ ಹಾಗೂ ಬೆಂಗಳೂರು, ಮೈಸೂರು, ಕರ್ನಾಟಕ, ಗುಲ್ಬರ್ಗಾ ಮತ್ತು ಮಂಗಳೂರು ವಿಶ್ವವಿದ್ಯಾಲಯಗಳ ಅಕಾಡೆಮಿಕ್ ಕೌನ್ಸಿಲ್, ಸೆನೆಟ್ ಮತ್ತು ಸಿಂಡಿಕೇಟ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.
ಸಾಹಿತ್ಯದ ಬಗ್ಗೆ ಅಪಾರ ಒಲವು ಹೊಂದಿದ್ದ ಶ್ರೀಯುತರು ರಸಗಂಗೆ, ಉತ್ತರ, ಚಿತ್ರ-ವಿಚಿತ್ರ, ಐವತ್ತರ ನೆರಳು, ಸೇರಿ ವಿವಿಧ ಕವನ ಸಂಕಲನಗಳು, ಹೊಸಗನ್ನಡ ಕಾವ್ಯ, ಪಂಚಮುಖ ಚಾಮರಸ, ವಚನ ಸಾಹಿತ್ಯ- ಒಂದು ಇಣುಕು ನೋಟ ಸೇರಿ ವಿವಿಧ ವಿಮರ್ಶಾ ಕೃತಿಗಳು, ಮಹಾನುಭಾವ ಬುದ್ಧ, ಬಸವಣ್ಣ ಮೊದಲಾದ ಜೀವನಚರಿತ್ರೆ ಕೃತಿಗಳನ್ನು ರಚಿಸುವುದರ ಜೊತೆಗೆ ಕೆಲವೊಂದು ಕೃತಿಗಳನ್ನು ಅನುವಾದಿಸಿದ್ದಾರೆ.
ಶ್ರೀಯುತರು ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಸಾಹಿತ್ಯ ಅಕಾಡೆಮಿಯ ವಿಶೇಷ ಗೌರವ ಬಸವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುತ್ತಾರೆ. ಶ್ರೀಯುತರ ನಿಧನದಿಂದಾಗಿ ರಾಜ್ಯವು ಹಿರಿಯ ಸಾಹಿತಿಯೊಬ್ಬರನ್ನು ಕಳೆದುಕೊಂಡಂತಾಗಿದೆ.
ಪ್ರೊ. ಸುಬ್ಬಣ್ಣ ಅಯ್ಯಪ್ಪನ್:
ಪದ್ಮಶ್ರೀ ಪುರಸ್ಕøತ ಖ್ಯಾತ ಕೃಷಿ ವಿಜ್ಞಾನಿಯಾಗಿದ್ದ ಪ್ರೊ. ಸುಬ್ಬಣ್ಣ ಅಯ್ಯಪ್ಪನ್ ಅವರು 2025 ನೇ ಮೇ 10 ರಂದು ನಿಧನ ಹೊಂದಿರುತ್ತಾರೆ.
1955ರ ಡಿಸೆಂಬರ್ 10ರಂದು ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಅಲ್ಕೆರೆ ಗ್ರಾಮದ ಅಗ್ರಹಾರದಲ್ಲಿ ಜನಿಸಿದ್ದ ಶ್ರೀಯುತರು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಪಿಎಚ್‍ಡಿ ಪದವಿ ಮತ್ತು ಮಂಗಳೂರಿನ ಮೀನುಗಾರಿಕೆ ಕಾಲೇಜಿನಿಂದ ಮೀನು ಉತ್ಪಾದನೆ ಮತ್ತು ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಹೊಂದಿದ್ದು, 1978ರಲ್ಲಿ ಬ್ಯಾರಕ್‍ಪೋರ್‍ನ ಕೇಂದ್ರೀಯ ಒಳನಾಡಿನ ಮೀನುಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಕೃಷಿ ವಿಜ್ಞಾನಕ್ಕೆ ಸಂಬಂಧಿಸಿದ ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ಹಲವಾರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದರು.
ಮೀನುಗಾರಿಕೆ ಮತ್ತು ಜಲಕೃಷಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹಲವಾರು ಹೊಸ ಯೋಜನೆಗಳನ್ನು ಮುನ್ನಡೆಸಿದ್ದ ಶ್ರೀಯುತರು ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿದ್ದರು. ಇವರ ಜಲಕೃಷಿ ಮತ್ತು ಮೀನುಗಾರಿಕೆ ಸಂಶೋಧನೆ ಭಾರತದ ಕರಾವಳಿ ಪ್ರದೇಶಗಳಲ್ಲಿ ಆರ್ಥಿಕ ಸಬಲೀಕರಣಕ್ಕೆ ಸಹಾಯಕವಾಗಿತ್ತು.
ಭಾರತದ ನೀಲಿ ಕ್ರಾಂತಿಗೆ ಶಕ್ತಿ ತುಂಬುವಲ್ಲಿ ಪ್ರಮುಖ ಪಾತ್ರ ವಹಿಸಿದ್ದನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗಿದ್ದು, ಜಲಚರ ಸಾಕಣೆ ಮತ್ತು ಸಂಬಂಧಿತ ಕ್ಷೇತ್ರಗಳಿಗೆ ಸಂಬಂಧಿಸಿದ ಕೆಲಸಕ್ಕಾಗಿ ಹಲವಾರು ಮನ್ನಣೆ ಮತ್ತು ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಶ್ರೀಯುತರು ಭಾಜನಾಗಿರುತ್ತಾರೆ. ಶ್ರೀಯುತರ ನಿಧನದಿಂದಾಗಿ ರಾಜ್ಯವು ಕೃಷಿ ವಿಜ್ಞಾನಿಯೊಬ್ಬರನ್ನು ಕಳೆದುಕೊಂಡಂತಾಗಿದೆ.
ಡಾ: ಎಮ್.ಆರ್. ಶ್ರೀನಿವಾಸನ್:
ಹಿರಿಯ ಪರಮಾಣು ವಿಜ್ಞಾನಿ ಪದ್ಮವಿಭೂಷಣ ಡಾ: ಎಮ್.ಆರ್. ಶ್ರೀನಿವಾಸನ್ ಅವರು 2025 ನೇ ಮೇ 20 ರಂದು ನಿಧನ ಹೊಂದಿರುತ್ತಾರೆ.
1930ರಲ್ಲಿ ಬೆಂಗಳೂರಿನಲ್ಲಿ ಜನಿಸಿದ್ದ ಶ್ರೀಯುತರು ಯಾಂತ್ರಿಕ ಎಂಜಿನಿಯರಿಂಗ್ ಪದವಿ. 1952ರಲ್ಲಿ ಸ್ನಾತಕೋತ್ತರ ಪದವಿ ಹಾಗೂ ಕೆನಡಾದ ಎಂ.ಸೀ.ಗಿಲ್. ವಿಶ್ವವಿದ್ಯಾಲಯದಿಂದ ಪಿ.ಹೆಚ್.ಡಿ. ಪದವಿಗಳನ್ನು ಪಡೆದಿರುತ್ತಾರೆ.
1955ರಲ್ಲಿ ಪರಮಾಣು ಶಕ್ತಿ ಇಲಾಖೆಯಲ್ಲಿ ವೃತ್ತಿ ಜೀವನ ಆರಂಭಿಸಿದ ಶ್ರೀಯುತರು ಭಾರತ ದೇಶದ ಪ್ರಥಮ ಪರಮಾಣು ಸಂಶೋಧನಾ ರಿಯಾಕ್ಟರ್ ‘ಅಪ್ಸರ’ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮದ್ರಾಸ್ ಪರಮಾಣು ವಿದ್ಯುತ್ ಕೇಂದ್ರದ ಮುಖ್ಯ ಯೋಜನಾ ಇಂಜಿನಿಯರ್ ಹುದ್ದೆ ಅಲಂಕರಿಸಿದ್ದರಲ್ಲದೆ ಪರಮಾಣು ಶಕ್ತಿ ಆಯೋಗದ ಅಧ್ಯಕ್ಷರಾಗಿ, ಇಲಾಖೆಯ ಕಾರ್ಯದರ್ಶಿಯಾಗಿ ಭಾರತದ ಪರಮಾಣು ಪವರ್ ಬೋರ್ಡಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಭಾರತದ ಎಲ್ಲಾ ಪರಮಾಣು ವಿದ್ಯುತ್ ಯೋಜನೆಗಳ ನಿರ್ವಹಣೆ ಮತ್ತು ಕಾರ್ಯಾಚರಣೆ ನಡೆಸುವ ಉನ್ನತ ವಿಜ್ಞಾನಿಯಾಗಿದ್ದ ಶ್ರೀಯುತರ ನೇತೃತ್ವದಲ್ಲಿ ದೇಶದ ವಿವಿಧೆಡೆ 18 ಪರಮಾಣು ವಿದ್ಯುತ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಗಿದೆ. ಶ್ರೀಯುತರು ಪರಮಾಣು ಹಾಗೂ ಇಂಧನ ಕ್ಷೇತ್ರಕ್ಕೆ ನೀಡಿರುವ ಅಪರವಾದ ಕೊಡುಗೆಯನ್ನು ಗುರುತಿಸಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ವಿಯೆನ್ನಾದ ಇಂಟರ್‍ನ್ಯಾಷನಲ್ ಅಟಾಮಿಕ್ ಎನರ್ಜಿ ಏಜೆನ್ಸಿಯಲ್ಲಿ ಹಿರಿಯ ಸಲಹೆಗಾರರಾಗಿ ಹಾಗೂ ವಿಶ್ವದ ವಿಭಕ್ತ ಆಪರೇಟರ್ಸ್ ಅಸೋಸಿಯೋಷನ್‍ನಲ್ಲಿ ಸ್ಥಾಪಕ ಸದಸ್ಯರಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸಿದ್ದರಲ್ಲದೆ, ಭಾರತ ಸರ್ಕಾರದ ಯೋಜನಾ ಆಯೋಗದ ಸದಸ್ಯರಾಗಿ, ಭದ್ರತಾ ಸಲಹಾ ಬೋರ್ಡಿನ ಸದಸ್ಯರಾಗಿ, ಕರ್ನಾಟಕದ ಉನ್ನತ ಶಿಕ್ಷಣದ ಕಾರ್ಯಪಡೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಶ್ರೀಯುತರು ಪದ್ಮಭೂಷಣ. ಪದ್ಮಶ್ರೀ ಸೇರಿದಂತೆ ಹತ್ತು ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುತ್ತಾರೆ. ಶ್ರೀಯುತರ ನಿಧನದಿಂದಾಗಿ ರಾಜ್ಯವು ಹಿರಿಯ ಪರಮಾಣು ವಿಜ್ಞಾನಿಯೊಬ್ಬರನ್ನು ಕಳೆದುಕೊಂಡಂತಾಗಿದೆ.
ಡಾ: ಹೆಚ್.ಎಸ್. ವೆಂಕಟೇಶ್ ಮೂರ್ತಿ:
ಹಿರಿಯ ಸಾಹಿತಿಗಳು, ಅಂಕಣಕಾರರು ಹಾಗೂ ವಿಮರ್ಶಕರಾಗಿದ್ದ ಡಾ: ಹೊದಿಗೆರೆ ಶಂಭೋಗ್ ವೆಂಕಟೇಶ್ ಮೂರ್ತಿ ಅವರು 2025 ನೇ ಮೇ 30 ರಂದು ನಿಧನ ಹೊಂದಿರುತ್ತಾರೆ.
1944ರ ಜೂನ್ 23ರಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಗ್ರಾಮದಲ್ಲಿ ಜನಿಸಿದ್ದ ಶ್ರೀಯುತರು ಎಂ.ಎ. ಪದವೀಧರರಾಗಿದ್ದು, “ಕನ್ನಡದಲ್ಲಿ ಕಥನ ಕವನಗಳು” ಮಹಾಪ್ರಬಂಧ ಮಂಡಿಸಿ ಪಿ.ಎಚ್.ಡಿ. ಪದವಿಯನ್ನು ಪಡೆದಿದ್ದರು. ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಉಪನ್ಯಾಸಕರಾಗಿ ಮತ್ತು ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದ ಶ್ರೀಯುತರು ನವ್ಯಪೂರ್ವ ಬರಹಗಾರ ಮತ್ತು ಭಾವಗೀತೆ ಕವಿಯಾಗಿದ್ದು, 100ಕ್ಕೂ ಹೆಚ್ಚು ಪುಸ್ತಕಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಶ್ರೀಯುತರು ರಚಿಸಿದ ನಾಟಕ “ಹೂವಿ” ಐಸಿಎಸ್‍ಇ ಶೈಕ್ಷಣಿಕ ಮಂಡಳಿಯಿಂದ ಒಂಭತ್ತು ಮತ್ತು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವಾಗಿ ಗುರುತಿಸಲ್ಪಟ್ಟಿದೆ.
ಶ್ರೀಯುತರು ಕವಿತೆ, ನಾಟಕ, ಪ್ರಬಂಧ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ. ವಿಮರ್ಶೆ, ಮೊದಲಾದ ಪ್ರಕಾರಗಳಲ್ಲಿ ಅಪರವಾದ ಕೊಡುಗೆಯನ್ನು ನೀಡಿ, ಕನ್ನಡ ಸಾಹಿತ್ಯ ಕ್ಷೇತ್ರವನ್ನು ಹಳೆಯ ಸಂಪ್ರದಾಯದಲ್ಲಿ ಕೃಷಿಮಾಡಿ, ಆಧುನಿಕ ಸಾಹಿತ್ಯದ ಕೃತಿಗಳನ್ನು ಸಾಹಿತ್ಯ ಪ್ರಿಯರಿಗೆ ನೀಡಿದ್ದರು. ಇವರು ಕನ್ನಡ ಚಲನಚಿತ್ರಗಳಿಗೆ ಸಾಹಿತ್ಯ, ಚಿತ್ರಕಥೆ, ಸಂಭಾಷಣೆ ಮತ್ತು ಹಾಡುಗಳನ್ನು ಬರೆದಿದ್ದಾರೆ.
ಶ್ರೀಯುತರು ರಾಜ್ಯೋತ್ಸವ ಪ್ರಶಸ್ತಿ, ದೇವರಾಜ ಬಹಾದ್ದೂರ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ ಸೇರಿದಂತೆ ಹತ್ತು ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುತ್ತಾರೆ. ಶ್ರೀಯುತರ ನಿಧನದಿಂದಾಗಿ ರಾಜ್ಯವು ಹಿರಿಯ ಸಾಹಿತಿಯೊಬ್ಬರನ್ನು ಕಳೆದುಕೊಂಡಂತಾಗಿದೆ.
ಡಾ: ಬಿ. ಸರೋಜಾದೇವಿ:
ಭಾರತೀಯ ಸಿನಿಮಾ ರಂಗದ ಹಿರಿಯ ನಟಿ ಪದ್ಮಭೂಷಣ ಡಾ: ಬಿ. ಸರೋಜಾದೇವಿ ಅವರು 2025 ನೇ ಜುಲೈ 14 ರಂದು ನಿಧನ ಹೊಂದಿರುತ್ತಾರೆ.
1938ರ ಜನವರಿ 7ರಂದು ಮೈಸೂರು ರಾಜ್ಯದ ಬೆಂಗಳೂರಿನಲ್ಲಿ ಜನಿಸಿದ್ದ ಶ್ರೀಯುತರು ಬಾಲ್ಯದಿಂದಲೇ ಲಲಿತಕಲೆಗಳ ಬಗ್ಗೆ ಆಸಕ್ತಿ ಹೊಂದಿದ್ದು, ತಮ್ಮ 17ನೇ ವಯಸ್ಸಿನಲ್ಲಿ ಮಹಾಕವಿ ಕಾಳಿದಾಸ ಚಿತ್ರದ ಮೂಲಕ ಕನ್ನಡದ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ಶ್ರೀಯುತರು ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಚಲನಚಿತ್ರಗಳಲ್ಲಿ ನಟಿಸಿ ‘ಚತುರ್ಭಾμÁ ತಾರೆ’ ಕಿರೀಟವನ್ನು ಪಡೆದು ಸುಮಾರು 200 ಚಿತ್ರಗಳಲ್ಲಿ ನಟಿಸಿ, ಕನ್ನಡ ಚಿತ್ರರಂಗದ ‘ಮೊದಲ ಮಹಿಳಾ ಸೂಪರ್‍ಸ್ಟಾರ್’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕನ್ನಡದ ಕಿತ್ತೂರು ರಾಣಿ ಚನ್ನಮ್ಮ ಚಿತ್ರದಲ್ಲಿ ಬ್ರಿಟಿμï ವಿರೋಧಿ ರಾಣಿಯಾಗಿ ನಟಿಸಿದ ಅವರ ದೇಶಭಕ್ತಿ ಅಭಿನಯವು ವ್ಯಾಪಕವಾಗಿ ಪ್ರಶಂಸಿಸಲ್ಪಟ್ಟಿದೆ. ಶ್ರೀಯುತರು ಕನ್ನಡದಲ್ಲಿ “ಅಭಿನಯ ಸರಸ್ವತಿ” ಮತ್ತು ತಮಿಳಿನಲ್ಲಿ “ಕನ್ನಡತು ಪೈಂಗಿಲಿ” (ಕನ್ನಡದ ಗಿಳಿ) ಎಂಬ ಉಪನಾಮಗಳಿಂದ ಕರೆಯಲ್ಪಡುತ್ತಿದ್ದರು. 1960ರ ದಶಕದಲ್ಲಿ ಯಶಸ್ವಿ ಚಿತ್ರಗಳಲ್ಲಿ ನಟಿಸಿ ದಕ್ಷಿಣ ಭಾರತದ ಮಹಿಳೆಯರಲ್ಲಿ ಫ್ಯಾಷನ್ ಐಕಾನ್ ಆಗಿ ಗುರುತಿಸಿಕೊಂಡಿದ್ದರು.
ಶ್ರೀಯುತರು ತಮ್ಮ ಪತಿ ಮತ್ತು ತಾಯಿಯ ಹೆಸರಿನಲ್ಲಿ ಅನೇಕ ದೇಣಿಗೆ ಶಿಬಿರಗಳನ್ನು ಆಯೋಜಿಸುವುದರ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿ, ದತ್ತಿ ಟ್ರಸ್ಟ್‍ಗಳು, ಪುನರ್ವಸತಿ ಕೇಂದ್ರಗಳು ಮತ್ತು ಆರೋಗ್ಯ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು. ಕನ್ನಡ ಚಲನಚಿತ್ರ ಸಂಘದ ಉಪಾಧ್ಯಕ್ಷರಾಗಿ ಮತ್ತು ತಿರುಮಲ ತಿರುಪತಿ ದೇವಸ್ಥಾನಗಳ ಸ್ಥಳೀಯ ಸಲಹಾ ಸಮಿತಿಯ ಸದಸ್ಯರಾಗಿ ಹಾಗೂ ಕರ್ನಾಟಕ ಚಲನಚಿತ್ರ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ.
2010ರಲ್ಲಿ ಭಾರತೀಯ ವಿದ್ಯಾಭವನವು ಪದ್ಮಭೂಷಣ ಬಿ. ಸರೋಜಾ ದೇವಿ ರಾಷ್ಟ್ರೀಯ ಪ್ರಶಸ್ತಿ ಅನ್ನು ಸ್ಥಾಪಿಸಿ, ಪ್ರತಿ ವರ್ಷ ಪ್ರದರ್ಶನ ಕಲೆಯ ಕ್ಷೇತ್ರದಲ್ಲಿನ ಕಲಾವಿದರನ್ನು ಗೌರವಿಸಲು ಜೀವಮಾನದ ಸಾಧನೆ ಪ್ರಶಸ್ತಿಯಾಗಿ ಪರಿಗಣಿಸಿದೆ.
ಶ್ರೀಯುತರು ಭಾರತದ 60ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಭಾರತ ಸರ್ಕಾರದಿಂದ ಜೀವಮಾನ ಸಾಧನೆ ಪ್ರಶಸ್ತಿ, ಪದ್ಮಶ್ರೀ, ಪದ್ಮಭೂಷಣ, ತಮಿಳುನಾಡು ಸರ್ಕಾರದಿಂದ ಎಂಜಿಆರ್ ಪ್ರಶಸ್ತಿ ಹಾಗೂ ಕಲೆ ಮಾಮಣಿ ಜೀವಮಾನ ಸಾಧನೆ ಪ್ರಶಸ್ತಿ, ಆಂಧ್ರ ಪ್ರದೇಶ ಸರ್ಕಾರದಿಂದ ಎನ್‍ಟಿಆರ್ ರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಹಾಗೂ ಹತ್ತು ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುತ್ತಾರೆ. ಶ್ರೀಯುತರ ನಿಧನದಿಂದಾಗಿ ದೇಶವು ಅತ್ಯುತ್ತಮ ನಟಿಯೊಬ್ಬರನ್ನು ಕಳೆದುಕೊಂಡಂತಾಗಿದೆ. ಮೃತರ ಆತ್ಮಕ್ಕೆ ಸದ್ಗತಿಯನ್ನು ಕೋರುತ್ತಾ, ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ಪರಮಾತ್ಮನು ಕರುಣಿಸಲೆಂದು ಪ್ರಾರ್ಥಿಸುತ್ತೇನೆ ಎಂದು ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು ತಿಳಿಸಿದರು.